14 ಹಿಂದಿಯೇತರ ರಾಜ್ಯಗಳಿಂದ ಹೋರಾಟಕ್ಕಾಗಿ ಒಕ್ಕೂಟ

Published : Sep 05, 2026, 07:15 AM IST
TA Narayana gowda

ಸಾರಾಂಶ

ದಕ್ಷಿಣ ಭಾರತ ಸೇರಿ ಹಿಂದಿಯೇತರ ಭಾಷಾ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ, ಅಸಮತೋಲನ ಸರಿಪಡಿಸಲು ಕರ್ನಾಟಕ ಸೇರಿ 14 ರಾಜ್ಯಗಳ ಭಾಷಾ ಹೋರಾಟಗಾರರಿರುವ ‘ಅಖಿಲ ಭಾರತ ಮಾತೃ ಭಾಷಾ ವೇದಿಕೆ’ ಎಂಬ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ.

 ಉಮಾಶಂಕರ ಕಾರ್ಯ

ಬೆಂಗಳೂರು : ದಕ್ಷಿಣ ಭಾರತ ಸೇರಿ ಹಿಂದಿಯೇತರ ಭಾಷಾ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ, ಅಸಮತೋಲನ ಸರಿಪಡಿಸಲು ಕರ್ನಾಟಕ ಸೇರಿ 14 ರಾಜ್ಯಗಳ ಭಾಷಾ ಹೋರಾಟಗಾರರಿರುವ ‘ಅಖಿಲ ಭಾರತ ಮಾತೃ ಭಾಷಾ ವೇದಿಕೆ’ ಎಂಬ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ.

ಹಿಂದಿಯೇತರ ರಾಜ್ಯಗಳ ಜನರಿಗೆ ರೈಲು, ಬ್ಯಾಂಕ್‌ ಸೇರಿ ಕೇಂದ್ರದ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಕೊಡಬೇಕು. ಕೇಂದ್ರದ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷೆಗಳು ಕನ್ನಡ ಸೇರಿ ಪ್ರಾದೇಶಿಕ ಭಾಷೆಯಲ್ಲೂ ಇರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಈ ನೂತನ ಸಂಘಟನೆ ರಚಿಸಲಾಗಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಪುದುಚೇರಿ, ಪಶ್ಚಿಮ ಬಂಗಾಳ, ಗೋವಾ, ತೆಲಂಗಾಣ, ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ಗುಜರಾತ್, ಪಂಜಾಬ್, ಮೇಘಾಲಯ ರಾಜ್ಯಗಳ ಪ್ರಾದೇಶಿಕ ಭಾಷಾ ಹೋರಾಟಗಾರರ ಸಭೆಯಲ್ಲಿ ಹಿಂದಿಯೇತರ ರಾಜ್ಯಗಳ ಜನರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ನಿರಂತರವಾಗಿ ಹೋರಾಟ ಮಾಡಲು ನೂತನ ಸಂಘಟನೆ ರಚಿಸಲಾಗಿದೆ.

ನವೆಂಬರ್‌ನಲ್ಲಿ ಪ್ರತಿಭಟನೆ:

ಪ್ರತಿ ರಾಜ್ಯದಿಂದ 100 ಮಂದಿಯಂತೆ 14 ರಾಜ್ಯಗಳಿಂದ ಸುಮಾರು 1400ಕ್ಕೂ ಹೆಚ್ಚು ಮಂದಿ ಪದಾಧಿಕಾರಿಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ನವೆಂಬರ್‌ನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಮುಂದಿನ ಎರಡು ತಿಂಗಳಲ್ಲಿ ಇನ್ನೂ ಹಲವು ಸಭೆಗಳು ನಡೆಯಲಿವೆ. ಪ್ರತಿಭಟನೆ ಸಂದರ್ಭದಲ್ಲಿ ಪ್ರತಿಯೊಂದು ರಾಜ್ಯದ ಪದಾಧಿಕಾರಿಗಳು ಪ್ರಧಾನಮಂತ್ರಿ ಹಾಗೂ ರೈಲ್ವೆ ಮಂತ್ರಿಗಳನ್ನು ಭೇಟಿ ಮಾಡಿ ಅವರವರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ಪ್ರತಿ ರಾಜ್ಯಗಳ ಬೇಡಿಕೆ ಪ್ರತ್ಯೇಕವಾಗಿದ್ದರೂ ಕರ್ನಾಟಕದ ಮಟ್ಟಿಗೆ ರೈಲು ಹಾಗೂ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಭಾರತದ ಅತಿ ದೊಡ್ಡ ಉದ್ಯಮವಾದ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಬೇಕು. ಈ ಉದ್ಯೋಗಗಳಿಗೆ ನಡೆಯುವ ಪರೀಕ್ಷೆಗಳು ಕನ್ನಡದಲ್ಲೇ ಇರಬೇಕು ಎಂದು ಆಗ್ರಹಿಸುವುದು ಪ್ರಮುಖ ಬೇಡಿಕೆ.

ಅ.1ರಿಂದ ಕಾರ್ಯಾಚರಣೆ:

ಮಂಗಳೂರು ರೈಲು ನಿಲ್ದಾಣಗಳು ಮೈಸೂರು ವಲಯಕ್ಕೆ ಸೇರ್ಪಡೆಯಾಗಿದ್ದು, ಅಧಿಕೃತವಾಗಿ ಅ.1ರಿಂದ ಕಾರ್ಯಾಚರಣೆ ನಡೆಸಲಿವೆ. ಆದರೆ, ಮೈಸೂರು ವಲಯಕ್ಕೆ ಸೇರಿದ ನಂತರ ಮುಂದಿನ ಬೆಳವಣಿಗೆಗಳಾದ ಸ್ಥಳೀಯ ಯುವಕರಿಗೆ ಉದ್ಯೋಗ, ಕೇಂದ್ರದಿಂದ ಮೈಸೂರು ವಲಯಕ್ಕೆ ಹೆಚ್ಚಿನ ಸವಲತ್ತು ಸೇರಿ ಕೇಂದ್ರದ ವಿವಿಧ ಇಲಾಖೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಶಸ್ತ್ಯ, ರಾಜ್ಯಕ್ಕೆ ಹೆಚ್ಚಿನ ಸವಲತ್ತು ನೀಡುವಂತೆ ಕೇಂದ್ರಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲು ಕರ್ನಾಟಕದ ಪದಾಧಿಕಾರಿಗಳಿಂದ ತೀರ್ಮಾನಿಸಲಾಗಿದೆ.

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕೇವಲ ಕನ್ನಡಪರ ಸಂಘಟನೆಗಳೇ ರಾಜ್ಯದ ಇಂಥ ಸಮಸ್ಯೆಗಳನ್ನು ನೋಡಬೇಕೇ? ನಮ್ಮ ರಾಜಕಾರಣಿಗಳು ಇಂಥ ವಿಷಯಗಳ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ? ಈಗಿನ ರಾಜಕೀಯ ಪರಿಸ್ಥಿತಿ ಬೇರೆ ರಾಜ್ಯಗಳಂತಿಲ್ಲ. ತಮಿಳುನಾಡಿನಲ್ಲಿ ರಾಜ್ಯದ ಹಿತ ಕಾಪಾಡಲು ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿಬಿಡುತ್ತವೆ. ಆದರೆ, ನಮ್ಮಲ್ಲಿ ಈ ರೀತಿ ಪರಿಸ್ಥಿತಿ ಇಲ್ಲ ಎಂಬುದೇ ದುಃಖದ ಸಂಗತಿ ಎಂದರು.

ಟಾಪ್‌- ಒಗ್ಗಟ್ಟು

- ಕೇಂದ್ರದ ನೌಕರಿಗಳಲ್ಲಿ ಆದ್ಯತೆಗೆ ಆಗ್ರಹಿಸಿ ನವೆಂಬರ್‌ನಲ್ಲಿ ದಿಲ್ಲಿಯಲ್ಲಿ ಹೊಸ ಒಕ್ಕೂಟದಿಂದ ಪ್ರತಿಭಟನೆ

ಏನಿದು ಒಕ್ಕೂಟ?

ದಕ್ಷಿಣ ಭಾರತ ಸೇರಿ ಹಿಂದಿಯೇತರ ಭಾಷಾ ರಾಜ್ಯಗಳಿಗೆ ಆಗುತ್ತಿರುವ ಅನ್ಯಾ, ಅಸಮತೋಲನ ಸರಿಪಡಿಸುವ ಉದ್ದೇಶದಿಂದ ಅಖಿಲ ಭಾರತ ಮಾತೃ ಭಾಷಾ ವೇದಿಕೆ ರಚನೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಬಂಗಾಳ, ತೆಲಂಗಾಣ, ಆಂಧ್ರ ಸೇರಿ 14 ರಾಜ್ಯಗಳ ಭಾಷಾ ಹೋರಾಟಗಾರರಿಂದ ವೇದಿಕೆ ಅಸ್ತಿತ್ವಕ್ಕೆ

ಯಾಕಾಗಿ ರಚನೆ?

ಹಿಂದಿಯೇತರ ರಾಜ್ಯಗಳಿಂದ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ನಿರಂತರವಾಗಿ ಒಗ್ಗೂಡಿ ಹೋರಾಟ ನಡೆಸಲು ಸ್ಥಾಪನೆ. ಪ್ರತಿ ರಾಜ್ಯದಿಂದ 100 ಮಂದಿಯಂತೆ 14 ರಾಜ್ಯಗಳಿಂದ 1400 ಮಂದಿ ನವೆಂಬರ್‌ನಲ್ಲಿ ದೆಹಲಿಗೆ ತೆರಳಿ ಪ್ರತಿಭಟನೆ ನಡೆಸುವ ಯೋಜನೆ. ಬಳಿಕ ಪ್ರತ್ಯೇಕವಾಗಿ ಪ್ರಧಾನಿ, ರೈಲ್ವೆ ಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧಾರ

ಕರ್ನಾಟಕ ಬೇಡಿಕೆ ಏನು? 

ರೈಲು ಹಾಗೂ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಭಾರತದ ಅತಿ ದೊಡ್ಡ ಉದ್ಯಮವಾದ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಬೇಕು. ಈ ಉದ್ಯೋಗಗಳಿಗೆ ನಡೆಯುವ ಪರೀಕ್ಷೆಗಳು ಕನ್ನಡದಲ್ಲೇ ಇರಬೇಕು ಎಂದು ಆಗ್ರಹಿಸುವುದು ಪ್ರಮುಖ ಬೇಡಿಕೆ.

ರಾಜಕಾರಣಿಗಳೇಕೆ ಮೌನವಾಗಿದ್ದಾರೆ?

ಕೇವಲ ಕನ್ನಡಪರ ಸಂಘಟನೆಗಳೇ ರಾಜ್ಯದ ಇಂಥ ಸಮಸ್ಯೆಗಳನ್ನು ನೋಡಬೇಕೇ? ನಮ್ಮ ರಾಜಕಾರಣಿಗಳು ಇಂಥ ವಿಷಯಗಳ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ? ಈಗಿನ ರಾಜಕೀಯ ಪರಿಸ್ಥಿತಿ ಬೇರೆ ರಾಜ್ಯಗಳಂತಿಲ್ಲ. ತಮಿಳುನಾಡಿನಲ್ಲಿ ರಾಜ್ಯದ ಹಿತ ಕಾಪಾಡಲು ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿಬಿಡುತ್ತವೆ. ಆದರೆ, ನಮ್ಮಲ್ಲಿ ಈ ರೀತಿ ಪರಿಸ್ಥಿತಿ ಇಲ್ಲ.

- ಟಿ.ಎ.ನಾರಾಯಣಗೌಡ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

8 ತಿಂಗಳಿಂದ ರಾಜ್ಯದ ಜನರಿಗೆ ಮಾಸಾಶನ ಸಿಗ್ತಿಲ್ಲ: ವಿಜಯೇಂದ್ರ
ಸಾಲ ಮನ್ನಾಕ್ಕೆ ನೆರವು ಕೇಳಿ ಕೇಂದ್ರಕ್ಕೆ ರಾಜ್ಯದಿಂದ ಸರ್ವಪಕ್ಷ ನಿಯೋಗ : ಸಿಎಂ