ಸಿಖ್‌ ಗಲಭೆ ಬಗ್ಗೆ ರಾಹುಲ್‌ ತಪ್ಪೊಪ್ಪಿಗೆ

KannadaprabhaNewsNetwork | Updated : May 05 2025, 04:18 AM IST

ಸಾರಾಂಶ

 ರಾಹುಲ್ ಗಾಂಧಿ, ‘ಈ ಹಿಂದೆ ನಾನು ಇಲ್ಲದಿದ್ದಾಗ ಬಹಳಷ್ಟು ತಪ್ಪು ಸಂಭವಿಸಿವೆ. ಅದರ ಹೊಣೆಯನ್ನು ನಾನು ಹೊರುವೆ’ ಎಂದು ತಪ್ಪೊಪ್ಪಿಕೊಂಡಿದ್ದಾರೆ.

 ನವದೆಹಲಿ :  ದೇಶದಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದ 1984ರ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ಪಾತ್ರದ ಕುರಿತ ತೀಕ್ಷ್ಣವಾದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ, ‘ಈ ಹಿಂದೆ ನಾನು ಇಲ್ಲದಿದ್ದಾಗ ಬಹಳಷ್ಟು ತಪ್ಪು ಸಂಭವಿಸಿವೆ. ಅದರ ಹೊಣೆಯನ್ನು ನಾನು ಹೊರುವೆ’ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಈ ಹಿಂದೆ ಮನಮೋಹನ ಸಿಂಗ್‌ ಪ್ರಧಾನಿ ಆದ ನಂತರ ಸಿಖ್‌ ಗಲಭೆ ಬಗ್ಗೆ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಿದ್ದರು. ಆದರೆ ಗಾಂಧಿ ಕುಟುಂಬದವರು ತಪ್ಪೊಪ್ಪಿಕೊಂಡಿದ್ದು ಇದೇ ಮೊದಲು ಎನ್ನಲಾಗಿದೆ.

2 ವಾರಗಳ ಹಿಂದೆ ರಾಹುಲ್‌ ಗಾಂಧಿ ಅಮೆರಿಕದ ಬ್ರೌನ್ ವಿವಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ್ದರು. ಸಂವಾದದ ವೇಳೆ ಸಿಖ್ಖರ ಪವಿತ್ರ ಸ್ವರ್ಣಮಂದಿರದಲ್ಲಿ 1984ರಲ್ಲಿ ನಡೆದ ಆಪರೇಷನ್‌ ಬ್ಲೂಸ್ಟಾರ್ ಬಗ್ಗೆ ಸಿಖ್‌ ವಿದ್ಯಾರ್ಥಿಯೊಬ್ಬರು ತೀಕ್ಷ್ಣವಾಗಿ ಪ್ರಶ್ನಿಸಿದ್ದರು. ಅದರ ವಿಡಿಯೋವನ್ನು ಈಗ ವಿವಿ ಯೂಟ್ಯೂಬಲ್ಲಿ ಹಾಕಿದೆ.

ವಿದ್ಯಾರ್ಥಿ ಪ್ರಶ್ನೆಗೆ ಉತ್ತರಿಸಿದ ರಾಹುಲ್‌, ‘ನಾನು ಇಲ್ಲದಿದ್ದಾಗ ಬಹಳಷ್ಟು ತಪ್ಪುಗಳು ಸಂಭವಿಸಿವೆ. ಆದರೆ ಕಾಂಗ್ರೆಸ್ ಪಕ್ಷವು ತನ್ನ ಇತಿಹಾಸದಲ್ಲಿ ಮಾಡಿದ ಎಲ್ಲ ತಪ್ಪುಗಳ ಹೊಣೆಯನ್ನೂ ನಾನು ಹೊರುತ್ತೇನೆ’ ಎಂದರು.

‘80ರ ದಶಕದಲ್ಲಿ ನಡೆದದ್ದು ತಪ್ಪು ಎಂದು ನಾನು ಸಾರ್ವಜನಿಕವಾಗಿ ಹೇಳಿದ್ದೇನೆ. ನಾನು ಹಲವಾರು ಬಾರಿ ಸ್ವರ್ಣಮಂದಿರಕ್ಕೂ ಹೋಗಿದ್ದೇನೆ. ಭಾರತದಲ್ಲಿ ಸಿಖ್ ಸಮುದಾಯದೊಂದಿಗೆ ನನಗೆ ಉತ್ತಮ ಸಂಬಂಧವಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿ ತಿರುಗೇಟು:

ರಾಹುಲ್‌ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ‘ಸಿಖ್‌ ವಿರೋಧಿ ದಂಗೆ ಬಗ್ಗೆ ನಿಜವಾಗಲೂ ವಿಷಾದವಿದ್ದರೆ ಅದರಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್‌ ನಾಯಕರಾದ ಜಗದೀಶ ಟೈಟ್ಲರ್‌, ಸ್ಯಾಮ್‌ ಪಿತ್ರೋಡಾ ಹಾಗೂ ಕಮಲ್‌ನಾಥ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿ’ ಎಂದು ಆಗ್ರಹಿಸಿದೆ.

ಏನಿದು ಸಿಖ್‌ ದಂಗೆ?:

1980ರ ದಶಕದಲ್ಲಿ, ಇಂದಿರಾ ಗಾಂಧಿ ಸರ್ಕಾರವು ಪಂಜಾಬ್‌ನಲ್ಲಿ ತೀವ್ರಗಾಮಿ ಧರ್ಮೋಪದೇಶಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ನೇತೃತ್ವದ ಖಲಿಸ್ತಾನಿ ಪ್ರತ್ಯೇಕತಾವಾದಿ ಚಳವಳಿಯನ್ನು ಹತ್ತಿಕ್ಕಿತ್ತು. ಆಗ ಯೋಧರು ಖಲಿಸ್ತಾನಿ ಉಗ್ರರು ಅವಿತಿದ್ದ ಸ್ವರ್ಣಮಂದಿರಕ್ಕೆ ನುಗ್ಗಿ ‘ಆಪರೇಷನ್‌ ಬ್ಲೂಸ್ಟಾರ್‌’ ಹೆಸರಿನ ಕಾರ್ಯಾಚರಣೆ ನಡೆಸಿದ್ದರು. ಇದು ಸಿಖ್ಖರಲ್ಲಿ ಆಕ್ರೋಶ ಹುಟ್ಟುಹಾಕಿತ್ತು.

ಬಳಿಕ ಇದೇ ಸಿಟ್ಟಿನಿಂದ ಇಂದಿರಾ ಗಾಂಧಿ ಅವರನ್ನು ಅವರ ಸಿಖ್ ಅಂಗರಕ್ಷಕರೇ ಗುಂಡಿಕ್ಕಿ ಕೊಂದಿದ್ದರು. ನಂತರ ಸಿಖ್‌ ವಿರೋಧಿ ದಂಗೆ ನಡೆದು 3000 ಸಿಖ್ಖರು ಕೊಲ್ಲಲ್ಪಟ್ಟರು. ಈ ಸಿಖ್‌ ಹತ್ಯಾಕಾಂಡ ನಡೆಸಿದ್ದು ಕಾಂಗ್ರೆಸ್ಸಿಗರು ಎಂಬ ಆರೋಪ ಇದೆ.

ಪಕ್ಷದಿಂದ ತಪ್ಪಿಗೆ

ಹೊಣೆ ಹೊರುವೆ

ನಾನು ಇಲ್ಲದಿದ್ದಾಗ ಬಹಳಷ್ಟು ತಪ್ಪುಗಳು ಸಂಭವಿಸಿವೆ. ಆದರೆ ಕಾಂಗ್ರೆಸ್ ಪಕ್ಷವು ತನ್ನ ಇತಿಹಾಸದಲ್ಲಿ ಮಾಡಿದ ಎಲ್ಲ ತಪ್ಪುಗಳ ಹೊಣೆಯನ್ನೂ ನಾನು ಹೊರುತ್ತೇನೆ.

- ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಗಲಭೆಯಲ್ಲಿ ಭಾಗಿ

ಆದವರ ಉಚ್ಚಾಟಿಸಿ

ಸಿಖ್‌ ವಿರೋಧಿ ದಂಗೆ ಬಗ್ಗೆ ನಿಜವಾಗಲೂ ವಿಷಾದವಿದ್ದರೆ ಅದರಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್‌ ನಾಯಕರಾದ ಜಗದೀಶ ಟೈಟ್ಲರ್‌, ಸ್ಯಾಮ್‌ ಪಿತ್ರೋಡಾ ಹಾಗೂ ಕಮಲ್‌ನಾಥ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿ.

- ಬಿಜೆಪಿ

ರಾಮ ಪೌರಾಣಿಕ ವ್ಯಕ್ತಿ: ರಾಗಾ- ರಾಮ ಕಾಲ್ಪನಿಕ ಎಂದವರಿಂದ ಬೂಟಾಟಿಕೆ: ಬಿಜೆಪಿನವದೆಹಲಿ: ಅಮೆರಿಕ ಪ್ರವಾಸದ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ರಾಮನ ಬಗ್ಗೆ ನೀಡಿದ ಹೇಳಿಕೆ ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ. ‘ಭಗವಾನ್‌ ರಾಮ ಪೌರಾಣಿಕ ವ್ಯಕ್ತಿ’ ಎಂದು ರಾಹುಲ್‌ ಕರೆದಿದ್ದಾರೆ. ಅದನ್ನು ಪ್ರಶ್ನಿಸಿರುವ ಬಿಜೆಪಿ, ‘ಈ ಹಿಂದೆ ರಾಮನನ್ನು ಕಾಲ್ಪನಿಕ ವ್ಯಕ್ತಿ ಎಂದು ಕರೆದು ರಾಮಮಂದಿರ ವಿರೋಧಿಸಿದವರು ಇಂದು ಬೂಟಾಟಿಕೆ ಪ್ರದರ್ಶಿಸುತ್ತಿದ್ದಾರೆ’ ಎಂದಿದೆ.

Share this article