ರಾಜ್ಯಗಳಿಗೆ ತೆರಿಗೆ ಪಾಲು ಕಡಿತ ಆದರೆ ಹೋರಾಟ : ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುದ್ದು

KannadaprabhaNewsNetwork | Updated : Mar 01 2025, 04:53 AM IST

ಸಾರಾಂಶ

ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಶೇ.41ರಿಂದ 40ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಹಣಕಾಸು ಆಯೋಗಕ್ಕೆ ಶಿಫಾರಸು ಮಾಡಲು ಕೇಂದ್ರದ ಎನ್‌ಡಿಎ ಸರ್ಕಾರ ಸಿದ್ಧತೆ ನಡೆಸಿರುವುದು ಒಕ್ಕೂಟ ವ್ಯವಸ್ಥೆಯ ವಿರೋಧಿ ನಡೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

 ಬೆಂಗಳೂರು : ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಶೇ.41ರಿಂದ 40ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಹಣಕಾಸು ಆಯೋಗಕ್ಕೆ ಶಿಫಾರಸು ಮಾಡಲು ಕೇಂದ್ರದ ಎನ್‌ಡಿಎ ಸರ್ಕಾರ ಸಿದ್ಧತೆ ನಡೆಸಿರುವುದು ಒಕ್ಕೂಟ ವ್ಯವಸ್ಥೆಯ ವಿರೋಧಿ ನಡೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ತೆರಿಗೆ ಪಾಲು ಇಳಿಸುವ ಬದಲು ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ರಾಜ್ಯಕ್ಕೆ ನೀಡಬೇಕು. ಸಂವಿಧಾನಕ್ಕೆ ತಿದ್ದುಪಡಿ ಮಾಡಿ ತೆರಿಗೆಯೇತರ ಆದಾಯವನ್ನು ಕೂಡ ತೆರಿಗೆ ನಿಧಿಗೆ ಸೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯಗಳಿಗೆ ಪ್ರತೀ ವರ್ಷ ನೀಡುವ ತೆರಿಗೆ ಪಾಲನ್ನು ಬರುವ ಹಣಕಾಸು ವರ್ಷದಿಂದ ಶೇ.1ರಷ್ಟು ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಅಂಶ ಮಾಧ್ಯಮಗಳ ವರದಿಯಲ್ಲಿ ಗುರುವಾರ ಬಹಿರಂಗವಾಗಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ಕೇಂದ್ರ ಸರ್ಕಾರವು ರಾಜ್ಯಗಳನ್ನು ತಮ್ಮ ಅಧೀನದ ಮಾಂಡಲಿಕರ ರೀತಿ ನಡೆಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಂತಹ ಜನಪ್ರಿಯ ಕಾರ್ಯಕ್ರಗಳ ಮೂಲಕ ಕನ್ನಡಿಗರ ಮನಸ್ಸು ಗೆದ್ದಿರುವ ಕಾಂಗ್ರೆಸ್ ಸರ್ಕಾರಕ್ಕೆ ಹೇಗಾದರೂ ಮಾಡಿ ಅಪಖ್ಯಾತಿ ತರಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸಿದಂತಿದೆ. ಇದಕ್ಕಾಗಿ ದುರುದ್ದೇಶದಿಂದ, ನ್ಯಾಯಬದ್ಧವಾಗಿ ನೀಡಬೇಕಾಗಿರುವ ತೆರಿಗೆ ಪಾಲು ಮತ್ತಿತರ ಅನುದಾನ ನೀಡದೆ ರಾಜ್ಯದ ಖಜಾನೆಯನ್ನು ಬರಿದುಮಾಡಲು ಹೊರಟಿದೆ. ಇಂತಹ ದಮನಕಾರಿ ನೀತಿಗಳನ್ನು ಎದುರಿಸುವ ಶಕ್ತಿ ಮತ್ತು ಧೈರ್ಯ ರಾಜ್ಯ ಸರ್ಕಾರಕ್ಕಿದೆ. ಈ ಅನ್ಯಾಯವನ್ನು ರಾಜ್ಯದ ಜನತೆಯೂ ಅರ್ಥಮಾಡಿಕೊಂಡಿದ್ದಾರೆ ಎಂದು ನಾನು ನಂಬಿದ್ದೇನೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪರಿಹರಿಸಲು ಮನವಿ-ಮಾತುಕತೆ ಮೂಲಕ ನಡೆಸುತ್ತಾ ಬರುತ್ತಿರುವ ಪ್ರಯತ್ನ ವಿಫಲವಾದಲ್ಲಿ ಬೀದಿಗಿಳಿದು ಜನರ ಜೊತೆ ಸೇರಿ ಹೋರಾಟ ನಡೆಸುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕಕ್ಕೆ ನಿರಂತರ ಅನ್ಯಾಯ:

ಪ್ರತಿ ವರ್ಷ ಕನ್ನಡಿಗರಿಂದ ಸಂಗ್ರಹವಾಗುವ ನಾಲ್ಕು ಲಕ್ಷ ಕೋಟಿ ರು. ತೆರಿಗೆಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತದೆ. ಅದರಲ್ಲಿ ರಾಜ್ಯಕ್ಕೆ ವಾಪಸು ಬರುವುದು ಒಂದು ರುಪಾಯಿಗೆ 15 ಪೈಸೆ ಮಾತ್ರ. ಹದಿನೈದನೇ ಹಣಕಾಸು ಆಯೋಗ ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇ.4.713ರಿಂದ ಶೇ.3.64ಕ್ಕೆ ಇಳಿಸಿದ್ದ ಕಾರಣದಿಂದಾಗಿ ಕರ್ನಾಟಕ ಕಳೆದ ಐದು ವರ್ಷಗಳಲ್ಲಿ 68,775 ಕೋಟಿ ರು.ಗಳನ್ನು ಕಳೆದುಕೊಂಡಿದೆ. ಅಲ್ಲದೆ, ಈ ಆಯೋಗವೇ ಶಿಫಾರಸು ಮಾಡಿರುವ ವಿಶೇಷ ಅನುದಾನ 5495 ಕೋಟಿ ರು. ಮತ್ತು ರಾಜ್ಯ ಕೇಂದ್ರಿತ 6000 ಕೋಟಿ ರು. ಮೊತ್ತದ ವಿಶೇಷ ಅನುದಾನವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಕೇಂದ್ರ ಹಣಕಾಸು ಆಯೋಗ ತಾನು ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ಮೊತ್ತದ ಹಣವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಾ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2021-22, 2022-23 ಮತ್ತು 2023-24ರ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಬಾಕಿ ಇರುವ 3,300 ಕೋಟಿ ರು. ಮತ್ತು 2024-25 ಮತ್ತು 2025-26ರ ಅವಧಿಯಲ್ಲಿ ಆಯೋಗ ಶಿಫಾರಸು ಮಾಡಿರುವ 11,495 ಕೋಟಿ ರು.ಗಳ ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು, ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ವಸೂಲು ಮಾಡುತ್ತಿರುವ ಸೆಸ್ ಮತ್ತು ಸರ್ಚಾರ್ಜ್‌ಗಳಲ್ಲಿ ರಾಜ್ಯಗಳಿಗೆ ಪಾಲು ನೀಡಲಾಗುತ್ತಿಲ್ಲ. ಇದರಿಂದ 2017-18ರಿಂದ 2024-25ರ ಅವಧಿಯಲ್ಲಿ ಕರ್ನಾಟಕ 53,359 ಕೋಟಿ ರು. ಕಳೆದುಕೊಂಡಿದೆ. 2010-11ರಲ್ಲಿ ಒಟ್ಟು ತೆರಿಗೆಯ ಶೇ.8.1ರಷ್ಟಿದ್ದ ಸೆಸ್ ಮತ್ತು ಸರ್ಚಾರ್ಜ್‌ನ ಪ್ರಮಾಣ 2024-25ರಲ್ಲಿ ಶೇ.14ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ ಬರುವ ತೆರಿಗೆ ಪಾಲಿನಲ್ಲಿ ಕಡಿತ ಉಂಟಾಗಿದೆ. ಇದರ ಜೊತೆಯಲ್ಲಿ ಕೇಂದ್ರದ ಸಹಾಯ ಧನ ಕೂಡ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಸೆಸ್ ಮತ್ತು ಸರ್ಚಾರ್ಜ್ ಅನ್ನು ರದ್ದುಗೊಳಿಸಬೇಕು ಇಲ್ಲವೆ ಅದನ್ನು ಒಟ್ಟು ತೆರಿಗೆಯ ನಿಧಿಗೆ ಸೇರಿಸಿ ಅದನ್ನು ರಾಜ್ಯಗಳಿಗೆ ಹಂಚಿಕೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಜಿಎಸ್‌ಟಿ ಅನುಷ್ಠಾನದಿಂದಾಗಿ ರಾಜ್ಯ ಸರ್ಕಾರಗಳಿಗೆ ಆಗುವ ನಷ್ಟಕ್ಕೆ ಪರಿಹಾರ ನೀಡಲು ಜಿಎಸ್‌ಟಿ ಪರಿಹಾರ ಸೆಸ್ ಜಾರಿಗೊಳಿಸಲಾಗಿತ್ತು. 2022ರ ಜುಲೈ ತಿಂಗಳಲ್ಲಿಯೇ ಪರಿಹಾರ ನೀಡುವುದನ್ನು ನಿಲ್ಲಿಸಿದರೂ 2026ರವರೆಗೆ ಸೆಸ್ ಸಂಗ್ರಹವನ್ನು ಮುಂದುವರಿಸಲಾಗಿದೆ. ಈ ಸೆಸ್ ಬದಲಿಗೆ ಹೆಚ್ಚುವರಿ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಸಂಗ್ರಹಕ್ಕೆ ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಬೇಕು. 1985ರಿಂದ ಸೇವಾ ತೆರಿಗೆಯನ್ನು ಪರಿಷ್ಕರಿಸಿಲ್ಲ, ಈ ದೀರ್ಘಾವಧಿಯಲ್ಲಿ ನಡೆದಿರುವ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸೇವಾ ತೆರಿಗೆಯ ಗರಿಷ್ಠ ಮಿತಿಯನ್ನು ಹೆಚ್ಚಿಸಲು ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಿದ್ದು ವಾದ ಏನು?

- ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಶೇ.41ರಿಂದ ಶೇ.40ಕ್ಕೆ ಇಳಿಸುವ ಶಿಫಾರಸು ಒಕ್ಕೂಟ ವ್ಯವಸ್ಥೆಯ ವಿರೋಧಿ ನಡೆ

- ಕನ್ನಡಿಗರ ಮನಸ್ಸು ಗೆದ್ದಿರುವ ಕಾಂಗ್ರೆಸ್ ಸರ್ಕಾರಕ್ಕೆ ಅಪಖ್ಯಾತಿ ತರಬೇಕೆಂದು ಕೇಂದ್ರ ಸರ್ಕಾರವು ನಿರ್ಧರಿಸಿದಂತಿದೆ

- ಪ್ರತಿ ವರ್ಷ ಕನ್ನಡಿಗರಿಂದ ಸಂಗ್ರಹವಾಗುವ 4 ಲಕ್ಷ ಕೋಟಿ ರು. ತೆರಿಗೆ ಪಡೆದು ಕೇಂದ್ರ 1 ರು.ಗೆ 15 ಪೈಸೆ ಮಾತ್ರ ಕೊಡ್ತಿದೆ

- ತೆರಿಗೆ ಪಾಲು ಇಳಿಸುವ ಬದಲು ರಾಜ್ಯದಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ರಾಜ್ಯಕ್ಕೆ ನೀಡಲಿ

- ಸಂವಿಧಾನಕ್ಕೆ ತಿದ್ದುಪಡಿ ಮಾಡಿ ತೆರಿಗೆಯೇತರ ಆದಾಯವನ್ನು ಕೂಡ ತೆರಿಗೆ ನಿಧಿಗೆ ಸೇರಿಸಿ ರಾಜ್ಯಗಳಿಗೆ ಹಂಚಬೇಕು

- ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪರಿಹರಿಸುವ ಪ್ರಯತ್ನ ವಿಫಲವಾದಲ್ಲಿ ಬೀದಿಗಿಳಿದು ಹೋರಾಟ ಅನಿವಾರ್ಯ ಆಗುತ್ತೆ

ಕೇಂದ್ರ ಸರ್ಕಾರವು ರಾಜ್ಯಗಳನ್ನು ತಮ್ಮ ಅಧೀನದ ಮಾಂಡಲಿಕರ ರೀತಿ ನಡೆಸಿಕೊಳ್ಳುತ್ತಿದೆ. ಇಂತಹ ದಮನಕಾರಿ ನೀತಿಗಳನ್ನು ಎದುರಿಸುವ ಶಕ್ತಿ ರಾಜ್ಯಕ್ಕಿದೆ. ಈ ಅನ್ಯಾಯ ಮುಂದುವರೆದರೆ ಜನರ ಜೊತೆ ಸೇರಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಬಹುದು.

ಸಿದ್ದರಾಮಯ್ಯ, ಮುಖ್ಯಂಮಂತ್ರಿ

Share this article