ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಬೂತ್‌ಗಳಲ್ಲಿ ಮತಪಟ್ಟಿ ಪರಿಷ್ಕರಣೆ ಮಾಡುವ ಕೆಲಸವನ್ನು ಮಾಡಬೇಕೆಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ತಿಳಿಸಿದರು.ನಗರದ ಕೋಣನಹಳ್ಳಿ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಮಂಡ್ಯ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಬೂತ್ ಮಟ್ಟದ ಏಜೆಂಟ್‌ಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದ ಪ್ರತಿಯೊಂದು ಬೂತ್‌ಗಳಲ್ಲಿ ಬಿಎಲ್‌ಒಗಳು ಪರಿಷ್ಕರಣೆಗಾಗಿ ಹೋದಾಗ ಜೆಡಿಎಸ್ ಕಾರ್ಯಕರ್ತರು ಜತೆಯಲ್ಲಿದ್ದುಕೊಂಡು ಸಹಕಾರ ನೀಡಬೇಕು. ಮೃತರಾದವರು, ಗ್ರಾಮ, ಪಟ್ಟಣ ಬಿಟ್ಟು ಹೋಗಿರುವವರನ್ನು ಗುರುತಿಸಬೇಕು. ಎರಡು ಕಡೆಗಳಲ್ಲಿ ಬರುವ ಹೆಸರನ್ನು ತೆಗೆದು ಹಾಕುವ ಕೆಲಸ ಮಾಡಬೇಕು. ೧೮ ವರ್ಷ ತುಂಬಿದವರನ್ನು ಹೊಸ ಮತದಾರರ ಪಟ್ಟಿಗೆ ಸೇರಿಸುವ ಕೆಲಸ ಮಾಡಬೇಕು. ಜತೆಗೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಅರ್ಹ ಮತದಾರರು ಮಾತ್ರ ಮತದಾನ ಮಾಡುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಬೂತ್ ಏಜೆಂಟರದ್ದಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಪಂ, ನಗರಸಭೆ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ಸದೃಢಗೊಳಿಸಬೇಕು. ಇದು ಕಾರ್ಯಕರ್ತರ ಚುನಾವಣೆ ಆಗಿರುವುದರಿಂದ ಸಣ್ಣಪುಟ್ಟ ತಪ್ಪುಗಳಿದ್ದರೆ ಸರಿಪಡಿಸಿಕೊಂಡು ಜಾ.ದಳ ಪಕ್ಷದಿಂದ ಯಾರೇ ಅಭ್ಯರ್ಥಿಗಳಾದರೂ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡಬೇಕು ಎಂದರು.
ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿಗೆ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮ ನಡೆದಾಗ ೮,೦೦೦ ಸದಸ್ಯತ್ವ ದಾಟಿತ್ತು. ಬೇರೆ ವಿಧಾನಸಭಾ ಕ್ಷೇತ್ರಗಳಲ್ಲಿ ೨೦,೦೦೦ ಸದಸ್ಯತ್ವ ಮಾಡಿದ್ದಾರೆ. ಆದ್ದರಿಂದ ಮುಂಬರುವ ಮಾರ್ಚ್ ಯುಗಾದಿಯೊಳಗೆ ಮಂಡ್ಯ ಕ್ಷೇತ್ರದಲ್ಲಿ ೨೦ ಸಾವಿರ ಜೆಡಿಎಸ್ ಪಕ್ಷದ ಸದಸ್ಯತ್ವವನ್ನು ಮಾಡಬೇಕೆಂದು ತಿಳಿಸಿದರು.
ಪ್ರತಿಯೊಂದು ಬೂತ್ ಸಮಿತಿಯಲ್ಲಿ ಎಲ್ಲಾ ಸಮುದಾಯದವರು ಇರಬೇಕು. ಆ ರೀತಿಯಾಗಿ ಬೂತ್ ಕಮಿಟಿ ರಚನೆ ಮಾಡಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ೧೫ ರಿಂದ ೨೦ ಮಂದಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಎರಡು ಸಾವಿರಕ್ಕೂ ಕಡಿಮೆ ಮತಗಳ ಅಂತರದಿಂದ ಸೋತಿದ್ದೇವೆ. ಈ ಹಿನ್ನೆಲೆಯಲ್ಲಿ ಬೂತ್ ಸಮಿತಿಗಳನ್ನು ರಚನೆ ಮಾಡಿಕೊಂಡು ಪಕ್ಷದ ಸಂಘಟನೆಗೆ ಕಾರ್ಯಕರ್ತರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಪ್ರದೀಪ್ ಅವರು ಮಂಡ್ಯ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಬೂತ್ ಮಟ್ಟದ ಏಜೆಂಟ್‌ಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.ಈ ವೇಳೆ ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ನಗರಸಭೆ ಮಾಜಿ ಅಧ್ಯಕ್ಷ ನಾಗೇಶ್, ನಾಗಮ್ಮ, ಮಾಜಿ ಸದಸ್ಯರಾದ ಮಧುಶ್ರೀ, ಪದ್ಮಾವತಿ, ಶಿವರತ್ನ, ಜಯಶೀಲಮ್ಮ, ಜಾ.ದಳ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸಾತನೂರು ಜಯರಾಮ್, ನವೀನ್ ಕುಮಾರ್, ಬೋರೇಗೌಡ ಮತ್ತಿತರರಿದ್ದರು.