ಮಂಡ್ಯ ಮಂಜುನಾಥ
ಅನಿರೀಕ್ಷಿತವೆಂಬಂತೆ ಜಿಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಹೊಸ ಸಾರಥಿಯಾಗಿ ಕುಮಾರ್ ಕೊಪ್ಪ ಅವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಯುವ ಮುಖಂಡ ಎಂ.ಎಸ್.ಚಿದಂಬರ್‌ಗೆ ಮತ್ತೆ ಅದೃಷ್ಟ ಕೈಕೊಟ್ಟಿದೆ. ರಾಹುಲ್‌ಗಾಂಧಿ ಜೊತೆ ಭಾರತ್ ಜೋಡೋ ಪಾದಯಾತ್ರೆ ನಡೆಸಿದ್ದ ಸಿ.ಎಂ.ದ್ಯಾವಪ್ಪ ಅಧ್ಯಕ್ಷ ಸ್ಥಾನದ ಕನಸೂ ಭಗ್ನಗೊಂಡಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಕೊಪ್ಪ ಭಾಗಕ್ಕೆ ಅಧ್ಯಕ್ಷ ಪಟ್ಟ ಒಲಿದಿರುವುದು ಕಾರ್ಯಕರ್ತರ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಈ ಹಿಂದೆ ದಲಿತ ಸಮುದಾಯದಿಂದ ಚಿಕ್ಕಲಿಂಗಯ್ಯ ಅವರು ಆಯ್ಕೆಯಾಗಿದ್ದರು. ಸುಮಾರು ೨೫ ವರ್ಷಗಳ ಬಳಿಕ ದಲಿತ ಸಮುದಾಯಕ್ಕೆ ಸೇರಿದ ಕುಮಾರ್ ಕೊಪ್ಪ ಅವರಿಗೆ ಅಧ್ಯಕ್ಷ ಸ್ಥಾನ ದೊರಕಿದೆ. ಸಾಮಾನ್ಯ ವರ್ಗಕ್ಕೆ ದೊರಕುತ್ತಿದ್ದ ಅಧ್ಯಕ್ಷ ಸ್ಥಾನ ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ದಲಿತ ಸಮುದಾಯಕ್ಕೆ ನೀಡುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿದೆ ಎನ್ನಲಾಗುತ್ತಿದೆ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸತತ ಎಂಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಿ.ಡಿ.ಗಂಗಾಧರ್ ನಂತರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಸ್ವರೂಪ ಬದಲಾಯಿತು. ಎಐಸಿಸಿಯಿಂದ ವೀಕ್ಷಕರಾಗಿ ಸೈಮನ್ ಅಲೆಕ್ಸ್, ಎಐಸಿಸಿ ಕಾರ್ಯದರ್ಶಿ ನರೇಂದ್ರ, ವೀಕ್ಷಕರಾದ ಎಂ.ಲಕ್ಷ್ಮಣ್, ಗೋಪಿಕೃಷ್ಣ ಅವರು ಜು.೨೫ರಂದು ಮಂಡ್ಯಕ್ಕೆ ಆಗಮಿಸಿ ೨೫ ದಿನಗಳ ಕಾಲ ಜಿಲ್ಲಾದ್ಯಂತ ಸಂಚರಿಸಿ ಮುಖಂಡರು- ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಎಐಸಿಸಿಗೆ ರವಾನಿಸಿದ್ದರು.
ಎಂ.ಎಸ್.ಚಿದಂಬರ್ ಮತ್ತು ಸಿ.ಎಂ.ದ್ಯಾವಪ್ಪ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಬಾರಿಯೂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಸಿಗಲಿದೆ ಎಂದು ಬಲವಾಗಿ ನಂಬಿದ್ದರು. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಬಗ್ಗೆ ಅಪಾರ ನಿರೀಕ್ಷೆ, ಕನಸನ್ನೂ ಕಂಡಿದ್ದರು. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆ ಆಗಮಿಸಿದ್ದಾಗ ಇಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಂ.ಎಸ್.ಚಿದಂಬರ್ ಮುಂದಿನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೆಂದು ಘೋಷಿಸಿದ್ದರು. ಯುವ ಮುಖಂಡನ ಉತ್ಸಾಹಕ್ಕೆ ತಣ್ಣೀರೆರಚಬಾರದೆಂದು ಕಾರ್ಯಾಧ್ಯಕ್ಷ ಹುದ್ದೆಯನ್ನೂ ಸೃಷ್ಟಿಸಿಕೊಟ್ಟಿದ್ದರು. ಈ ಭರವಸೆಯ ಮೇಲೆ ಅಧ್ಯಕ್ಷ ಸ್ಥಾನ ಸಿಗುವ ಆಶಾಭಾವನೆ ಚಿದಂಬರ್ ಅವರಲ್ಲಿತ್ತು.
ಮದ್ದೂರು ತಾಲೂಕಿಗೆ ಸೇರಿದ ಕೊಪ್ಪ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ. ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕ್ಷೇತ್ರದವರಾಗಿರುವ ಕುಮಾರ್ ಕೊಪ್ಪ ಸಚಿವರೊಂದಿಗೆ ಉತ್ತಮ ಒಡನಾಟ, ಬಾಂಧವ್ಯ ಇರಿಸಿಕೊಂಡಿದ್ದಾರೆ. ಸಚಿವರೂ ಕೂಡ ಕುಮಾರ್ ಕೊಪ್ಪ ಬಗ್ಗೆ ಹೆಚ್ಚು ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಇದರ ಪರಿಣಾಮ ಯಾರೂ ನಿರೀಕ್ಷಿಸದ ರೀತಿಯಲ್ಲಿ ಅಧ್ಯಕ್ಷ ಸ್ಥಾನ ಕುಮಾರ್ ಕೊಪ್ಪ ಅವರನ್ನು ಅರಸಿಕೊಂಡು ಹೋಗಿರುವುದರಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಪಾತ್ರ ದೊಡ್ಡದಿದೆ ಎಂದು ತಿಳಿದುಬಂದಿದೆ.ಪ್ರಸ್ತುತ ನನಗೆ ಸಿಕ್ಕಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕಬ್ಬಿಣದ ಕಡಲೆ ಮತ್ತು ಸವಾಲಿನ ಹುದ್ದೆಯಾಗಿದೆ. ಸಮಕಾಲೀನ ಸವಾಲುಗಳಿಗೆ ಧ್ವನಿಯಾಗಿ ಕಾರ್ಯಕರ್ತರನ್ನು ಸಜ್ಜುಗೊಳಿಸುವ, ಸಂಘಟಿಸುವ ಮೂಲಕ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಎರಡೂ ವಿಭಾಗಗಳಲ್ಲೂ ಕಾರ್ಯಕರ್ತರಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಾವು ಪಕ್ಷವನ್ನು ಸಂಘಟಿಸಲು ಕಾರ್ಯಕರ್ತರ ಸಹಕಾರ ಅಗತ್ಯವಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲು ಬದ್ಧನಾಗಿದ್ದೇನೆ.