ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳ ವಿರೋಧದ ಬೆನ್ನಲ್ಲೇ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಲ್ಪಟ್ಟಿದ್ದ ವಿವಾದಿತ ಕರ್ನಾಟಕ ಸರ್ಕಾರಿ‌ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ -2026 ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಂಗಳೂರು : ಸಾರ್ವಜನಿಕರು ಹಾಗೂ ಪ್ರತಿಪಕ್ಷಗಳ ವಿರೋಧದ ಬೆನ್ನಲ್ಲೇ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಲ್ಪಟ್ಟಿದ್ದ ವಿವಾದಿತ ಕರ್ನಾಟಕ ಸರ್ಕಾರಿ‌ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ -2026 ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಉದ್ಯಾನ ಮತ್ತು ತೋಟಗಾರಿಕೆ ಇಲಾಖೆ ಭೂಮಿಯನ್ನು ಸಾರ್ವಜನಿಕ ಮೂಲಸೌಕರ್ಯ ಮತ್ತು ನಾಗರಿಕರ ಉಪಯೋಗಕ್ಕೆ ಗರಿಷ್ಠ ಶೇ.5ರಷ್ಟು ಜಾಗ ಮಾರಾಟ, ಗುತ್ತಿಗೆ, ಕೊಡುಗೆ, ವಿನಿಮಯ ಅಥವಾ ಅಡಮಾನದ ಮೂಲಕ ಬಳಸಿಕೊಳ್ಳಲು ಮಸೂದೆ ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆದಿದ್ದರು.

ಇದರ ಬೆನ್ನಲ್ಲೇ ಸಾರ್ವಜನಿಕರು, ಪರಿಸರ ಪ್ರೇಮಿಗಳು, ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಳೆದ ಭಾನುವಾರ ಲಾಲ್‌ಬಾಗ್‌ನಲ್ಲಿ ಪರಿಸರ ಪ್ರೇಮಿಗಳು, ನಾಗರಿಕರು ಈ ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ಸರ್ಕಾರವು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿತು.

ಆಕ್ಷೇಪಣೆ ಆಹ್ವಾನಿಸಲು ತೀರ್ಮಾನ:

ಅಂತಿಮವಾಗಿ ವಿಧೇಯಕವನ್ನು ಹಿಂಪಡೆದು ಸಾರ್ವಜನಿಕರ ಅಭಿಪ್ರಾಯ, ಸಲಹೆ ಹಾಗೂ ಆಕ್ಷೇಪಣೆಗಳಿಗೆ ಆಹ್ವಾನಿಸಲು ತೀರ್ಮಾನಿಸಿದೆ. ಬಳಿಕ ಕೆಲ ಪರಿಷ್ಕರಣೆಗಳೊಂದಿಗೆ ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲು ನಿರ್ಧರಿಸಿದ್ದು, ಈ ಕುರಿತು ರಾಜ್ಯಪಾಲರಿಗೂ ಮಾಹಿತಿ ನೀಡಲು ಸಂಪುಟ ನಿರ್ಧರಿಸಿದೆ.

ಸಭೆಯ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಪ್ರತಿಪಕ್ಷಗಳು ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಈ ಮಸೂದೆ ಬಗ್ಗೆ ಚರ್ಚೆಯೇ ನಡೆಸಿರಲಿಲ್ಲ. ಈಗ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಹೀಗಾಗಿ ಜನರ ಭಾವನೆಗಳಿಗೆ ಬೆಲೆ ನೀಡಿ ಮಸೂದೆ ಹಿಂಪಡೆಯಲು ಸಂಪುಟದಲ್ಲಿ ನಿರ್ಧರಿಸಲಾಗಿದೆ. ಸಾರ್ವಜನಿಕರ ಚರ್ಚೆಗೆ ಇಟ್ಟು ಮುಂದಿನ ಅಧಿವೇಶನದಲ್ಲಿ ಮರು ಮಂಡನೆ ಮಾಡಲಿದ್ದೇವೆ ಎಂದು ಹೇಳಿದರು.

ಕೆಲ ತಿದ್ದುಪಡಿ ತಂದು ಮಸೂದೆಯನ್ನು ಮರು ಮಂಡನೆ ಮಾಡಲಾಗುವುದು. ಮಾರಾಟ, ಗುತ್ತಿಗೆ, ಉಡುಗೊರೆ ಈ ಅಂಶಗಳನ್ನು ಪುನರ್ ಪರಿಶೀಲನೆ ಮಾಡುತ್ತೇವೆ. ಗರಿಷ್ಠ ಶೇ.5ರಷ್ಟು ಜಾಗ ಎಂದರೆ 100 ಎಕರೆ ಉದ್ಯಾನದಲ್ಲಿ 5 ಎಕರೆ ಮಾರಾಟ ಎಂಬ ತಪ್ಪು ಅಭಿಪ್ರಾಯ ಉಂಟಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಲಾಗುವುದು ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರತಿಪಕ್ಷಗಳ ಆರೋಪಕ್ಕೆ ಅಲ್ಲ. ಸಾರ್ವಜನಿಕ ವಲಯ, ಪರಿಸರ ಪ್ರೇಮಿಗಳು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದೇವೆ ಎಂದು ಹೇಳಿದರು.

ಜನರಿಗೆ ಗೌರವ

ಜನತೆಯ ಭಾವನೆಗಳನ್ನು ನಮ್ಮ ಸರ್ಕಾರ ಸದಾ ಗೌರವಿಸುತ್ತದೆ. ವಿಧೇಯಕ ಹಿಂಪಡೆವ ಸಂಪುಟದ ನಿರ್ಧಾರ, ಬದ್ಧತೆಯ ಪ್ರತೀಕ. ಅಗತ್ಯ ತಿದ್ದುಪಡಿಗಳೊಂದಿಗೆ ವಿಧೇಯಕವನ್ನು ಮರು ಮಂಡಿಸಲಾಗುತ್ತದೆ.

- ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿ

ಹೋರಾಟಕ್ಕೆ ಜಯ

ಉದ್ಯಾನ ಭೂಮಿಯನ್ನು ಮೂಲಸೌಕರ್ಯಕ್ಕೆ ಬಳಸುವ ಮಸೂದೆ ವಾಪಸಾತಿ ಬಿಜೆಪಿ ಹೋರಾಟಕ್ಕೆ ಸಿಕ್ಕ ಮತ್ತೊಂದು ಜಯ. ಮುಂದೆಯೂ ಅನ್ಯ ಉದ್ದೇಶಕ್ಕೆ ಉದ್ಯಾನಗಳ ಬಳಕೆಗೆ ಬಿಜೆಪಿ ಅವಕಾಶ ನೀಡಲ್ಲ.

- ಆರ್‌. ಅಶೋಕ, ಪ್ರತಿಪಕ್ಷ ನಾಯಕ

ಸ್ಪಂದನೆ ಸ್ವಾಗತಾರ್ಹ

ಪಾರ್ಕ್‌ ಜಾಗ ಅನ್ಯ ಉದ್ದೇಶಕ್ಕೆ ಬಳಸುವ ಕಾಯ್ದೆ ಹಿಂಪಡೆದು ಸರ್ಕಾರ ಜನರ ಧ್ವನಿಗೆ ಸ್ಪಂದಿಸಿದೆ. ಪ್ರಜಾಪ್ರಭುತ್ವ ಹೀಗೆ ಕಾರ್ಯ ನಿರ್ವಹಿಸಬೇಕು. ಮುಖ್ಯಮಂತ್ರಿಗಳ ಕ್ರಮ ಸ್ವಾಗತಿಸುವೆ.

- ತೇಜಸ್ವಿ ಸೂರ್ಯ, ಬಿಜೆಪಿ ಸಂಸದ