ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮೂಗುದಾರ ಹಾಕಲು ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಕಾಯ್ದೆ-1959ಕ್ಕೆ ತಿದ್ದುಪಡಿ ತರಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಬೆಂಗಳೂರು : ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ, ಅಕ್ರಮ ಹಾಗೂ ಸ್ವಜನಪಕ್ಷಪಾತದ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಮೂಗುದಾರ ಹಾಕಲು ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಕಾಯ್ದೆ-1959ಕ್ಕೆ ತಿದ್ದುಪಡಿ ತರಲು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ತಿದ್ದುಪಡಿ ಪ್ರಕಾರ ಈವರೆಗೆ ಕೆಪಿಎಸ್ಸಿ ಕುರಿತ ಯಾವುದೇ ನಿಯಮಾವಳಿ ರೂಪಿಸಲು ಸರ್ಕಾರ ಕೆಪಿಎಸ್ಸಿ ಜತೆ ಸಮಾಲೋಚನೆ ಮಾಡಬೇಕು ಎಂಬ ನಿಯಮವಿತ್ತು. ಇದನ್ನು ತೆಗೆದು ಹಾಕಲು ತೀರ್ಮಾನಿಸಿದ್ದು, ಕೆಪಿಎಸ್ಸಿಗೆ ನಿಯಮಾವಳಿ ರೂಪಿಸುವುದು ಅಥವಾ ತಿದ್ದುಪಡಿ ತರಲು ಕೆಪಿಎಸ್ಸಿಗೆ ಜತೆ ಸಮಾಲೋಚನೆ ಅಗತ್ಯವಿಲ್ಲ ಎಂದು ಮಾಡಲಾಗಿದೆ.
ಇನ್ನು ಕೆಪಿಎಸ್ಸಿಯಲ್ಲಿ ಸ್ವಜನಪಕ್ಷಪಾತಕ್ಕೆ ಬ್ರೇಕ್ ಹಾಕಲು ಈವರೆಗೆ ಆಯೋಗಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನದ ಪ್ರಶ್ನೆ ಬಂದರೂ ಅಧ್ಯಕ್ಷರು ಸಭೆ ನಡೆಸಿ ತೀರ್ಮಾನಿಸಬಹುದಿತ್ತು. ಈ ನಿಯಮವನ್ನು ಬದಲಿಸಿ ಆಯೋಗದ ಸಭೆಗೆ ಅಧ್ಯಕ್ಷರನ್ನು ಸೇರಿಸಿ ಒಟ್ಟು ಸದಸ್ಯರ ಶೇ.50 ರಷ್ಟು ಕೋರಂ ಅಗತ್ಯ ಎಂದು ಮಾಡಲಾಗಿದೆ.
ಇನ್ನು ಸಭೆಯಲ್ಲಿ ಎಲ್ಲಾ ತೀರ್ಮಾನ ಹಾಗೂ ನಡಾವಳಿಗಳನ್ನು ಕಾರ್ಯದರ್ಶಿಗಳೇ ಖುದ್ದಾಗಿ ದಾಖಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ವಿರೋಧ ಉಲ್ಲೇಖಿಸಲು ಅವಕಾಶ: ಆಯೋಗವು ಸದಸ್ಯರ ಆಕ್ಷೇಪದ ಹೊರತಾಗಿಯೂ ಯಾವುದಾದರೂ ತೀರ್ಮಾನ ತೆಗೆದುಕೊಂಡರೆ ಅಂತಹ ತೀರ್ಮಾನದ ಬಗ್ಗೆ ಭಿನ್ನಾಭಿಪ್ರಾಯವನ್ನು ನಮೂದಿಸಲು ಸದಸ್ಯರಿಗೆ ಅವಕಾಶವಿದೆ. ಯಾಕೆ ತೀರ್ಮಾನವನ್ನು ವಿರೋಧಿಸಲಾಗುತ್ತಿದೆ ಎಂಬ ಕಾರಣಗಳ ಸಹಿತ ತಮ್ಮ ವಿರೋಧವನ್ನು ಉಲ್ಲೇಖಿಸಬಹುದು ಎಂಬ ಅಂಶ ಸೇರಿಸಲಾಗಿದೆ.
ಒಬ್ಬರೇ ಸಂದರ್ಶನ ಮಾಡಬಹುದು: ಸಂದರ್ಶನ ನಿಯಮಾವಳಿಗೂ ತಿದ್ದುಪಡಿ ಪ್ರಸ್ತಾಪಿಸಲಾಗಿದ್ದು, ಈವರೆಗೆ ಆಯೋಗ ನಿಯೋಜಿಸಿದ ಇಬ್ಬರು ಅಥವಾ ಹೆಚ್ಚು ಸದಸ್ಯರು ಅಭ್ಯರ್ಥಿಗಳ ಸಂದರ್ಶನ ನಡೆಸಬಹುದು. ಈ ಸಂದರ್ಶನದ ಫಲಿತಾಂಶಗಳನ್ನು ಆಯೋಗದ ಮುಂದೆ ಮಂಡಿಸಿ, ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂಬ ನಿಯಮ ಇತ್ತು.
ಇದನ್ನು ಬದಲಿಸಿ ಸಂದರ್ಶನ ಮಂಡಳಿಯಲ್ಲಿ ಆಯೋಗವು ನಿಯೋಜಿಸಬಹುದಾದ ಒಬ್ಬ ಸದಸ್ಯ ಮಾತ್ರ ಇರಬೇಕು. ಆದರೆ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ನಿಯಮದಲ್ಲಿರುವಂತೆ ಸಂದರ್ಶನ ನಡೆಸಬೇಕು ಎಂದು ನಿಯಮ ಬದಲಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಏನೇನು ಬದಲಾವಣೆ?
- ಕೆಪಿಎಸ್ಸಿ ಕುರಿತ ನಿಯಮಾವಳಿ ರೂಪಿಸಲು, ತಿದ್ದುಪಡಿಗೆ ಕೆಪಿಎಸ್ಸಿ ಜತೆ ಸಮಾಲೋಚನೆ ಅಗತ್ಯವಿಲ್ಲ
- ಯಾವುದೇ ತೀರ್ಮಾನ ವೇಳೆ ಕೆಪಿಎಸ್ಸಿ ಸಭೆಗೆ ಅಧ್ಯಕ್ಷರ ಸೇರಿಸಿ ಸದಸ್ಯರ ಶೇ.50 ರಷ್ಟು ಕೋರಂ ಕಡ್ಡಾಯ
- ಸಭೆಯ ಎಲ್ಲಾ ತೀರ್ಮಾನ ಹಾಗೂ ನಡಾವಳಿ ಕಾರ್ಯದರ್ಶಿಗಳೇ ಖುದ್ದಾಗಿ ದಾಖಲಿಸುವುದು ಕಡ್ಡಾಯ
- ಆಯೋಗ ಸದಸ್ಯರ ಆಕ್ಷೇಪದ ವಿರುದ್ಧ ಹೋದರೆ ಭಿನ್ನಾಭಿಪ್ರಾಯ ದಾಖಲಿಸಲು ಸದಸ್ಯರಿಗೆ ಅವಕಾಶ
- ಅಭ್ಯರ್ಥಿಗಳ ಸಂದರ್ಶನ ಮಂಡಳಿಯಲ್ಲಿ ಆಯೋಗ ನಿಯೋಜಿಸಿದ ಒಬ್ಬ ಸದಸ್ಯ ಮಾತ್ರ ಇರಬೇಕು