60 ಲಕ್ಷ ಹೆಸರುಗಳ ಪರಿಶೀಲನೆ ಬಾಕಿ80 ಲಕ್ಷ ಜನರನ್ನು ತೆಗೀಬಹುದು ಎಂದಿದ್ದ ದೀದಿ
ಕೋಲ್ಕತಾ: ಪ. ಬಂಗಾಳದಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮುಗಿದಿದ್ದು, ಅಂತಿಮ ಮತಪಟ್ಟಿ ಬಿಡುಗಡೆ ಆಗಿದೆ ಹಾಗೂ ಸುಮಾರು 63 ಲಕ್ಷ ಜನರ ಹೆಸರನ್ನು ಕೈಬಿಡಲಾಗಿದೆ. ಇನ್ನೂ 60 ಲಕ್ಷ ಮಂದಿ ಹೆಸರು ಪರಿಶೀಲನೆ ಬಾಕಿ ಇದೆ.
ಚುನಾವಣೆಗೆ ಸಜ್ಜಾಗಿರುವ ರಾಜ್ಯದಲ್ಲಿ ಕಳೆದ ನ.4ರಿಂದ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿತ್ತು ಹಾಗೂ ಡಿ.16ರಂದು ಕರಡು ಪಟ್ಟಿ ಬಿಡುಗಡೆ ಆಗಿತ್ತು. ಅದರಲ್ಲಿ ಸುಮಾರು 58 ಲಕ್ಷ ಮತದಾರರನ್ನು ಕೈಬಿಡಲಾಗಿತ್ತು. ಅದಕ್ಕೆ ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ, ಮರುಪರಿಶೀಲನೆಯ ಬಳಿಕ ಇನ್ನೂ 5 ಲಕ್ಷ ಜನರನ್ನು ತೆಗೆದುಹಾಕಲಾಗಿದೆ. ಜತೆಗೆ, ಸುಮಾರು 60.06 ಲಕ್ಷ ಮತದಾರರ ಪರಿಶೀಲನೆ ನಡೆಯುತ್ತಿದೆ. ಪರಿಷ್ಕರಣೆಗೂ ಮುನ್ನ ರಾಜ್ಯದಲ್ಲಿ ಒಟ್ಟು 7.66 ಮತದಾರರಿದ್ದರು.ಎಸ್‌ಐಆರ್ ವಿರುದ್ಧ ಸಮರ ಸಾರಿರುವ ಸಿಎಂ ಮಮತಾ ಬ್ಯಾನರ್ಜಿ ಅವರು ಕಳೆದವಾರ, ‘80 ಲಕ್ಷ ಹೆಸರುಗಳನ್ನು ಡಿಲೀಟ್ ಮಾಡುವ ಸಾಧ್ಯತೆಯಿದೆ’ ಎಂದಿದ್ದರು.
ಸಿಎಂ ಕ್ಷೇತ್ರದಲ್ಲಿ 47 ಸಾವಿರ ಡಿಲೀಟ್:
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿನಿಧಿಸುವ ಕ್ಷೇತ್ರವಾದ ಭವಾನಿಪುರದಲ್ಲಿ 47,000 ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. 14,000 ಹೆಸರುಗಳನ್ನು ಪರಿಶೀಲನೆಗಾಗಿ ಇರಿಸಲಾಗಿದೆ.ಎಲ್ಲೆಲ್ಲಿ ಎಷ್ಟೆಷ್ಟು?:
ಜಿಲ್ಲಾವಾರು ನೋಡುವುದಾದರೆ, ಬಾಂಗ್ಲಾ ಗಡಿಗೆ ಹೊಂದಿಕೊಂಡಿರುವ ನಾದಿಯಾದಲ್ಲಿ 2.73 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಂತೆಯೇ ಬಂಕುರಾದಲ್ಲಿ 1.18 ಲಕ್ಷ, ಉತ್ತರ ಕೋಲ್ಕತಾದಲ್ಲಿ 4.07, ಅಲಿಪುರದುವಾರ್‌ನಲ್ಲಿ 1.02 ಲಕ್ಷ, ಹೂಗ್ಲಿಯಲ್ಲಿ 3.3 ಲಕ್ಷ ಮತದಾರರನ್ನು ಕೈಬಿಡಲಾಗಿದೆ.ಈ ಪಟ್ಟಿಯನ್ನು ಎಲ್ಲಾ ಜಿಲ್ಲೆಗಳ ಉಪವಿಭಾಗಾಧಿಕಾರಿ ಮತ್ತು ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳ ಕಚೇರಿ ಮುಂದೆ ಪ್ರದರ್ಶಿಸಲಾಗುವುದು.