ಚಿತ್ತೋಡಗಢ (ರಾಜಸ್ಥಾನ): ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ‘ವಂದೇ ಮಾತರಂ’ ಗಾಯನವನ್ನು ಮಧ್ಯದಲ್ಲೇ ತಡೆಯಲು ಯತ್ನಿಸಿದ್ದು ಕ್ಷಮಿಸಲಾಗದ ಪಾಪ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾ, ‘ಸ್ವಾತಂತ್ರ್ಯ ದಿನಾಚರಣೆಯಲ್ಲಿ ‘ವಂದೇ ಮಾತರಂ’ ಗಾಯನ ನಡೆಯುತ್ತಿದ್ದಾಗ ಸೋನಿಯಾ ಗಾಂಧಿಯವರು ಅದನ್ನು ಮಧ್ಯದಲ್ಲೇ ನಿಲ್ಲಿಸುವಂತೆ ಸೂಚಿಸಿರುವುದು ಟೀವಿಯಲ್ಲಿ ಸ್ಪಷ್ಟವಾಗಿ ಕಂಡಿದೆ. ಇಂತಹ ಪಾಪದ ಕೃತ್ಯವನ್ನು ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಕಾಂಗ್ರೆಸ್ ಪಕ್ಷವು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ರಾಷ್ಟ್ರೀಯತೆಯ ಸಂಕೇತವಾದ ಗೀತೆಗೆ ಅಪಮಾನ ಎಸಗಿದೆ. ಸೋನಿಯಾ ಹಾಗೂ ಕಾಂಗ್ರೆಸ್ ನಾಯಕರು ಈ ಪ್ರಮಾದಕ್ಕಾಗಿ ದೇಶದ ಜನತೆಯ ಬಳಿ ಬೇಷರತ್ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ತಿರುಗೇಟು:

ಈ ನಡುವೆ ಶಾ ಆರೋಪ ತಳ್ಳಿಹಾಕಿರುವ ಕಾಂಗ್ರೆಸ್, ‘ವಂದೇ ಮಾತರಂ ಗಾಯನವನ್ನು ಶಿಷ್ಟಾಚಾರದಂತೆ ಸರಿಯಾದ ರೀತಿಯಲ್ಲಿ ಪೂರ್ಣಗೊಳಿಸಲು ಸೋನಿಯಾ ಸೂಚಿಸುತ್ತಿದ್ದರೇ ಹೊರತು ರಾಷ್ಟ್ರೀಯ ಗೀತೆಯನ್ನು ಅಗೌರವಿಸುವ ಯಾವುದೇ ಉದ್ದೇಶ ಅವರಿಗಿರಲಿಲ್ಲ’ ಎಂದಿದೆ.


- ವಂದೇ ಮಾತರಂ ಪೂರ್ತಿ ಗಾಯನಕ್ಕೆ ಸೋನಿಯಾ ಗಾಂಧಿ ವಿರೋಧ

- ಸ್ವಾತಂತ್ರ್ಯ ದಿನಾಚರಣೆ ವೇಳೆ ಅವರ ವಿರೋಧ ಎಂದು ದೂರಿದ್ದ ಬಿಜೆಪಿ

- ಸೋನಿಯಾ ಕೈಸನ್ನೆ ತೋರಿವ ಈ ಕುರಿತ ವಿಡಿಯೋ ವೈರಲ್‌ ಆಗಿತ್ತು

- ಇದರ ಬೆನ್ನಲ್ಲೇ ಸೋನಿಯಾ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಆಕ್ರೋಶ

- ಸೋನಿಯಾ ನಡೆ ಕ್ಯಾಮರಾದಲ್ಲಿ ಸೆರೆ ಆಗಿದೆ. ಅದು ಅಕ್ಷಮ್ಯ ಎಂದ ಶಾ

- ಅವರು ಬೇಷರತ್ತಾಗಿ ಇಡೀ ದೇಶದ ಕ್ಷಮೆ ಕೇಳಬೇಕು: ಕೇಂದ್ರ ಗೃಹ ಸಚಿವ