MLC ಹೆಸರಿನಲ್ಲಿ ‘ವಿಷಲಡ್ಡು’ ಪಾರ್ಸಲ್‌! - ಹೊಸವರ್ಷದ ಶುಭಾಶಯ ನೆಪದಲ್ಲಿ ಕೊರಿಯರ್‌

ಸಾರಾಂಶ

 ಕೋರಿಯರ್‌ ಮೂಲಕ ಸರ್ಜಿ ಗ್ರೂಪ್‌ ಆಫ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ ಆದ ವಿಧಾನಪರಿಷತ್‌ ಸದಸ್ಯ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ನಗರದ ವೈದ್ಯರೂ ಸೇರಿ ವಿವಿಧ ಗಣ್ಯ ವ್ಯಕ್ತಿಗಳಿಗೆ ‘ಸಂಶಯಾಸ್ಪದ ವಿಷಮಿಶ್ರಿತ ಲಾಡು’ಗಳಿರುವ ಪಾರ್ಸಲ್ ಅನ್ನು ಕೋರಿಯರ್‌ ಮೂಲಕ ಕಳುಹಿಸಿರುವ ಅಘಾತಕಾರಿ ಘಟನೆ

ಶಿವಮೊಗ್ಗ : ಹೊಸವರ್ಷಕ್ಕೆಶುಭಾಶಯ ಕೋರುವ ನೆಪದಲ್ಲಿ ಡಿಟಿಡಿಸಿ ಕೋರಿಯರ್‌ ಮೂಲಕ ಸರ್ಜಿ ಗ್ರೂಪ್‌ ಆಫ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ ಆದ ವಿಧಾನಪರಿಷತ್‌ ಸದಸ್ಯ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ನಗರದ ವೈದ್ಯರೂ ಸೇರಿ ವಿವಿಧ ಗಣ್ಯ ವ್ಯಕ್ತಿಗಳಿಗೆ ‘ಸಂಶಯಾಸ್ಪದ ವಿಷಮಿಶ್ರಿತ ಲಾಡು’ಗಳಿರುವ ಪಾರ್ಸಲ್ ಅನ್ನು ಕೋರಿಯರ್‌ ಮೂಲಕ ಕಳುಹಿಸಿರುವ ಅಘಾತಕಾರಿ ಘಟನೆ ಗುರುವಾರ ನಡೆದಿದೆ.

ಡಿಟಿಡಿಸಿ ಕೋರಿಯರ್‌ ಮೂಲಕ ಭದ್ರಾವತಿಯಿಂದ ಈ ಪಾರ್ಸೆಲ್‌ ಕಳುಹಿಸಲಾಗಿದೆ. ಒಬ್ಬರು ಇದನ್ನು ಬಾಯಲ್ಲಿ ಹಾಕಿಕೊಂಡ ತಕ್ಷಣ ಕಹಿ ಅಂಶ ಪತ್ತೆಯಾಗಿದೆ. ಕೂಡಲೇ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡ ಗಂಡಾಂತರ ತಪ್ಪಿದಂತಾಗಿದೆ. ಈ ಬೆನ್ನಲ್ಲೇ ಅವರು ಲ್ಯಾಬ್‌ಗೆ ಲಡ್ಡು ಬಾಕ್ಸ್‌ಗಳನ್ನು ರವಾನೆ ಮಾಡಿದ್ದಾರೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ.

ತಮ್ಮ ತೇಜೋವಧೆ ಮಾಡುವ ದೃಷ್ಟಿಯಿಂದ ಈ ರೀತಿಯ ಕೃತ್ಯ ಎಸಲಾಗಿದ್ದು, ಈ ಬಗ್ಗೆ ತನಿಖೆ ನಡೆಯಬೇಕು. ಈಗಾಗಲೇ ಎಸ್ಪಿ ಅವರಿಗೆ ದೂರು ನೀಡಿದ್ದೇನೆ ಎಂದು ಡಾ.ಧನಂಜಯ ಸರ್ಜಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಆಗಿದ್ದನು?:

ಸರ್ಜಿ ಹೆಸರಿನಲ್ಲಿ ಒಂದು ಪತ್ರ ಹಾಗೂ ಸ್ವೀಟ್ ಬಾಕ್ಸ್‌ ಇರುವ ಪಾರ್ಸೆಲ್‌ ಮೊದಲಿಗೆ ಎನ್‌ಇಎಸ್‌ ಕಾರ್ಯದರ್ಶಿ ನಾಗರಾಜ್‌ ಅವರಿಗೆ ತಲುಪಿದೆ. ಬಳಿಕ ಅವರು ಬಾಕ್ಸ್‌ನಲ್ಲಿದ್ದ ಲಾಡನ್ನು ತಿಂದಿದ್ದಾರೆ. ಅದು ಕಹಿಯಾಗಿದ್ದು, ಅನುಮಾನ ಬಂದ ಬಳಿಕ ಡಾ.ಸರ್ಜಿಯವರಿಗೆ ಕರೆ ಮಾಡಿ ನೀವು ಕಳುಹಿಸಿದ ಸಿಹಿ ವ್ಯತ್ಯಾಸವಾಗಿದೆ. ಬೇರೆಯವರಿಗೆ ಕಳುಹಿಸುವ ಮುನ್ನ ಎಚ್ಚರಿಕೆ ವಹಿಸಿ ಎಂದಿದ್ದಾರೆ.

ನಾನು ಪಾರ್ಸಲ್ ಕಳಿಸಿಲ್ಲ- ಸರ್ಜಿ:

ಆಗ ತಾವು ಯಾವುದೇ ಪಾರ್ಸಲ್‌ ಕಳುಹಿಸಿಲ್ಲ ಎಂದು ಡಾ.ಸರ್ಜಿ ತಿಳಿಸಿದ್ದಾರೆ.

Share this article