ಬೆಂಗಳೂರು : ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶಿಗರ ವಿರುದ್ಧ ಹೋರಾಟ ಆರಂಭಿಸಿ ರಾಜ್ಯ ಬಿಜೆಪಿ ಬಂಡಾಯ ಮುಖಂಡರ ಬಣವು ತೆರೆದಿರುವ ವಾರ್‌ರೂಮ್‌ಗೆ ಕರೆಗಳ ಮಹಾಪೂರವೇ ಹರಿದು ಬಂದಿದೆ.
ಉಗ್ರ ಚಟುವಟಿಕೆಗೆ ಬೆಂಬಲ ನೀಡುವವರ ಬಗ್ಗೆ ತಿಳಿಸಲು ಸೂಚಿಸಿ ನೀಡಲಾಗಿದ್ದ 9035675734 ಮತ್ತು 8217686764 ಸಂಖ್ಯೆಗೆ ನೂರಾರು ಮಾಹಿತಿಗಳು ಬಂದಿದೆ. 900ಕ್ಕೂ ಹೆಚ್ಚು ದೂರುಗಳು ವಾರ್ ರೂಮ್‌ಗೆ ದಾಖಲಾಗಿದ್ದು, ಬೆಂಗಳೂರಿನ ಮಹಾದೇವಪುರ ಕ್ಷೇತ್ರದಲ್ಲೇ ಅತಿ ಹೆಚ್ಚು ದೂರುಗಳು ಬರುವ ಮೂಲಕ ಮೊದಲ ಸ್ಥಾನದಲ್ಲಿದೆ. ವಿಶೇಷವೆಂದರೆ, ವಾರ್ ರೂಮ್ ಸ್ಥಾಪಿಸಲು ಸಲಹೆ ಕೊಟ್ಟಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಪತ್ನಿ ಮಂಜುಳಾ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲೇ ಹೆಚ್ಚಿನ ದೂರುಗಳು ದಾಖಲಾಗಿವೆ.
ಮಹಾದೇವಪುರ ಕ್ಷೇತ್ರದ ನಂತರ ಚಿಕ್ಕಮಗಳೂರು ಜಿಲ್ಲೆಯಿಂದ ಹೆಚ್ಚಿನ ದೂರುಗಳು ಬಂದಿವೆ. ಮೂರನೇ ಸ್ಥಾನದಲ್ಲಿ ಕೊಡಗು ಇದೆ. ತುಮಕೂರು, ಮಂಡ್ಯ, ಬಾಗಲಕೋಟೆ ಮತ್ತು ಮಂಗಳೂರು ಹೀಗೆ ವಿವಿಧ ಜಿಲ್ಲೆಗಳಿಂದ ಸಾಕಷ್ಟು ದೂರು ಬಂದಿವೆ. ಬೆಂಗಳೂರಲ್ಲಿ ಹೆಚ್ಚು ಅಕ್ರಮವಾಗಿ ವಲಸಿಗರು ನೆಲೆಸಿದ್ದಾರೆ. ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ. ಬಂದಿರುವ ದೂರುಗಳ ಪೈಕಿ ಅಕ್ರಮ ವಲಸಿಗ ಮಹಿಳೆಯರು ಅಪಾರ್ಟ್‌ಮೆಂಟ್‌ಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂಬ ಕುರಿತ ದೂರೇ ಸಾಕಷ್ಟು ಸಂಖ್ಯೆಯಲ್ಲಿದೆ. ಪಾಕಿಸ್ತಾನ ಮಹಿಳೆಯರಿಗಿಂತ ಹೆಚ್ಚಾಗಿ ಬಾಂಗ್ಲಾದೇಶಿಯ ಮಹಿಳೆಯರು ಹೆಚ್ಚಿದ್ದಾರೆ ಎಂದು ಹೇಳಲಾಗಿದೆ.
ಚಿಕ್ಕಮಗಳೂರು, ಕೊಡಗಿನಲ್ಲಿ ಕಾಫಿ ತೋಟದ ಕೆಲಸದಲ್ಲಿದ್ದು, ಮಂಗಳೂರು, ಮಂಡ್ಯ, ಬಾಗಲಕೋಟೆಯಂತಹ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ವಲಸಿಗರು ತೊಡಗಿದ್ದಾರೆ. ಹೀಗೆ ವಿವಿಧೆಡೆ ದಿನಗೂಲಿ ಕೆಲಸದಲ್ಲಿದ್ದು ಅಕ್ರಮವಾಗಿ ನೆಲೆಸಿದ್ದಾರೆ. ಬೆಂಗಳೂರು ಸೇರಿ ಮಹಾನಗರದಲ್ಲಿ ಚಿಂದಿ ಆಯುವ ಕೆಲಸದಲ್ಲಿ ತೊಡಗಿರುವ ಬಗ್ಗೆಯೂ ವಾರ್ ರೂಮ್‌ಗೆ ಮಾಹಿತಿ ಲಭ್ಯವಾಗಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಲಸಿಗರ ಮಾಹಿತಿ ಪಡೆಯಲು ಒಂದು ತಿಂಗಳ ಕಾಲ ವಾರ್ ರೂಮ್ ಕಾರ್ಯನಿರ್ವಹಣೆ ಮಾಡಲಿದೆ. ಒಂದು ತಿಂಗಳ ಬಳಿಕ ವಾರ್ ರೂಮ್‌ಗೆ ಬಂದ ಮಾಹಿತಿಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಕ್ಫ್ ಆಸ್ತಿ ವಿವಾದ ಬಳಿಕ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿ ಕಳೆದ ವಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹುಟ್ಟುಹಬ್ಬದ ನೆಪದಲ್ಲಿ ಒಂದೆಡೆ ಸೇರಿದ ಬಿಜೆಪಿ ಬಂಡಾಯ ನಾಯಕರು ಸಭೆ ನಡೆಸಿದರು. ಸಭೆಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಇತರೆ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಚರ್ಚಿಸಿದ ಪ್ರಕಾರ ವಾರ್ ರೂಮ್ ಆರಂಭಿಸಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪ್ರಜೆಗಳ ಕುರಿತು ಮಾಹಿತಿ ಕ್ರೋಢೀಕರಿಸಲಾಗುತ್ತಿದೆ.