ಆಡಳಿತಕ್ಕೆ100 ದಿನ : ಬಲಿಷ್ಠ ಕರ್ನಾಟಕಕ್ಕೆ ಡಿಕೆಶಿ ನವ ಸಂಕಲ್ಪದ ಘೋಷಣೆ

Published : Sep 11, 2026, 06:39 AM IST
DK Shivakumar

ಸಾರಾಂಶ

ನಾನು ಮುಖ್ಯಮಂತ್ರಿ ಮಾತ್ರವಲ್ಲ, ನಾಡಿನ ಏಳು ಕೋಟಿ ಜನರ ಸೇವಕ. ಕೃಷಿ, ಶಿಕ್ಷಣ, ಆರೋಗ್ಯ ಸೇವೆ, ಕೈಗಾರಿಕಾ ಅಭಿವೃದ್ಧಿ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಗೆ ನನ್ನ ಆದ್ಯತೆ, ಜಲ ಭದ್ರತೆ, ಆರ್ಥಿಕ ಶಕ್ತಿ, ಸಾಮಾಜಿಕ ನ್ಯಾಯಕ್ಕೆ ನನ್ನ ಒತ್ತು, ಯುವಜನರ ಕನಸಿಗೆ ನೀರೆರೆಯವುದೇ ನನ್ನ ಧ್ಯೇಯ...’

ಬೆಂಗಳೂರು : ನಾನು ಮುಖ್ಯಮಂತ್ರಿ ಮಾತ್ರವಲ್ಲ, ನಾಡಿನ ಏಳು ಕೋಟಿ ಜನರ ಸೇವಕ. ಕೃಷಿ, ಶಿಕ್ಷಣ, ಆರೋಗ್ಯ ಸೇವೆ, ಕೈಗಾರಿಕಾ ಅಭಿವೃದ್ಧಿ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಗೆ ನನ್ನ ಆದ್ಯತೆ, ಜಲ ಭದ್ರತೆ, ಆರ್ಥಿಕ ಶಕ್ತಿ, ಸಾಮಾಜಿಕ ನ್ಯಾಯಕ್ಕೆ ನನ್ನ ಒತ್ತು, ಯುವಜನರ ಕನಸಿಗೆ ನೀರೆರೆಯವುದೇ ನನ್ನ ಧ್ಯೇಯ...’

‘ಇದು, ತಮ್ಮ ನೇತೃತ್ವದ ಸರ್ಕಾರಕ್ಕೆ 100 ದಿನಗಳು ತುಂಬಿದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ‘ಬಲಿಷ್ಠ ಕರ್ನಾಟಕ ನಿರ್ಮಾಣಕ್ಕೆ ಮಾಡಿದ ನವ ಸಂಕಲ್ಪ’.

ಅಷ್ಠೇ ಅಲ್ಲ, ಕರ್ನಾಟಕದ ಆರ್ಥಿಕತೆಯನ್ನು 2037ರ ವೇಳೆಗೆ 1 ಟ್ರಿಲಿಯನ್ ಗೆ ತಲುಪಿಸುವ ಗುರಿ, ಶೇ.5ಕ್ಕಿಂತ ಕಡಿಮೆ ಅಪೌಷ್ಟಿಕತೆ, ಮಕ್ಕಳು ಶಾಲೆ ತೊರೆಯುವಿಕೆ ಮತ್ತು ಬಡತನವನ್ನು ಶೂನ್ಯಕ್ಕೆ ಇಳಿಸುವ ಮಹಾ ಸಂಕಲ್ಪಗಳನ್ನು ಮಾಡಿದ್ದೇವೆ. ನನ್ನಿಂದ ಸಾಧ್ಯವಾಗುವುದಕ್ಕೆ ಮಾತ್ರ ನಾನು ಕೈಹಾಕುತ್ತೇನೆ. ಪಂಚ ಗ್ಯಾರಂಟಿ ಯೋಜನೆ ಜಾರಿ ಅಸಾಧ್ಯ ಎಂದರು, ಅದನ್ನು ಸಾಧ್ಯವಾಗಿಸಿ ತೋರಿಸಿದ್ದೇವೆ. ಅದೇ ರೀತಿ ಈಗ ಚಾಲನೆ ನೀಡಿರುವ, ಅನುಮತಿಸಿರುವ ಹಾಗೂ ಘೋಷಿಸಿರುವ ಎಲ್ಲ ಯೋಜನೆಗಳನ್ನೂ ಮುಂದಿನ ದಿನಗಳಲ್ಲಿ ಮಾಡಿ ತೋರಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ನಾನು ಹಾಗೂ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳ ಜಾರಿ ಸೇರಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವ ಮೂಲಕ ಬಸವಣ್ಣನವರ ತತ್ವದಂತೆ ನುಡಿದಂತೆ ನಡೆದಿದ್ದೇವೆ. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಗಟ್ಟಿಯಾದ ಅಡಿಪಾಯ ಹಾಕಿಕೊಟ್ಟಿದ್ದಾರೆ. ಸರ್ಕಾರ ಎಂದರೆ ಎಲ್ಲರಿಗಾಗಿ ಇರಬೇಕು. ಶೋಷಿತರು, ದಮನಿತರ ಪರ ಗಟ್ಟಿಯಾಗಿ ನಿಲ್ಲಬೇಕು ಎನ್ನುವುದನ್ನು ತಮ್ಮ ಆಡಳಿತದಲ್ಲಿ ತೋರಿಸಿಕೊಟ್ಟಿದ್ದಾರೆ. ಅದೇ ಬದ್ಧತೆ ಮತ್ತು ಕಾಳಜಿಯೊಂದಿಗೆ ಅವರು ಹಾಕಿಕೊಟ್ಟ ದಾರಿಯಲ್ಲಿ ನಾನು ಮುಂದುವರೆಯುತ್ತಿದ್ದೇನೆ ಎಂದರು.

ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುವ ಜೊತೆಗೆ ಬಲಿಷ್ಠ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದ್ದೇನೆ. ಗ್ಯಾರಂಟಿಗಳಿಗೆ ಈವರೆಗೆ 1.45 ಲಕ್ಷ ಕೋಟಿ ರು. ಅನುದಾನ ವೆಚ್ಚ ಮಾಡಲಾಗಿದೆ. 6ನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡಲಾಗಿದೆ. ರೈತರು, ಜನರ ಭೂ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಚಾಲನೆ, ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರಗಳನ್ನು ನೀಡಲು ‘ಪ್ರಜಾಸೇವೆ’ ಎಂಬ ಹೊಸ ಇಲಾಖೆ ರಚನೆ, ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌, ಯುವಕರಲ್ಲಿ ಕ್ರೀಡೆ, ಸಂಸ್ಕೃತಿ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಲು 10 ಸಾವಿರ ಭಾರತ್‌ ಜೋಡೋ ಯುವಕರ ಸಂಘಗಳ ಸ್ಥಾಪನೆ, ತಲಾ 10 ಲಕ್ಷ ರು. ಅನುದಾನ ಸೇರಿದಂತೆ ಅನೇಕ ಹೊಸ ಯೋಜನೆಗಳನ್ನು ಆರಂಭಿಸಲಾಗಿದೆ ಎಂದರು.

ಎಐ ವಿವಿ ಸ್ಥಾಪನೆ:

ಇವುಗಳ ಜೊತೆಗೆ ಈಗ 3 ಎರಕೆ ವರೆಗೆ ಭೂಮಿ ಇರುವ ಸಣ್ಣ ರೈತರ ಜಮೀನು ಉಳುಮೆ ಸೇರಿದಂತೆ ಇತರೆ ಕೃಷಿ ಚಟುವಟಿಕೆಯ ಯಂತ್ರಗಳ ಬಳಕೆಗೆ ಸರ್ಕಾರದಿಂದ ಸಬ್ಸಿಡಿ, ಮುಖ್ಯ ರಸ್ತೆಗಳ ಪಕ್ಕದ ರೈತರು ಜಮೀನಿನಲ್ಲಿ ತೇಗದ ಗಿಡ ಬೆಳೆಸಲು ‘ತೇಗದ ಸಿರಿ’ ಯೋಜನೆ, ಬೆಳೆದ ತೇಗದ ಮರಗಳ ಶೇ.70ರಷ್ಟು ಆದಾಯ ರೈತರಿಗೆ ನೀಡುವುದು. ವೃತ್ತಿಪರ ಕೋರ್ಸುಗಳ ಪ್ರವೇಶದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5 ರಷ್ಟು ಮೀಸಲಾತಿ, 29,679 ಕೋಟಿ ರು. ಹೂಡಿಕೆಗೆ ಅನುಮೋದನೆ, ದೇಶದಲ್ಲೇ ಮೊದಲ ಸರ್ಕಾರಿ ಪ್ರಾಯೋಜಿತ ಎಐ ವಿಶ್ವವಿದ್ಯಾಲಯ ಸ್ಥಾಪನೆ, ಕೈಗಾರಿಕೆಗಳ ಸ್ಥಾಪನೆಗೆ ಹೂಡಿಕೆ ಮಾಡುವವರಿಗೆ ಹೆಚ್ಚು ಬಂಡವಾಳ ಸಬ್ಸಿಡಿ, ಅವರು ಸೃಷ್ಟಿಸುವ ಪ್ರತಿ ಉದ್ಯೋಗಕ್ಕೂ ಸರ್ಕಾರದಿಂದ ಪ್ರತಿ ತಿಂಗಳು 2500 ರು. ಪ್ರೋತ್ಸಾಹಧನ, ಸಿಎಸ್‌ಆರ್‌ ನಿಧಿ ಸಮರ್ಪಕ ಬಳಕೆ ಮೂಲಕ 1000 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ ಅಭಿವೃದ್ಧಿಪಡಿಸುವ ಮಹತ್ವದ ಯೋಜನೆ, ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದಲೇ ಮಕ್ಕಳಿಗೆ ಎಐ ಶಿಕ್ಷಣ, ಹಿಂದುಳಿದ 10 ಜಿಲ್ಲೆಗಳಲ್ಲಿ 1 ಲಕ್ಷ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆ ಸೇರಿದಂತೆ ಇನ್ನೂ ಅನೇಕ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಕೆಲ ತಿಂಗಳಲ್ಲಿ ಬಡವರಿಗೆ 5 ಲಕ್ಷ ನಿವೇಶನ ಹಂಚಿಕೆ:

ಅಷ್ಟೇ ಅಲ್ಲ, ಮನೆ, ನಿವೇಶನ ಇಲ್ಲದವರಿಗೆ ಪ್ರತಿ ಜಿಲ್ಲೆಯಲ್ಲೂ 50 ಸಾವಿರ ನಿವೇಶನಗಳನ್ನು ಸರ್ಕಾರದಿಂದ ನೀಡಲು ತೀರ್ಮಾನಿಸಲಾಗಿದೆ. ಇನ್ನು ಒಂದೆರಡು ತಿಂಗಳಲ್ಲಿ 5 ಲಕ್ಷ ನಿವೇಶಗಳನ್ನು ಹಂಚಿಕೆ ಮಾಡಲಾಗುವುದು. ಇದಕ್ಕಾಗಿ ವಿವಿಧ ಜಿಲ್ಲೆಗಳಲ್ಲಿ 10 ಸಾವಿರ ಎಕರೆ ಭೂಮಿಯನ್ನು ಜಿಲ್ಲಾಧಿಕಾರಿಗಳು ಗುರುತಿಸಿದ್ದಾರೆ. ಎರಡು ವರ್ಷಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ 50 ಸಾವಿರ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವುದು, ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ಉದ್ಯಮಶೀಲತೆ ಮತ್ತು ಕೈಶಲ್ಯವೃದ್ಧಿಗೆ ತರಬೇತಿ ಕೇಂದ್ರಗಳ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಗೆ ಒತ್ತು:

ರಾಜ್ಯದಲ್ಲಿ ಕೈಗಾರಿಕಾ ಪ್ರಗತಿ ಸಾಧಿಸಲು ವೇಗದ ಅನುಮೋದನೆಗಳಿಗೆ ಆದ್ಯತೆ ನೀಡಲಾಗಿದ್ದು, 100 ದಿನಗಳಲ್ಲಿ 43,214 ಕೋಟಿ ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಇನ್ನು ಹಿಂದುಳಿದ ತಾಲೂಕುಗಳಲ್ಲಿ ಹೂಡಿಕೆಗೆ ವೇಗವರ್ದನಾ ಪ್ಯಾಕೇಜ್ ನೀಡಲಾಗುವುದು. ಕೈಗಾರಿಕಾ ಪ್ರದೇಶಗಳ ಪಕ್ಕ ಕಾರ್ಮಿಕರಿಗೆ ಅನುಕೂಲವಾಗಲು ಶೇ.15ರಿಂದ 20 ರಷ್ಟು ಜಾಗದಲ್ಲಿ ಶ್ರಮಿಕ ನಿವಾಸ ಯೋಜನೆ ಮೂಲಕ ವಸತಿ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು. ಜೊತೆಗೆ ಜವಳಿ ನೀತಿ, ಬಳ್ಳಾರಿ ಜೀನ್ಸ್ ಪಾರ್ಕ್‌ಗಳಿಗೆ ಮುಂದಾಗಿದ್ದು, ಏರೋಸ್ಪೇಸ್ ಹಾಗೂ ರಕ್ಷಣಾ ನೀತಿ ರೂಪಿಸಲಾಗಿದೆ. ವಿದೇಶಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಸಚಿವಾಲಯ ಮಾಡಲಾಗುವುದು. ಉದ್ಯೋಗ ನಿಧಿ ಯೋಜನೆ ಮೂಲಕ ಬೆಂಗಳೂರಿನ ಹೊರಗೆ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿಯಲ್ಲಿ ಉದ್ಯೋಗ ಸೃಷ್ಟಿಸುವವರಿಗೆ ಉದ್ಯೋಗಕ್ಕೆ 2500 ರೂ. ನೀಡಲು ಮುಂದಾಗಿದ್ದೇವೆ ಎಂದರು.

ಉತ್ತಮ ಆರೋಗ್ಯ, ನಶೆ ಮುಕ್ತ ಕರ್ನಾಟಕ:

ಆರೋಗ್ಯಕರ ರಾಜ್ಯ ನಿರ್ಮಿಸಲು ಎಲ್ಲಾ ತಾಲೂಕುಗಳಲ್ಲಿ ಟೆಲಿ ಐಸಿಯು ಸ್ಥಾಪನೆ, ನಶೆಮುಕ್ತ ಕರ್ನಾಟಕಕ್ಕೆ ರೈಸ್ ಹಾಗೂ ಬೇಡ ಬ್ರೋ ಎಂಬ ಅಭಿಯಾನ ಮಾಡಲಾಗುತ್ತಿದೆ, ಆರೋಗ್ಯ ಸ್ಪಂದನ ಕಾರ್ಯಕ್ರಮ ಮಾಡಲಾಗಿದೆ. ನಮ್ಮ ಎಚ್.ಕೆ.ಪಾಟೀಲ್ ಅವರ ಕ್ಷೇತ್ರದಲ್ಲಿ ಸ್ಮಶಾನಗಳಿಗೆ ಮುಕ್ತಿವನ ಎಂಬ ರೂಪ ನೀಡಿದ್ದಾರೆ. ಅದೇ ರೀತಿ ರಾಜ್ಯಾದ್ಯಂತ 1 ಸಾವಿರ ರುದ್ರಭೂಮಿಗಳನ್ನು ಅಭಿವೃದ್ಧಿ ಮಾಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಇವನ್ನೆಲ್ಲ ನಾನು ಸಾಧನೆಯ ಪಟ್ಟಿ ಎಂದು ಹೇಳುತ್ತಿಲ್ಲ. ಇವೆಲ್ಲವೂ ಬಲಿಷ್ಠ ಕರ್ನಾಟಕ ನಿರ್ಮಾಣಕ್ಕೆ ಮುಂದೆ ಸಾಗಬೇಕಾಗಿರುವ ಹಾದಿಯ ದಿಕ್ಸೂಚಿಗಳು. ಸರ್ಕಾರದ ಈ ರಥವನ್ನು ನಾನು ಒಬ್ಬನೇ ಎಳೆಯಲಾಗಲ್ಲ. ಸಂಪುಟದ ಎಲ್ಲ ಸಚಿವರು, ಶಾಸಕರು, ಅಧಿಕಾರಿ ವರ್ಗ ಎಲ್ಲರೂ ನನಗೆ ಸಹಕಾರ ನೀಡಬೇಕು. ನಾಡಿನ 7 ಕೋಟಿ ಜನರ ಸರ್ಕಾರ. ನೀವು ಕೊಟ್ಟ ಶಕ್ತಿ, ನಮ್ಮ ಮೇಲೆ ಇಟ್ಟಿರುವ ನಂಬಿಕೆ, ಎಲ್ಲಾ ವರ್ಗದ ಜನರ ಬದುಕಲ್ಲಿ ಬದಲಾವಣೆಗೆ ಸಹಕಾರಿಯಾಗುತ್ತಿದೆ. ಶತಕದ ಪಥದಲ್ಲಿ ಕರ್ನಾಟಕ ಹೆಜ್ಜೆ ಹಾಕುತ್ತಿದ್ದು, ನಾಡಿನ ಅಭಿವೃದ್ಧಿಗೆ ನಾವು ಬದ್ಧವಾಗಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಪ್ರತಿಪಕ್ಷಗಳು ಸಹಕಾರ ನೀಡುತ್ತಿಲ್ಲ:

ರಾಜಕೀಯ ಬದಿಗಿಟ್ಟು ಭ್ರಷ್ಟಾಚಾರರಹಿತ ಆಡಳಿತ ನೀಡಲು ಸಹಕಾರ ನೀಡುವಂತೆ ಪ್ರತಿಪಕ್ಷದವರನ್ನೂ ಕೇಳುತ್ತಿದ್ದೇನೆ. ಆದರೆ, ಅವರಿಗೆ ಮನಸ್ಸಿಲ್ಲ. ರಾಜಕೀಯವೇ ಮುಖ್ಯವಾಗಿದೆ. ಯಾರು ಸಹಕಾರ ನೀಡಲಿ, ಬಿಡಲಿ, ನಾವು ಸಂವಿಧಾನ ಬದ್ಧವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುವುತ್ತೇವೆ. ರಾಗ, ದ್ವೇಷ, ಅಸೂಯೆ ಇಟ್ಟುಕೊಳ್ಳದೆ, ಸರ್ವರಿಗೂ ಸಮಪಾಲು, ಸಮಬಾಳು ಎಂಬ ತತ್ವದಡಿ ಸರ್ಕಾರ ನಡೆಸುತ್ತೇನೆ. ಮುಂದಿನ ದಿನಗಳಲ್ಲಿ ರೈತರ ವಿಚಾರ ಹಾಗೂ ಕಸ್ತೂರಿ ರಂಗನ್ ವಿಚಾರವಾಗಿ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಲಾಗಿದೆ. ಅಲ್ಲಿಯಾದರೂ ಪಾಲ್ಗೊಂಡು ಮುಕ್ತವಾಗಿ ಚರ್ಚೆ ಮಾಡಿ ಸಲಹೆ ನೀಡುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸೇರಿ ಸಂಪುಟದ ಎಲ್ಲಾ ಸಚಿವರೂ ಭಾಗಿಯಾಗಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮಂಡ್ಯ ಜಿಲ್ಲಾ ಕಾಂಗ್ರೆಸ್‌ಗೆ ಕುಮಾರ್ ಕೊಪ್ಪ ಹೊಸ ಸಾರಥಿ
ಮೋದಿ ರಾಜಕೀಯ ಜೀವನಕ್ಕೆ 25 ವರ್ಷ: 1 ತಿಂಗಳು ಸಂಭ್ರಮ