;Resize=(412,232))
ಬೆಂಗಳೂರು : ಕಳೆದ ಲೋಕಸಭಾ ಚುನಾವಣೆ ಬಳಿಕ ಶುರುವಾದ ರಾಜ್ಯ ಬಿಜೆಪಿಯಲ್ಲಿನ ಗೊಂದಲಕ್ಕೆ ಈ ಕ್ಷಣದವರೆಗೂ ಮುಕ್ತಿ ಸಿಕ್ಕಿಲ್ಲ. ಆಗಾಗ ಅಸಮಾಧಾನ, ಭಿನ್ನಾಭಿಪ್ರಾಯ ಹೊರಬೀಳುತ್ತಲೇ ಇರುತ್ತದೆ. ಪಕ್ಷದ ರಾಜ್ಯ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಡಾ.ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ರಾಜ್ಯಕ್ಕೆ ಭೇಟಿ ನೀಡಿ ಪಕ್ಷದ ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಏನೂ ಆಗಿಯೇ ಇಲ್ಲ ಎಂಬಂತೆ ವಾಪಸಾಗುತ್ತಾರೆ. ದೆಹಲಿಯ ವರಿಷ್ಠರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟ ನಿಲುವನ್ನೂ ಪ್ರಕಟಿಸದೆ ಮುಗುಮ್ಮಾಗಿ ಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ‘ಕನ್ನಡಪ್ರಭ’ಕ್ಕೆ ‘ಮುಖಾಮುಖಿ’ಯಾಗಿದ್ದು ಹೀಗೆ...
ನಮ್ಮ ಕಾರ್ಯಕರ್ತರು ಕಮಲ ಚಿಹ್ನೆಯ ಕಾರ್ಯಕರ್ತರು. ಅವರು ಯಾವುದೇ ವ್ಯಕ್ತಿ ಅಥವಾ ಹುದ್ದೆಗೆ ಸಂಬಂಧಿಸಿದವರು ಅಲ್ಲ. ಕಾಂಗ್ರೆಸ್‌ನಲ್ಲಿ ಗೊಂದಲದ ಬೆಟ್ಟವೇ ನಿರ್ಮಾಣವಾಗಿದೆ. ಅದಕ್ಕೆ ಹೋಲಿಸಿದರೆ ಬಿಜೆಪಿಯಲ್ಲಿನ ಗೊಂದಲ ತೀರಾ ಸಣ್ಣ ಪ್ರಮಾಣದ್ದು.
*ಕಾಂಗ್ರೆಸ್ ಪಕ್ಷದಂತೆ ಬಿಜೆಪಿಯಲ್ಲಿ ಸಂಘಟನೆಗೆ ಸಂಬಂಧಿಸಿ ತ್ವರಿತಗತಿಯ ನಿರ್ಧಾರಗಳನ್ನು ಯಾಕೆ ತೆಗೆದುಕೊಳ್ಳುವುದಿಲ್ಲ?
ನಿರ್ಧಾರ ತೆಗೆದುಕೊಳ್ಳುವುದೆಂದರೆ ಯಾರನ್ನಾದರೂ ಗಲ್ಲಿಗೆ ಏರಿಸಬೇಕೇ? ಕಾನೂನಿನಲ್ಲಿ ಗಲ್ಲು ಶಿಕ್ಷೆ ವಿಧಿಸುವುದು ಅಷ್ಟು ಸುಲಭವಿಲ್ಲ. ನಾನು ಹೆಸರು ಹೇಳಲು ಬಯಸುವುದಿಲ್ಲ (ಬಸನಗೌಡ ಪಾಟೀಲ ಯತ್ನಾಳ). ರಾಜ್ಯದ ಒಬ್ಬ ಮುಖಂಡನನ್ನು ಪಕ್ಷದಿಂದ ಉಚ್ಚಾಟಿಸುವ ಮೊದಲು ನಾನು ಅವರೊಂದಿಗೆ ಐದು ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಸುಮಾರು 10 ಗಂಟೆಗಳ ಕಾಲ ಚರ್ಚಿಸಿದ್ದೇನೆ. ಇದರ ಮೇಲೆ ನಿಮಗೆ ಅರ್ಥವಾಗಿರಬೇಕು. ನಾವು ಯಾರ ವಿರುದ್ಧವೂ ತರಾತುರಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ನಾವು ಏಕಾಏಕಿ ಕ್ರೂರವಾಗುವುದಕ್ಕೆ ಸಾಧ್ಯವಿಲ್ಲ.
*ಕೆಲವೊಮ್ಮೆ ನಿರ್ಣಯಗಳು ವಿಳಂಬವಾಗುವುದರಿಂದ ಪಕ್ಷದ ಸಂಘಟನೆ ಅಂತರಿಕವಾಗಿ ಕುಸಿದು ಹೋಗುವುದಿಲ್ಲವೇ?
ನಮ್ಮ ಪಕ್ಷ ಆಂತರಿಕವಾಗಿ ಗಟ್ಟಿಯಾಗಿದೆ. ನಿರ್ಣಯಗಳನ್ನು ಕೈಗೊಳ್ಳುವುದು ವಿಳಂಬವಾಗುವುದರಿಂದ ಸಂಘಟನೆ ಕುಸಿಯುವುದಿಲ್ಲ.
*ಆಪರೇಷನ್ ಯಶಸ್ವಿಯಾಯಿತು, ರೋಗಿ ನಿಧನ ಹೊಂದಿದ ಎಂಬ ಆಡು ಮಾತಿದೆ. ಬಿಜೆಪಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದೂ ಇದೇ ರೀತಿ ಆಗುತ್ತಿದೆಯಲ್ವಾ?
ಇಲ್ಲ. ಇಲ್ಲ... ನಮ್ಮ ಪಕ್ಷದಲ್ಲಿ ಆ ರೀತಿ ಆಗುವುದಿಲ್ಲ. ಆಪರೇಷನ್ ಕೂಡ ಯಶಸ್ವಿಯಾಗುತ್ತದೆ. ಮಗು ಕೂಡ ಆರೋಗ್ಯಕರಾಗಿ ಜನ್ಮ ತಾಳುತ್ತದೆ. ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುತ್ತದೆ.
*ರಾಜ್ಯಾಧ್ಯಕ್ಷ ಸ್ಥಾನದ ಗೊಂದಲ ಸುದೀರ್ಘವಾಗಿ ಮುಂದುವರೆದಿದೆ, ಯಾವಾಗ ಬಗೆಹರಿಯಬಹುದು?
ಶೀಘ್ರದಲ್ಲೇ ಈ ಎಲ್ಲ ಗೊಂದಲಕ್ಕೆ ತೆರೆ ಬೀಳಲಿದೆ. ಯಾವುದೇ ಕ್ಷಣದಲ್ಲಿ ಹೈಕಮಾಂಡ್‌ನಿಂದ ನಿರ್ಣಯ ಪ್ರಕಟವಾಗುವ ಸಾಧ್ಯತೆಯಿದೆ. ಹಾಲಿ ಅಧ್ಯಕ್ಷರ ಕಾರ್ಯಕ್ಷಮತೆ ಸೇರಿ ವಿವಿಧ ಅಂಶಗಳನ್ನು ರಾಷ್ಟ್ರೀಯ ನಾಯಕತ್ವ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಯಾವುದೇ ಕ್ಷಣದಲ್ಲಾದರೂ ನೂತನ ಅಧ್ಯಕ್ಷರ ನೇಮಕ ಆಗಬಹುದು.
*ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸಲಾಗುತ್ತದೆಯೇ ಅಥವಾ ಹೊಸಬರನ್ನು ನೇಮಿಸಲಾಗುತ್ತದೆಯೇ?
ರಾಜ್ಯಾಧ್ಯಕ್ಷರ ನೇಮಕ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರ ವ್ಯಾಪ್ತಿಯ ವಿಷಯ. ರಾಜ್ಯ ರಾಜಕೀಯ ಬೆಳವಣಿಗೆಗಳು ಮತ್ತು ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ಕೇಂದ್ರ ನಾಯಕರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆ ಸಮಯ ಈಗ ಸಮೀಪಿಸಿದೆ.
*ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಇತ್ತೀಚಿನ ಬದಲಾವಣೆಗಳ ಆಧಾರದ ಮೇಲೆ ಬಿಜೆಪಿಯಲ್ಲೂ ನಾಯಕತ್ವಕ್ಕೆ ಸಂಬಂಧಿಸಿದಂತೆ ಜಾತಿ ಸಮೀಕರಣ ಮಾಡುವ ಉದ್ದೇಶವಿದೆಯೇ?
ಬಿಜೆಪಿ ಯಾವತ್ತೂ ಜಾತಿ ಆಧಾರಿತ ರಾಜಕಾರಣ ಮಾಡುವುದಿಲ್ಲ. ನಿರ್ಣಯವನ್ನೂ ಕೈಗೊಳ್ಳುವುದಿಲ್ಲ.
*ಪಕ್ಷದ ರಾಜ್ಯ ಉಸ್ತುವಾರಿಯಾಗಿ ನಿಮ್ಮ ಕಾರ್ಯನಿರ್ವಹಣೆ ತೃಪ್ತಿ ತಂದಿದೆಯೇ? ಕಾಂಗ್ರೆಸ್ ಉಸ್ತುವಾರಿ ಕಾರ್ಯವೈಖರಿಯೊಂದಿಗೆ ನಿಮ್ಮ ಹೋಲಿಕೆ ಮಾಡಲಾಗುತ್ತಿದೆಯಲ್ವಾ?
ಕಾಂಗ್ರೆಸ್ ಉಸ್ತುವಾರಿ ಜತೆ ನನ್ನನ್ನು ಹೋಲಿಸಬೇಡಿ. ನಮ್ಮ ಪಕ್ಷದ ಸಂಘಟನಾ ಸ್ವರೂಪಕ್ಕೂ ಮತ್ತು ಕಾಂಗ್ರೆಸ್ ಪಕ್ಷದ ಸಂಘಟನಾ ಸ್ವರೂಪಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಮ್ಮದು ವ್ಯಕ್ತಿ ಆಧಾರಿತ ಸಂಘಟನೆ ಅಲ್ಲ. ಸಮನ್ವಯತೆಯೊಂದಿಗೆ ಸಂಘಟನೆ ಮಾಡುವುದು ಬಿಜೆಪಿಯ ವಿಶೇಷತೆ. ನಾವು ಪಕ್ಷದ ಸಂಘಟನೆಗೆ ಅನುಗುಣವಾಗಿ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಒಂದು ರಾಜ್ಯದ ಉಸ್ತುವಾರಿಯಾದ ಕೂಡಲೇ ಆ ರಾಜ್ಯ ಘಟಕದ ಮಾಲೀಕರಂತೆ ಆಡುವುದಿಲ್ಲ. ನಮ್ಮಲ್ಲಿ ಒಬ್ಬ ವ್ಯಕ್ತಿಯ ನಿರ್ಧಾರ, ನಿರ್ದೇಶನ ನಡೆಯುವುದಿಲ್ಲ. ಸಾಮೂಹಿಕ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುತ್ತೇವೆ. ಪರಿಸ್ಥಿತಿ ನಮ್ಮ ಕೈಮೀರಿ ಹೋಗುತ್ತಿದೆ ಎಂಬುದು ಮನವರಿಕೆಯಾದ ಬಳಿಕ ನಾವು ಕ್ರಮ ಕೈಗೊಳ್ಳುತ್ತೇವೆ. ಅದಕ್ಕೂ ಮೊದಲು ತಮ್ಮ ತಪ್ಪುಗಳನ್ನು ಅರಿತು ಸುಧಾರಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡುತ್ತೇವೆ.
*ನೀವು ಪಕ್ಷದ ರಾಜ್ಯ ಉಸ್ತುವಾರಿಯಾಗಿ ನಿಮ್ಮ ಕೆಲಸ ತೃಪ್ತಿ ತಂದಿದೆಯೇ?
ನಾನು ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಅಣಿಗೊಳಿಸುವುದೂ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದೇನೆ. ನಾನು ಪ್ರಚಾರಪ್ರಿಯನಲ್ಲ. ನನಗೆ ಕೊಟ್ಟ ಕೆಲಸ ಮಾಡಿಕೊಂಡು ಹೋಗುತ್ತೇನೆ. ಹೀಗಾಗಿ, ಅದು ಹೆಚ್ಚು ಗೊತ್ತಾಗುವುದಿಲ್ಲ. ಕಾಂಗ್ರೆಸ್ಸಿನ ವ್ಯಾಖ್ಯಾನದಿಂದ ಬಿಜೆಪಿಯನ್ನು ನೋಡುವುದು ಬೇಡ. ಕಾಂಗ್ರೆಸ್ ಬೇರೆ, ಬಿಜೆಪಿ ಬೇರೆ.
*ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿ ರಾಜ್ಯ ರಾಜಕಾರಣವನ್ನು ಹೇಗೆ ನೋಡುತ್ತಿದ್ದೀರಿ?
ಕರ್ನಾಟಕದ ಮತದಾರರು ಆಸೆಬುರುಕರಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿಗಳ ಆಮಿಷ ಒಡ್ಡಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆದರೆ, ಮುಂದೆ ಒಂದು ವರ್ಷದಲ್ಲಿ ಎದುರಾದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನೇತೃತ್ವದ ಎನ್‌ಡಿಎ ಕೂಟ ಅತಿಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಿತು. ರಾಜ್ಯದ ಮತದಾರರು ಆಸೆಬುರುಕರಲ್ಲ ಎಂಬುದನ್ನು ನಿರೂಪಿಸಿದರು. ಕಳೆದ ಎರಡು-ಮೂರು ವರ್ಷಗಳಿಂದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುತ್ತಿದ್ದಾರೆ. ಸರ್ಕಾರದ ವಿರುದ್ಧ ಜನರಲ್ಲಿ ತೀವ್ರ ಅಸಮಾಧಾನವಿದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಈ ಜನಾಕ್ರೋಶ ಐತಿಹಾಸಿಕವಾಗಿ ವ್ಯಕ್ತವಾಗಲಿದೆ.
*ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಸಂಘಟನೆ ದುರ್ಬಲವಾಗಿರುವುದನ್ನು ಪ್ರಸ್ತಾಪಿಸಿ ಅಸಮಾಧಾನ ಹೊರಹಾಕಿದ್ದರಂತೆ?
ರಾಷ್ಟ್ರೀಯ ಅಧ್ಯಕ್ಷರು ರಾಜ್ಯ ಪದಾಧಿಕಾರಿಗಳು ಹಾಗೂ ಮುಖಂಡರ ಸಂಘಟನಾತ್ಮಕ ಜವಾಬ್ದಾರಿ ಬಗ್ಗೆ ಪ್ರಸ್ತಾಪಿಸಿ ಮಾತುಗಳನ್ನು ಆಡಿದ್ದರು. ಕೋರ್ ಕಮಿಟಿ ಸದಸ್ಯರ ಪಾತ್ರ ಏನು ಎಂಬುದನ್ನು ಹೇಳಿದ್ದರು. ಅದು ಅಸಮಾಧಾನ ಅಂತ ಅಲ್ಲ.
*ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಬಗ್ಗೆ ರಾಜ್ಯ ಬಿಜೆಪಿ ಗಂಭೀರ ಸಿದ್ಧತೆಯಲ್ಲಿ ತೊಡಗಿದೆಯಲ್ಲ?
ಹೌದು. ಇದೊಂದು ಪ್ರಮುಖವಾದ ಪ್ರಕ್ರಿಯೆ. ಇದು ಪ್ರಾಮಾಣಿಕವಾಗಿ ನಡೆಯಬೇಕು ಎಂಬುದು ಬಿಜೆಪಿಯ ಸದುದ್ದೇಶ. ಇದರಲ್ಲಿ ರಾಜಕೀಯ ಪಕ್ಷಗಳು ಸಕ್ರಿಯವಾಗಿ ಪಾಲ್ಗೊಳ್ಳದೇ ಇದ್ದಲ್ಲಿ ಸರ್ಕಾರಿ ಅಧಿಕಾರಿಗಳು ಇದನ್ನು ವಿಫಲಗೊಳಿಸುವ ಸಾಧ್ಯತೆಯಿರುತ್ತದೆ. ಕೇವಲ ಮತ ಕೇಳುವುದಷ್ಟೇ ನಮ್ಮ ಕೆಲಸವಲ್ಲ. ಮತದಾನದ ಹಕ್ಕು ಸಿಗುವುದು ಈ ದೇಶದ ಜನರ ಮೂಲಭೂತ ಅಧಿಕಾರ. ಹಿಂದೂ, ಮುಸ್ಲಿಂ ಅಥವಾ ಕ್ರೈಸ್ತ ಯಾವುದೇ ಧರ್ಮ ಇರಲಿ. ಮತದಾನದ ಮೂಲಭೂತ ಅಧಿಕಾರ ದೊರಕಬೇಕು ಎಂಬುದು ಬಿಜೆಪಿಯ ಉದ್ದೇಶ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದ್ದೇವೆ.
*ಈ ಸಮಗ್ರ ಪರಿಷ್ಕರಣೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂಬ ಆರೋಪವನ್ನು ಕಾಂಗ್ರೆಸ್ ಸತತವಾಗಿ ಮಾಡುತ್ತಿದೆ?
ನೋಡಿ, ಈ ಸಮಗ್ರ ಪರಿಷ್ಕರಣೆಯ ಜವಾಬ್ದಾರಿಯನ್ನು ಕೇಂದ್ರ ಚುನಾವಣಾ ಆಯೋಗ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ವಹಿಸುತ್ತದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ರಾಜ್ಯದ ಐಎಎಸ್ ಅಧಿಕಾರಿಯಾಗಿದ್ದು, ಅವರನ್ನು ಮುಖ್ಯಮಂತ್ರಿಗಳೇ ನೇಮಕ ಮಾಡಿರುತ್ತಾರೆ. ಇಡೀ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರೆಲ್ಲರೂ ರಾಜ್ಯ ಸರ್ಕಾರದ ಅಧಿಕಾರಿಗಳು, ನೌಕರರೇ ಆಗಿರುತ್ತಾರೆ. ಕರ್ನಾಟಕದಲ್ಲಿ ಈಗ ಇಡೀ ಆಡಳಿತ ಯಂತ್ರವೇ ಕಾಂಗ್ರೆಸ್ ಕೈಯಲ್ಲಿರುವಾಗ ಬಿಜೆಪಿ ಸಮಗ್ರ ಪರಿಷ್ಕರಣೆಯನ್ನು ದುರುಪಯೋಗ ಮಾಡಲು ಹೇಗೆ ಸಾಧ್ಯ ಎಂಬುದನ್ನು ಯೋಚಿಸಬೇಕು.
*ಈ ಪ್ರಕ್ರಿಯೆಯನ್ನು ಬಳಸಿಕೊಂಡು ಬಿಜೆಪಿಯು ತಮಗೆ ಮತ ಹಾಕದವರನ್ನು ಗುರುತಿಸಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಿಸಬಹುದು ಎಂಬ ಆತಂಕವನ್ನು ಕಾಂಗ್ರೆಸ್ ವ್ಯಕ್ತಪಡಿಸುತ್ತಿದೆಯಲ್ವಾ?
ಇಡೀ ಪ್ರಕ್ರಿಯೆಯಲ್ಲಿ ಸರ್ಕಾರಿ ನೌಕರರೇ ಇರುವುದರಿಂದ ಹೆಸರುಗಳನ್ನು ಸೇರಿಸುವ ಅಥವಾ ಕಿತ್ತು ಹಾಕುವ ವ್ಯವಸ್ಥೆ ಕಾಂಗ್ರೆಸ್ ಕೈಯಲ್ಲಿಯೇ ಇದೆ. ಇದರಲ್ಲಿ ಬಿಜೆಪಿ ಹೇಗೆ ಪಾತ್ರ ವಹಿಸಲು ಸಾಧ್ಯ. ಕಳ್ಳನೇ ಪೊಲೀಸರನ್ನು ದೂಷಿಸಿದಂತಾಯಿತು ಇದು.
*ಮುಸ್ಲಿಂ ಸಮುದಾಯದ ಮತದಾರರನ್ನೇ ಗುರಿಯಾಗಿಸಿ ಅವರನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಬಹುದು ಎಂಬ ಅನುಮಾನವೂ ವಿರೋಧಿಗಳಿಂದ ವ್ಯಕ್ತವಾಗುತ್ತಿದೆ?
ಅದು ಹೇಗೆ ಮುಸ್ಲಿಂ ಸಮುದಾಯದ ಮತದಾರರನ್ನೇ ಗುರಿಯಾಗಿಸಿ ಮತದಾರರ ಪಟ್ಟಿಯಿಂದ ಕಿತ್ತು ಹಾಕಬಹುದು ಹೇಳಿ. ಹಾಗೆ ಮಾಡಲು ಆಗುವುದಿಲ್ಲ. ಆಯೋಗ ಕೇಳಿದ ಸೂಕ್ತ ದಾಖಲೆಗಳನ್ನು ನೀಡಿದ ಮೇಲೆ ಯಾರನ್ನೇ ಆಗಲಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಸಾಧ್ಯವಿಲ್ಲ. ಈಗ ಕಾಂಗ್ರೆಸ್ ಪಕ್ಷಕ್ಕೇ ಮುಸ್ಲಿಂ ಸಮುದಾಯದ ಮತಗಳು ಬೇಕಾಗಿರಲಿಕ್ಕಿಲ್ಲ. ಬಿಜೆಪಿಯ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದವರೇ ಮುಸ್ಲಿಂ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
*ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದಲ್ಲಿನ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಈ ಅನುಮಾನ, ಆತಂಕಕ್ಕೆ ಕಾರಣವಾಗಿದೆ. ಅಲ್ಲಿ ಅಪಾರ ಸಂಖ್ಯೆಯ ಮತದಾರರನ್ನು ಕೈಬಿಟ್ಟಿರುವುದರ ಹಿಂದೆ ಬಿಜೆಪಿ ಪಾತ್ರವಿದೆ ಎಂಬ ಆರೋಪ ಕೇಳಿಬಂದಿದೆ?
ಪಶ್ಚಿಮ ಬಂಗಾಳದಲ್ಲಿ ಸಮಗ್ರ ಪರಿಷ್ಕರಣೆ ನಡೆಯುವ ವೇಳೆ ಅಲ್ಲಿ ಬಿಜೆಪಿ ಸರ್ಕಾರವೇನೂ ಇರಲಿಲ್ಲ. ಅಲ್ಲಿ ಇದ್ದದ್ದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಸರ್ಕಾರ. ಪರಿಷ್ಕರಣೆಯಲ್ಲಿ ಭಾಗಿಯಾದ ಅಧಿಕಾರಿಗಳು, ಸಿಬ್ಬಂದಿ ಆ ಸರ್ಕಾರಕ್ಕೆ ಸೇರಿದವರು. ಸುಪ್ರೀಂ ಕೋರ್ಟ್ ಕೂಡ ನಿಗಾ ವಹಿಸಿತ್ತು. ಅಲ್ಲಿ ಬಿಜೆಪಿಯ ಪಾತ್ರವೇ ಇಲ್ಲ. ಇದು ಸುಳ್ಳು ಆರೋಪ ಅಷ್ಟೇ.