ಜಾತಿಗಣತಿಗೆ ಬಿಜೆಪಿ ಸಮಯ ನಿಗದಿಪಡಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : May 03, 2025, 12:15 AM ISTUpdated : May 03, 2025, 04:45 AM IST
2ಕೆಎಂಎನ್‌ಡಿ-1ಮಂಡ್ಯ ತಾಲೂಕಿನ ತೂಬಿನಕೆರೆ ಹೆಲಿಪ್ಯಾಡ್‌ಗೆ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಎನ್‌.ಚಲುವರಾಯಸ್ವಾಮಿ, ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಇತರರೊಂದಿಗೆ ಆಗಮಿಸುತ್ತಿರುವುದು. | Kannada Prabha

ಸಾರಾಂಶ

ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ, ಬದ್ಧತೆಯೂ ಇಲ್ಲ. ಇತಿಹಾಸವನ್ನು ನೋಡುತ್ತಾ ಬನ್ನಿ ನೂರು ವರ್ಷಗಳಿಂದಲೂ ವಿರೋಧ ಮಾಡುತ್ತಾ ಬಂದಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಮಿಲ್ಲರ್ ಕಮಿಷನ್ ರಚಿಸಿದಾಗಿನಿಂದಲೂ ಇವತ್ತಿನವರೆಗೂ ವಿರೋಧ ಮಾಡುತ್ತಿದ್ದಾರೆ.

 ಮಂಡ್ಯ : ದೇಶದಲ್ಲಿ ಜನಗಣತಿಯೊಂದಿಗೆ ಜಾತಿಗಣತಿ ನಡೆಸುವುದಾಗಿ ಹೇಳಿರುವ ಕೇಂದ್ರ ಸರ್ಕಾರ ಗಣತಿಗೆ ಸಮಯ ನಿಗದಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ತಾಲೂಕಿನ ತೂಬಿನಕೆರೆ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜನಗಣತಿಯೊಂದಿಗೆ ಜಾತಿ ಗಣತಿ ಮಾಡುವುದಾಗಿ ಹೇಳಲಾಗಿದೆ. ಆದರೆ, ಯಾವಾಗ ಗಣತಿ ಮಾಡುತ್ತೇವೆ ಎಂಬುದನ್ನು ಹೇಳಿಲ್ಲ, ಮೂರು ತಿಂಗಳಲ್ಲಿ ಅಥವಾ ನಾಲ್ಕು ತಿಂಗಳಲ್ಲಿ ಮಾಡುತ್ತಾರಾ ಎಂಬುದನ್ನು ಹೇಳಬೇಕು ಎಂದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ, ಬದ್ಧತೆಯೂ ಇಲ್ಲ. ಇತಿಹಾಸವನ್ನು ನೋಡುತ್ತಾ ಬನ್ನಿ ನೂರು ವರ್ಷಗಳಿಂದಲೂ ವಿರೋಧ ಮಾಡುತ್ತಾ ಬಂದಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಮಿಲ್ಲರ್ ಕಮಿಷನ್ ರಚಿಸಿದಾಗಿನಿಂದಲೂ ಇವತ್ತಿನವರೆಗೂ ವಿರೋಧ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ಗೆ ನೂರು ವರ್ಷ ತುಂಬಿದೆ ಅಂದಿನಿಂದಲೂ ಅವರು ಮೀಸಲಾತಿ ಒಪ್ಪಿಲ್ಲ ಎಂಬುದನ್ನು ಅರಿಯಬೇಕು ಎಂದರು.

ರಾಹುಲ್‌, ಖರ್ಗೆ ಒತ್ತಡ:

ದೇಶದಲ್ಲಿ ಜಾತಿ ಗಣತಿ ನಡೆಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ಹಾಕುತ್ತಾ ಬಂದಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪತ್ರ ಬರೆದಿದ್ದರು. ಇದೀಗ ಜಾತಿ ಗಣತಿ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, ಯಾವಾಗ ಗಣತಿ ನಡೆಸುತ್ತೇವೆ ಎಂಬುದನ್ನು ತಿಳಿಸಿಲ್ಲ. ಆದಷ್ಟು ಶೀಘ್ರ ಗಣತಿಯ ಸಮಯ ನಿಗದಿ ಮಾಡಲು ಮುಂದಾಗ ಬೇಕಾಗಿದೆ ಎಂದರು.

ಮೀಸಲು ಮಿತಿ ತೆಗೆದುಹಾಕಲಿ:

ಮೀಸಲಾತಿ ಪ್ರಮಾಣ ಶೇ 50ರಷ್ಟು ಮೀರಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಜನಸಂಖ್ಯೆವಾರು ಮೀಸಲಾತಿ ಕಲ್ಪಿಸಬೇಕಿರುವುದು ಅನಿವಾರ್ಯ. ಹಾಗಾದಾಗ ಮಾತ್ರ ಸಾಮಾಜಿಕ ಆರ್ಥಿಕ, ಶೈಕ್ಷಣಿಕವಾಗಿ ಮುನ್ನಡೆಯಲು ಸಾಧ್ಯ. ಇದರಿಂದ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಂವಿಧಾನ ತಿದ್ದುಪಡಿ ಮೂಲಕ ಮೀಸಲಾತಿ ಪ್ರಮಾಣ ಮಿತಿ ತೆಗೆದುಹಾಕಬೇಕು. ಅದೇ ರೀತಿ ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಕಲ್ಪಿಸಬೇಕು. ರೋಹಿಣಿ ಕಮಿಷನ್ ವರದಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಸುಹಾಸ್‌ ಶೆಟ್ಟಿ ರೌಡಿಶೀಟರ್‌:

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸುಹಾಸ್‌ ಶೆಟ್ಟಿ ಒಬ್ಬ ರೌಡಿಶೀಟರ್ ಅಂತ ಮಾಹಿತಿ ಬಂದಿದೆ. ಹೆಚ್ಚಿನ ಮಾಹಿತಿ ಇಲ್ಲ. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅವರನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ಯಾರದೇ ಕೊಲೆಯಾಗಿರಲಿ ಮನುಷ್ಯನ ಪ್ರಾಣ ಮುಖ್ಯ. ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಬಂಧಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಕೃತ್ಯಗಳು ನಡೆಯಲು ಬಯಸುತ್ತಾರೆ:

ಬಿಜೆಪಿ ಪಕ್ಷದವರು ಇಂತಹ ದುಷ್ಕೃತ್ಯ ನಡೆಯಲಿ ಎಂದು ಕಾಯುತ್ತಿರುತ್ತಾರೆ. ಕೃತ್ಯಗಳು ನಡೆದಾಗ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಾರೆ. ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ದಾಳಿ ಮಾಡಿ ಅಮಾಯಕರ ಪ್ರಾಣ ತೆಗೆದಿದ್ದಾರೆ. ಘಟನೆ ನಡೆದು ವಾರ ಕಳೆದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೋಗಿದ್ದಾರಾ. ಇನ್ನೂ ಸಹ ಸ್ಥಳಕ್ಕೆ ಹೋಗಿಲ್ಲ. ದಾಳಿ ನಡೆದಿರುವುದು ಭದ್ರತಾ ವೈಫಲ್ಯ ಅಲ್ಲವೇ?. ನೂರಾರು ಪ್ರವಾಸಿಗರು ಸೇರುವ ಕಡೆ ಒಬ್ಬನೇ ಒಬ್ಬ ಪೊಲೀಸ್ ಇಲ್ಲ ಎಂದರೆ ಹೇಗೆ?. ಪ್ರವಾಸಿ ಸ್ಥಳದಲ್ಲಿ ಭದ್ರತೆಯೇ ಇಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದರು.

ನನಗೂ ಬೆದರಿಕೆ ಕರೆ:

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿ, ನನಗೂ ಬೆದರಿಕೆ ಕರೆ ಬಂದಿದೆ, ಈಗಾಗಲೇ ಪೊಲೀಸರಿಗೆ ಬೆದರಿಕೆ ಕರೆಗಳ ಬಗ್ಗೆ ತನಿಖೆ ನಡೆಸಿ ಪತ್ತೆ ಹಚ್ಚುವಂತೆ ಸೂಚಿಸಿದ್ದೇನೆ. ಜನರು ಕುಡಿಯುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಮದ್ಯದ ದರ ಹೆಚ್ಚಳ ಮಾಡಿದ್ದೇವೆ. ದರ ಹೆಚ್ಚಿಸಿದರೆ ಕಡಿಮೆ ಕುಡಿಯಲಿದ್ದಾರೆ ಎಂದು ಮದ್ಯದ ದರ ಹೆಚ್ಚಳವನ್ನು ಸಮರ್ಥಿಸಿಕೊಂಡರು.

ಸಚಿವ ಎನ್‌.ಚಲುವರಾಯಸ್ವಾಮಿ, ಶಾಸಕ ರಮೇಶ್‌ ಬಂಡಿಸಿದ್ದೇಗೌಡ, ಮೈಷುಗರ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಬಿ.ರೇವಣ್ಣ, ಹೆಚ್‌.ಮಂಜುನಾಥ್‌, ಎಲೆಚಾಕನಹಳ್ಳಿ ಬಸವರಾಜು ಇತರರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪ್ರಿಯಾಂಕಾ ಗಾಂಧಿಕೈ ಪ್ರಧಾನಿ ಅಭ್ಯರ್ಥಿ ಆಗಲು ಭಾರಿ ಒತ್ತಡ!
''ದ್ವೇಷ ಭಾಷಣ ಕಾಯ್ದೆ : ಜಾತಿ ನಿಂದನೆಯ ರೀತಿ ದುರ್ಬಳಕೆ ಆಗಬಹುದು''