;Resize=(412,232))
ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಹಾಗೂ ಜನಕಲ್ಯಾಣದ ಕಾರ್ಯಗಳಿಗೆ ಒತ್ತು ನೀಡುವಂತೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ‘ಬಳ್ಳಾರಿ ಚಲೋ ಪಾದಯಾತ್ರೆ’ 9ನೇ ದಿನಕ್ಕೆ ಕಾಲಿಟ್ಟಿದೆ. ಗುರುವಾರ ಸಮಾರೋಪಗೊಳ್ಳಲಿದೆ. ಬಿಡುವಿಲ್ಲದ ಹೋರಾಟದ ನಡುವೆಯೇ ವಿಜಯೇಂದ್ರ ಅವರು ‘ಕನ್ನಡಪ್ರಭ’ ಜೊತೆ ಮಾತನಾಡಿದ್ದು, ಪಾದಯಾತ್ರೆಯ ಉದ್ದೇಶ, ಸರ್ಕಾರದ ಧೋರಣೆ, ಜನರ ಸ್ಪಂದನೆ ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಸಂದರ್ಶನ: ಮಂಜುನಾಥ ಕೆ.ಎಂ.
-ವಿಧಾನಮಂಡಲ ಅಧಿವೇಶನದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ವಿಪಕ್ಷ ನಾಯಕರು ಘೋಷಿಸಿದ್ದರು. ಮರುದಿನವೇ ನಾಗೇಂದ್ರ ರಾಜೀನಾಮೆ ಸೇರಿದಂತೆ ಬರ ನಿರ್ವಹಣೆ, ನಿರುದ್ಯೋಗ ಸಮಸ್ಯೆ, ಬಡವರಿಗೆ ಸೂರು ಕಲ್ಪಿಸುವಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ಪಾದಯಾತ್ರೆ ಆರಂಭಿಸಲು ನಿರ್ಧರಿಸಿದ್ದೇವು. ನಾವು ಕೇವಲ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಪಾದಯಾತ್ರೆ ಘೋಷಿಸಲಿಲ್ಲ. ಹತ್ತಾರು ಜನಪರ ವಿಚಾರಗಳನ್ನು ಮುಂದಿಟ್ಟುಕೊಂಡು ಬಳ್ಳಾರಿ ಚಲೋಗೆ ಕರೆ ನೀಡಿದ್ದೇವು. ನಮ್ಮ ನಿರೀಕ್ಷೆಗೂ ಮೀರಿ ಜನರು ಸ್ಪಂದಿಸಿದ್ದಾರೆ. ದಿನದಿಂದ ದಿನಕ್ಕೆ ಜನರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ. ಬಳ್ಳಾರಿಯತ್ತ ನಮ್ಮ ಪಾದಯಾತ್ರೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
-ಜನಸಾಮಾನ್ಯರು ನಮ್ಮ ಜನಪರ ಹೋರಾಟಕ್ಕೆ ಈ ಪರಿಯಲ್ಲಿ ಬೆಂಬಲ ನೀಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಬಳ್ಳಾರಿ ಪಾದಯಾತ್ರೆ ರಾಜ್ಯದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ, ರಣೋತ್ಸಾಹ ಮೂಡಿದೆ. ಜನಸಮುದಾಯ ನಮ್ಮ ಪರ ಮಾತನಾಡುತ್ತಿದೆ. ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಗಳ ಬಗ್ಗೆ ಸಾರ್ವಜನಿಕರೇ ಧ್ವನಿ ಎತ್ತುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಳೆದ ಮೂರು ತಿಂಗಳಿಂದ ಬಿಡದಿ ಟೌನ್‌ಶಿಪ್ ಬಗ್ಗೆಯೇ ತಲೆಕೆಡಿಸಿಕೊಂಡಿದ್ದರು. ಬಳ್ಳಾರಿ ಚಲೋ ಆರಂಭವಾದ ಬಳಿಕ ಎಚ್ಚೆತ್ತುಕೊಂಡಿರುವ ಅವರು ಅನಿವಾರ್ಯವಾಗಿ ಜನಸಾಮಾನ್ಯರ ಪರ ಮಾತನಾಡುವಂತಾಗಿದೆ.
*ತಮ್ಮ ಮಾತಿನ ಅರ್ಥ, ಬಳ್ಳಾರಿ ಚಲೋಗೆ ರಾಜ್ಯ ಸರ್ಕಾರ ಬೆಚ್ಚಿಬಿದ್ದಿದೆಯೇ?
-ರಾಜ್ಯದಲ್ಲಿ ಆಡಳಿತ ನಡೆಸುವವರಿಗೆ ಗ್ರೌಂಡ್ ರಿಯಾಲಿಟಿ ಗೊತ್ತಿರಬೇಕು. ಬರಗಾಲ ಹೇಗೆ ನಿಯಂತ್ರಿಸಬೇಕು, ದುಡಿಯುವ ಜನರ ಸಂಕಷ್ಟಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಅರಿವಿನಿಂದ ಆಡಳಿತ ನಡೆಸಬೇಕು. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಬರ ಹಾಗೂ ನೆರೆ ಪರಿಸ್ಥಿತಿ ಸಮರ್ಥವಾಗಿ ಎದುರಿಸಿದ್ದರು. ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡಿದ್ದರು. ಅದಕ್ಕೆ ಕಾರಣ ಅವರು ಹೋರಾಟದ ಮೂಲಕ ಬಂದವರು. ಆದರೆ, ಡಿ.ಕೆ.ಶಿವಕುಮಾರ್ ಹೋರಾಟಕ್ಕಿಂತ ಹಾರಾಟದ ಮೂಲಕ ಬಂದವರು. ಹೀಗಾಗಿ ಬಡವರ ಕಷ್ಟ, ಬರದಿಂದ ರೈತರು ಹಾಗೂ ಕೃಷಿ ಕೂಲಿಕಾರರು ಎದುರಿಸುತ್ತಿರುವ ಸಂಕಷ್ಟ ಅವರಿಗೆ ಅರ್ಥವಾಗುತ್ತಿಲ್ಲ.
*ರಾಜ್ಯದ ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಅನಿಸುವುದಿಲ್ಲವೆ?
-ವಿಫಲವಾಗಿದೆ ಎನ್ನುವುದಕ್ಕಿಂತ, ಬರದ ಬಗ್ಗೆ ಈ ಸರ್ಕಾರ ತಲೆ ಕೆಡಿಸಿಕೊಂಡಿರಲಿಲ್ಲ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದು, ಪ್ರಧಾನಮಂತ್ರಿಗಳಿಗೆ ಪತ್ರ ಕಳುಹಿಸುವುದನ್ನು ಬಿಟ್ಟರೆ ಸರ್ಕಾರ ಮಾಡಿದ್ದೇನು? ಎಲ್ಲ ತಾಲೂಕುಗಳಿಗೆ ಕುಡಿಯುವ ನೀರಿಗಾಗಿ ₹1 ಕೋಟಿ ಬಿಡುಗಡೆ ಮಾಡಿರುವುದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ಬರ ನಿರ್ವಹಣೆಗೆ ಇಷ್ಟೇ ಹಣ ಸಾಕೇ? ರೈತರ ಕೃಷಿ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲು ದೆಹಲಿಗೆ ನಿಯೋಗ ಕೊಂಡೊಯ್ಯುವ ನಿರ್ಧಾರವನ್ನಾದರೂ ಸರ್ಕಾರ ತೆಗೆದುಕೊಳ್ಳಬಹುದಿತ್ತು. ಬರ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಚುನಾಯಿತ ಸರ್ಕಾರ ಏಕೆ ಇರಬೇಕು? ಸರ್ಕಾರದ ಧೋರಣೆಯಿಂದ ರಾಜ್ಯದ ಅನ್ನದಾತರು ಬೇಸತ್ತು ಹೋಗಿದ್ದಾರೆ.
*ಗುಳೆ ಹೋಗುತ್ತಿರುವರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲಾಗುತ್ತಿದೆಯಲ್ಲ?
-ಬರ ಘೋಷಿತ ತಾಲೂಕುಗಳ ಆಯ್ಕೆಯಲ್ಲಿಯೂ ರಾಜಕಾರಣ ನಡೆಯುತ್ತಿದೆ. ಬಿಜೆಪಿ ಶಾಸಕರಿರುವ ತಾಲೂಕುಗಳನ್ನು ಪರಿಗಣಿಸುತ್ತಿಲ್ಲ. ಯಾದಗಿರಿ ಜಿಲ್ಲೆಯ ಜೆಡಿಎಸ್ ಶಾಸಕ ಶರಣು ಕಂದಕೂರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಅವರು ತಮ್ಮ ತಾಲೂಕನ್ನು ಬರ ಘೋಷಣೆಯಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿ ಪತ್ರ ಬರೆದಿದ್ದಾರೆ. ಬರದಂತಹ ವಿಚಾರದಲ್ಲಾದರೂ ಸರ್ಕಾರ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕಿತ್ತು. ಬೆಂಗಳೂರಿನ ಎಸಿ ಕೊಠಡಿಯಲ್ಲಿ ಕುಳಿತು ಅಧಿಕಾರಿಗಳು ನೀಡುವ ವರದಿ ಆಧರಿಸಿ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಸಚಿವರು ಜಿಲ್ಲೆಗಳತ್ತ ಮುಖ ಮಾಡುತ್ತಿಲ್ಲ. ಜನರ ಸಂಕಷ್ಟ ಖುದ್ದಾಗಿ ಅರಿಯುವ ಪ್ರಯತ್ನವೂ ನಡೆಯುತ್ತಿಲ್ಲ.
*ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಪಂಚ ಗ್ಯಾರಂಟಿಗಳು ಈಗಾಗಲೇ ಪಂಕ್ಚರ್ ಆಗಿವೆ. ಗ್ಯಾರಂಟಿಗಳ ಹೆಸರಿನಲ್ಲಿ ಮತ್ತೊಂದು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಮಹದಾಸೆಯಿಂದ ಭಾರತ್ ಜೋಡೋ ಹೆಸರಿನಲ್ಲಿ ಯುವಕರ ಕಿವಿಗೆ ಹೂ ಮುಡಿಸಲು ಹೊರಟಿದ್ದಾರೆ. ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರದ ಆಡಳಿತದ ವಾಸ್ತವತೆ ಈಗಾಗಲೇ ಅರ್ಥವಾಗಿದೆ. ರಾಜ್ಯದ ಹಿತ ಕಾಯುವ, ಅಭಿವೃದ್ಧಿಗೆ ಮುಂದಡಿ ಇಡುವ ಹಾಗೂ ಹಿಂದುಳಿದ ಜಿಲ್ಲೆಗಳ ಸಮಗ್ರ ಪ್ರಗತಿಗೆ ಯೋಜನೆ ರೂಪಿಸುವ ಸರ್ಕಾರ ಇದಲ್ಲ ಎಂಬುದು ಜನರಿಗೆ ಮನವರಿಕೆಯಾಗಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಕನಸು ನನಸಾಗುವುದಿಲ್ಲ.
*ಈ ಸಂಕಷ್ಟ ಕಾಲದಲ್ಲಿ ರೈತರ ಕೃಷಿ ಸಾಲಮನ್ನಾ ಅಗತ್ಯ ಅನಿಸುವುದಿಲ್ಲವೆ?
-ಹೌದು! ಈಗಾಗಲೇ ಅನೇಕ ಬಾರಿ ರಾಜ್ಯ ಸರ್ಕಾರವನ್ನು ಸಾಲಮನ್ನಾ ಮಾಡುವಂತೆ ಒತ್ತಾಯಿಸಿದ್ದೇವೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸದಿದ್ದರೆ ಅದು ಬಹುದೊಡ್ಡ ಅಪಚಾರ. ಆಗ ಕಾಂಗ್ರೆಸ್ ಪಕ್ಷ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಕೃಷಿ ಬಿಕ್ಕಟ್ಟಿನ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸುವುದು ಸರ್ಕಾರದ ಕರ್ತವ್ಯ. ನಾಡಿನ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ನಿಲ್ಲಬೇಕು. ದುಡಿಯುವ ಜನರ ಹಿತ ಕಾಯದ ಸರ್ಕಾರ ಏಕೆ ಇರಬೇಕು? ಈ ಪ್ರಶ್ನೆ ನಾವು ಮಾತ್ರ ಕೇಳುತ್ತಿಲ್ಲ. ನಾಡಿನ ದುಡಿಯುವ ಜನರೇ ಕೇಳುತ್ತಿದ್ದಾರೆ.
*ಈ ಪಾದಯಾತ್ರೆಯಿಂದ ಏನೆಲ್ಲ ಬದಲಾವಣೆ ನಿರೀಕ್ಷಿಸಿದ್ದೀರಿ?
-ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ ಎಂದು ಆಡಳಿತಾರೂಢ ಪಕ್ಷದ ಶಾಸಕರೇ ಮಾತನಾಡುತ್ತಿದ್ದಾರೆ. ಶಾಸಕರಲ್ಲಿ ಅಸಮಾಧಾನ, ಆಂತರಿಕ ಕಚ್ಚಾಟ ಹೆಚ್ಚಾಗುತ್ತಿದೆ. ಇದರ ದುಷ್ಪರಿಣಾಮ ಆಡಳಿತದ ಮೇಲೆ ಬೀರುತ್ತಿದೆ. ಜನವಿರೋಧಿ ಸರ್ಕಾರ ನಿದ್ರೆ ಮಾಡಲು ಬಿಡುವುದಿಲ್ಲ. ಜನರಿಂದ ಚುನಾಯಿತಗೊಂಡವರು ಜನಪರವಾಗಿ ಕಾರ್ಯ ನಿರ್ವಹಿಸಬೇಕು. ಜನರ ಸಂಕಷ್ಟಗಳಿಗೆ ಧ್ವನಿಯಾಗಬೇಕು ಎಂಬುದು ನಮ್ಮ ಆಶಯ. ಆದರೆ, ಕಾಂಗ್ರೆಸ್ ಸರ್ಕಾರ ಜನಕಲ್ಯಾಣದ ಯಾವುದೇ ಯೋಜನೆ, ಯೋಚನೆ ಹೊಂದಿಲ್ಲ. ಹೀಗಾಗಿ ನಮ್ಮ ಹೋರಾಟ ಇಷ್ಟಕ್ಕೇ ನಿಲ್ಲುವುದಿಲ್ಲ. ಹಂತ ಹಂತವಾಗಿ ಚಳವಳಿ ಕಟ್ಟುತ್ತೇವೆ. ಜನಕಲ್ಯಾಣ ಕಾರ್ಯಕ್ಕಾಗಿ ಜನರ ಧ್ವನಿಯಾಗಿ ಆಗ್ರಹಿಸುತ್ತಲೇ ಇರುತ್ತೇವೆ.
*ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿಯಾದರು. ತಾವೂ ಪಾದಯಾತ್ರೆ ನಡೆಸಿದ್ದೀರಿ. ತಮ್ಮ ಹೋರಾಟಕ್ಕೂ ಅಧಿಕಾರದ ಗುರಿಯಿದೆಯೇ?
-ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲೇಬೇಕು ಎಂಬ ಹಪಾಹಪಿಯಿಂದ ಸಿದ್ದರಾಮಯ್ಯನವರು ಬಳ್ಳಾರಿ ಪಾದಯಾತ್ರೆ ಮಾಡಿದರು. ಆದರೆ, ನಮ್ಮ ಪಾದಯಾತ್ರೆ ಚುನಾವಣೆ ಅಥವಾ ಅಧಿಕಾರಕ್ಕೆ ಸೀಮಿತವಾದುದಲ್ಲ. ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ. ರಾಜ್ಯದ ಜ್ವಲಂತ ಸಮಸ್ಯೆ, ರೈತರು, ಕೂಲಿಕಾರ್ಮಿಕರು, ನಿರುದ್ಯೋಗಿ ಯುವಕರು ಹಾಗೂ ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದೇವೆ. ನಮ್ಮ ಜನಪರ ಹೋರಾಟ ಜನಕಲ್ಯಾಣಕ್ಕಾಗಿ ನಿರಂತರವಾಗಿ ಮುಂದುವರಿಯಲಿದೆ.
*ಮುಂದಿನ ದಿನಗಳಲ್ಲಿ ಬಿಜೆಪಿಯ ಹೋರಾಟದ ಸ್ವರೂಪ ಹೇಗಿರಲಿದೆ?
ಬಳ್ಳಾರಿ ಚಲೋ ಪಾದಯಾತ್ರೆ ನನ್ನ ಕಣ್ಣು ತೆರೆಸಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳು ನೇರವಾಗಿ ಕಣ್ಣಿಗೆ ಬಿದ್ದಿವೆ. ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ಸಿಗುತ್ತಿಲ್ಲ. ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸಾರ್ವಜನಿಕರು ಕೂಡ ಈ ಸರ್ಕಾರದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಲ್ಲಿ ಆತಂಕವಿದೆ. ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಹಿನ್ನಡೆ ಜನಸಾಮಾನ್ಯರ ಮೇಲೂ ಪರಿಣಾಮ ಬೀರುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಲ್ಯಾಣ ಕರ್ನಾಟಕದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ. ನಾಡಿನ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಮೊದಲ ಆದ್ಯತೆ ನೀಡುತ್ತೇವೆ.