ವಚನ ಸಂಶೋಧನೆಯಲ್ಲಿ ಫ.ಗು.ಹಳಕಟ್ಟಿ ಸಾಧನೆ ಅಜರಾಮರ: ಎಂ.ಬಿ.ಪಾಟೀಲ

KannadaprabhaNewsNetwork |  
Published : May 04, 2025, 01:30 AM ISTUpdated : May 04, 2025, 05:31 AM IST
Ravindra kalakshetra. 2 | Kannada Prabha

ಸಾರಾಂಶ

ಕಾಲಗರ್ಭದಲ್ಲಿ ಮಾಯವಾಗಿ ಹೋಗುತ್ತಿದ್ದ ವಚನ ಸಾಹಿತ್ಯವನ್ನು ಮತ್ತು ‌ನೂರಾರು ವಚನಕಾರರನ್ನು ಬೆಳಕಿಗೆ ತಂದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ.  

  ಬೆಂಗಳೂರು : ಕಾಲಗರ್ಭದಲ್ಲಿ ಮಾಯವಾಗಿ ಹೋಗುತ್ತಿದ್ದ ವಚನ ಸಾಹಿತ್ಯವನ್ನು ಮತ್ತು ‌ನೂರಾರು ವಚನಕಾರರನ್ನು ಬೆಳಕಿಗೆ ತಂದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ. ವಚನ ಸಾಹಿತ್ಯ ಸಂಶೋಧನೆ ಕ್ಷೇತ್ರದಲ್ಲಿ ಹಳಕಟ್ಟಿ ಅವರು ಶ್ರೇಷ್ಠವಾದ ಕೆಲಸ ಮಾಡಿದ್ದಾರೆ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಶನಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ವೇದಿಕೆ ಆಯೋಜಿಸಿದ್ದ 2025ನೇ ಸಾಲಿನ ಬಸವಶ್ರೀ, ವಚನ ಸಾಹಿತ್ಯ ಶ್ರೀ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಬಸವಜ್ಯೋತಿ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ, ರಾಜಕಾರಣ, ಸಮಾಜಸೇವೆ, ವಾಣಿಜ್ಯೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದ ಬಹುಮುಖ ವ್ಯಕ್ತಿತ್ವದ ಧೀಮಂತರು. ಅವರ ಪರಿಶ್ರಮದಿಂದಾಗಿ 250ಕ್ಕೂ ಹೆಚ್ಚು ವಚನಕಾರರು ಮತ್ತು ಸಾವಿರಾರು ವಚನಗಳು ಬೆಳಕಿಗೆ ಬಂದವು. ಮೂಲತಃ ಧಾರವಾಡದವರಾದರೂ ವಿಜಯಪುರದಲ್ಲಿ ನೆಲೆ ನಿಂತು, ವಚನ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು ಎಂದು ಸ್ಮರಿಸಿದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಬಸವ ವೇದಿಕೆ 2027ಕ್ಕೆ ದೆಹಲಿಯಲ್ಲಿ ಕಾರ್ಯಕ್ರಮ ಮಾಡಲು ಎಲ್ಲಾ ರೀತಿಯ ಸಹಕಾರವನ್ನು ಬಸವರಾಜ ಬೊಮ್ಮಾಯಿ ಅವರಿಗೆ ನೀಡುತ್ತೇವೆ ಎಂದ ಅವರು, ಜಾತಿ, ವರ್ಗ ರಹಿತ ಸಮಾಜವನ್ನು ಜಗತ್ತಿಗೆ ತೋರಿದವರು ಬಸವಣ್ಣ. ಅವರ ಸಾರಥ್ಯದಲ್ಲಿ ನಡೆದ ಸುಧಾರಣೆ ಚಳವಳಿ ಸಾಮಾನ್ಯ ಬದುಕಿನ ಎಲ್ಲ ಸ್ಥರಗಳು ಈ ಚಳವಳಿಯ ಭಾಗವಾಗಿದ್ದವು. ಅವರ ತತ್ವ, ಸಿದ್ಧಾಂತಗಳು ಇಂದಿಗೂ ಮಾರ್ಗದರ್ಶನೀಯವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ। ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಸವ ವೇದಿಕೆ ಅಧ್ಯಕ್ಷ ಡಾ। ಸಿ.ಸೋಮಶೇಖರ್, ರಂಗಕರ್ಮಿ ನಾಗರಾಜಮೂರ್ತಿ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ:

ನಾಡೋಜ ಗೊ.ರು.ಚೆನ್ನಬಸಪ್ಪ ಅವರಿಗೆ ಬಸವಶ್ರೀ ಪ್ರಶಸ್ತಿ, ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ ವಚನ ಸಾಹಿತ್ಯಶ್ರೀ ಪ್ರಶಸ್ತಿ ಮತ್ತು ಗಾಯಕಿ ಎಂ.ಡಿ.ಪಲ್ಲವಿ ಅವರಿಗೆ ವಚನ ಸಂಗೀತ ಪ್ರಶಸ್ತಿ ಪ್ರದಾನ ಮಾಡಲಾಯಿತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು