ಬಜೆಟ್ನಲ್ಲಿ ಬೆಂಗಳೂರು ಮಹಾನಗರ ಅಭಿವೃದ್ಧಿಗೆ ₹15 ಸಾವಿರ ಕೋಟಿ ವಿಶೇಷ ಅನುದಾನ ಮತ್ತು ನಗರದ ಪ್ರತಿ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಕನಿಷ್ಠ ₹150 ಕೋಟಿ ಅನುದಾನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬಿಜೆಪಿ ಶಾಸಕರ ನಿಯೋಗವು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಬೆಂಗಳೂರು : ಮುಂದಿನ ವಾರ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಬೆಂಗಳೂರು ಮಹಾನಗರ ಅಭಿವೃದ್ಧಿಗೆ ₹15 ಸಾವಿರ ಕೋಟಿ ವಿಶೇಷ ಅನುದಾನ ಮತ್ತು ನಗರದ ಪ್ರತಿ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಕನಿಷ್ಠ ₹150 ಕೋಟಿ ಅನುದಾನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬಿಜೆಪಿ ಶಾಸಕರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಗರದ ಶಾಸಕರು ಹಾಗೂ ಸಂಸದರು ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿ ಸಮಾಲೋಚನೆ ನಡೆಸಿದರು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಬೆಂಗಳೂರು ಮಹಾನಗರದ ಅಭಿವೃದ್ಧಿ ದೃಷ್ಟಿಯಿಂದ ಶಾಸಕರಿಗೆ ಹೆಚ್ಚು ಅನುದಾನವನ್ನು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲಸೌಕರ್ಯ ವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ಹಣ ಕೊಡಬೇಕಿದೆ. ಫ್ಲೈಓವರ್, ವಿವಿಧ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಅವುಗಳಿಗೆ ಹೆಚ್ಚು ಅನುದಾನ ನೀಡಿ ಹೆಚ್ಚು ಒತ್ತು ಕೊಡಬೇಕೆಂದು ಕೋರಿದ್ದೇವೆ ಎಂದು ವಿವರಿಸಿದರು.
ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಅವರು ಮೆಟ್ರೋ ಪ್ರಯಾಣ ದರ ಜಾಸ್ತಿ ಆಗಿದ್ದು, ಅದನ್ನು ಕಡಿಮೆ ಮಾಡುವ ಕುರಿತಂತೆ ಸಲಹೆಗಳನ್ನು ನೀಡಿದ್ದಾರೆ. ಅಭಿವೃದ್ಧಿಗೆ ಅನುದಾನ ಮಾತ್ರವಲ್ಲದೆ, ಮೊದಲ ಬಾರಿ ಗೆದ್ದ ಶಾಸಕರಿಗೆ ಅನುದಾನ ಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.
ಹಿಂದೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಪ್ರತಿಸಾರಿಯೂ ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಸಂಬಂಧಿಸಿ ಬಿಬಿಎಂಪಿಗೆ ಆರರಿಂದ 8 ಸಾವಿರ ಕೋಟಿ ಅನುದಾನವನ್ನು ಬಜೆಟ್ನಲ್ಲಿ ನೀಡುತ್ತಿದ್ದರು. ಆದರೆ, ಕಳೆದೆರಡು ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿಗೆ ಅನುದಾನ ನೀಡಿಲ್ಲ ಎಂದು ವಿಜಯೇಂದ್ರ ಆಕ್ಷೇಪಿಸಿದರು.
ಶೀಘ್ರವೇ ಬಿಬಿಎಂಪಿ ಚುನಾವಣೆ ನಡೆಸಲು ಒತ್ತಾಯಿಸಿದ್ದೇವೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತಮ್ಮ ಇತಿಮಿತಿಯೊಳಗೆ ಎಷ್ಟು ಅನುದಾನ ಕೊಡಲು ಸಾಧ್ಯವೋ ಆ ಕಡೆ ಗಮನ ಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಗ್ರೇಟರ್ ಬೆಂಗಳೂರಿನ ಹೆಸರಿನಲ್ಲಿ ಬಿಬಿಎಂಪಿ ಚುನಾವಣೆ ಮುಂದೂಡಬಾರದು ಎಂಬ ಕುರಿತು ನಾವು ಸದನದಲ್ಲೂ ಚರ್ಚೆ ಮಾಡುತ್ತೇವೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಅವೈಜ್ಞಾನಿಕ ಟನೆಲ್ ರಸ್ತೆ ಕುರಿತು ಕೂಡ ಸದನದಲ್ಲಿ ಪ್ರಸ್ತಾಪಿಸಲಿದ್ದೇವೆ ಎಂದರು.
2 ವರ್ಷ ಕಾದು ವಿಧಿಯಿಲ್ಲದೆ ಸಿಎಂ ಭೇಟಿ: ಆರ್.ಅಶೋಕ್
ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆ, ಕಾಮಗಾರಿಗಳು ಆರಂಭವಾಗದೆ ಇರುವುದು, ಪಾರ್ಕಿನ ವಾಚ್‌ಮನ್ ಹಣ ಕೊಡಲೂ ಸಾಧ್ಯ ಆಗದೆ ಇರುವುದನ್ನು ನೋಡಿ, ಎರಡು ವರ್ಷ ಕಾದು ವಿಧಿಯಿಲ್ಲದೆ ಮುಖ್ಯಮಂತ್ರಿ ಭೇಟಿ ಮಾಡಿದ್ದೇವೆ. ಬೆಂಗಳೂರಿನ ಅಭಿವೃದ್ಧಿ ಕುಂಠಿತವಾದ ಕುರಿತು ಗಮನ ಸೆಳೆದಿದ್ದೇವೆ ಎಂದರು.
ಒಂದೆಡೆ ಬೆಲೆ ಏರಿಕೆ, ಇನ್ನೊಂದೆಡೆ ಅಭಿವೃದ್ಧಿಯೂ ಕುಂಠಿತವಾಗಿದೆ. ಬೆಂಗಳೂರಿಗೆ ಅನುದಾನ ಕೊಡಿ. ರಾಜ್ಯದ ಎಲ್ಲ ಬಿಜೆಪಿ ಶಾಸಕರಿಗೆ ಅನುದಾನ ಕೊಡಿ ಎಂದು ಕೇಳಿದ್ದೇವೆ. ವಿಪಕ್ಷಗಳಿಗೆ ಅನ್ಯಾಯ ಮಾಡದಿರಿ. ರಾಜ್ಯದ ಸಮಗ್ರ ಬೆಳವಣಿಗೆಗೆ ಅನುದಾನ ನೀಡಿ ಎಂದು ಕೇಳಿದ್ದಾಗಿ ವಿವರಿಸಿದರು.
ಕಳೆದೆರಡು ವರ್ಷಗಳಲ್ಲಿ ಬೆಂಗಳೂರಿನಲ್ಲಾಗಿರುವ ಮಳೆ ಹಾನಿ, ರಸ್ತೆ ಗುಂಡಿ, ಕಾಮಗಾರಿ ಸ್ಥಗಿತ, ಉದ್ಯಾನಗಳಲ್ಲಿ ಸಿಬ್ಬಂದಿಗೆ ವೇತನ ವಿಳಂಬ ಮೊದಲಾದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಚರ್ಚಿಸಲಾಗಿದೆ. ಬೆಂಗಳೂರಿನ ಅಭಿವೃದ್ಧಿ ಕುಂಠಿತವಾಗಿ ಜನರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಬೆಲೆ ಏರಿಕೆಯ ಹೊರೆಯನ್ನು ಜನರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಬೆಂಗಳೂರಿಗೆ ಹೆಚ್ಚು ಅನುದಾನ ನೀಡಿ ಎಂದು ಆಗ್ರಹಿಸಲಾಗಿದೆ ಎಂದು ತಿಳಿಸಿದರು.-