ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಬಣ ರಾಜಕಾರಣ ತೀವ್ರ?

KannadaprabhaNewsNetwork | Updated : Jan 18 2024, 07:36 AM IST

ಸಾರಾಂಶ

ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಬಣಗಳ ಸದ್ದು ಜೋರಾಗಿದೆ. 3 ಡಿಸಿಎಂಗಳನ್ನು ಮಾಡಬೇಕು ಎಂದು 7 ಸಚಿವರು ರಣದೀಪ್‌ ಸುರ್ಜೇವಾಲಾ ಅವರ ಮೇಲೆ ಒತ್ತಡ ಹೇರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಮೂರು ಹೊಸ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಬೇಕು ಎಂಬ ಆಗ್ರಹ ಕಾಂಗ್ರೆಸ್‌ನಲ್ಲಿ ಕ್ರಮೇಣ ಬಲಗೊಳ್ಳುತ್ತಿದ್ದು, ಸರ್ಕಾರದಲ್ಲಿ ಸಂಪುಟ ದರ್ಜೆ ಹೊಂದಿರುವ ಎಂಟು ಮಂದಿಯ ಬಣವೊಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಮೇಲೆ ಒತ್ತಡ ನಿರ್ಮಾಣ ಮಾಡಿದೆ.

ಲೋಕಸಭೆ ಚುನಾ‍ವಣೆ ಸಿದ್ಧತೆ ಹಿನ್ನೆಲೆಯಲ್ಲಿ ಸೋಮವಾರ ನಗರಕ್ಕೆ ಆಗಮಿಸಿದ್ದ ಸುರ್ಜೇವಾಲಾ ಅವರನ್ನು ಏಳು ಮಂದಿ ಸಚಿವರು ಹಾಗೂ ಸಂಪುಟ ದರ್ಜೆ ಹೊಂದಿರುವ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರು ಗುಂಪುಗೂಡಿ ಭೇಟಿ ಮಾಡಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಅಗತ್ಯತೆ ಕುರಿತು ಸುರ್ಜೇವಾಲಾ ಅವರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ನಡೆಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಉಪ ಮುಖ್ಯಮಂತ್ರಿ ಹುದ್ದೆ ಕೂಗು ಹುಟ್ಟುಹಾಕಿರುವ ಸಚಿವರಾದ ಸತೀಶ್‌ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ, ಡಾ.ಎಚ್‌.ಸಿ.ಮಹದೇವಪ್ಪ ಅವರೊಂದಿಗೆ ಮತ್ತೆ ಮೂವರು ಸಚಿವರಾದ ದಿನೇಶ್‌ ಗುಂಡೂರಾವ್‌ , ಕೆ.ಎಚ್‌.ಮುನಿಯಪ್ಪ, ಎಂ.ಬಿ.ಪಾಟೀಲ್‌ ಹಾಗೂ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಈ ಬೆಳವಣಿಗೆಯಿಂದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತುಸು ನೇಪಥ್ಯದಲ್ಲಿದ್ದ ಕಾಂಗ್ರೆಸ್‌ನ ಬಣ ರಾಜಕಾರಣ ಡಿಸಿಎಂ ಹುದ್ದೆ ಆಗ್ರಹದೊಂದಿಗೆ ಮತ್ತೆ ಮುನ್ನೆಲೆಗೆ ಬಂದಂತಾಗಿದೆ. ಮೂಲಗಳ ಪ್ರಕಾರ ಬಿಜೆಪಿಯು ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಮುದಾಯಗಳನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸಬೇಕು. 

ಹೀಗೆ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗುವ ಸಾಧ್ಯತೆಯಿದೆ. ರಾಮಮಂದಿರ ವಿಚಾರ ಮುಂದಿಟ್ಟುಕೊಂಡು ನಾಗಾಲೋಟದಲ್ಲಿರುವ ಬಿಜೆಪಿಗೆ ರಾಜ್ಯದಲ್ಲಿ ತಡೆಯೊಡ್ಡಬೇಕಾದರೆ ದಲಿತ, ಅಲ್ಪಸಂಖ್ಯಾತ ಹಾಗೂ ಲಿಂಗಾಯತ ಸಮುದಾಯಗಳಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು. ಈಗಾಗಲೇ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿಯಾಗಿರುವುದರಿಂದ ಎಲ್ಲ ನಾಲ್ಕು ಪ್ರಮುಖ ಸಮುದಾಯಗಳಿಗೂ ಆದ್ಯತೆ ನೀಡಿದಂತಾಗುತ್ತದೆ. 

ಇನ್ನು ಹಿಂದುಳಿದ ಸಮುದಾಯದಿಂದ ಖುದ್ದು ಮುಖ್ಯಮಂತ್ರಿಯವರೇ ಇದ್ದಾರೆ. ಹೀಗೆ ಸಿಎಂ ಹಾಗೂ ನಾಲ್ಕು ಡಿಸಿಎಂ ಹುದ್ದೆಗಳಿದ್ದರೆ ಎಲ್ಲ ಸಮುದಾಯಗಳ ಪರ ಕಾಂಗ್ರೆಸ್‌ ಇದೆ ಎಂಬ ಸಂದೇಶ ರವಾನೆಯಾಗುತ್ತದೆ ಎಂದು ವಾದ ಮಂಡಿಸಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ಬೇಡಿಕೆ ಆಲಿಸಿದ ಸುರ್ಜೇವಾಲಾ: ಸಾಮಾನ್ಯವಾಗಿ ಸುರ್ಜೇವಾಲಾ ಅವರು ಇಂತಹ ಬೇಡಿಕೆಗಳಿರುವ ಸಂದರ್ಭದಲ್ಲಿ ಒಬ್ಬೊಬ್ಬರೊಂದಿಗೆ ನೇರಾನೇರ ಮಾತುಕತೆ ನಡೆಸುತ್ತಾರೆ. ಅದೇ ರೀತಿ ಈ ಬಾರಿಯೂ ಒಬ್ಬೊಬ್ಬರೇ ಸಚಿವರು ಸುರ್ಜೇವಾಲಾ ಭೇಟಿಗೆ ಆಗಮಿಸಿದ್ದಾರೆ. ಆದರೆ, ಮೊದಲೇ ಆಗಮಿಸಿದ್ದ ಸಚಿವರು ಸ್ಥಳದಿಂದ ತೆರಳಿಲ್ಲ. ಹೀಗೆ ಸಚಿವರ ಗುಂಪಿನೊಂದಿಗೆ ಮಾತುಕತೆ ನಡೆಸುವ ಸ್ಥಿತಿಯನ್ನು ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಸುರ್ಜೇವಾಲಾ ಅವರು ಎದುರಿಸಬೇಕಾಯಿತು ಎಂದು ಮೂಲಗಳು ಹೇಳಿವೆ.

ಗುಂಪು ಕಟ್ಟಿಕೊಂಡು ಭೇಟಿಯಾಗಿದ್ದು ಏಕೆ?
ಲೋಕಸಭಾ ಚುನಾವಣೆ ಸಾಮೀಪ್ಯದಲ್ಲಿ ಉಪ ಮುಖ್ಯಮಂತ್ರಿಯಂತಹ ಕೂಗನ್ನು ವೈಯಕ್ತಿಕ ಮಟ್ಟದಲ್ಲಿ ಹುಟ್ಟುಹಾಕಿದರೆ ಕಾಂಗ್ರೆಸ್‌ ಹೈಕಮಾಂಡ್‌ ಅದಕ್ಕೆ ಕಿವಿಗೊಡುವ ಸಾಧ್ಯತೆ ಕಡಿಮೆ. ಒಬ್ಬರೋ ಅಥವಾ ಇಬ್ಬರೋ ಸಚಿವರು ಇಂತಹ ಕೂಗು ಹಾಕಿದರೆ ಅವರನ್ನು ಕರೆಸಿ ಮನವೊಲಿಸುವ ಅಥವಾ ಸದ್ಯಕ್ಕೆ ಇಂತಹ ಬೇಡಿಕೆಯಿಂದ ವಿಮುಖರಾಗುವಂತೆ ತಾಕೀತು ಮಾಡುವ ಸಾಧ್ಯತೆ ಇರುತ್ತದೆ.

ಇಂತಹ ಅಪಾಯ ನಿರ್ಮಾಣವಾಗಬಾರದು ಎಂಬ ಕಾರಣಕ್ಕೆ ಪ್ರಭಾವಿ ಸಚಿವರು ಸೇರಿದಂತೆ ಸಂಪುಟ ದರ್ಜೆಯ ಎಂಟು ಮಂದಿ ಒಟ್ಟೊಟ್ಟಿಗೆ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದರು ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲಿದೆ.

ವೇಣುಗೋಪಾಲ್‌ ಜತೆ ಡಿಕೆಶಿ ಮಾತುಕತೆಎಂಟು ಮಂದಿ ಪ್ರಭಾವಿಗಳು ಒಟ್ಟುಗೂಡಿ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರ ಮೇಲೆ ಡಿಸಿಎಂ ಪದವಿಗೆ ಒತ್ತಡ ಹಾಕುವ ಬೆಳವಣಿಗೆಗೂ ಮುನ್ನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೈಕಮಾಂಡ್‌ನ ಪ್ರಭಾವಿ ನಾಯಕ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸುಮಾರು ಮಕ್ಕಾಲು ತಾಸು ಮುಖಾಮುಖಿ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ.

ಸೋಮವಾರ ಬೆಳಗ್ಗೆ ಕೇರಳಕ್ಕೆ ತೆರಳುವ ಮುನ್ನ ಶಿವಕುಮಾರ್‌ ಅವರು ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ದೆಹಲಿಗೆ ಹೊರಟಿದ್ದ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಕೆಲ ಸಚಿವರು ಡಿಸಿಎಂ ಹುದ್ದೆ ಸೃಷ್ಟಿ ಬೇಡಿಕೆ ಹುಟ್ಟುಹಾಕುತ್ತಿರುವುದರ ಹಿನ್ನೆಲೆಯೂ ಸೇರಿದಂತೆ ರಾಜ್ಯ ರಾಜಕಾರಣದ ಬಗ್ಗೆ ವೇಣುಗೋಪಾಲ್‌ ಅವರಿಗೆ ಶಿವಕುಮಾರ್‌ ಮಾಹಿತಿ ನೀಡಿದರು ಎನ್ನಲಾಗಿದೆ.

ಈ ಗುಂಪಿನ ವಾದವೇನು?
ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿರುವಂತೆ ಇಲ್ಲೂ ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕು
ಬಿಜೆಪಿಗೆ ಬ್ರೇಕ್‌ ಹಾಕಲು ದಲಿತ, ಅಲ್ಪಸಂಖ್ಯಾತ, ಲಿಂಗಾಯತರಿಗೆ ಪಟ್ಟ ಕಟ್ಟಬೇಕು
ಡಿಕೆಶಿ ಡಿಸಿಎಂ ಆಗಿದ್ದಾರೆ. ಇನ್ನೂ ಮೂವರಿದ್ದರೆ ಪ್ರಮುಖ ಸಮುದಾಯಗಳಿಗೆ ಆದ್ಯತೆ ಸಿಗುತ್ತೆ
ಎಲ್ಲ ಸಮುದಾಯಗಳ ಪರ ಕಾಂಗ್ರೆಸ್‌ ಇದೆ ಎಂಬ ಸಂದೇಶ ರವಾನೆಯಾಗುತ್ತದೆ

ಟೀಂನಲ್ಲಿ ಯಾರು?
ಸತೀಶ್‌ ಜಾರಕಿಹೊಳಿ, ಡಾ.ಜಿ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ, ಡಾ.ಎಚ್‌.ಸಿ.ಮಹದೇವಪ್ಪ, ದಿನೇಶ್‌ ಗುಂಡೂರಾವ್‌ , ಕೆ.ಎಚ್‌.ಮುನಿಯಪ್ಪ, ಎಂ.ಬಿ.ಪಾಟೀಲ್‌ ಹಾಗೂ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ.

11ರಂದು ದಿಲ್ಲಿಗೆ ಬರಲು 28 ಸಚಿವರಿಗೆ ಬುಲಾವ್‌
ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ಸಂಯೋಜಕರಾಗಿ ನೇಮಕ ಮಾಡಿರುವ 28 ಮಂದಿ ಸಚಿವರಿಗೆ ಜ.11ರಂದು ದೆಹಲಿಗೆ ಆಗಮಿಸುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಬುಲಾವ್‌ ನೀಡಿದೆ. ದೆಹಲಿಯಲ್ಲಿ ಅಂದು ಮಧ್ಯಾಹ್ನ 3ಕ್ಕೆ ಲೋಕಸಭಾ ಚುನಾವಣಾ ಸಿದ್ಧತೆ ಕುರಿತಂತೆ ಮಹತ್ವದ ಸಭೆ ನಡೆಯಲಿದೆ.

ಲೋಕಸಭೆ ಚುನಾವಣೆ ಸಿದ್ಧತೆಯ ಅಂಗವಾಗಿ ಪ್ರತಿ ಲೋಕಸಭಾ ಕ್ಷೇತ್ರಗಳಿಗೂ ಸಂಯೋಜಕರನ್ನು (ಉಸ್ತುವಾರಿಗಳನ್ನು) ನೇಮಕ ಮಾಡಿದೆ. ಈ ರೀತಿ 28 ಕ್ಷೇತ್ರಗಳ ಸಂಯೋಜಕರಾಗಿ ನೇಮಕವಾಗಿರುವ ಸಚಿವರು ದೆಹಲಿಗೆ ತೆರಳಲಿದ್ದಾರೆ.ಇದಕ್ಕೂ ಮೊದಲು ಜ.10ರಂದು ಬುಧವಾರ ಸಚಿವರೊಂದಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಈ ವೇಳೆ ಚರ್ಚೆಯಾಗಿರುವ ಅಂಶಗಳನ್ನು ಮುಂದಿಟ್ಟುಕೊಂಡು ಹೈಕಮಾಂಡ್‌ ಮಟ್ಟದಲ್ಲಿ ಮತ್ತೊಮ್ಮೆ ಸಭೆ ನಡೆಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿಗೆ ತೆರಳಲಿರುವ ಉಸ್ತುವಾರಿಗಳ ಪಟ್ಟಿ:
ಚಿಕ್ಕೋಡಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಚ್‌.ಕೆ.ಪಾಟೀಲ್‌, ಬೆಳಗಾವಿ ಕ್ಷೇತ್ರದ ಸಂಯೋಜಕರಾದ ಸತೀಶ್‌ ಜಾರಕಿಹೊಳಿ, ಬಾಗಲಕೋಟೆಯ ಆರ್‌.ಬಿ.ತಿಮ್ಮಾಪುರ, ವಿಜಯಪುರದ ಎಂ.ಬಿ.ಪಾಟೀಲ್‌, ಕಲಬುರಗಿಯಿಂದ ಪ್ರಿಯಾಂಕ್‌ ಖರ್ಗೆ, ರಾಯಚೂರು ಕ್ಷೇತ್ರದ ಪರವಾಗಿ ಎನ್‌.ಎಸ್‌.ಬೋಸರಾಜು, ಬೀದರ್‌ನಿಂದ ಈಶ್ವರ್‌ ಖಂಡ್ರೆ, ಕೊಪ್ಪಳ- ಶಿವರಾಜ ತಂಗಡಗಿ, ಬಳ್ಳಾರಿ- ಬಿ.ನಾಗೇಂದ್ರ, ಹಾವೇರಿ- ಶಿವಾನಂದ ಪಾಟೀಲ್‌, 

ಧಾರವಾಡ- ಸಂತೋಷ್‌ ಲಾಡ್‌, ಉತ್ತರ ಕನ್ನಡ- ಮಾಂಕಾಳ ವೈದ್ಯ, ದಾವಣಗೆರೆ- ಎಸ್‌.ಎಸ್‌.ಮಲ್ಲಿಕಾರ್ಜುನ, ಶಿವಮೊಗ್ಗ- ಮಧು ಬಂಗಾರಪ್ಪ, ಉಡುಪಿ, ಚಿಕ್ಕಮಗಳೂರು- ಕೆ.ಜೆ.ಜಾರ್ಜ್‌, ಹಾಸನ- ಕೆ.ಎನ್‌.ರಾಜಣ್ಣ, ದಕ್ಷಿಣ ಕನ್ನಡ- ದಿನೇಶ್‌ ಗುಂಡೂರಾವ್‌, ಚಿತ್ರದುರ್ಗ - ಡಿ.ಸುಧಾಕರ್‌, ತುಮಕೂರು- ಜಿ.ಪರಮೇಶ್ವರ, ಮಂಡ್ಯ- ಚೆಲುವರಾಯಸ್ವಾಮಿ, ಮೈಸೂರು- ಕೆ.ವೆಂಕಟೇಶ್‌, ಚಾಮರಾಜನಗರ - ಎಚ್‌.ಸಿ.ಮಹದೇವಪ್ಪ, 

ಬೆಂಗಳೂರು ಗ್ರಾಮಾಂತರ- ಬಿ.ಎಸ್‌.ಸುರೇಶ್‌, ಬೆಂಗಳೂರು ಉತ್ತರ- ಕೃಷ್ಣ ಬೈರೇಗೌಡ, ಬೆಂಗಳೂರು ಕೇಂದ್ರ- ಜಮೀರ್‌ ಅಹ್ಮದ್‌ ಖಾನ್‌, ಬೆಂಗಳೂರು ದಕ್ಷಿಣ- ರಾಮಲಿಂಗಾರೆಡ್ಡಿ, ಚಿಕ್ಕಬಳ್ಳಾಪುರ- ಕೆ.ಎಚ್‌.ಮುನಿಯಪ್ಪ, ಕೋಲಾರ ಕ್ಷೇತ್ರದ ಪರವಾಗಿ ಡಾ.ಎಂ.ಸಿ.ಸುಧಾಕರ್‌ ಅವರು ಹೈಕಮಾಂಡ್‌ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Share this article