ಒಬ್ಬ ಒಳ್ಳೆಯ ಶಿಕ್ಷಕ, ಇಡೀ ಊರನ್ನೇ ಸುಶಿಕ್ಷಿತರನ್ನಾಗಿಸುತ್ತಾನೆ. ಒಂದು ಒಳ್ಳೆಯ ಶಾಲೆ ಇಡೀ ಊರನ್ನೇ ಶಿಕ್ಷಕರ ಪಟ್ಟಿಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನಕ್ಕೆ ತಂದು ನಿಲ್ಲಿಸಿದೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ ತಿಳಗೂಳ ಗ್ರಾಮದಲ್ಲಿ ಅತಿ ಹೆಚ್ಚು ಶಿಕ್ಷಕರು ಹಾಗೂ ಪ್ರತಿ ಮನೆಯಲ್ಲಿ ಸರ್ಕಾರಿ ನೌಕರರು ಇದ್ದಾರೆ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಒಬ್ಬ ಒಳ್ಳೆಯ ಶಿಕ್ಷಕ, ಇಡೀ ಊರನ್ನೇ ಸುಶಿಕ್ಷಿತರನ್ನಾಗಿಸುತ್ತಾನೆ. ಒಂದು ಒಳ್ಳೆಯ ಶಾಲೆ ಇಡೀ ಊರನ್ನೇ ಶಿಕ್ಷಕರ ಪಟ್ಟಿಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನಕ್ಕೆ ತಂದು ನಿಲ್ಲಿಸಿದೆ.

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ ತಿಳಗೂಳ ಗ್ರಾಮದಲ್ಲಿ ಅತಿ ಹೆಚ್ಚು ಶಿಕ್ಷಕರು ಹಾಗೂ ಪ್ರತಿ ಮನೆಯಲ್ಲಿ ಸರ್ಕಾರಿ ನೌಕರರು ಇದ್ದಾರೆ. ಈ ಗ್ರಾಮ ಅಭಿವೃದ್ಧಿಯಲ್ಲಿ ಹಿಂದಿದ್ದರೂ ಹೆಚ್ಚಿನ ಸುಶಿಕ್ಷಿತರನ್ನು ಹೊಂದಿದೆ. ತಾಲೂಕಿನಲ್ಲಿಯೇ ಶಿಕ್ಷಕರ ಹಾಗೂ ಅತಿ ಹೆಚ್ಚು ಸರ್ಕಾರಿ ನೌಕರರ ಹೊಂದಿದ ಗ್ರಾಮ ಎಂದು ಹೆಸರುವಾಸಿಯಾಗಿದೆ. ಸುಮಾರು 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 500ಕ್ಕೂ ಅಧಿಕ ಜನ ಶಿಕ್ಷಕರಿದ್ದಾರೆ. ಈ ಗ್ರಾಮದಲ್ಲಿ ಶಿಕ್ಷಕ ಅದರಲ್ಲೂ ಸರ್ಕಾರಿ ನೌಕರ ಇಲ್ಲದ ಮನೆಯೇ ಸಿಗುವುದಿಲ್ಲ. ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.

ನಿವೃತ್ತ ಶಿಕ್ಷಕ ಮಾರುತಿ ಕಾಸರ ಶ್ರಮದ ಫಲ:

ಗ್ರಾಮದ ಈ ಕ್ರಾಂತಿಕಾರಿ ಬದಲಾವಣೆಗೆ ಗ್ರಾಮದ ನಿವೃತ್ತ ಶಿಕ್ಷಕರಾದ ಮಾರುತಿ ಕಾಸರ (80) ಅವರೇ ಸ್ಫೂರ್ತಿ. ಶಿಕ್ಷಕ ವೃತ್ತಿಯಲ್ಲಿ ಅಪಾರ ಭಕ್ತಿ ಹೊಂದಿದ್ದ ಇವರು ಈ ಭಾಗದ ಕಲಕೇರಿ, ಕೆರೂಟಗಿ, ಬೆಕಿನಾಳ, ತಿಳಗೂಳ ಸೇರಿ ಹಲವಾರು ಗ್ರಾಮಗಳಲ್ಲಿ ಶಿಕ್ಷಕ ವೃತ್ತಿ ನಿಭಾಯಿಸಿದ್ದಾರೆ. ಒಬ್ಬ ಶಿಕ್ಷಕ ಸಮಾಜದ ಗತಿಯನ್ನೇ ಬದಲಾಯಿಸಬಲ್ಲ ಎಂಬುದನ್ನು ಮನಗಂಡಿದ್ದ ಮಾರುತಿ ಸರ್‌ ತಮ್ಮ ಬಳಿ ಕಲಿಯುತ್ತಿದ್ದ ಮಕ್ಕಳಿಗೆ ಶಿಕ್ಷಕ ವೃತ್ತಿಯ ಘನತೆ ಬಗ್ಗೆ ತಿಳಿಸುತ್ತ ಅವರಲ್ಲಿ ಶಿಕ್ಷರಾಗಲು ಹುರಿದುಂಬಿಸುತ್ತಿದ್ದರು. ಇವರು ಸಾವಿರಕ್ಕೂ ಅಧಿಕ ಶಿಕ್ಷಕರನ್ನು ಸೃಷ್ಟಿಸಿದ್ದಾರೆ. ಅವರ ನಾಲ್ಕು ಜನ ಮಕ್ಕಳಲ್ಲಿ ಮೂವರು ಶಿಕ್ಷಕರಾಗಿರುವುದು ವಿಶೇಷ. ಇವರ ಕೈಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ರಾಜ್ಯ, ದೇಶ ವಿದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ.

*ಗ್ರಾಮದ ಮಾಣಿಕ್ಯ ಎನ್.ಎಂ. ಬಿರಾದಾರ

ಚಾಣುಕ್ಯ ಕರಿಯರ್ ಅಕಾಡೆಮಿಯ ಎನ್.ಎಂ. ಬಿರಾದಾರ ತಿಳಗೂಳ ಗ್ರಾಮದವರಾಗಿದ್ದು, ಇವರು ಅಕಾಡೆಮಿಯಲ್ಲಿ ತರಬೇತಿ ನೀಡುವ ಮೂಲಕ ಶಿಕ್ಷಕರು, ಐಎಎಸ್‌, ಕೆಎಎಸ್‌, ಸೈನಿಕರು, ಎಫ್‌ಡಿಎ, ಎಸ್‌ಡಿಎ, ಪೊಲೀಸ್‌ ಸೇರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಶಿಕ್ಷಕ ತರಬೇತಿ ಪಡೆದು ಉದ್ಯೋಗಕ್ಕಾಗಿ ಕಾಯುತ್ತಿರುವವರ ಸಂಖ್ಯೆಯೂ ಅಧಿಕವಿದೆ. ಒಂದೇ ಕುಟುಂಬದಲ್ಲಿ ಹಲವಾರು ಮಂದಿ ಶಿಕ್ಷಕರು ಹಾಗೂ ಸರ್ಕಾರಿ ನೌಕರರು ಇರುವ ಹಲವು ನಿದರ್ಶನಗಳಿವೆ. ಗ್ರಾಮೀಣ ಪ್ರದೇಶವಾಗಿದ್ದರೂ ಗುಣಮಟ್ಟದ ಶಿಕ್ಷಣ ನೀಡುವ ಶಾಲೆ, ಶಿಕ್ಷಕರ ಪರಿಶ್ರಮದ ಪರಿಣಾಮ ಹೆಚ್ಚಿನ ಶಿಕ್ಷಕರು, ನೌಕರರನ್ನು ಹೊಂದಿದ ಗ್ರಾಮವೆಂಬ ಹೆಗ್ಗಳಿಗೆ ಪಾತ್ರವಾಗಿದೆ.

ಪುಟ್ಟ ಗ್ರಾಮವಾದ ತಿಳಗೂಳ ಜನತೆ ಶಿಕ್ಷಣದ ಪ್ರೀತಿ ಅಗಾಧವಾದುದು. ತಂದೆ-ತಾಯಿ ಅನಕ್ಷರಸ್ಥರಾದರೂ ಮಕ್ಕಳನ್ನಾದರೂ ಚೆನ್ನಾಗಿ ಓದಿಸಬೇಕು ಎನ್ನುವ ಛಲ ಹೊಂದಿದವರು. ಹೆಚ್ಚಿನ ಜನರಿಗೆ ತಮ್ಮ ಮಕ್ಕಳು ಶಿಕ್ಷಕ ಆಗಬೇಕು ಎಂಬ ಹಂಬಲ ಹೊಂದಿ ಟಿಸಿಎಚ್‌ ಶಿಕ್ಷಣಕ್ಕೆ ಅಣಿಗೊಳಿಸುತ್ತಾರೆ. ಜಮೀನು, ಬಂಗಾರ ಅಡವಿಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸಿದರು. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸಾಧನೆ ಮಾಡಿದ್ದಾರೆ.

ಈ ಗ್ರಾಮದಲ್ಲಿ ಶಿಕ್ಷಕರಷ್ಟೇ ಅಲ್ಲ ಸರ್ಕಾರದ ವಿವಿಧ ಇಲಾಖೆಯಲ್ಲೂ ಹಲವರು ಕೆಲಸದಲ್ಲಿದ್ದಾರೆ. ಸೈನಿಕರು, ವೈದ್ಯರು ಸೇರಿದಂತೆ ಹಲವಾರು ಇಲಾಖೆಯಲ್ಲಿ ಸಾಕಷ್ಟು ಜನ ಸರ್ಕಾರಿ ನೌಕರರಿದ್ದಾರೆ. ನೂರಾರು ಜನರು ಪ್ರಗತಿಪರ ಕೃಷಿಕರಾಗಿಯೂ ಹೊರ ಹೊಮ್ಮಿದ್ದಾರೆ. ಹೈನುಗಾರಿಕೆ ಮತ್ತು ಕೈಗಾರಿಕೆಯಲ್ಲಿ ತೊಡಗಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

-ಶಿವಪುತ್ರ ಸಾತಿಹಾಳ ಯುವ ಮುಖಂಡರು ತಿಳಗೂಳ

ಶಿಕ್ಷಕ ವೃತ್ತಿಗೆ ತಂದೆಯವರೇ ಪ್ರೇರಣೆ. ಹಿರಿಯ ಶಿಕ್ಷಕರಾಗಿ ಸೇವೆಯಿಂದ ನಿವೃತ್ತಿ ಆದರೂ ಹಲವಾರು ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸಿದ್ದರು. ಶಿಕ್ಷಕರಾದರೆ ಗ್ರಾಮದ ಅನಕ್ಷರತೆ ನಿರ್ಮೂಲನೆ ಆಗುತ್ತದೆ ಎಂದು ಪ್ರೇರಣೆ ನೀಡುತ್ತಿದ್ದರು. ನಮ್ಮ ಗ್ರಾಮದಲ್ಲಿ ಶಿಕ್ಷಕರ ಜತೆ ಪ್ರತಿ ಮನೆಯಲ್ಲಿ ಒಬ್ಬರು ಸರ್ಕಾರಿ ನೌಕರರಿದ್ದಾರೆ. ನಮ್ಮ ತಂದೆಯವರಿಗೆ ನಾಲ್ಕು ಜನ ಮಕ್ಕಳಲ್ಲಿ ಮೂರು ಜನ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ.

-ಚಂದ್ರಶೇಖರ ಮಾರುತಿ ಕಾಸರ ಶಿಕ್ಷಕರು.