ಬಂಗಾರಪೇಟೆ : ನರೇಂದ್ರ ಮೋದಿರನ್ನು ಮೂರನೇ ಬಾರಿ ಪ್ರಧಾನಿಯಾಗಿ ಮಾಡಲು ಕೋಲಾರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ಎಂ.ಮಲ್ಲೇಶಬಾಬುರನ್ನು ಗೆಲ್ಲಿಸಲು ಬಿಜೆಪಿ,ಜೆಡಿಎಸ್ ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಒಂದಾಗಿ ಚುನಾವಣೆ ಎದುರಿಸಲು ಸಂಕಲ್ಪ ಮಾಡಬೇಕೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಹೇಳಿದರು.
ಪಟ್ಟಣದ ಕೆಸಿಆರ್ ಕಚೇರಿಯಲ್ಲಿ ಬಿಜೆಪಿ, ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಕೋಲಾರ ಲೋಕಸಭೆ ಕ್ಷೇತ್ರದ ಬಿಜೆಪಿ ವಶದಲ್ಲಿತ್ತು, ಈ ಬಾರಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ ಎಂ.ಮಲ್ಲೇಶಬಾಬು ಮೈತ್ರಿ ಅಭ್ಯರ್ಥಿಯಾಗಿದ್ದಾರೆ ಬಿಜೆಪಿ ಕಾರ್ಯಕರ್ತರು ಹೇಗಪ್ಪ ಜೆಡಿಎಸ್ ಅಭ್ಯರ್ಥಿಗೆ ಮತ ಕೇಳೋದು ಎಂದು ಸಂಕೋಚಪಡದೆ ಕಣದಲ್ಲಿರುವುದು ಬಿಜೆಪಿ ಅಭ್ಯರ್ಥಿಯೇ ಎಂದು ಭಾವಿಸಿ ಚುನಾವಣೆ ಎದುರಿಸಬೇಕು ಮನವಿ ಮಾಡಿದರು.
ಕಾರ್ಯಕರ್ತರು ಒಂದಾಗಬೇಕುಬಿಜೆಪಿ ಜೆಡಿಎಸ್ ಮೈತ್ರಿಯಾಗಿರುವುದರಿಂದ ಚುನಾವಣೆಯಲ್ಲಿ ಬರೀ ಮುಖಂಡರು ಒಂದಾದರೆ ಸಾಲದು ಬೇರುಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತರೂ ಸಹ ಒಂದಾದರೆ ಮಾತ್ರ ಚುನಾವಣೆಯನ್ನು ಎದುರಿಸಲು ಸಾಧ್ಯ, ಇಲ್ಲದಿದ್ದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿದ್ದರು, ಆದರೆ ಅಲ್ಲಿ ಮುಖಂಡರು ಮಾತ್ರ ಒಂದಾದರೆ ವಿನಃ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಒಂದಾಗಲಿಲ್ಲ,ಅಂತಹ ಸ್ಥಿತಿ ಈ ಬಾರಿ ಮರುಕಳಿಸುವುದು ಬೇಡ ಎಂದರು.
6ರಂದು ಸಮನ್ವಯ ಸಭೆ
ಬೂತ್ ಮಟ್ಟದ ಎರಡೂ ಪಕ್ಷಗಳ ಕಾರ್ಯಕರ್ತರು ಒಂದಾದಾಗ ಮಾತ್ರ ಕಾಂಗ್ರೆಸ್ ಅಭ್ಯರ್ಥಿಯನ್ನು ಸುಲಭವಾಗಿ ಸೋಲಿಸಲು ಸಾಧ್ಯವಾಗಲಿದೆ. ಏ. ೬ ರಂದು ಶನಿವಾರ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯನ್ನು ಕರೆಯಲಾಗಿದೆ, ಬಳಿಕ ಹೋಬಳಿ ಮಟ್ಟದಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿ ಈ ಸಮನ್ವಯ ಸಭೆಯನ್ನು ನಡೆಸಬೇಕೆಂದು ಸಲಹೆ ನೀಡಿದರು.
ಬಾಬು ಗೆದ್ದರೆ ಬಿಜೆಪಿ ಗೆದ್ದಂತೆ
ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ,ಬಿಜೆಪಿಯ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ಮಾತನಾಡಿ, ಕೋಲಾರ ಕ್ಷೇತ್ರ ಬಿಜೆಪಿ ವಶದಲ್ಲಿದೆ ಅದನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಾಲಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ, ಮೈತ್ರಿ ಅಭ್ಯರ್ಥಿ ಮಲ್ಲೇಶಬಾಬುರನ್ನು ಗೆಲ್ಲಿಸಿದರೆ ಅದು ಬಿಜೆಪಿ ಅಭ್ಯರ್ಥಿ ಗೆದ್ದಂತೆ, ಈ ನಿಟ್ಟಿನಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಹೊಂದಾಣಿಕೆಯಿಂದ ಶ್ರಮಿಸಿದರೆ ಗೆಲುವು ಕಷ್ಟವಲ್ಲ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ,ಜೆಡಿಎಸ್ ತಾಲೂಕು ಅಧ್ಯಕ್ಷ ಮುನಿರಾಜು, ವಡಗೂರು ಹರೀಶ್,ಕೋಲಾರ ಟಿಎಪಿಸಿಎಂಎಸ್ ಅಧ್ಯಕ್ಷ ರಾಮು,ಮುಖಂಡರಾದ ಶವಕುಮಾರ್, ಹುನ್ಕುಂದ ಕಟೇಶ್, ರಾಜಾರೆಡ್ಡಿ,ಹನುಮಪ್ಪ,ತಿಪ್ಪಾರೆಡ್ಡಿ,ವೈ.ವಿ.ರಮೇಶ್, ರಾಮಚಂದ್ರಪ್ಪ, ಶ್ರೀನಿವಾಸ್, ಮಂಜುನಾಥ್ ಮತ್ತಿತರರು ಇದ್ದರು.