ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ವಿರುದ್ಧ ಬಿಜೆಪಿ ನಾಯಕರು ನಡೆಸುತ್ತಿರುವ ರಾಜಕೀಯ ಪಿತೂರಿ ಖಂಡಿಸಿ, ಸಚಿವ ತಿಮ್ಮಾಪೂರ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಮುಖಂಡರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರ ವಿರುದ್ಧ ಬಿಜೆಪಿ ನಾಯಕರು ನಡೆಸುತ್ತಿರುವ ರಾಜಕೀಯ ಪಿತೂರಿ ಖಂಡಿಸಿ, ಸಚಿವ ತಿಮ್ಮಾಪೂರ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಮುಖಂಡರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ರಸ್ತೆ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಲ್ಲಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿ ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿದರು.

ಆರ್.ಅಶೋಕ್ ವಿರುದ್ಧ ವಾಗ್ದಾಳಿ:

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ರಾಜುಗೌಡ ಪಾಟೀಲ ಮಾತನಾಡಿ, ಬಗರ್ ಹುಕುಂ ಭೂ ಅಕ್ರಮ, ಬಿಡಿಎ ಜಮೀನು ಲೂಟಿ, ವರ್ಗಾವಣೆ ದಂದೆ ಹಾಗೂ ಕೋವಿಡ್ ಕಿಟ್ ಹಗರಣಗಳಲ್ಲಿ ಭಾಗಿಯಾಗಿರುವ ಆರ್.ಅಶೋಕ್ ರಾಜ್ಯದ ಕಲೆಕ್ಷನ್ ಮಾಸ್ಟರ್ ಹತ್ತಾರು ಹಗರಣಗಳ ಆರೋಪ ಹೊತ್ತಿರುವ ಅವರಿಗೆ ಪ್ರಾಮಾಣಿಕ ದಲಿತ ನಾಯಕ ತಿಮ್ಮಾಪುರ ಅವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ. ಅಶೋಕ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ದಲಿತ ಮುಖಂಡ ಕೃಷ್ಣ ಮಾದರ್ ಹಾಗೂ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಪ್ರಕಾಶ್ ತಳಗೇರಿ ಮಾತನಾಡಿ, ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಭ್ರಷ್ಟಾಚಾರದ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಬೆಂಗಳೂರಿನಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಪಡೆದ ಸಿಎ ನಿವೇಶನದಲ್ಲಿ ನಿಯಮ ಮೀರಿ ಧಮ್ ಬಿರಿಯಾನಿ ಹೋಟೆಲ್ ಹಾಗೂ ವಾಣಿಜ್ಯ ಸಂಕೀರ್ಣ ನಡೆಸುತ್ತಿದ್ದಾರೆ. ಸುಮಾರು 1.5 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಕಬಳಿಸಿ ಖಾಸಗಿ ಕಟ್ಟಡ ನಿರ್ಮಿಸಿದ್ದಾರೆ. ​ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ನಾರಾಯಣಸ್ವಾಮಿ ಅವರನ್ನು ತಕ್ಷಣವೇ ವಿಧಾನ ಪರಿಷತ್ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.​ಸಾರ್ವಜನಿಕ ಆಸ್ತಿ ಲೂಟಿ ಹೊಡೆಯುತ್ತಿರುವ ಬಿಜೆಪಿ ನಾಯಕರು ನೈತಿಕತೆಯ ಪಾಠ ಮಾಡುವುದು ಹಾಸ್ಯಾಸ್ಪದ. ದಲಿತ ನಾಯಕರನ್ನು ರಾಜಕೀಯವಾಗಿ ಮುಗಿಸಲು ನಡೆಸುತ್ತಿರುವ ಈ ಸಂಚನ್ನು ಜನತೆ ಗಮನಿಸುತ್ತಿದ್ದಾರೆ ಎಂದು ಮುಖಂಡರು ಗುಡುಗಿದರು.

ಮಂಜು ಉಪ್ಪಾರ ಮಾತನಾಡಿ, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೇಲೆ ಬ್ರಹ್ಮಾಂಡ ಬ್ರಷ್ಟಾಚಾರ ಆರೋಪಗಳಿವೆ. ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಮೇಲಿನ ಆರೋಪಗಳು ನಿರಾಧಾರ ಎಂದು ಸಾಬೀತಾದ ಮೇಲೆ ಸಚಿವ ತಿಮ್ಮಾಪುರ ರಾಜೀನಾಮೆ ಕೇಳಲು ಅರ್ಹರೆಂದರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಘುನಾಥ ಮೊಕಾಶಿ, ಮಂಜುನಾಥ ಇನೂಷ್ ಕುಡಚಿ, ಹೊಳಬಸು ತೇಲಿ, ಅರ್ಜುನಗೌಡ ಪಾಟೀಲ, ಪ್ರವೀಣ ಗೌಡ ಪಾಟೀಲ, ಬಸು ಮೇತ್ರಿ, ಸಂತೋಷ ಪಾಲೋಜಿ, ಲೋಕಾಪುರ ಮಹಿಳಾ ಘಟಕದ ಅಧ್ಯಕ್ಷ ರೇಖಾ ಪಾಟೀಲ, ಮಹಾದೇವಿ ಮಾದರ,

ಲಕ್ಷ್ಮಿ ಡೋಣಿ, ಸಿದ್ದರಾಮ ಕುರಿ, ಚಿನ್ನು ಅಂಬಿ, ಪ್ರಶಾಂತ ಕಾಳೆ, ಭೀಮಶಿ ಮೇತ್ರಿ, ಮಹಾದೇವ ರೂಗಿ, ಜಾವೇದ ಸಾಂಗಲೀಕರ, ಅಂಜುಮನ ಸಂಸ್ಥೆ ಅಧ್ಯಕ್ಷ ಬಿಲಾಲ್ ಬಾಲ್ದಾರ, ಇಸಬ್ ಜಮಾದಾರ, ಇಬ್ರಾಹಿಂ ಬೆಪಾರಿ, ಯಮನಪ್ಪ ಬೆಳಗಲಿ, ಮಾರುತಿ ಮಾನೆ , ಶಿವಾನಂದ ಮ್ಯಾಗೇರಿ, ಕಿರಣ ಹೊಂಗಲ ಸೇರಿದಂತೆ ನೂರಾರು ಅಭಿಮಾನಿ ಬಳಗದವರು ಮಾತನಾಡಿ, ಸಚಿವರ ವಿರುದ್ಧ ಪಿತೂರಿ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಸಚಿವರ ಅಭಿಮಾನಿ ಬಳಗದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.