ಜನಸ್ಪಂದನಾ ಸಭೆಗೆ ಅಧಿಕಾರಿಗಳ ಗೈರು ಸಲ್ಲ: ಶಾಸಕ

KannadaprabhaNewsNetwork | Published : Nov 8, 2023 1:00 AM

ಸಾರಾಂಶ

ಸಾರ್ವಜನಿಕ ಸ್ಪಂದನಾ ಸಭೆಗಳಿಗೆ ತಾಲೂಕು ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಬೇಕು. ಆದರೆ ಇಂದಿನ ಸಭೆಗೆ ಬಾರದ ಅಧಿಕಾರಿಗಳಿಗೆ ನೋಟೀಸ್ ನೀಡುವ ಮೂಲಕ ಕೊನೆ ಎಚ್ಚರಿಕೆ ನೀಡಿ ಎಂದು ತಾಪಂ ಇಓಗೆ ಶಾಸಕ ಕೖಷ್ಣಮೂರ್ತಿ ಸೂಚಿಸಿದರು.

ತಾಲೂಕಿನ ಕುಣಗಳ್ಳಿ ಗ್ರಾಪಂನಲ್ಲಿ ಜನಸಂಪರ್ಕ ಸಭೆ । ಜನರಿಗೆ ಸ್ಪಂದಿಸಲು ಅಧಿಕಾರಿಗಳಿಗೆ ಶಾಸಕರ ತಾಕೀತು

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸಾರ್ವಜನಿಕ ಸ್ಪಂದನಾ ಸಭೆಗಳಿಗೆ ತಾಲೂಕು ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸಬೇಕು. ಆದರೆ ಇಂದಿನ ಸಭೆಗೆ ಬಾರದ ಅಧಿಕಾರಿಗಳಿಗೆ ನೋಟೀಸ್ ನೀಡುವ ಮೂಲಕ ಕೊನೆ ಎಚ್ಚರಿಕೆ ನೀಡಿ ಎಂದು ತಾಪಂ ಇಓಗೆ ಶಾಸಕ ಕೖಷ್ಣಮೂರ್ತಿ ಸೂಚಿಸಿದರು. ತಾಲೂಕಿನ ಕುಣಗಳ್ಳಿ ಗ್ರಾಪಂನಲ್ಲಿ ಅಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಇಂದಿನ ಸಭೆಗೆ ಗೈರಾದವರಿಗೆ ನೋಟಿಸ್ ನೀಡಿ ಕಾರಣ ಕೇಳಲಾಗುವುದು, ಮುಂದಿನ ದಿನಗಳಲ್ಲಿ ಈ ರೀತಿ ನಿರ್ಲಕ್ಷ್ಯ ಮಾಡಿದರೆ ಮೇಲಾಧಿಕಾರಿಗಳಿಗೆ ಸ್ಪಂದನೆ ಇಲ್ಲ ಎಂದು ದೂರಬೇಕಾಗುತ್ತದೆ ಎಂದು ಎಚ್ಚರಿಸಿದರು. ಇಂದಿನ ಸಭೆಗೆ ತಹಸೀಲ್ದಾರ್ ಬಂದಿಲ್ಲ, ಅವರ ಬದಲಿಗೆ ಗ್ರೇಡ್ 2 ತಹಸೀಲ್ದಾರ್ ಇಲ್ಲವೇ ಆರ್ ಐ ಬರಬೇಕಿತ್ತು, ಆರ್ ಐ ಸರ್ವೇಯಲ್ಲಿ ನಿರತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ನಿರ್ಲಕ್ಷ್ಯ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.

ನಿರ್ವಾಹಕರು ಮಹಿಳೆಯರೊಂದಿಗೆ ಸೌಜನ್ಯದಿಂದ ವರ್ತಿಸಿ:

ಜನಸಂಪರ್ಕ ಸಭೆಯಲ್ಲಿ ಕೆಲವು ಅಹವಾಲುಗಳು ಬಂದಿದ್ದು, ಈ ಪೈಕಿ ಸರ್ಕಾರಿ ಬಸ್‌ನ ನಿರ್ವಾಹಕರು ಮಹಿಳೆಯರ ಜತೆ ಅನುಚಿತವಾಗಿ ವರ್ತಿಸುತ್ತಾರೆ ಎಂಬ ದೂರುಗಳಿವೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಮೇಲಾಧಿಕಾರಿಗಳು ತಿಳಿಹೇಳಬೇಕು ಎಂದು ಸೂಚಿಸಿದರು.

ಇ-ಸ್ವತ್ತು ವಿಚಾರದಲ್ಲಿ ಬಹಳಷ್ಟು ದೂರುಗಳಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು. ಜನರ ಸಮಸ್ಯೆಗೆಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಜವಾಬ್ದಾರಿ ಅರಿಯಬೇಕು, ಪಿಎಂ ಯೋಜನಯಡಿ ಇನ್ನೂ ಬಿಲ್ ಆಗಿಲ್ಲ ಎಂಬ ಆರೋಪಗಳಿದ್ದು, ಅಧಿಕಾರಿಗಳು ಪರಿಶೀಲಿಸಬೇಕು. ಇಂದಿನ ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದರು.

ವಾರಕ್ಕೆ 2 ಗ್ರಾಪಂನಲ್ಲಿ ಸಭೆ:

ವಾರಕ್ಕೆ 2 ಗ್ರಾಪಂನಲ್ಲಿ ಜನಸಂಪರ್ಕ ಸಭೆ ನಡೆಸುತ್ತಿದ್ದು, ಜನರ ಸಮಸ್ಯೆ ಬಗೆಹರಿಸಲು ಜನರ ಬಳಿಗೆ ಬರುತ್ತಿದ್ದೇನೆ. ಈಗಾಗಲೇ ಹರಳೆ, ಮುಳ್ಳೂರು, ದೇಮಳ್ಳಿ, ಕುದೇರಿ, ಅಂಬಳೆ, ದುಗ್ಗಟ್ಟಿ ಗ್ರಾಪಂಗಳಲ್ಲಿ ಜನಸಂಪರ್ಕ ಸಭೆ ನಡೆಸಲಾಗಿದ್ದು, ಇಂದು ಕುಣಗಳ್ಳಿ ಗ್ರಾಪಂಗೆ ಆಗಮಿಸಿದ್ದೇನೆ. ಇಂದಿನ ಸಭೆಯಲ್ಲಿ ವಾಲ್ಮೀಕಿ ಭವನ, ಅರಸು ನಿಗಮದಲ್ಲಿ ಸವಲತ್ತು, ವಿದ್ಯುತ್ ಸಂಪರ್ಕ, ಚರಂಡಿ ನಿರ್ಮಾಣ, ಸಿಸಿ ರಸ್ತೆಗಳ ವಿಚಾರದಲ್ಲಿ ಅನೇಕ ಅರ್ಜಿಗಳು ಬಂದಿವೆ. ಎಲ್ಲವನ್ನೂ ಹಂತ ಹಂತವಾಗಿ ಪರಿಶೀಲಿಸಲಾಗುವುದು ಎಂದರು.

ವಿದ್ಯಾರ್ಥಿಯೊಬ್ಬ ರಸ್ತೆ ಚರಂಡಿ, ನರೇಗಾ ಬಿಲ್ ಬಗ್ಗೆ ಹಾಗೂ ಮುಡಿಗುಂಡ ಸೇತುವೆಗೆ ಪರ್ಯಾಯವಾಗಿ ಮತ್ತೊಂದು ಸೇತುವೆ ನಿರ್ಮಿಸಿ, ಸುರಾಪುರ ಕೆರೆ ಮುಚ್ಚಲಾಗಿದೆ ಎಂಬಿತ್ಯಾದಿ ದೂರು ನೀಡಿದ್ದು, ಅಧಿಕಾರಿಗಳು ಅವುಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಬೇಕು.

ತಾಪಂ ಇಓ ಶ್ರೀನಿವಾಸ್ ಮಾತನಾಡಿ, ಕರ್ನಾಟಕ ರಾಜ್ಯದ ಮಹಾತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಸಭೆ ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದರು. ಗ್ರಾಪಂ ಮಟ್ಟದಲ್ಲೇ ಸಭೆ ನಡೆಸಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ಮಹಾದಾಸೆ ಹೊತ್ತು ಶಾಸಕ ಕೖಷ್ಣಮೂರ್ತಿಯವರು ಕುಣಗಳ್ಳಿ ಗ್ರಾಪಂಗೆ ಬಂದಿದ್ದು, ಬಹುತೇಕ ಸಮಸ್ಯೆಗಳಿಗೆ ಇಲ್ಲೇ ಪರಿಹಾರ ಸೂಚಿಸಲಿದ್ದಾರೆ ಎಂದರು.

ಸಭೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ನಿಂಗರಾಜು, ಜಿ.ಪಂ ಮಾಜಿ ಸದಸ್ಯ ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ಬಿಇಒ ಮಂಜುಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಂಜಮ್ಮಣ್ಣಿ ಹಾಗೂ ಇನ್ನಿತರಿದ್ದರು.ಕೋಟ್.....

ತಪ್ಪಿಸಿಕೊಂಡು ಹೋಗದಿರಿ..!

ಬಿರಿಯಾನಿ ಊಟ ಇದೆ ಎಂದು ಅಧಿಕಾರಿಗಳು ತಪ್ಪಿಸಿಕೊಂಡು ಹೋಗಬೇಡಿ, ಶುದ್ಧ ಸಸ್ಯಹಾರಿ ಆಹಾರವಿದ್ದು, ಊಟಕ್ಕಾಗಿ ನನ್ನ ಜೊತೆ ಬನ್ನಿ, ಬಳಿಕ ತಿಮ್ಮರಾಜಿಪುರ ಸಭೆಯಲ್ಲಿ ಭಾಗವಹಿಸೋಣ

- ಎ. ಆರ್. ಕೖಷ್ಣಮೂರ್ತಿ. ಶಾಸಕರು-----

----

7ಕೆಜಿಎಲ್11

ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಪಂನಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿದರು.

Share this article