ಸಾರಾಂಶ
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಮೊದಲೆರಡು ಪಂದ್ಯಗಳಲ್ಲಿ ಸೋಲಿನ ಮುಖಭಂಗಕ್ಕೆ ಒಳಗಾಗಿದ್ದ ಟೀಂ ಇಂಡಿಯಾ, ನ.1ರಿಂದ ಮುಂಬೈನಲ್ಲಿ ಆರಂಭಗೊಳ್ಳಲಿರುವ 3ನೇ ಟೆಸ್ಟ್‌ಗೂ ಮುನ್ನ ಕಠಿಣ ಅಭ್ಯಾಸ ಆರಂಭಿಸಿದೆ. ಇದಕ್ಕಾಗಿ ಭಾರತ ಬರೋಬ್ಬರಿ 35 ನೆಟ್ ಬೌಲರ್‌ಗಳಿಗೆ ಬುಲಾವ್ ನೀಡಿದೆ.ಬೆಂಗಳೂರು ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ನ ವೇಗದ ಬೌಲರ್‌ಗಳ ದಾಳಿ ಎದುರಿಸಲು ಪರದಾಡಿದ್ದ ಭಾರತದ ಬ್ಯಾಟರ್‌ಗಳು, ಪುಣೆ ಟೆಸ್ಟ್‌ನಲ್ಲಿ ಸ್ಪಿನ್ನರ್‌ಗಳ ದಾಳಿಗೆ ತತ್ತರಿಸಿದ್ದರು. ತಂಡದ ಹಲವು ಬ್ಯಾಟರ್‌ಗಳು ಸ್ಪಿನ್ನರ್‌ಗಳ ಎದುರು ಕಳಪೆ ದಾಖಲೆ ಹೊಂದಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬುಧವಾರ ಹಾಗೂ ಗುರುವಾರದ ನೆಟ್ ಅಭ್ಯಾಸ ಶಿಬಿರಕ್ಕೆ ಹೆಚ್ಚುವರಿ ಸ್ಪಿನ್ ಬೌಲರ್‌ಗಳನ್ನು ನಿಯೋಜಿಸಲಾಗಿದೆ. ಮುಂಬೈ ಕ್ರಿಕೆಟ್ ಸಂಸ್ಥೆಯು ಸ್ಥಳೀಯ ಯುವ ಸ್ಪಿನ್ನರ್‌ಗಳನ್ನು ಭಾರತದ ಅಭ್ಯಾಸ ಶಿಬಿರಕ್ಕೆ ಕರೆತಂದಿದೆ.ಸ್ಪರ್ಧಾತ್ಮಕ ಪಿಚ್: ಬೆಂಗಳೂರು ಟೆಸ್ಟ್‌ಗೆ ಬೌನ್ಸಿ, ಪುಣೆ ಟೆಸ್ಟ್‌ಗೆ ಸ್ಪಿನ್ ಪಿಚ್ ಬಳಸಲಾಗಿತ್ತು. ಎರಡೂ ಕಡೆಗಳಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ಮುಂಬೈ ಪಂದ್ಯದಲ್ಲಿ ಸ್ಪರ್ಧಾತ್ಮಕ ಪಿಚ್ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ವೇಗದ ಬೌಲರ್‌ಗಳು ಹಾಗೂ ಬ್ಯಾಟರ್‌ಗಳಿಗೆ ಪಿಚ್ ನೆರವಾಗಲಿದ್ದು, ಬಳಿಕ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ.