ರಾಜ್ಯ ಸರ್ಕಾರಕ್ಕೆ ಎನ್‌ಡಿಆರ್‌ಎಫ್‌ ಹಣ ಬಿಡುಗಡೆ ವಿಳಂಬ ವಿವಾದ: ಚಲುವರಾಯಸ್ವಾಮಿ ಕಿಡಿ

KannadaprabhaNewsNetwork | Updated : Aug 16 2024, 04:44 AM IST

ಸಾರಾಂಶ

ಕೇಂದ್ರ ಸರ್ಕಾರವು ರಾಜ್ಯಕ್ಕೆ ಎನ್‌ಡಿಆರ್‌ಎಫ್‌ ಹಣ ಬಿಡುಗಡೆ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಸಚಿವ ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ರಾಜ್ಯದ ಜನರ ಪರವಾಗಿ ನಿಲ್ಲದೆ ಕೇಂದ್ರದ ಮುಂದೆ ಮಂಡಿಯೂರಿದ್ದಾರೆ ಎಂದು ಟೀಕಿಸಿದರು.

 ಮಂಡ್ಯ :  ಬಿಜೆಪಿ-ಜೆಡಿಎಸ್ ನವರಿಗೆ ಸ್ವಲ್ಪವಾದರೂ ನಾಚಿಕೆ, ಮಾನ ಮರ್ಯಾದೆ ಇದೆಯಾ. ಎನ್‌ಡಿಆರ್‌ಎಫ್‌ ಹಣವನ್ನು ರಾಜ್ಯಕ್ಕೆ ಕೊಡಿಸುವ ಯೋಗ್ಯತೆ ಪ್ರದರ್ಶಿಸಲಿಲ್ಲ. ನಾವು ಸುಪ್ರೀಂ ಕೋರ್ಟ್‌ಗೆ ಹೋಗಿ ಹಣ ಪಡೆದುಕೊಳ್ಳಬೇಕಾಯಿತು ಎಂದು ಸಚಿವ ಎನ್‌.ಚಲುವರಾಯಸ್ವಾಮಿ ಕೈಯಿಂದ ಹಣೆ ಚಚ್ಚಿಕೊಂಡು ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಕ್ಕೆ ಬರಪರಿಹಾರ ಹಣ ಕೊಡುವಂತೆ ಬಿಜೆಪಿ-ಜೆಡಿಎಸ್ ನವರು ಮೋದಿಯವರ ಬಳಿ ಹೋಗಿ ಕೇಳಬೇಕಲ್ಲವೇ. ನಾವು ಕೊಟ್ಟ ಮನವಿಗೆ ಮೋದಿ ಸ್ಪಂದಿಸಲಿಲ್ಲ, ಅಮಿತ್ ಶಾ ಸಭೆ ನಡೆಸಲಿಲ್ಲ ಎಂದು ಕಿಡಿಕಾರಿದರು.

ಬಜೆಟ್‌ನಲ್ಲಿ ನೀರಾವರಿಗೆ 5 ಸಾವಿರ ಕೋಟಿ ರು. ಮತ್ತು ಬೆಂಗಳೂರಿಗೆ 500 ಕೋಟಿ ರು. ಕೊಡುವುದಾಗಿ ಹೇಳಿ ಕೈಕೊಟ್ಟರು. ಅಷ್ಟಾದ್ರೂ ನಾವು ಅಭಿವೃದ್ಧಿಗೆ ತೊಂದರೆಯಾಗದಂತೆ ಆಡಳಿತ ನಡೆಸುತ್ತಿದ್ದೇವೆ ಎಂದು ನುಡಿದರು.

ಚನ್ನಪಟ್ಟಣ ಚುನಾವಣೆ ಗೆಲ್ಲುತ್ತೇವೆ:

ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ನಾವು ಗೆಲ್ಲುತ್ತೇವೆ. ಉಪಮುಖ್ಯಮಂತ್ರಿ ತವರು ಜಿಲ್ಲೆಯಾಗಿರುವುದರಿಂದ ಅವರೂ ಸಹ ವರ್ಕೌಟ್‌ ಮಾಡುತ್ತಿದ್ದಾರೆ. ಅಚ್ಚರಿಯ ಅಭ್ಯರ್ಥಿಯನ್ನು ಹುಡುಕಬೇಕಾ ಎಂಬ ಬಗ್ಗೆ ಆಲೋಚಿಸುತ್ತಿದ್ದೇವೆ ಎಂದರು.

ಅಭ್ಯರ್ಥಿ ವಿಚಾರದಲ್ಲಿ ಬಿಜೆಪಿ-ಜೆಡಿಎಸ್‌ನಲ್ಲಿ ಗೊಂದಲ ಇದೆ. ಯೋಗೇಶ್ವರ್ ಮತ್ತು ಜೆಡಿಎಸ್‌ ನಡುವೆಯೂ ಭಿನ್ನಮತವಿದೆ. ಯೋಗೇಶ್ವರ್‌ ಕಾಂಗ್ರೆಸ್‌ ಸೇರುವ ವಿಚಾರ ನನಗೆ ಗೊತ್ತಿಲ್ಲ. ಅವರು ಇನ್ನೂ ಬಿಜೆಪಿ ಪಕ್ಷ ಬಿಟ್ಟಿಲ್ಲ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಯಾರು ಬಂದರೂ ಸೇರಿಸಿಕೊಳ್ಳುತ್ತೇವೆ. ಮುಂದೆ ಏನಾಗುವುದೋ ನೋಡೋಣ ಎಂದಷ್ಟೇ ಹೇಳಿದರು.

ನಮ್ಮಲ್ಲಿ ಸದ್ಯ ಯಾವುದೇ ಗೊಂದಲ ಇಲ್ಲ. ಬಿಜೆಪಿ-ಜೆಡಿಎಸ್ ಅವರು ನಮ್ಮಲ್ಲಿ ಗೊಂದಲ‌ ಇದೆ ಎನ್ನುತ್ತಿದ್ದಾರೆ. ಬಿಜೆಪಿ-ಜೆಡಿಎಸ್‌ನವರಿಗೆ ಸಿಎಂ, ಡಿಸಿಎಂ ನೋಡಿಕೊಂಡು ಇರೋಕೆ ಆಗುತ್ತಿಲ್ಲ. ಅದಕ್ಕೆ ನಮ್ಮ ಮಡಿಕೆಯಲ್ಲಿ ತೂತು ಹುಡುಕುತ್ತಾ ಇದ್ದಾರೆ. ಅವರದ್ದು ನಿಂತಲ್ಲೇ ತೂತು ಆಗುತ್ತಿದೆ ಎಂದು ಲೇವಡಿ ಮಾಡಿದರು.

Share this article