;Resize=(412,232))
ವಿಧಾನಸಭೆ/ವಿಧಾನಪರಿಷತ್ತು : ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ನಡೆದ ಶೂಟೌಟ್‌ನಲ್ಲಿ ಮೂವರು ಮೃತಪಟ್ಟ ಘಟನೆಯನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಲಾಗಿದೆ. ತನಿಖಾ ವರದಿ ಬಂದ ಬಳಿಕ, ಅಧಿಕಾರಿಗಳ ತಪ್ಪಿದ್ದರೆ ನಿರ್ದಯವಾಗಿ ಕಾನೂನಾತ್ಮಕವಾಗಿ ಕ್ರಮ ವಹಿಸಲಾಗುವುದು ಎಂದು ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾ ರೆಡ್ಡಿ ಉಭಯ ಸದನಗಳಲ್ಲಿ ಮಾಹಿತಿ ನೀಡಿದರು.
ಮೃತಪಟ್ಟ ಮೂವರೂ ಬೇರೆ ಬೇರೆ ಗ್ರಾಮಗಳಿಗೆ ಸೇರಿದವರು. ಅವರು ಕಾಣೆಯಾದ ಹಸು ಹುಡುಕಿಕೊಂಡು ಕಾಡಿಗೆ ಹೋಗಿರಲಿಲ್ಲ. ಹಸು ಕಾಣೆಯಾಗಿರುವ ಕುರಿತು ಅರಣ್ಯ ಇಲಾಖೆಗೆ ದೂರನ್ನೂ ನೀಡಿರಲಿಲ್ಲ. ಅರಣ್ಯದೊಳಗೆ ಸತ್ತ ಹಸುವಿನ ಕಳೇಬರಗಳೂ ಸಿಕ್ಕಿಲ್ಲ. ಅವರೆಲ್ಲಾ ಅನುಮತಿ ಪಡೆಯದೆ ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ಅರಣ್ಯ ಪ್ರವೇಶಿಸಿದ್ದರು. ಅವರು ಬೇಟೆ ಬಿಟ್ಟು ಅನ್ಯ ಉದ್ದೇಶಕ್ಕೆ ಅರಣ್ಯ ಪ್ರವೇಶಿಸಿದ್ದರು ಎಂಬುದು ಕಂಡುಬಂದಿಲ್ಲ. ಘಟನೆ ನಡೆದ ಅರಣ್ಯದೊಳಗಿನ ಸ್ಥಳಕ್ಕೂ ಗ್ರಾಮಗಳಿಗೂ 5ರಿಂದ 8 ಕಿ.ಮೀ. ದೂರವಿದೆ. ಎಂದು ಹೇಳಿದರು.
ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದ ಅವರು, ಮ್ಯಾಜಿಸ್ಟ್ರೇಟ್ ತನಿಖೆ ಮುಗಿದ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಗತ್ಯ ಬಿದ್ದರೆ ನ್ಯಾಯಾಂಗ ತನಿಖೆ ಬೇಡಿಕೆ ಪರಿಗಣಿಸಲಾಗುವುದು ಎಂದರು.
ಅಲ್ಲದೆ, ಕಾರ್ಯಾಚರಣೆಗೆ ಸ್ಲೈಡ್ ಆ್ಯಕ್ಷನ್ ಗನ್ ಬಳಸಲಾಗಿದೆ. ಅದರಿಂದ ಮದ್ದು ಮತ್ತು ಸಣ್ಣ ಸಣ್ಣ ಪೆಲ್ಲೆಟ್ಸ್‌ಗಳು ಚದುರುವುದರಿಂದ ಗುಂಡು ನೇರವಾಗಿ ವ್ಯಕ್ತಿಯ ನಿರ್ದಿಷ್ಟ ಭಾಗಕ್ಕೆ ತಗಲುವುದಿಲ್ಲ. ಆರೋಪಿಗಳ ವಿವಿಧ ಅಂಗಾಂಗಗಳಿಗೆ ಗುಂಡು ತಗುಲಿರುತ್ತದೆ. ಬೆಳಗಿನ ಜಾವ 5 ಗಂಟೆಗೆ ನಡೆದ ಘಟನೆಯಲ್ಲಿ ಬೇಟೆಗಾರರು ಅಸ್ಪಷ್ಟವಾಗಿ ಗೋಚರಿಸಿರುವುದರಿಂದ ಅರಣ್ಯ ಸಿಬ್ಬಂದಿ ಆತ್ಮ ರಕ್ಷಣೆಗೆ ನಡೆಸಿದ ಪ್ರತಿದಾಳಿ ವೇಳೆ ಬೇಟೆಗಾರರಿಗೆ ಸೊಂಟದಿಂದ ಮೇಲ್ಭಾಗದಲ್ಲಿ ಗುಂಡು ತಗುಲಿದ್ದು, ಇದರಲ್ಲಿ ಸಿಬ್ಬಂದಿಯ ಯಾವುದೇ ದುರುದ್ದೇಶ ಕಂಡುಬಂದಿಲ್ಲ ಎಂದು ಸಮರ್ಥಿಸಿಕೊಂಡರು.
ಅಲ್ಲದೆ, ತನಿಖೆಯಲ್ಲಿ ಮೃತರು ಅಮಾಯಕರು ಎಂಬುದು ಸಾಬೀತಾದರೆ ಅವರ ಕುಟುಂಬಗಳಿಗೆ ನ್ಯಾಯಯುತವಾಗಿ ಸೂಕ್ತ ಪರಿಹಾರ ಕಲ್ಪಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಆಗಸ್ಟ್ 14ರ ರಾತ್ರಿ ಸುಮಾರು 8 ಗಂಟೆಗೆ ಹನೂರು ವನ್ಯಜೀವಿ ವಲಯದ ಶಾಗ್ಯ ಸಮೀಪದ ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆಗಾರರು ಅಕ್ರಮವಾಗಿ ಸಂಚರಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಲಭಿಸಿತ್ತು. ಕೂಡಲೇ 10 ಸಿಬ್ಬಂದಿಯನ್ನು ಒಳಗೊಂಡ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಲಾಯಿತು. ಅರಣ್ಯದ ವಿವಿಧ ಭಾಗಗಲ್ಲಿ ಪರಿಶೀಲಿಸಿದ ಬಳಿಕ ಕೊನೆಯದಾಗಿ ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಕರಡಿಗಲ್ಲು ಅರಣ್ಯದ ಬಂಡೆಗಲ್ಲುಗಳು ಮತ್ತು ಪೊದೆಯ ಮರೆಯಲ್ಲಿ ಬ್ಯಾಟರಿ ಬೆಳಕು ಕಾಣಿಸಿಕೊಂಡಿದೆ.
ಅಲ್ಲಿ ಅವಿತಿದ್ದ ಬೇಟೆಗಾರರು ಅರಣ್ಯ ಸಿಬ್ಬಂದಿಯನ್ನು ನೋಡಿ ಅಕ್ರಮ ನಾಡ ಬಂದೂಕಿನಿಂದ ಗುಂಡಿನ ದಾಳಿ ನಡೆಸಲು ಮುಂದಾಗಿದ್ದು, ಗುಂಡಿನ ಕಿಡಿಯ ಬೆಳಕು ಸಿಬ್ಬಂದಿಗೆ ಗೋಚರವಾಗಿದೆ. ಆಗ ಸಿಬ್ಬಂದಿ ಅನುಮಾನಾಸ್ಪದ ವ್ಯಕ್ತಿಗಳನ್ನು ಶರಣಾಗುವಂತೆ ಮನವೊಲಿಸಲು ಪ್ರಯತ್ನಿಸಿದರೂ ಅವರು ದಾಳಿ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಅವರನ್ನು ನಿಯಂತ್ರಿಸಲು ಮತ್ತು ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿಗಳಲ್ಲಿ ಒಬ್ಬರಾದ ಗಸ್ತು ಅರಣ್ಯ ಪಾಲಕ ಶಿವರಾಜ ಸಾಸಲವಾಡದ ಅವರು ಇಲಾಖೆ ವಿತರಿಸಿದ್ದ ಬಂದೂಕಿನಿಂದ ಕಿಡಿಬೆಳಕು ಗೋಚರವಾದ ದಿಕ್ಕಿಗೆ ಪ್ರತಿದಾಳಿ ನಡೆಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬೇಟೆಗಾರರು ಸರಿಯಾಗಿ ಕಾಣದೆ ಇರುವುದರಿಂದ ಹಾಗೂ ಪ್ರತಿದಾಳಿಗೆ ಬಳಸಿದ ಬಂದೂಕು ಸ್ಲೈಡ್ ಆ್ಯಕ್ಷನ್ ಗನ್ ಆಗಿದ್ದರಿಂದ ಅದರಿಂದ ಫೈಯರ್ ಮಾಡಿದಾಗ ಗುಂಡು ನೇರವಾಗಿ ವ್ಯಕ್ತಿಯ ನಿರ್ದಿಷ್ಟ ಭಾಗಕ್ಕೆ ತಗುಲುವುದಿಲ್ಲ. ಸಣ್ಣ ಸಣ್ಣ ಪೆಲ್ಲೆಟ್ಸ್‌ಗಳು ಮತ್ತು ಮದ್ದು ಚದುರುವುದರಿಂದ ಆರೋಪಿಗಳ ವಿವಿಧ ಅಂಗಾಂಗಗಳಿಗೆ ಗುಂಡು ತಗಲಿರುತ್ತದೆ. ಬೆಳಗಿನ ಜಾವ 5 ಗಂಟೆಗೆ ನಡೆದ ಘಟನೆಯಲ್ಲಿ ಬೇಟೆಗಾರರು ಅಸ್ಪಷ್ಟವಾಗಿ ಗೋಚರಿಸಿರುವುದರಿಂದ ಅರಣ್ಯ ಸಿಬ್ಬಂದಿ ಆತ್ಮ ರಕ್ಷಣೆಗೆ ನಡೆಸಿದ ಪ್ರತಿದಾಳಿ ಬೇಟೆಗಾರರಿಗೆ ಸೊಂಟದಿಂದ ಮೇಲ್ಬಾಗದಲ್ಲಿ ತಗುಲಿದ್ದು, ಇದರಲ್ಲಿ ಸಿಬ್ಬಂದಿಯ ಯಾವುದೇ ದುರುದ್ದೇಶ ಕಂಡುಬಂದಿರುವುದಿಲ್ಲ ಎಂದು ಸಮರ್ಥಿಸಿಕೊಳ್ಳಲಾಗಿದೆ.
ಮೂವರು ಸಾವು:
ಕಳ್ಳಬೇಟೆಗಾರರು ಎತ್ತರದ ಪ್ರದೇಶದಲ್ಲಿದ್ದ ಕಾರಣ ಮತ್ತು ಸುತ್ತಮುತ್ತ ಕತ್ತಲು ಆವರಿಸಿದ್ದರಿಂದ ಪರಿಸ್ಥಿತಿ ಗಂಭೀರವಾಗಿತ್ತು. ಘಟನೆಯಲ್ಲಿ ಕೆಲ ಅರಣ್ಯ ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗುಂಡಿನ ದಾಳಿ ನಿಂತ ಬಳಿಕ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದಾಗ ಮೂವರು ಆರೋಪಿಗಳು ನೆಲದ ಮೇಲೆ ಬಿದ್ದು ನರಳಾಡುತ್ತಿದ್ದ. ಓರ್ವ ಪಲಾಯನಗೈದಿದ್ದ. ಬಳಿಕ ಮಾನವೀಯ ನೆಲೆಯಲ್ಲಿ ಸಿಬ್ಬಂದಿ ಅವರನ್ನು ಪೊಲೀಸರ ಸಹಕಾರದೊಂದಿಗೆ ಸ್ಥಳೀಯ ಆಸ್ಪತ್ರೆಗೆ ಸೇರಿಸುವ ಪ್ರಯತ್ನಿಸಿದಾಗ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಮೂವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ನಂತರ ಪೊಲೀಸರು ಮೃತರನ್ನು ಮರಿಯಮಂಗಲ ಗ್ರಾಮದ ಅಂತೋಣಿಸ್ವಾಮಿ (50), ಜಗನ್ನಾಥದೊಡ್ಡಿ ಗ್ರಾಮದ ಜಾನ್ ರೋಸ್ ಪೀಟರ್ (42), ಲಾರಸ್ ದೊಡ್ಡಿ ಗ್ರಾಮದ ಕುಮಾರ್ (33) ಎಂದು ಗುರುತಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಯನ್ನು ಮಹಿಮದಾಸ್ ಎಂದು ಪೊಲೀಸರು ಗುರುತಿಸಿದ್ದಾರೆ ಎಂದು ಸಚಿವರು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಏನೇನು ವಶ?
ಕಾರ್ಯಾಚರಣೆಯಲ್ಲಿ ಎರಡು ತಂಡಗಳಲ್ಲಿ ಉಪವಲಯ ಅರಣ್ಯಾಧಿಕಾರಿ ಶೇಖರಯ್ಯ ಅವತಾರಿ, ಬಸವರಾಜ ಸಾಸಲವಾಡದ, ಅನಿಲ್ ಕುಮಾರ್, ಮಲ್ಲಿಕಾರ್ಜುನ ಮತ್ತು ರೋಹಿತ್ ಎಂಬ ನಾಲ್ವರು ಗಸ್ತು ಅರಣ್ಯ ಪಾಲಕರು, ಇಟಿಎಫ್ ಸಿಬ್ಬಂದಿ ಗುರುಸ್ವಾಮಿ,, ವಾಚರ್ ಮಹದೇವ, ಗಿರೀಶ್ ಮತ್ತು ಶಿವಲಿಂಗನಾಯಕ ಎಂಬ ಇಬ್ಬರು ವಾಚರ್‌ಗಳು ಮತ್ತು ವಾಹನ ಚಾಲಕ ಮನೋಜ್ ಒಟ್ಟು 10 ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದರು.
ಈ ಘಟನೆ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ಎರಡು ನಾಡ ಬಂದೂಕುಗಳು, 4 ಬ್ಯಾಗ್‌ಗಳು, ಜೊತೆಗೆ ಕಾಡತೂಸುಗಳು, ಪಟಾಕಿ, ಮದ್ದಿನ ಪೆಟ್ಟಿಗೆ, ಮೊಬೈಲ್‌ಗಳು, ಚಾರ್ಜರ್ ಬ್ಯಾಟರಿ ಹಾಗೂ ಕೆಲ ಪಾತ್ರೆಗಳು, ಅಕ್ಕಿ, ಈರುಳ್ಳಿ, ದನಿಯಾ ಪೌಂಡರ್ ಸೇರಿ ಕೆಲ ದಿನಸಿಗಳು, ಟೊಮೊಟೋ ಸೇರಿ ಕೆಲ ತರಕಾರಿಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳ ಬ್ಯಾಗ್‌ನಲ್ಲಿ ಸುಮಾರು 20 ರಿಂದ 35 ಕೆಜಿ ಜಿಂಕೆ ಮಾಂಸ ಪತ್ತೆಯಾಗಿದ್ದು, ಅಕ್ರಮ ಬೇಟೆಯ ಶಂಕೆ ಮತ್ತಷ್ಟು ಬಲವಾಗಿದೆ ಎಂದು ಸಚಿವರು ಹೇಳಿದರು.
ಅರಣ್ಯವನ್ನು ರಕ್ಷಿಸುವುದು ಇಲಾಖೆಯ ಕರ್ತವ್ಯ. ಅರಣ್ಯ ಕಾಯ್ದೆಯಡಿ ಈಗಾಗಲೇ ಪ್ರಕರಣ ದಾಖಲಾಗಿದೆ. ತನಿಖೆಯ ನಂತರ ನಮ್ಮ ಸಿಬ್ಬಂದಿ ಉದ್ದೇಶಪೂರ್ವಕವಾಗಿ ತಪ್ಪು ಮಾಡಿರುವುದು ಅಥವಾ ಕಾಯ್ದೆ ಉಲ್ಲಂಘಿಸಿರುವುದು ಸಾಬೀತಾದರೆ ಅವರ ವಿರುದ್ಧ ಯಾವುದೇ ಹಿಂಜರಿಕೆಯಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮೃತರು ಅಮಾಯಕರು ಎಂದು ತನಿಖೆಯಲ್ಲಿ ಕಂಡುಬಂದರೆ ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದು ಸೇರಿದಂತೆ ನ್ಯಾಯಯುತವಾಗಿ ಆಗಬೇಕಿರುವ ಎಲ್ಲ ಕ್ರಮಗಳನ್ನು ವಹಿಸಲಾಗುವುದು.
- ರಾಮಲಿಂಗಾರೆಡ್ಡಿ, ಅರಣ್ಯ ಮತ್ತು ಪರಿಸರ ಸಚಿವ
- ಆ.15ರಂದು ಗುಂಡಿನ ದಾಳಿಗೆ ಬಲಿಯಾದವರು ಬೇಟೆ ಬಿಟ್ಟು ಬೇರೆ ಉದ್ದೇಶಕ್ಕೆ ತೆರಳಿದ್ದರು ಎಂಬುದು ಕಂಡುಬಂದಿಲ್ಲ
- ಈ ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಅದು ಮುಗಿದ ಬಳಿಕ ಹೆಚ್ಚಿನ ತನಿಖೆ ಅಗತ್ಯವಿದ್ದರೆ ಪರಿಗಣನೆ
- ಆತ್ಮ ರಕ್ಷಣೆಗಾಗಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ರಾತ್ರಿಯಾಗಿದ್ದರಿಂದ ಬೇಟೆಗಾರರು ಅಸ್ಪಷ್ಟವಾಗಿ ಕಂಡಿದ್ದಾರೆ
- ಸಿಬ್ಬಂದಿಯ ಯಾವುದೇ ದುರುದ್ಧೇಶ ಕಂಡುಬಂದಿಲ್ಲ. ಅರಣ್ಯ ಅಧಿಕಾರಿಗಳ ತಪ್ಪಿದ್ದರೆ ನಿರ್ದಯವಾಗಿ ಕಾನೂನು ಕ್ರಮ: ರೆಡ್ಡಿ