ಕೈ ಕಾರ್ಯಕರ್ತರಿಗೆ ಶಕ್ತಿ ನೀಡಲು 6 ಜನರ ಗ್ಯಾರಂಟಿ ಸಮಿತಿ : ಸಿಎಂ

Published : Sep 10, 2026, 11:42 AM IST
DK Shivakumar

ಸಾರಾಂಶ

ಪ್ರತಿ ಪಂಚಾಯ್ತಿಯಲ್ಲಿ ಆರು ಜನ ಸದಸ್ಯರ ಗ್ಯಾರಂಟಿ ಸಮಿತಿ ರಚಿಸಲು ಆದೇಶ ನೀಡಲಾಗಿದೆ. ಮುಂದಿನ ವಾರದೊಳಗೆ ಈ ಸಮಿತಿ ರಚಿಸಲು ಶಾಸಕರಿಗೆ ಸೂಚಿಸಿದ್ದು, ಪ್ರತಿ ತಾಲ್ಲೂಕಿನಲ್ಲಿ 250 ಜನರಿಗೆ ಶಕ್ತಿ ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ನೀಡಲು ಪ್ರತಿ ಪಂಚಾಯ್ತಿಯಲ್ಲಿ ಆರು ಜನ ಸದಸ್ಯರ ಗ್ಯಾರಂಟಿ ಸಮಿತಿ ರಚಿಸಲು ಆದೇಶ ನೀಡಲಾಗಿದೆ. ಮುಂದಿನ ವಾರದೊಳಗೆ ಈ ಸಮಿತಿ ರಚಿಸಲು ಶಾಸಕರಿಗೆ ಸೂಚಿಸಿದ್ದು, ಪ್ರತಿ ತಾಲ್ಲೂಕಿನಲ್ಲಿ 250 ಜನರಿಗೆ ಶಕ್ತಿ ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಬುಧವಾರ ನಡೆದ ಭಾರತ್ ಜೋಡೋ ಪಾದಯಾತ್ರೆಯ ನಾಲ್ಕನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಕರಿಗಾಗಿ ರಾಜ್ಯದಲ್ಲಿ 72 ಸಾವಿರ ಸರ್ಕಾರಿ ಹುದ್ದೆ ಭರ್ತಿಗೆ ಮುಂದಾಗಿದ್ದೇವೆ. ಕೆಪಿಎಸ್ಸಿ ಕರ್ಮಕಾಂಡವನ್ನು ನಮ್ಮದು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದಕ್ಕೆ ಮೂಲ ಯಾರು? ನಮ್ಮಲ್ಲಿ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಾಯಕರು ಗೆದ್ದಿದ್ದಾರೆ ಎಂದು ಅವರ ಮೇಲೆ ಬಿಜೆಪಿ ವಿಷ ಕಾರುತ್ತಿದೆ. ಹೀಗಾಗಿ ಪ್ರಿಯಾಂಕ್ ಖರ್ಗೆ ಅವರ ಮೇಲೂ ದಾಳಿ ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಜನ ಗೆದ್ದಿದ್ದಾರೆ ಇದನ್ನು ಕಡಿಮೆ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.

2028, 2029ಕ್ಕೆ ನಮ್ಮದೇ ಸರ್ಕಾರ:

ಡಬಲ್ ಎಂಜಿನ್ ಸರ್ಕಾರ ಇದ್ದಾಗ ನಾವು 136 ಸೀಟು ಗೆಲ್ಲುತ್ತೇವೆ ಎಂದು ಹೇಳಿದ್ದೆ. ನಮ್ಮ ಲೆಕ್ಕ ತಪ್ಪಾಯಿತಾ? ಈಗ ಮತ್ತೆ ಹೇಳುತ್ತಿರುವೆ 2028ಕ್ಕೂ ನಮ್ಮದೇ ಸರ್ಕಾರ, 2029ಕ್ಕೂ ನಮ್ಮದೇ ಸರ್ಕಾರ. ನೀವು ಅದಕ್ಕೆ ಸಹಕಾರ ನೀಡಬೇಕು ಎಂದು ಶಿವಕುಮಾರ್‌ ಹೇಳಿದರು.

ನಾನು ಯಾರಿಗೂ ಹೆದರುವುದಿಲ್ಲ:

ಅಮೆರಿಕದಿಂದ ಬಂದು ಮಾಧ್ಯಮಗೋಷ್ಠಿ ನಡೆಸಿ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತೇನೆ ಎಂದು ಹೇಳಿದ್ದಾರೆ. ತಾವಾಗಲಿ ಈ ಸರ್ಕಾರ ಇದಕ್ಕೆಲ್ಲಾ ಹೆದರುವುದಿಲ್ಲ. ರಾಹುಲ್ ಗಾಂಧಿ ಅನ್ಯಾಯ ಪ್ರಶ್ನೆ ಮಾಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಅವರು ಇದಕ್ಕೆ ಹೆದರುತ್ತಾರಾ? ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಬ್ಲ್ಯಾಕ್‌ಮೇಲ್‌ಗೆ ನಾವು ಹೆದರುವುದಿಲ್ಲ ಎಂದು ಶಿವಕುಮಾರ್ ತಿರುಗೇಟು ನೀಡಿದರು.

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ರಾಹುಲ್ ಗಾಂಧಿ ಅವರಿಗೆ ಪಾದಯಾತ್ರೆ ಮಾಡಿ ರಾಜಕಾರಣ ಮಾಡುವ ಅಗತ್ಯವಿರಲಿಲ್ಲ. ಆದರೂ ದೇಶಕ್ಕಾಗಿ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮಾತ್ರವಲ್ಲ ಮಣಿಪುರದ ಇಂಪಾಲದಿಂದ ಮುಂಬೈವರೆಗೆ ಒಟ್ಟು 10 ಸಾವಿರ ಕಿ.ಮೀ ನಡೆದರು. ತನ್ಮೂಲಕ ಇಡೀ ಭಾರತ ಒಗ್ಗೂಡಿಸುವ ಕೆಲಸ ಮಾಡಿದರು ಎಂದರು.

ಕರ್ನಾಟಕದಲ್ಲಿ ಹಿಜಾಬ್, ಅಜಾನ್, ಹಲಾಲ್ ಗಲಾಟೆ, ಅಲ್ಪಸಂಖ್ಯಾತರ ಜತೆ ವ್ಯಾಪಾರ ಮಾಡಬೇಡಿ ಎಂದು ಕರೆ ಕೊಟ್ಟರು. ಭಾರತ ದೇಶ ಇವರ ಅಪ್ಪನ ಮನೆ ಆಸ್ತಿಯೇ? ಬೇರೆ ಧರ್ಮದವರು ಈ ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತ ಹಾಗೂ ಬೆವರು ನೀಡಿದ್ದಾರೆ. ಪ್ರತಿಯೊಬ್ಬರಿಗೂ ಇಲ್ಲಿ ಹಕ್ಕಿದೆ ಎಂದು ಹೇಳಿದರು.

ಜಾರಕಿಹೊಳಿ ಮೇಲಿನ ಇ.ಡಿ ದಾಳಿ ರಾಜಕೀಯ ಪ್ರೇರಿತ:

ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಸ್ಥಳಗಳ ಮೇಲಿನ ಇ.ಡಿ(ಜಾರಿ ನಿರ್ದೇಶನಾಲಯ) ದಾಳಿ ರಾಜಕೀಯ ಪ್ರೇರಿತ. ಮುಂದೆ ಇನ್ನೂ ಹಲವು ಕಾಂಗ್ರೆಸ್ಸಿಗರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಪಕ್ಷದ ಎಲ್ಲ ಶಾಸಕರು ಮತ್ತು ಸಚಿವರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ 100 ದಿನ ಪೂರ್ಣಗೊಳ್ಳುವ ಹೊತ್ತಿನಲ್ಲೇ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಲಾಗುತ್ತಿದೆ. ಬಿಜೆಪಿಯವರು ದಲಿತ ನಾಯಕರ ಬೆಳವಣಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ದಾಳಿ ನಡೆಸಿದ್ದು, ಶೇ.100 ರಷ್ಟು ನಾವು ಸತೀಶ್ ಜಾರಕಿಹೊಳಿ ಪರ ನಿಲ್ಲುತ್ತೇವೆ ಎಂದರು.

ತನಿಖೆಗೆ ನಾವು ಹೆದರುವುದಿಲ್ಲ. ಆದರೆ ಸುಳ್ಳು ಕತೆ ಕಟ್ಟುವುದು, ಸುಳ್ಳು ಆರೋಪ ಮಾಡುವುದು ಹಾಗೂ ಜನರನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಖಂಡಿಸುತ್ತೇವೆ ಎಂದು ಶಿವಕುಮಾರ್ ಹೇಳಿದರು.

ಸತೀಶ್ ಜಾರಕಿಹೊಳಿ ಹಿರಿಯ ಸಚಿವರಾಗಿದ್ದು, ರಾಜಕಾರಣದ ಜತೆಗೆ ವ್ಯವಹಾರ ಮತ್ತು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅವರು ಪ್ರಗತಿಪರ, ಮೌಲ್ಯಾಧಾರಿತ ರಾಜಕಾರಣಿ. ಕಾನೂನು ಚೌಕಟ್ಟಿನಲ್ಲೇ ವ್ಯವಹಾರ ನಡೆಸುತ್ತಿದ್ದಾರೆ. ಇ.ಡಿ ಕೇಳುವ ಪ್ರಶ್ನೆಗಳಿಗೆ ಸತೀಶ್ ಜಾರಕಿಹೊಳಿ ಸೂಕ್ತ ಉತ್ತರ ನೀಡಲಿದ್ದಾರೆ. ಹೀಗಾಗಿ ಯಾರೂ ಗಾಬರಿಯಾಗಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಬಂಧಿಕರ ವ್ಯವಹಾರಗಳ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ಸತೀಶ್ ಜಾರಕಿಹೊಳಿ ಪ್ರಾಮಾಣಿಕ ರಾಜಕಾರಣಿ, ಅವರು ಯಾವುದೇ ತಪ್ಪು ಮಾಡಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ಶಿವಕುಮಾರ್ ಹೇಳಿದರು.

ತಿರುಗುಬಾಣ ಆಗಲಿದೆ:

ರಾಜ್ಯ ಸರ್ಕಾರ 100 ದಿನ ಪೂರೈಸುತ್ತಿದ್ದು, ಸರ್ಕಾರದ ಸಾಧನೆ ಜನರಿಗೆ ತಿಳಿಸುವಾಗ ನಡೆಯುತ್ತಿರುವ ಈ ತನಿಖಾ ಕ್ರಮ ರಾಜಕೀಯ ಪ್ರೇರಿತ. ಸತೀಶ್ ಜಾರಕಿಹೊಳಿ ಅವರು ಪ್ರಬಲವಾಗಿ ಬೆಳೆಯುತ್ತಿರುವ ನಾಯಕ. ಹೀಗಾಗಿ ಕೆಲವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ರಾಜಕೀಯವಾಗಿ ಕುಗ್ಗಿಸಲು ಯತ್ನಿಸುತ್ತಿದ್ದು, ಇದು ಅವರಿಗೆ ತಿರುಗುಬಾಣವಾಗಲಿದೆ. ನನ್ನ ಮೇಲೂ ದಾಳಿ ಮಾಡಿ ಬಂಧಿಸಿದ್ದರು. ಆದರೆ ಇಂದು ಏನಾಗಿದೆ? ನಾನು ರಾಜ್ಯದ ಮುಖ್ಯಮಂತ್ರಿ ಆಗಿರುವೆ ಎಂದು ಮುಖ್ಯಮಂತ್ರಿ ಹೇಳಿದರು.

ವಿದೇಶಗಳಲ್ಲಿ ವ್ಯವಹಾರ ತಪ್ಪೇ?:

ಇ.ಡಿ ತನಿಖಾ ಸಂಸ್ಥೆಯವರು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಕಾಯ್ದೆ ಉಲ್ಲಂಘನೆಯಡಿ ದಾಳಿ ನಡೆಸಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ‘ಭಾರತದಲ್ಲಿದ್ದು ವಿದೇಶದಲ್ಲಿ ಹೂಡಿಕೆ, ವ್ಯಾಪಾರ ಮಾಡಲು ಕಾನೂನಿನಡಿ ಅವಕಾಶವಿದೆ. ಅವರ ಕುಟುಂಬ ಸದಸ್ಯರು ವಿದೇಶದಲ್ಲಿ ವ್ಯವಹಾರ ಮಾಡುವುದು ತಪ್ಪಲ್ಲ. ನನ್ನ ಕುಟುಂಬದವರೂ ವಿದೇಶದಲ್ಲಿ ವ್ಯವಹಾರ ಇರಿಸಿಕೊಳ್ಳುವುದನ್ನು ನಾನು ನಿರ್ಬಂಧಿಸಲು ಸಾಧ್ಯವೇ? ಈ ಧೋರಣೆಯಿಂದಾಗಿಯೇ 12 ಲಕ್ಷಕ್ಕೂ ಹೆಚ್ಚು ಉದ್ದಿಮೆದಾರರು ಭಾರತ ತೊರೆದಿದಿದ್ದಾರೆ ಎಂದು ತಿರುಗೇಟು ನೀಡಿದರು.

ನೂರು ಪ್ರತಿಭಟನೆ ಮಾಡಲಿ, ಹೆದರಲ್ಲ: ಸಿಎಂ

ಬಿಜೆಪಿ ಪಾದಯಾತ್ರೆ, ಎಚ್‌.ಡಿ.ಕುಮಾರಸ್ವಾಮಿ ಸುದ್ದಿಗೋಷ್ಠಿ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನೂರು ಪ್ರತಿಭಟನೆ ಮಾಡಲಿ, ನೂರು ಹೋರಾಟ ಮಾಡಲಿ, ನೂರು ಪತ್ರಿಕಾಗೋಷ್ಠಿ ನಡೆಸಲಿ. ಯಾರಿಗೆ ಏನು ಮಾಡಬೇಕೋ ಮಾಡಲಿ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಸ್ತೆಗಳ ಪಕ್ಕ ಜಮೀನಿರುವ ರೈತರಿಗೆ ತೇಗ ಸಿರಿ ಯೋಜನೆಗೆ ಸಂಪುಟ ಅಸ್ತು
101 ಬರ ಪೀಡಿತ ತಾಲೂಕುಗಳಲ್ಲಿ ₹18000 ಕೋಟಿ ಬೆಳೆ ನಷ್ಟ: ಪರಂ