ಈ ತಿಂಗಳ ಅಂತ್ಯದೊಳಗೆ ರಾಜ್ಯದಲ್ಲಿ ಮತ್ತೆ 70 ರಿಂದ 80 ತಾಲೂಕುಗಳನ್ನು ಬರಪಿಡಿತ ಪಟ್ಟಿಗೆ ಸೇರ್ಪಡೆಗೊಳಿಸಿ ಸರ್ಕಾರ ಘೋಷಣೆ ಮಾಡಲಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಕುಶಾಲನಗರ : ಈ ತಿಂಗಳ ಅಂತ್ಯದೊಳಗೆ ರಾಜ್ಯದಲ್ಲಿ ಮತ್ತೆ 70 ರಿಂದ 80 ತಾಲೂಕುಗಳನ್ನು ಬರಪಿಡಿತ ಪಟ್ಟಿಗೆ ಸೇರ್ಪಡೆಗೊಳಿಸಿ ಸರ್ಕಾರ ಘೋಷಣೆ ಮಾಡಲಿದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಕುಶಾಲನಗರದಲ್ಲಿ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘ ಕಚೇರಿಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ರಾಜ್ಯದ ಹಲವೆಡೆ ವಾಡಿಕೆ ಮಳೆ ಕಡಿಮೆಯಾಗಿದೆ, ಬರಗಾಲ ಘೋಷಣೆಯಾಗಿದ್ದು ಈಗಾಗಲೇ ಸರ್ಕಾರ ಮೊದಲ ಹಂತದಲ್ಲಿ 103 ತಾಲೂಕುಗಳು ಬರಗಾಲ ಪೀಡಿತವಾಗಿರುವ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗಿದೆ ಎಂದರು. ಮೂರು ವಾರದೊಳಗೆ ಹೆಚ್ಚುವರಿ ತಾಲೂಕುಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದರು.

ಕೆಪಿಎಸ್ ಸಿ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು ಅದು ಬಿಜೆಪಿ ಕಾಲಾವಧಿಯಲ್ಲಿ ನಡೆದ ಹಗರಣ ಎಂದರಲ್ಲದೆ ಪ್ರಕರಣ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ ಎಂದರು. ಬಿಜೆಪಿ ಪಾದಯಾತ್ರೆ ಬಗ್ಗೆ ಮಾತನಾಡಿದ ಅವರು ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಬಳ್ಳಾರಿ ಯಾತ್ರೆ ಬಿಜೆಪಿ ಪಕ್ಷದ ವಿಷಯ ಎಂದರು.

ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿ ಇದ್ದು ಸದ್ಯದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗುವುದು ಎಂದ ಸಚಿವರು ಎಲ್ಲ ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು. ಉಪಮುಖ್ಯಮಂತ್ರಿ ಹುದ್ದೆ ಬಗ್ಗೆ ಉತ್ತರಿಸಿದ ಸಚಿವರು ಸದ್ಯಕ್ಕೆ ಡಿ ಸಿಎಂ ಪ್ರಸ್ತಾವನೆ ಇಲ್ಲ ಎಂದರು.ಕುಶಾಲನಗರ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಕಚೇರಿಗೆ ಭೇಟಿಯ ನೀಡಿದ ಸಚಿವರನ್ನು ಸಂಘದ ಅಧ್ಯಕ್ಷರು ಅಶೋಕ್ ಮತ್ತು ಪದಾಧಿಕಾರಿಗಳು ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭ ಕಚೇರಿಗೆ ಆಗಮಿಸಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ ಪಿ ಶಶಿಧರ್ ಮತ್ತಿತರರು ಸಚಿವರಿಗೆ ಶಾಲು ಹಾರ ಹಾಕುವ ಮೂಲಕ ಸ್ವಾಗತಿಸಿದರು.