ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ₹7,000 ಕೋಟಿ

KannadaprabhaNewsNetwork |  
Published : Mar 07, 2026, 03:15 AM ISTUpdated : Mar 07, 2026, 07:31 AM IST
Karnataka Budget 2026

ಸಾರಾಂಶ

ರಾಜ್ಯದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುವ, ರಾಜ್ಯದ ಅಭಿವೃದ್ಧಿಯ ಎಂಜಿನ್ ಆಗಿರುವ ಸಿಲಿಕಾನ್ ಸಿಟಿ, ಉದ್ಯಾನ ನಗರಿ ಬೆಂಗಳೂರು ನಗರದ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಭರಪೂರ ಯೋಜನೆಗಳನ್ನು ಘೋಷಿಸಲಾಗಿದೆ.

  ಬೆಂಗಳೂರು  :  ರಾಜ್ಯದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುವ, ರಾಜ್ಯದ ಅಭಿವೃದ್ಧಿಯ ಎಂಜಿನ್ ಆಗಿರುವ ಸಿಲಿಕಾನ್ ಸಿಟಿ, ಉದ್ಯಾನ ನಗರಿ ಬೆಂಗಳೂರು ನಗರದ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಭರಪೂರ ಯೋಜನೆಗಳನ್ನು ಘೋಷಿಸಲಾಗಿದೆ.

ಐದು ಪಾಲಿಕೆಗಳಿಗೆ ರಾಜ್ಯ ಸರ್ಕಾರದಿಂದ ಬರೋಬ್ಬರಿ 7,000 ಕೋಟಿ ರು. ಅನುದಾನ ನೀಡಲಾಗುತ್ತಿದೆ. ಹಾಲಿ 96 ಕಿ.ಮೀ ಉದ್ದದ ಮೆಟ್ರೋ ಮಾರ್ಗವನ್ನು ಮುಂದಿನ 1 ವರ್ಷದಲ್ಲಿ 137 ಕಿ.ಮೀಗೆ ಹಿಗ್ಗಿಸುವ ಗುರಿ ಹೊಂದಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಲೇಔಟ್‌ಗಳು, ಪ್ರದೇಶಗಳಿಗೆ 6 ಟಿಎಂಸಿ ನೀರು ಪೂರೈಸಲು 6,939 ಕೋಟಿ ರು. ವೆಚ್ಚದಲ್ಲಿ ಕಾವೇರಿ 6ನೇ ಹಂತದ ಯೋಜನೆ ಅನುಷ್ಠಾನಗೊಳಿಸುವ ಗುರಿ ಇದೆ.

2,250 ಕೋಟಿ ರು. ವೆಚ್ಚದಲ್ಲಿ ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಸುರಂಗ ಮಾರ್ಗ ಹಾಗೂ ಮೇಲು ಸೇತುವೆ ನಿರ್ಮಾಣ, ನಗರದೊಳಗಿನ ದಟ್ಟಣೆ ಕಡಿಮೆ ಮಾಡಲು ನೆಲಮಂಗಲ-ತಾವರೆಕೆರೆ-ಬಿಡದಿ ಮಧ್ಯಂತರ ವರ್ತುಲ ರಸ್ತೆ ನಿರ್ಮಾಣ, 73 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಭಾಗ-1ರ ಅನುಷ್ಠಾನ ಹಾಗೂ 2027ರ ಅಂತ್ಯದೊಳಗೆ ಪರಿಷ್ಕೃತ ಮಾಸ್ಟರ್ ಪ್ಲಾನ್-2041 ಜಾರಿಗೊಳಿಸಲಾಗುತ್ತಿದೆ.

40,000 ಕೋಟಿ ರು. ವೆಚ್ಚದಲ್ಲಿ 40 ಕಿ.ಮೀ ಉದ್ದದ ಪೂರ್ವ-ಪಶ್ಚಿಮ ಕಾರಿಡಾರ್ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ಮೊದಲನೇ ಹಂತದಲ್ಲಿ 17,780 ಕೋಟಿ ರು. ವೆಚ್ಚದಲ್ಲಿ 17 ಕಿ.ಮಿ. ಉದ್ದದ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆ ಅನುಷ್ಠಾನ, 1,225 ಕೋಟಿ ರು. ವೆಚ್ಚದಲ್ಲಿ ವಾರ್ಡ್ ರಸ್ತೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ, 1,700 ಕೋಟಿ ರು. ವೆಚ್ಚದಲ್ಲಿ 158 ಕಿ.ಮೀ. ಉದ್ದದ ರಸ್ತೆಗಳ ವೈಟ್ ಟಾಪಿಂಗ್‌, 1,936 ಕೋಟಿ ರು. ವೆಚ್ಚದಲ್ಲಿ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಅಭಿವೃದ್ಧಿ, 450 ಕೋಟಿ ರು. ವೆಚ್ಚದಲ್ಲಿ ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗೆ ಹೊರ ವರ್ತುಲ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತದೆ.ನಗರದ ಸುಂದರೀಕರಣ, ಪಾದಚಾರಿ ಮಾರ್ಗ ಅಭಿವೃದ್ಧಿ, ರಾಜಕಾಲುವೆಗಳ ಅಭಿವೃದ್ಧಿ, ಸ್ಕೈವಾಕ್‌ಗಳ ನಿರ್ಮಾಣ ಸೇರಿ ಹಲವು ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸುವ ಗುರಿ ಹೊಂದಲಾಗಿದೆ.

ತಮ್ಮ ಭಾಷಣದಲ್ಲಿ ಬೆಂಗಳೂರು ನಗರಕ್ಕೆ ನೀಡಿರುವ ಕೊಡುಗೆಗಳನ್ನು ವಿಶೇಷವಾಗಿ ಉಲ್ಲೇಖಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರು ಕೇವಲ ಒಂದು ನಗರವಷ್ಟೇ ಅಲ್ಲ. ಇದು ಅಸಂಖ್ಯಾತ ಕನಸುಗಳ ನೆಲೆಬೀಡು. ನಾಡಪ್ರಭು ಕೆಂಪೇಗೌಡರ ಆಡಳಿತದಿಂದ ಹಿಡಿದು ಇಂದಿನ ಸ್ಟಾರ್ಟ್ಅಪ್ ಕ್ರಾಂತಿಯವರೆಗೆ ಈ ನಗರವು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಬೆಂಗಳೂರನ್ನು ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರವನ್ನಾಗಿ ಮಾಡುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದಿದ್ದಾರೆ.

41 ಕಿ.ಮೀ ಮೆಟ್ರೋ ಮಾರ್ಗ ಮುಗಿಸುವ ಗುರಿ

2026 - 27ರ ಹಣಕಾಸು ವರ್ಷದಲ್ಲಿ ಒಟ್ಟು 41 ಕಿ.ಮೀ. ಹೆಚ್ಚುವರಿ ಮೆಟ್ರೋ ಮಾರ್ಗಗಳನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ. ಇದರಿಂದ ದಿನಕ್ಕೆ 15 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಅಂದರೆ ಹಾಲಿ ಇರುವ 96 ಕಿ.ಮೀ ಮಾರ್ಗವು 137 ಕಿ.ಮೀಗೆ ಹಿಗ್ಗಲಿದೆ.

ಹೊರ ವರ್ತುಲ ರಸ್ತೆಯ ಮೆಟ್ರೋ ವಯಾಡಕ್ಟ್ ಉದ್ದಕ್ಕೂ 9 ಕಿ.ಮೀ ಪಾದಚಾರಿ ನಡಿಗೆ ಮಾರ್ಗವನ್ನು 160 ಕೋಟಿ ರು. ವೆಚ್ಚದಲ್ಲಿ ‘ಹೊರ ವರ್ತುಲ ರಸ್ತೆಯ ಕಂಪನಿಗಳ ಸಂಘ’ದ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾಗುತ್ತದೆ.

ಕಾವೇರಿ 6ನೇ ಹಂತದ ಯೋಜನೆ ರಡಿ

ನಗರದ ಸುಮಾರು 1.40 ಕೋಟಿ ಜನರಿಗೆ ಕುಡಿಯುವ ನೀರು ಪೂರೈಸಲು ಕಾವೇರಿ ನೀರು ಸರಬರಾಜು ಯೋಜನೆಯ 1 ರಿಂದ 5ನೇ ಹಂತಗಳ ಮೂಲಕ ಒಟ್ಟು 2,225 ಎಂಎಲ್‌ಡಿ ನೀರು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜೈಕಾ ನೆರವಿನೊಂದಿಗೆ 6,939 ಕೋಟಿ ರು. ವೆಚ್ಚದಲ್ಲಿ ಹೆಚ್ಚುವರಿಯಾಗಿ 6 ಟಿ.ಎಂ.ಸಿ. ನೀರನ್ನು ಪೂರೈಸಲು ಕಾವೇರಿ 6ನೇ ಹಂತದ ಯೋಜನೆಯನ್ನು ರೂಪಿಸಲಾಗಿದೆ.

4 ವರ್ಷಗಳಲ್ಲಿ 73 ಕಿ.ಮೀ ಬಿಸಿನೆಸ್ ಕಾರಿಡಾರ್

ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ 73 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಭಾಗ-1 ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ರೈತರಿಗೆ ಸಮರೋಪಾದಿಯಲ್ಲಿ ಪರಿಹಾರ ವಿತರಿಸಲಾಗುತ್ತಿದೆ. ಈ ರಸ್ತೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

40 ಕಿ.ಮೀ ಸುರಂಗ ಮಾರ್ಗ

ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗಿನ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆ ಹಾಗೂ ಕೆ.ಆರ್. ಪುರದಿಂದ ಮೈಸೂರು ರಸ್ತೆಯವರೆಗಿನ ಪೂರ್ವ-ಪಶ್ಚಿಮ ಕಾರಿಡಾರ್ ಯೋಜನೆಯ ಒಟ್ಟಾರೆ 40 ಕಿ.ಮಿ. ಉದ್ದದ ಸುರಂಗ ಮಾರ್ಗವನ್ನು 40,000 ಕೋಟಿ ರು. ಅಂದಾಜು ಮೊತ್ತದಲ್ಲಿ ನಿರ್ಮಿಸಲಾಗುತ್ತದೆ. ನಿರ್ಮಾಣ, ಮಾಲೀಕತ್ವ, ನಿರ್ವಹಣೆ, ವರ್ಗಾವಣೆ (ಬಿಒಒಟಿ) ಮಾದರಿಯಲ್ಲಿ ಯೋಜನೆ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. ಮೊದಲನೇ ಹಂತದಲ್ಲಿ 17 ಕಿ.ಮಿ. ಉದ್ದದ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆಯನ್ನು 17,780 ಕೋಟಿ ರು. ಮೊತ್ತದಲ್ಲಿ ನಿರ್ವಹಿಸಲು ಟೆಂಡರ್ ಕರೆಯಲಾಗಿದೆ.- ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಸುರಂಗ ಮಾರ್ಗ ಹಾಗೂ ಮೇಲು ಸೇತುವೆ ರಸ್ತೆಯನ್ನು 2,250 ಕೋಟಿ ರು. ವೆಚ್ಚದಲ್ಲಿ ಬಿಡಿಎ ಮೂಲಕ ನಿರ್ಮಾಣ.- ಬೆಂಗಳೂರು ನಗರದ ದಟ್ಟಣೆಯನ್ನು ಕಡಿಮೆ ಮಾಡಲು ನೆಲಮಂಗಲ-ತಾವರೆಕೆರೆ-ಬಿಡದಿ ಮಧ್ಯಂತರ ವರ್ತುಲ ರಸ್ತೆಯನ್ನು ಬಿಎಂಆರ್‌ಡಿಎ ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳ ಆರ್ಥಿಕ ಸಂಪನ್ಮೂಲಗಳಿಂದ ನಿರ್ಮಾಣ.

ಮಾಸ್ಟರ್ ಪ್ಲಾನ್-2041ರ ಯೋಜನೆಗಳು- 2027ರ ಅಂತ್ಯದೊಳಗೆ ಬೆಂಗಳೂರಿಗೆ ಹೊಸ ಪರಿಷ್ಕೃತ ಮಾಸ್ಟರ್ ಪ್ಲಾನ್-2041 ಅನ್ನು ಜಾರಿಗೊಳಿಸಲಾಗುತ್ತದೆ. ಇದರ ಜೊತೆಗೆ ಸಮಗ್ರ ಮೊಬಿಲಿಟಿ ಯೋಜನೆಯನ್ನು (ಸಿಎಂಪಿ) ಮುಂದಿನ ಆರು ತಿಂಗಳ ಒಳಗೆ ರೂಪಿಸಲಾಗುವುದು.

- ಬೆಂಗಳೂರು ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 7,000 ಕೋಟಿ ರು. ಅನುದಾನ.- ವಾರ್ಡ್ ರಸ್ತೆ, ಮೂಲಸೌಕರ್ಯ ಅಭಿವೃದ್ಧಿಗಾಗಿ 5 ಪಾಲಿಕೆಗಳಿಗೆ 1,255 ಕೋಟಿ ರು. - 158 ಕಿ.ಮೀ. ಉದ್ದದ ರಸ್ತೆ ವೈಟ್ ಟಾಪಿಂಗ್‌ಗೆ 1,700 ಕೋಟಿ ರು. - ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಅಭಿವೃದ್ಧಿಗೆ 1,936 ಕೋಟಿ ರು.- 450 ಕೋಟಿ ರು. ವೆಚ್ಚದಲ್ಲಿ ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗೆ ಹೊರ ವರ್ತುಲ ರಸ್ತೆ ಅಭಿವೃದ್ಧಿ.

- ರಾಜಕಾಲುವೆಗಳ ಮೇಲ್ದರ್ಜೆಗೇರಿಸಲು ಮತ್ತು ಕೆರೆಗಳ ಅಭಿವೃದ್ಧಿಗೆ 273 ಕೋಟಿ ರು. - ಮುಂದಿನ 3 ವರ್ಷಗಳಲ್ಲಿ 3,000 ಕೋಟಿ ರು. ವೆಚ್ಚದಲ್ಲಿ 450 ಕಿ.ಮೀ ಗೂ ಹೆಚ್ಚು ಉದ್ದದ ರಸ್ತೆಗಳು ವೈಟ್ ಟಾಪಿಂಗ್.- ಪಾಲಿಕೆಗಳ ಸ್ವಂತ ಸಂಪನ್ಮೂಲದಿಂದ ಮುಂದಿನ 3 ವರ್ಷಗಳಲ್ಲಿ 175 ಜಂಕ್ಷನ್‌ಗಳ ಸುಂದರೀಕರಣ. - ನಡಿಗೆದಾರರ ಉತ್ತೇಜಿಸಲು 500 ಕಿ.ಮೀ. ಉದ್ದದ ಪಾದಚಾರಿ ಮಾರ್ಗ ಮೇಲ್ದರ್ಜೆಗೆ.

- ನಗರದ ವಿವಿಧೆಡೆ 100 ಸ್ಕೈ ವಾಕ್‌ಗಳ ನಿರ್ಮಾಣ. - 2,000 ಕೋಟಿ ರು. ವಿಶ್ವಬ್ಯಾಂಕ್ ನೆರವಿನ ರಾಜಕಾಲುವೆಗಳ ಅಭಿವೃದ್ಧಿ.

- ಪಾಲಿಕೆಗಳು ತಮ್ಮ ಬ್ಯಾಲೆನ್ಸ್ ಶೀಟ್ ಆಧಾರದಲ್ಲಿ ʻಮುನಿಸಿಪಲ್ ಬಾಂಡ್’ಗಳಿಂದ ಸಂಪನ್ಮೂಲ ಕ್ರೋಢೀಕರಣ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಿಎಂ ಜತೆ ಗುತ್ತಿಗೆದಾರರ ಸಭೆ ಏರ್ಪಾಡು: ಡಿಸಿಎಂ
ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ