ಹಿಜಾಬ್‌ಗೆ ಅನುಮತಿಸಿ ನ್ಯಾಯಾಂಗಕ್ಕೆ ಅಪಚಾರ: ಬಿಜೆಪಿ

Published : May 15, 2026, 11:50 AM IST
BY VIjayendra

ಸಾರಾಂಶ

ನಾಲ್ಕು ವರ್ಷಗಳ ನಂತರ ಮತ್ತೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು, ಪ್ರಕರಣ ನ್ಯಾಯಾಲಯದಲ್ಲಿರುವಾಗ ನಿರ್ಧಾರ ಕೈಗೊಳ್ಳುವ ಮೂಲಕ ನ್ಯಾಯಾಂಗಕ್ಕೂ ಅಪಚಾರ ಎಸಗುತ್ತಿದೆ ಎಂದು ಹರಿಹಾಯ್ದಿದ್ದಾರೆ.

  ಬೆಂಗಳೂರು :  ನಾಲ್ಕು ವರ್ಷಗಳ ನಂತರ ಮತ್ತೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು, ಪ್ರಕರಣ ನ್ಯಾಯಾಲಯದಲ್ಲಿರುವಾಗ ನಿರ್ಧಾರ ಕೈಗೊಳ್ಳುವ ಮೂಲಕ ನ್ಯಾಯಾಂಗಕ್ಕೂ ಅಪಚಾರ ಎಸಗುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಗುರುವಾರ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ತಿನ ಪ್ರತಿಪಕ್ಷ ಮುಖ್ಯ ಸಚೇತಕ ಎನ್‌.ರವಿಕುಮಾರ್‌, ಮಾಜಿ ಸಚಿವ ಸಿ.ಟಿ.ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

ದಾವಣಗೆರೆ ಘಟನೆ ಬಳಿಕ ಜ್ಞಾನೋದಯ:

ಕುಮಾರಸ್ವಾಮಿ ಮಾತನಾಡಿ, ದಾವಣಗೆರೆ ಉಪ ಚುನಾವಣೆ ಫಲಿತಾಂಶ ಹೊರಬಂದ ನಂತರ ಕಾಂಗ್ರೆಸ್ ಪಕ್ಷಕ್ಕೆ ದಿಢೀರ್ ಜ್ಞಾನೋದಯವಾಗಿ ವಿವಾದಿತ ಹಿಜಾಬ್ ವಿಷಯ ಮತ್ತೆ ಮುನ್ನೆಲೆಗೆ ತಂದಿದೆ. ಕಾಂಗ್ರೆಸ್‌ಗೆ ರಾಜಕೀಯ ಲಾಭದ ದೃಷ್ಟಿ ಬಿಟ್ಟರೆ ಸಮಾಜದ ಶಾಂತಿ ಮುಖ್ಯವಲ್ಲ ಎಂದರು. ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿದೆ. ಮೂರು ವರ್ಷದಿಂದ ಹಿಜಾಬ್ ವಿಚಾರದಲ್ಲಿ ಏನು ಮಾಡುತ್ತಿದ್ದರು? ಇತ್ತೀಚೆಗೆ ದಾವಣಗೆರೆ ಚುನಾವಣೆಯಲ್ಲಿ ಆಗಿದ್ದು ನೋಡಿ ನಿರ್ಧಾರ ಮಾಡಿದ್ದಾರೆ. 16ರಂದು ಮುಸ್ಲಿಂ ಸಮುದಾಯದ ಸಮಾವೇಶ ಇದೆ, ಅದಕ್ಕೆ ಹೆದರಿ ಈ ನಿರ್ಧಾರ ಮಾಡಿದ್ದಾರೆ ಎಂದು ಕಿಡಿಕಾಡಿದರು.

ಹಿಂದೂಗಳಿಗೆ ಅಪಮಾನ:

ವಿಜಯೇಂದ್ರ ಮಾತನಾಡಿ, ಅಭಿವೃದ್ಧಿ ಮರೆತು ಹಿಂದೂಗಳಿಗೆ ಅಪಮಾನ ಮಾಡಿಕೊಂಡು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಇತಿಶ್ರೀ ಹಾಡುವ ದಿನಗಳು ಬಂದೇ ಬರಲಿವೆ. ಮಾಡಬೇಕಾದ ಕೆಲಸಗಳು ನೂರಾರಿವೆ. ಅದನ್ನು ಬಿಟ್ಟು ಶಾಲಾ, ಕಾಲೇಜುಗಳಲ್ಲೂ ಹಿಂದೂಗಳು, ಮುಸಲ್ಮಾನರೆಂದು ಬೆಂಕಿ ಹಚ್ಚುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ. ಬರುವ ದಿನಗಳಲ್ಲಿ ರಾಜ್ಯದ ಜನರು ಇದಕ್ಕೆ ಉತ್ತರ ಕೊಡುತ್ತಾರೆ ಎಂದು ಎಚ್ಚರಿಸಿದರು.

ಶೇ.80ರಷ್ಟು ಹಿಂದೂಗಳು:

ಜೋಶಿ ಮಾತನಾಡಿ, ದೇಶದಲ್ಲಿ ಶೇ.80ರಷ್ಟು ಹಿಂದೂಗಳಿದ್ದಾರೆ. ಹಾಗಿದ್ದರೂ ಸದಾ ಹಿಂದೂ ವಿರೋಧಿ ನಿಲುವು ತಳೆಯುತ್ತಾ ಕಾಂಗ್ರೆಸ್ ಸಂಪೂರ್ಣ ಮೂಲೆಗುಂಪಾಗುತ್ತಿದೆ. ಇಷ್ಟಾದರೂ ಓಲೈಕೆ ಹಾಗೂ ಓಟ್ ಬ್ಯಾಂಕ್ ರಾಜಕಾರಣ ಬಿಟ್ಟಿಲ್ಲ. ಹಿಜಾಬ್ ನಿಷೇಧ ಹಿಂಪಡೆದು ಕೇಸರಿ ಶಾಲು ನಿಷೇಧಿಸಿದೆ. ರಾಜ್ಯ ಸರ್ಕಾರ ಕೂಡಲೇ ಈ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಛಲವಾದಿ ಮಾತನಾಡಿ, ನಾಲ್ಕು ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಹಿಜಾಬ್‌ಗೆ ಅವಕಾಶ ನೀಡಿ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ. ಹಿಜಾಬ್ ನಿಷೇಧ ಪ್ರಶ್ನಿಸಿ ಕೇಸ್ ಹಾಕಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇರುವಾಗಲೇ ಇವರು ತಕ್ಷಣ ಒಂದು ಸಮುದಾಯವನ್ನು ಓಲೈಸಲು ಮತ್ತೆ ಹಿಜಾಬ್‌ಗೆ ಅವಕಾಶ ನೀಡುವ ಆದೇಶ ಮಾಡಿದ್ದಾರೆ. ಇದು ದೊಡ್ಡ ತಪ್ಪು ಎಂದರು.

ರವಿಕುಮಾರ್ ಮಾತನಾಡಿ, ಎಸ್.ಎಂ.ಕೃಷ್ಣ ಅವರ ಕಾಲದಿಂದಲೇ ರಾಜ್ಯದ ಬಹಳಷ್ಟು ಶಾಲಾ, ಕಾಲೇಜುಗಳಲ್ಲಿ ಯೂನಿಫಾರಂ ಪದ್ಧತಿ ತರಲಾಗಿತ್ತು. ಬಳಿಕ ಹಿಜಾಬ್ ವಿಷಯವಾಗಿ ಉಡುಪಿಯಿಂದ ಹೊಸ ವಿವಾದವಾಗಿತ್ತು. ಹಿಜಾಬ್ ವಿಚಾರ ಮುನ್ನೆಲೆಗೆ ಬಂದಾಗ ಹೈಕೋರ್ಟ್ ಕೂಡ ಹಿಜಾಬ್ ಧರಿಸಬಾರದೆಂದು ಹೇಳಿತ್ತು. ಬೊಮ್ಮಾಯಿ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಮತ್ತೆ ಹಿಜಾಬ್‌ಗೆ ಅನುಮತಿ ನೀಡುವುದಾದರೆ ಶಾಲಾ, ಕಾಲೇಜುಗಳಲ್ಲಿ ಯೂನಿಫಾರಂ ಕಥೆ ಏನು? ಹಿಜಾಬ್‌ಗೆ ಅನುಮತಿ ನೀಡುವುದು ತುಷ್ಟೀಕರಣವಲ್ಲವೇ ಎಂದು ಪ್ರಶ್ನಿಸಿದರು.

ಸಿ.ಟಿ.ರವಿ ಮಾತನಾಡಿ, ಶಾಲೆಗಳಲ್ಲಿ ಎಲ್ಲ ಮಕ್ಕಳೂ ಸಮಾನರು. ಅವರು ಬೇರೆ ಬೇರೆ ಮತ, ಸಂಪ್ರದಾಯಗಳಿಗೆ ಸೇರಿದ್ದರೂ ಅವರೆಲ್ಲ ಸಮಾನವಾಗಿ ಗುರುತಿಸಿಕೊಳ್ಳಬೇಕೆಂಬ ಉದ್ದೇಶದಿಂದ ಶಾಲಾ, ಕಾಲೇಜುಗಳಲ್ಲಿ ಯೂನಿಫಾರಂ ಅಳವಡಿಸಲಾಗಿದೆ. ಸರ್ಕಾರ ಇದೀಗ ಮತೀಯ ಓಲೈಕೆ ರಾಜಕಾರಣ ಮುಂದುವರೆಸಿದೆ. ಕೇಸರಿ ಶಾಲು ನಿರಾಕರಿಸುವುದು ನಿಮ್ಮ ಜಾತ್ಯತೀತತೆಯೇ? ಹಾಗಿದ್ದರೆ ಎಲ್ಲಾ ಮತ ಸಂಪ್ರದಾಯಕ್ಕೆ ಗೌರವ ಕೊಟ್ಟಂತೆ ಹೇಗಾಗಲಿದೆ ಎಂದು ಪ್ರಶ್ನೆ ಹಾಕಿದರು. ಈ ಮೂಲಕ ನೀವು ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣದ ನೀತಿ ಅನುಸರಿಸಿದ್ದೀರಿ ಎಂದು ಆಕ್ಷೇಪಿಸಿದರು.

========

ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಒಬ್ಬ ಹುಡುಗನ ಮೈಮೇಲಿದ್ದ ಜನಿವಾರ ತೆಗೆಸಿದರು. ಇದನ್ನೆಲ್ಲ ಸಮರ್ಥನೆ ಮಾಡಲು ಆಗುತ್ತದೆಯೇ? ಎಲ್ಲವನ್ನೂ ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ.

ಅಷ್ಟು ಧೈರ್ಯ ಇದ್ದಿದ್ದರೆ ಅಧಿಕಾರಕ್ಕೆ ಬಂದ ಕೂಡಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಮೂರು ವರ್ಷದಿಂದ ಯಾಕೆ ಸುಮ್ಮನಿದ್ದರು? ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ಹಂತದಲ್ಲಿದೆ. ಹಿಜಾಬ್ ತಡೆಯಾಜ್ಞೆ ಜಾರಿಯಲ್ಲಿದೆ. ಅದು ತೆರವಾಗದೆ ಇಂಥ ಆದೇಶ ಮಾಡುತ್ತಾರೆ. ನ್ಯಾಯಾಂಗಕ್ಕೂ ಈ ಸರ್ಕಾರ ಅಪಚಾರ ಮಾಡುತ್ತಿದೆ ಎಂದು ಟೀಕಿಸಿದರು.

-ಕೋಟ್ಸ್‌-

ಇದೇ ತಿಂಗಳ 16ರಂದು ಮುಸ್ಲಿಂ ಸಮುದಾಯದ ಸಮಾವೇಶ ಇದೆ. ಅದಕ್ಕೆ ಹೆದರಿ ಈ ನಿರ್ಧಾರ ಮಾಡಿದ್ದಾರೆ. ಅಷ್ಟು ಧೈರ್ಯ ಇದ್ದಿದ್ದರೆ ಅಧಿಕಾರಕ್ಕೆ ಬಂದ ಕೂಡಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿತ್ತು

-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಕೈಗಾರಿಕಾ ಸಚಿವ

ಮಾಡಬೇಕಾದ ಕೆಲಸಗಳು ನೂರಾರಿವೆ. ಅದನ್ನು ಬಿಟ್ಟು ಶಾಲಾ, ಕಾಲೇಜುಗಳಲ್ಲೂ ಹಿಂದೂಗಳು, ಮುಸಲ್ಮಾನರೆಂದು ಬೆಂಕಿ ಹಚ್ಚುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿದೆ

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ರಾಜ್ಯದಲ್ಲಿ ಕೇಸರಿ ಶಾಲು ನಿಷೇಧಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದ್ಯದಲ್ಲೇ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ. ಕೇಸರಿ ಶಾಲು ಧರಿಸಿಯೇ ಆಂದೋಲನ ನಡೆಸುತ್ತದೆ

-ಪ್ರಹ್ಲಾದ್ ಜೋಶಿ, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ

 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸತೀಶನ್‌ಗೆ ಒಲಿದ ಕೇರಳಂ - ರಾಗಾ ಆಪ್ತ ವೇಣುಗೆ ನಿರಾಸೆ
ಎಡಪ್ಪಾಡಿ ಬಣದ 21 ಶಾಸಕರ ಅನರ್ಹತೆಗೆ ಷಣ್ಮುಗಂ ಮನವಿ