ದಲಿತರ ಸ್ಮಶಾನ ಜಾಗದಲ್ಲಿ ಅಕ್ರಮ ಗಣಿಗಾರಿಕೆ । ತಹಸೀಲ್ದಾರ್ ಜೊತೆ ಚರ್ಚೆಯಲ್ಲಿದ್ದ ಯುವಕನ ಮೇಲೆ ಹಲ್ಲೆ
ತಾಲೂಕಿನ ಹಿರೀಕಾಟಿ ಗ್ರಾಮದಲ್ಲಿ ದಲಿತ ಸ್ಮಶಾನದ ಜಾಗದಲ್ಲಿ ಕ್ವಾರಿ ತ್ಯಾಜ್ಯ ಸುರಿದಿದ್ದಾರೆ ಹಾಗೂ ಸ್ಮಶಾನದ ಬಳಿಯೇ ಗಣಿಗಾರಿಕೆ ನಡೆಯುತ್ತಿದೆ ಎಂದು ಎಸ್‌ಸಿ,ಎಸ್ಟಿ ಸಭೆಯಲ್ಲಿ ಬಂದ ದೂರಿನ ಹಿನ್ನಲೆ ಸ್ಥಳ ಪರಿಶೀಲನೆಗೆ ಬಂದ ತಹಸೀಲ್ದಾರ್ ಭೇಟಿ ಸಮಯದಲ್ಲಿ ದೂರು ನೀಡಿದ್ದ ಯುವಕನ ಮೇಲೆ ಗ್ರಾಮದ ಮತ್ತೊಂದು ಗುಂಪು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ತಹಸೀಲ್ದಾರ್ ಟಿ.ರಮೇಶ್ ಬಾಬು ಹಿರೀಕಾಟಿ ಗ್ರಾಮದ ದಲಿತರ ಸ್ಮಶಾನದ ಬಳಿಗೆ ಹೋದಾಗ ಗ್ರಾಮದ ಯುವಕ ಶ್ರೀಧರ್ ಮತ್ತು ಸ್ನೇಹಿತ ಸ್ಮಶಾನದ ಚಿತ್ರಣ ತೋರಿಸುತ್ತಿದ್ದಾಗ ಶ್ರೀಧರ್ ಹಾಗೂ ಪ್ರಸನ್ನನ ನಡುವೆ ಮಾತಿನ ಚಕಮಕಿ ನಡೆದಿದೆ.ದಲಿತರ ಸ್ಮಶಾನದ ಬಳಿ ಗಾಯತ್ರಿ ಪುಟ್ಟಣ್ಣ, ಗೀತಾ, ಗಣೇಶ್ ಗಣಿಗಾರಿಗೆ ಲೀಸ್ ಪಡೆದಿದ್ದು, ಸ್ಮಶಾನದ ಬಳಿಯೇ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಎಸ್‌ಸಿ,ಎಸ್ಟಿ ಸಭೆಯಲ್ಲಿ ದೂರು ಬಂದಿತ್ತು.
ಪೊಲೀಸರಿಗೆ ಹೇಳಿಕೆ ನೀಡಿದ ಶ್ರೀಧರ್, ದಲಿತರ ಸ್ಮಶಾನ ೧೯೯೭ ರಲ್ಲಿ ಮಂಜೂರಾಗಿದೆ.ಆದರೆ, ಈಗ ಸ್ಮಶಾನದ ಬಳಿಯೇ ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡಿದ್ದಲ್ಲದೇ ಗಣಿಗಾರಿಕೆ ನಡೆಸುತ್ತಿದ್ದನ್ನು ತಹಸೀಲ್ದಾರ್ ಬಳಿ ಹೇಳುತ್ತಿದ್ದಾಗ ಗ್ರಾಮದ ಪ್ರಸನ್ನ,ಚಿನ್ನಯ್ಯ,ಗಂಗಾಧರ್,ರವಿ ಗಲಾಟೆ ಬಂದಿದ್ದು, ಪ್ರಸನ್ನ ಕಲ್ಲಿನಿಂದ ಹಣೆಗೆ ಹೊಡೆದಿದ್ದರಿಂದ ಹಣೆಯಿಂದ ತೀವ್ರ ರಕ್ತಸಾವ್ರವಾಗಿ ನನ್ನ ಅಣ್ಣ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಪೊಲೀಸರಿಗೆ ನಿಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಈ ಸಂಬಂಧ ಬೇಗೂರು ಠಾಣೆಯಲ್ಲಿ ನಾಲ್ವರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದೂರುದಾರನ ಮೇಲಿನ ಹಲ್ಲೆಗೆ ಖಂಡನೆ