ಸಿಂಧನೂರು : ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳ ಭ್ರಮೆಯಲ್ಲಿ ತೇಲುತ್ತಿದೆ. ಕಳೆದ 8 ತಿಂಗಳಿನಿಂದ ವೃದ್ಧಾಪ್ಯ ನೀಡಿಲ್ಲ. ಅಂಗವಿಕಲರಿಗೆ ಮಾಸಾಶನ ಬಂದಿಲ್ಲ. ಬಡವರಿಗೆ ಮನೆಗಳನ್ನು ನೀಡುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಆಯ್ಕೆ, ಪರಿಕರಗಳ ವಿತರಣೆ ಮಾಡುವುದನ್ನೇ ಮರೆತುಬಿಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೋರ್ಟ್ ಸರ್ಕಲ್‌ನಲ್ಲಿ ಶುಕ್ರವಾರ 4ನೇ ದಿನದ ಬಿಜೆಪಿಯ ‘ಬಳ್ಳಾರಿ ಚಲೋ’ ಬೃಹತ್ ಪಾದಯಾತ್ರೆಗೆ ಗೋ ಪೂಜೆ ಮಾಡಿ, ಶ್ರೀಕೃಷ್ಣದೇವರಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನಾಡಿನ ಬಡವರಿಂದ ಬಹಳ ದೂರ ಸಾಗುತ್ತಿದೆ. ರಾಜ್ಯದಲ್ಲಿರುವ ಎಲ್ಲ ಬಡವರು, ರೈತಾಪಿ ಸಮುದಾಯ, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದವರು ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತಿದ್ದಾರೆ. ಇದು ನಿಜ ಹಾಗೂ ವಾಸ್ತವಿಕ ಸತ್ಯದ ಸಂಗತಿಯಾಗಿದೆ ಎಂದರು.


ರಾಜ್ಯದ ಎಲ್ಲ ತಾಲೂಕುಗಳಲ್ಲೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನ ಬೇಸತ್ತು ಹೋಗಿದ್ದಾರೆ. ಆದ್ದರಿಂದ ಸರ್ಕಾರ ಆಡಳಿತ ವೈಫಲ್ಯಗಳನ್ನು ಖಂಡಿಸಿ, ನಾಡಿನ ಬಡವರ ಪರವಾಗಿ ಧ್ವನಿ ಎತ್ತುವ ಕೆಲಸವನ್ನು ಬಿಜೆಪಿಯಿಂದ ಮಾಡಲಾಗುತ್ತಿದೆ. ನಾನು ಕೆಲ ತಾಯಂದಿರನ್ನು ಮಾತನಾಡಿಸಿದ್ದು, ಅವರೇ ಹೇಳುತ್ತಿದ್ದರು, ನಮಗೆ 8 ತಿಂಗಳಿನಿಂದ ಮಾಸಾಶನ ಬರುತ್ತಿಲ್ಲವೆಂದು. ಎಲ್ಲೋ ಒಂದು ಕಡೆ ರಾಜ್ಯ ಸರ್ಕಾರ ಎಲ್ಲ ವರ್ಗದ ಜನರನ್ನು, ಬಡವರನ್ನು ನಿರ್ಲಕ್ಷ್ಯ ಭಾವನೆಯಿಂದ ನೋಡುತ್ತಿದೆ. ಅದಕ್ಕಾಗಿ ಮಾಸಾಶನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಸಾಲ ಮನ್ನಾ ಮಾಡಿ- ಕಾರಜೋಳ:

ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ರಾಜ್ಯದ 6.5 ಕೋಟಿ ಜನರು ರೊಚ್ಚಿಗೆದ್ದು ಬಿಜೆಪಿಯ ಹೋರಾಟಕ್ಕೆ ಬೆಂಬಲ ಮಾಡುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು. ಶುಕ್ರವಾರ ಪಾದಯಾತ್ರೆ ವೇಳೆ ಮಾತನಾಡಿ ಅವರು, ರಾಜ್ಯದಲ್ಲಿ ಸರಿಯಾಗಿ ಮಳೆ ಇಲ್ಲ, ಬೆಳೆ ಹಾಳಾಗುತ್ತಿದೆ. ಬಿತ್ತನೆ ಬೀಜ ಮತ್ತು ಗೊಬ್ಬರಕ್ಕಾಗಿ ನೀಡಿದ ಸಾಲವನ್ನು ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಬೇಕು. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕೂಡಲೇ ಪ್ರತಿ ಜಿಲ್ಲೆಯ ಜನರಿಗೆ ಅವರವರ ಊರಿನಲ್ಲೇ ಉದ್ಯೋಗ ಕೊಟ್ಟು ಗುಳೆ ಹೋಗುವುದನ್ನು ತಪ್ಪಿಸಬೇಕೆಂದು ಆಗ್ರಹಿಸಿದರು.

ರಾಜೀನಾಮೇ ನೀಡಿ ಕ್ಷಮೆ ಕೇಳಿ: ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರ್ಕಾರದ ಖಜಾನೆಯಿಂದ 187 ಕೋಟಿ ರು. ಲೂಟಿ ಮಾಡಿ ದಲಿತರಿಗೆ ಸಿಗಬೇಕಾದ ಹಣವನ್ನು ಲೋಕಸಭೆ ಚುನಾವಣೆಗೆ ಉಪಯೋಗಿಸಿದ್ದಾರೆ. ಹಣ ಖಜಾನೆಯಿಂದ ಬಂದಿದ್ದು, ಮುಖ್ಯಮಂತ್ರಿಗಳೇ ಹಣಕಾಸು ಖಾತೆ ನೋಡಿಕೊಳ್ಳುತ್ತಿದ್ದರು ಆದ್ದರಿಂದ ಇಡೀ ಸರ್ಕಾರವೇ ರಾಜೀನಾಮೆ ನೀಡಿ ಜನರಲ್ಲಿ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು.

ಅಭಿವೃದ್ಧಿ ಶೂನ್ಯ:

ಕಳೆದ 3.5 ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ. ಡಿ.ಕೆ.ಶಿವಕುಮಾರ್ ಅವರು ಮಾತಿನಲ್ಲೇ ಮಂಟಪ ಕಟ್ಟುತ್ತಿದ್ದಾರೆ. ಜನಪರ, ನಾಗರಿಕ ಸರ್ಕಾರದ ಜವಾಬ್ದಾರಿ ನಿಭಾಯಿಸುವಲ್ಲಿ ಡಿ.ಕೆ.ಶಿವಕುಮಾರ್ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದರು.

ಕೊಪ್ಪಳ ಜಿಲ್ಲೆ ಪ್ರವೇಶ ವೇಳೆ ವಿಜಯೇಂದ್ರಗೆ ಹೂಮಳೆಯ ಸ್ವಾಗತ

ಕಾರಟಗಿ: ಬಿಜೆಪಿ ಪಾದಯಾತ್ರೆ ನಾಲ್ಕನೇ ದಿನವಾದ ಶುಕ್ರವಾರ ಸಂಜೆ ರಾಯಚೂರಿನಿಂದ ಕೊಪ್ಪಳ ಜಿಲ್ಲೆ ಪ್ರವೇಶಿಸಿತು. ವಿಜಯೇಂದ್ರ ನೇತೃತ್ವದ ಪಾದಯಾತ್ರೆಗೆ ಬಿಜೆಪಿಗರು ಅದ್ಧೂರಿ ಸ್ವಾಗತ ಕೋರಿದರು. ಮಹಿಳೆಯರು 101 ಕುಂಭಗಳನ್ನು ಹೊತ್ತು ಭವ್ಯ ಮೆರವಣಿಗೆ ನಡೆಸಿ ಸ್ವಾಗತಿಸಿದರು. ಕಾರ್ಯಕರ್ತರು ವಿಜಯೇಂದ್ರ ಅವರಿಗೆ ಬೃಹತ್ ಹೂವಿನ ಹಾರ ಹಾಕಿ, ಕಾರ್ಯಕರ್ತರು ಅಭಿನಂದಿಸಿದರು. ಎರಡು ಜೆಸಿಬಿಗಳ ಮೂಲಕ ಹೂವುಗಳ ಸುರಿಮಳೆಗೈದು ವಿಜಯೇಂದ್ರ ಸೇರಿದಂತೆ ನಾಯಕರಿಗೆ ಭರ್ಜರಿ ಸ್ವಾಗತ ಕೋರಿದರು. ಈ ವೇಳೆ ಅಭಿಮಾನಿಗಳು ವಿಜಯೇಂದ್ರ ಅವರಿಗೆ 2 ಕುರಿ ನೀಡಿದರು.

ಜನ್ಮಾಷ್ಟಮಿ ನಿಮಿತ್ತ ಶ್ರೀಕೃಷ್ಣ, ಗೋವಿಗೆ ವಿಜಯೇಂದ್ರ ಪೂಜೆ

ಸಿಂಧನೂರಿನಲ್ಲಿ ಶುಕ್ರವಾರ 4ನೇ ದಿನದ ಪಾದಯಾತ್ರೆ ಆರಂಭಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಭಾವಚಿತ್ರಕ್ಕೆ ಹಾಗೂ ಗೋವಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಇದೇ ವೇಳೆ ಸಿಂಧನೂರಿನ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಶಿವಾಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದರು. ಈ ಸಮಯದಲ್ಲಿ ಸಮುದಾಯ ಮುಖಂಡರು ಶಿವಾಜಿ ಮಹಾರಾಜರ ಭಾವಚಿತ್ರ ಕೊಟ್ಟು ಸನ್ಮಾನಿಸಿ ಗೌರವಿಸಿದರು.