‘ಮೊಹಬ್ಬತ್ ಕಿ ದುಕಾನ್ (ಪ್ರೀತಿಯ ಅಂಗಡಿ) ಬಗ್ಗೆ ಮಾತನಾಡುವವರು ಮೋದಿಯ ಸಮಾಧಿ ತೋಡುತ್ತೇವೆ ಎಂಬ ಘೋಷಣೆ ಕೂಗುತ್ತಿದ್ದಾರೆ. ಇದು ಚುನಾವಣಾ ಸೋಲುಗಳ ಬಗ್ಗೆ ಅವರ ಹತಾಶೆ ಎತ್ತಿ ತೋರಿಸುತ್ತದೆ.

ನವದೆಹಲಿ: ‘ಮೊಹಬ್ಬತ್ ಕಿ ದುಕಾನ್ (ಪ್ರೀತಿಯ ಅಂಗಡಿ) ಬಗ್ಗೆ ಮಾತನಾಡುವವರು ಮೋದಿಯ ಸಮಾಧಿ ತೋಡುತ್ತೇವೆ ಎಂಬ ಘೋಷಣೆ ಕೂಗುತ್ತಿದ್ದಾರೆ. ಇದು ಚುನಾವಣಾ ಸೋಲುಗಳ ಬಗ್ಗೆ ಅವರ ಹತಾಶೆ ಎತ್ತಿ ತೋರಿಸುತ್ತದೆ. ಅವರು ಎಂದಿಗೂ ನನ್ನ ಸಮಾಧಿ ಅಗೆಯಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ

ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ನಿನ್ನೆ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಕುರಿತು ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ರಾಷ್ಟ್ರಪತಿಗಳನ್ನು ಅವಮಾನಿಸಿದೆ. ಇದು ಭಾರತದ ಬಡ ಬುಡಕಟ್ಟು ಮಹಿಳೆಯೊಬ್ಬಳು ರಾಷ್ಟ್ರಪತಿಯಾಗಿದ್ದರ ನಿಂದನೆ ಮಾತ್ರವಲ್ಲ, ಅವರು ಹೊಂದಿರುವ ಉನ್ನತ ಸಾಂವಿಧಾನಿಕ ಹುದ್ದೆ ಮತ್ತು ಭಾರತದ ಸಂವಿಧಾನಕ್ಕೂ ಮಾಡಿದ ಅವಮಾನ. ಕಾಂಗ್ರೆಸ್ಸಿಗರಿಗೆ ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕಿಲ್ಲ’ ಎಂದು ಕಿಡಿ ಕಾರಿದರು.

ಬಡವ ಪ್ರಧಾನಿಯಾಗಿದ್ದಕ್ಕೆ ಅಜೀರ್ಣ:

‘ಕಾಂಗ್ರೆಸ್ಸಿನ ಮೊದಲ ಕುಟುಂಬವು ಪ್ರಧಾನಿ ಹುದ್ದೆಯನ್ನು ತಮ್ಮ ಕುಟುಂಬದ ಆಸ್ತಿ ಎಂದು ಭಾವಿಸುತ್ತದೆ. ನನ್ನಂತಹ ಬಡವ ಆ ಹುದ್ದೆಯನ್ನು ಅಲಂಕರಿಸಿರುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಅವರು ನನ್ನನ್ನು ಪ್ರತಿದಿನ ನಿಂದಿಸುತ್ತಾರೆ. ವಿಪಕ್ಷಗಳು ನನ್ನ ಸಮಾಧಿ ಅಗೆಯಲು ಸಾಧ್ಯವಿಲ್ಲ. ಏಕೆಂದರೆ ನಾನು ನಿಃಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ದೇಶದ ಕೋಟ್ಯಂತರ ಮಾತೆಯರು, ಸಹೋದರಿಯರು ಮತ್ತು ಬಡವರ ಆಶೀರ್ವಾದ ನನ್ನ ಮೇಲಿದೆ’ ಎಂದು ಚಾಟಿ ಬೀಸಿದರು.

ನಾನು ಪ್ರತಿದಿನ 2 ಕೆ.ಜಿ. ಬೈಗುಳ ತಿನ್ನುತ್ತೇನೆ. ಇದೇ ನನ್ನ ಆರೋಗ್ಯದ ಗುಟ್ಟು’ ಎಂದರು.