ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಾಗಿದ ಪಾದಯಾತ್ರೆಗೆ ಭಾರೀ ಜನಬೆಂಬಲ ವ್ಯಕ್ತವಾಯಿತು. ಮಧ್ಯಾಹ್ನದ ವೇಳೆಗೆ ನಗರದ ಸಕ್ಕರೆ ವೃತ್ತದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಪಾದಯಾತ್ರೆಗೆ ಸೇರ್ಪಡೆಯಾದರು.
ಮಂಡ್ಯ : ವಾಲ್ಮೀಕಿ ನಿಗಮ ಹಾಗೂ ಮೈಸೂರು ಮುಡಾ ಹಗರಣಕ್ಕೆ ಸಂಬಂಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆ ಬುಧವಾರ ಮಂಡ್ಯದಿಂದ 17 ಕಿ.ಮೀ. ದೂರದವರೆಗೆ ಸಾಗಿತು.
ಮಂಗಳವಾರ ಮದ್ದೂರಿನಿಂದ ಆಗಮಿಸಿದ ಪಾದಯಾತ್ರೆ ತಂಡ ನಗರದ ಹೊರವಲಯದಲ್ಲಿರುವ ಶಶಿಕಿರಣ ಕನ್ವೆನ್ಷನ್ ಹಾಲ್‌ನಲ್ಲಿ ಬಿಡಾರ ಹೂಡಿತ್ತು. ಬೆಳಗ್ಗೆ ೯ ಗಂಟೆಗೆ ಆರಂಭವಾದ ಪಾದಯಾತ್ರೆ ಬೆಂಗಳೂರು- ಮೈಸೂರು ಹೆದ್ದಾರಿ ಮೂಲಕ ಮಂಡ್ಯ ನಗರವನ್ನು ಪ್ರವೇಶಿಸಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಸಾಗಿದ ಪಾದಯಾತ್ರೆಗೆ ಭಾರೀ ಜನಬೆಂಬಲ ವ್ಯಕ್ತವಾಯಿತು. ಹಾಸನದಿಂದಲೂ ಪ್ರೀತಂಗೌಡ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಧ್ಯಾಹ್ನದ ವೇಳೆಗೆ ನಗರದ ಸಕ್ಕರೆ ವೃತ್ತದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಪಾದಯಾತ್ರೆಗೆ ಸೇರ್ಪಡೆಯಾದರು.
ನಂತರದಲ್ಲಿ ತೆರೆದ ವಾಹನವನ್ನು ಏರಿದ ಎರಡೂ ಪಕ್ಷಗಳ ನಾಯಕರು ಎಸ್.ಡಿ.ಜಯರಾಂ ವೃತ್ತ, ಮಹಾವೀರ ವೃತ್ತ ಮಾರ್ಗವಾಗಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದ ಬಳಿಗೆ ಯಾತ್ರೆ ಆಗಮಿಸಿತು. ದಾರಿಯುದ್ದಕ್ಕೂ ಬೃಹತ್ ಗಾತ್ರದ ಹೂವು, ಹಣ್ಣಿನ ಹಾರಗಳನ್ನು ಹಾಕಿ ನಾಯಕರನ್ನು ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ಸಾಂಸ್ಕೃತಿಕ ಕಲಾತಂಡಗಳು ಪಾದಯಾತ್ರೆಯ ವಿಶೇಷ ಆಕರ್ಷಣೆಯಾಗಿದ್ದವು.
ಮೈಸೂರು ಚಲೋ ಪಾದಯಾತ್ರೆಗೆ ಪರ್ಯಾಯವಾಗಿ ಮಂಗಳವಾರ ಕಾಂಗ್ರೆಸ್ಸಿಗರು ಜನಾಂದೋಲನ ಸಮಾವೇಶ ನಡೆಸಿ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಆರೋಪ ಮಾಡಿದ್ದಕ್ಕೆ ಪ್ರತಿಯಾಗಿ ಬುಧವಾರ ನಡೆದ ಪಾದಯಾತ್ರೆಯಲ್ಲಿ ಉಭಯಪಕ್ಷಗಳ ನಾಯಕರು ತಿರುಗೇಟು ನೀಡುತ್ತಲೇ ಸಾಗಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಮೈಸೂರು ಚಲೋ ಯಾತ್ರೆ ಇಂದು ಕೇವಲ 17 ಕಿ.ಮೀ.ಗೆ ಮಾತ್ರ ಸೀಮಿತವಾಗಿತ್ತು. ನಿತ್ಯ 20 ಕಿ.ಮೀ.ಗೂ ಹೆಚ್ಚು ದೂರ ಪಾದಯಾತ್ರೆ ಸಾಗುತ್ತಿತ್ತು. ಇಂದು ಮಂಡ್ಯ, ಇಂಡುವಾಳು, ಸುಂಡಹಳ್ಳಿ, ಯಲಿಯೂರು ಕೋಡಿ ಮಾರ್ಗವಾಗಿ ತೂಬಿನಕೆರೆ ಕೈಗಾರಿಕಾ ಪ್ರದೇಶದ ರೈಟ್ ಓ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದೆ.
ಈ ಮಧ್ಯೆ ಎಚ್.ಡಿ.ಕುಮಾರಸ್ವಾಮಿ, ಬಿ.ವೈ.ವಿಜೆಯೇಂದ್ರ, ನಿಖಿಲ್ ಕುಮಾರಸ್ವಾಮಿ ಅವರನ್ನು ಎತ್ತಿನಗಾಡಿ ಮೆರವಣಿಗೆಯಲ್ಲಿ ಕರೆತರಲಾಯಿತು. ಮಾರ್ಗ ಮಧ್ಯೆ ನಿಖಿಲ್ ಅವರು ಮಗುವೊಂದನ್ನು ಎತ್ತಿ ಮುದ್ದಾಡಿದ್ದೂ ಕಂಡುಬಂತು.
ಜೆ.ಸಿ.ವೃತ್ತದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಅಭಿಮಾನಿಯೊಬ್ಬರು ಕುರಿ ಕಂಬಳಿ ಹೊದಿಸಿ, ಕುರಿಮರಿಯನ್ನು ನೀಡಿದ್ದು ವಿಶೇಷವಾಗಿತ್ತು. ಮುಖಂಡರು ಬಾರುಕೋಲು ಪ್ರದರ್ಶನ ನೀಡಿದರು.