ಕೃಷ್ಣಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ಗೋ ಪೂಜೆ ನೆರವೇರಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನಾಲ್ಕನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದರು. ರೈತರು, ಕೃಷಿಕರು ಹಾಗೂ ಗ್ರಾಮೀಣ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದಿಂದ ಆರಂಭವಾದ ಪಾದಯಾತ್ರೆ, ಜನರ ಉತ್ಸಾಹ ಮತ್ತು ಸಾರ್ವಜನಿಕರ ಆಶೀರ್ವಾದದ ನಡುವೆ ಸುಮಾರು 22 ಕಿ.ಮೀ. ಕ್ರಮಿಸಿ ಕಾರಟಗಿಯಲ್ಲಿ ಸಮಾಪ್ತಿಯಾಯಿತು.
ಕನ್ನಡಪ್ರಭ ವಾರ್ತೆ ಸಿಂಧನೂರು
ಕೃಷ್ಣಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ಗೋ ಪೂಜೆ ನೆರವೇರಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನಾಲ್ಕನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದರು. ರೈತರು, ಕೃಷಿಕರು ಹಾಗೂ ಗ್ರಾಮೀಣ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಉದ್ದೇಶದಿಂದ ಆರಂಭವಾದ ಪಾದಯಾತ್ರೆ, ಜನರ ಉತ್ಸಾಹ ಮತ್ತು ಸಾರ್ವಜನಿಕರ ಆಶೀರ್ವಾದದ ನಡುವೆ ಸುಮಾರು 22 ಕಿ.ಮೀ. ಕ್ರಮಿಸಿ ಕಾರಟಗಿಯಲ್ಲಿ ಸಮಾಪ್ತಿಯಾಯಿತು.ಪಟ್ಟಣದ ಗಾಂಧಿ ವೃತ್ತದಲ್ಲಿ ಕೃಷ್ಣಾಷ್ಟಮಿಯ ಹಿನ್ನೆಲೆಯಲ್ಲಿ ಗೋ ಪೂಜೆ, ಕೃಷ್ಣನ ಭಾವಚಿತ್ರಕ್ಕೆ ವಿಶೇಷ ಪೂಜೆ ಮಾಡಿ 4 ನೇ ದಿನದ ಪಾದಯಾತ್ರೆಯನ್ನು ಆರಂಭಿಸಿ ದರು. ಮಾರ್ಗಮಧ್ಯದಲ್ಲಿ ರಸ್ತೆಯಲ್ಲಿ ಎಳೆನೀರು ಕುಡಿದು ಪಾದಯಾತ್ರೆಯ ದಣಿವಾರಿಸಿಕೊಂಡರು. ಇದೇ ಸಂದರ್ಭ ಭತ್ತ ಕಟಾವ್ ಮಾಡುವ ನೂತನ ಯಂತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಅವರು, ನೀರಾವರಿ ಯೋಜನೆಗಳಿಗೆ ಬಿಜೆಪಿ ಮೊದಲಿನಿಂದಲೂ ವಿಶೇಷ ಆದ್ಯತೆ ನೀಡುತ್ತಾ ಬಂದಿದೆ. ೨೦೨೮ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಭಾಗದ ಜೀವನಾಡಿಯಾದ ತುಂಗಭದ್ರಾ ಜಲಾಶಯಕ್ಕೆ ಪರ್ಯಾಯವಾಗಿ ನವಲಿ ಸಮನಾಂತರ ಮಾಡುತ್ತೇವೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ೧ ಸಾವಿರ ಕೋಟಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಪ್ರಸ್ತುತ ಕಾಂಗ್ರೆಸ್ ಸರಕಾರಕ್ಕೆ ರೈತರ, ನೀರಾವರಿ ಯೋಜನೆಗಳ ಬಗ್ಗೆ ಕಾಳಜಿಯಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿದೆ. ರೈತರು ಕಣ್ಣೀರು ಹಾಕುತ್ತಿದ್ದಾರೆ. ತುರ್ತು ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ರಾಜ್ಯ ಸರಕರ ವಿರುದ್ಧ ವಾಗ್ದಾಳಿ ನಡೆಸಿದರು.ನಂತರ ಗೊರೇಬಾಳ ಕ್ಯಾಂಪಿನ ಬಿಜೆಪಿ ಕಾರ್ಯಕರ್ತರು ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಗೊರೇಬಾಳ ಗ್ರಾಮದಲ್ಲಿ ತಲುಪಿತ ಪಾದ ಯಾತ್ರಿಗಳಿಗೆ ಅಲ್ಲಿನ ಕಾರ್ಯಕರ್ತರು ಮಜ್ಜಿಗೆ ವ್ಯವಸ್ಥೆ ಕಲ್ಪಿಸಿದ್ದರು. ಪಾದಯಾತ್ರೆ ಹಂಚಿನಾಳ ಕ್ಯಾಂಪಿಗೆ ತಲುಪಿ ಮಧ್ಯಾಹ್ನದ ಭೋಜನ ನಂತರ ಕೆಲ ವರ್ತಕರೊಂದಿಗೆ ಚರ್ಚಿಸಿದರು. ಅಲ್ಲಿಂದ ಚನ್ನಳ್ಳಿ ಕ್ರಾಸ್ ಮುಖಾಂತರ ಕೊಪ್ಪಳ ಜಿಲ್ಲೆಯ ಕಾರಟಗಿಗೆ ತಲುಪಿತು.
ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕರಾದ ವಿ.ಸುನೀಲ್ ಕುಮಾರ್, ಮಹೇಶ್ ಟೆಂಗಿನಕಾಯಿ, ಸಿಸಿ ಪಾಟೀಲ್, ಮುಖಂಡ ರಾದ ರಾಜುಗೌಡ ನಾಯಕ, ಶಿವನಗೌಡ ನಾಯಕ, ಕೆ.ಕರಿಯಪ್ಪ, ಎಂ.ದೊಡ್ಡಬಸವರಾಜ, ವೆಂಕೋಬ ನಾಯಕ, ಸಿದ್ರಾಮೇಶ ಮನ್ನಾಪುರ, ರಾಜೇಶ ಹಿರೇಮಠ ಅವರು ವಿಜಯೇಂದ್ರ ಅವರೊಂದಿಗೆ ಪಾದಯಾತ್ರೆ`ಯಲ್ಲಿ ಹೆಜ್ಜೆಹಾಕಿದರು.ಎಪಿಎಂಸಿ ವರ್ತಕರ ಸಮಸ್ಯೆಗಳಿಗೆ ಪರಿಹಾರಕ್ಕೆ ಆಗ್ರಹ: ಸಿಂಧನೂರು ಸಮೀಪ ಎಪಿಎಂಸಿ ವರ್ತಕರೊಂದಿಗೆ ವಿಜಯೇಂದ್ರ ಸಂವಾದ ನಡೆಸಿದರು. ಲೀಸ್ ಕಮ್ ಸೇಲ್ ಡೀಡ್ ನಂತರವೂ ಜಾಗ ಅಥವಾ ಮಳಿಗೆ ವರ್ಗಾವಣೆಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಇದರಿಂದ ಸಣ್ಣ ವ್ಯಾಪಾರಿಗಳು ಮತ್ತು ಮಧ್ಯಮ ವರ್ಗದ ವರ್ತಕರ ಮೇಲೆ ಅನಗತ್ಯ ಆರ್ಥಿಕ ಹೊರೆ ಬೀಳುತ್ತಿದೆ ಎಂದು ವರ್ತಕರು ತಿಳಿಸಿದರು.
ದಲ್ಲಾಳಿ ವ್ಯವಸ್ಥೆಯಲ್ಲಿನ ಗೊಂದಲ, ಪರವಾನಗಿ ಮತ್ತು ದಾಖಲೆಗಳ ಸಮಸ್ಯೆ, ಬ್ಯಾಂಕ್ ಸಾಲ ಪಡೆಯುವಲ್ಲಿ ಎದುರಾಗುವ ಅಡಚಣೆಗಳು ಹಾಗೂ ಹೆಚ್ಚಿನ ಬಡ್ಡಿ ದರದ ಸಾಲದ ಒತ್ತಡದ ಬಗ್ಗೆಯೂ ಅವರು ಗಮನ ಸೆಳೆದರು. ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವವರಿಗೆ ಪಾರದರ್ಶಕ ನಿಯಮಗಳು, ಕಡಿಮೆ ಬಡ್ಡಿದರದ ಸಾಲ ಮತ್ತು ಸರಳ ಆಡಳಿತಾತ್ಮಕ ವ್ಯವಸ್ಥೆ ಅಗತ್ಯವಿದೆ ಎಂದು ವಿಜಯೇಂದ್ರ ಹೇಳಿದರು. ದೇವರಾಜ ಅರಸು ತರಕಾರಿ ಮಾರುಕಟ್ಟೆಯಲ್ಲಿನ ಕುಡಿಯುವ ನೀರು, ಕ್ಯಾಂಟೀನ್, ಶೌಚಾಲಯ, ಸ್ವಚ್ಛತೆ, ವಾಹನ ನಿಲುಗಡೆ ಮತ್ತು ಇತರ ಮೂಲಸೌಕರ್ಯಗಳ ಕೊರತೆಯನ್ನೂ ಅವರು ಗಮನಕ್ಕೆ ತೆಗೆದುಕೊಂಡರು.“ಇಂತಹ ಆಡಳಿತಾತ್ಮಕ ಸಮಸ್ಯೆಗಳನ್ನು ಸರ್ಕಾರ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ಪರಿಹರಿಸಬಹುದು. ನಿಮ್ಮ ಧ್ವನಿಯಾಗಿ ನಾನು ವಿಧಾನಸಭೆಯಲ್ಲಿ ಕೆಲಸ ಮಾಡುತ್ತೇನೆ” ಎಂದು ವಿಜಯೇಂದ್ರ ಭರವಸೆ ನೀಡಿದರು.
ಬಡವರಿಗೆ ಸರಕಾರದ ಯೋಜನೆಗಳು ತಲುಪುತ್ತಿಲ್ಲ: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳು ಅರ್ಹ ಬಡವರಿಗೆ, ಫಲಾನುಭವಿಗಳಿಗೆ ತಲುಪುತ್ತಿಲ್ಲ. ಕಳೆದ ಎಂಟು ತಿಂಗಳಿಂದ ಮಾಶಾಸನ, ವೃದ್ಧಾಪ್ಯ ವೇತನಗಳು ನಿಂತು ಹೋಗಿವೆ. ಇದರಿಂದ ಅವರ ಜೀವನ ಸಂಕಷ್ಟ ಪರಿಸ್ಥಿತಿಯಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.ನಗರದ ಗಾಂಧಿವೃತ್ತದಲ್ಲಿ ೪ನೇ ದಿನಗದ ಪಾದಯಾತ್ರೆಗೆ ಗೋ ಪೂಜೆ ಮಾಡುವ ಮೂಲಕ ಚಾಲನೆ ನೀಡಿ, ನಂತರ ಸರಕಾರದ ವಿವಿಧ ಯೋಜನೆಗಳ ಫಲಾನು ಭವಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಸರಕಾರ ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ, ಕಳೆದ ಆರು ತಿಂಗಳಿಂದ ಮಾಸಾಶನ ಬಂದಿಲ್ಲ ಎಂದು ಫಲಾನುಭವಿಗಳೇ ಅಳಲು ತೋಡಿಕೊಳ್ಳುತ್ತಿದ್ದಾರೆ. ಕಡುಬಡವರ ಬದುಕಿಗೆ ಆಸರೆಯಾಗಬೇಕಾದ ಸರ್ಕಾರ ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ವಿಧವಾ ವೇತನ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಅತಿಥಿ ಉಪನ್ಯಾಸಕರು ವೇತನ ಸೇರಿದಂತೆ ಹಲವು ತಿಂಗಳುಗಳಿಂದ ಫಲಾನುಭವಿಗಳಿಗೆ ಮಾಶಾಸನಗಳು ತಲುಪುತ್ತಿಲ್ಲ. ಗಂಗಾಕಲ್ಯಾಣ ಯೋಜನೆಯ ಪ್ರಯೋಜನವೂ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಮನೆ ಇಲ್ಲದ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡುವಲ್ಲಿಯೂ ಸರ್ಕಾರ ವಿಫಲವಾಗಿದೆ. ಬಡವರ ಕಲ್ಯಾಣಕ್ಕಾಗಿ ನೀಡಬೇಕಾದ ಹಣವನ್ನೇ ಸಮಯಕ್ಕೆ ನೀಡಲು ಸಾಧ್ಯವಾಗದ ಸ್ಥಿತಿಗೆ ಕಾಂಗ್ರೆಸ್ ಸರ್ಕಾರ ತಲುಪಿದೆ ಎಂದು ದೂರಿದರು.ರೈತರು, ಕೂಲಿ ಕಾರ್ಮಿಕರು, ವೃದ್ಧರು, ಅಂಗವಿಕಲರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರನ್ನು ಸರ್ಕಾರ ನಿರ್ಲಕ್ಷ್ಯದಿಂದ ನೋಡುತ್ತಿದೆ. ಒಂದು ಕಡೆ ಪಂಚಗ್ಯಾರಂಟಿಗಳ ಪ್ರಚಾರದಲ್ಲಿ ಸರ್ಕಾರ ಮುಳುಗಿದೆ. ಇದೇ ಭ್ರಮೆಯಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ, ಕೂಲಿಕಾರ್ಮಿಕರು, ರೈತರು, ದುರ್ಬಲ ವರ್ಗಗಳಿಂದ ದೂರವಾಗುತ್ತಿದೆ. ಇದರಿಂದ ಅವರೆಲ್ಲ ಬೇಸತ್ತು. ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಹರಿಹಾಯ್ದರು.ಜಿಲ್ಲೆಯ ಕಾರಟಗಿಯಲ್ಲಿ ಸಮಾಪ್ತಿಗೊಂಡಿತು.
