‘ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್‌ನ ರಾಜ್ಯ ನಾಯಕರ ನಡುವೆ ಮಾತ್ರ ಸಮನ್ವಯತೆ ಅಥವಾ ಹೊಂದಾಣಿಕೆ ಇದ್ದರೆ ಸಾಲದು, ತಳಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರ ನಡುವೆಯೂ ಸಮನ್ವಯತೆ ಮೂಡುವಂತೆ ನೋಡಿಕೊಳ್ಳಬೇಕು’ ಎಂದು ಅಮಿತ್ ಶಾ ಅವರು ಉಭಯ ಪಕ್ಷಗಳ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ಬೆಂಗಳೂರು: ‘ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್‌ನ ರಾಜ್ಯ ನಾಯಕರ ನಡುವೆ ಮಾತ್ರ ಸಮನ್ವಯತೆ ಅಥವಾ ಹೊಂದಾಣಿಕೆ ಇದ್ದರೆ ಸಾಲದು, ತಳಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರ ನಡುವೆಯೂ ಸಮನ್ವಯತೆ ಮೂಡುವಂತೆ ನೋಡಿಕೊಳ್ಳಬೇಕು’ ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಉಭಯ ಪಕ್ಷಗಳ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ಅಲ್ಲದೆ, ಈ ಮೈತ್ರಿಯು ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರ ಹೊಂದಾಣಿಕೆ ಎಂಬ ತಪ್ಪುಗ್ರಹಿಕೆಯಿಂದ ರಾಜ್ಯದ ಹಿಂದುಳಿದ ವರ್ಗಗಳ ಸಮುದಾಯದ ಮತದಾರರು ನಮ್ಮನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅದಕ್ಕೆ ಪ್ರತಿಯಾಗಿ ಮೋದಿ ಸರ್ಕಾರದ ಗ್ಯಾರಂಟಿಗಳನ್ನು ಪ್ರಚಾರ ಮಾಡಬೇಕು ಎಂದೂ ಹೇಳಿದ್ದಾರೆ.
ಮಂಗಳವಾರ ನಗರದ ಹೋಟೆಲ್‌ವೊಂದರಲ್ಲಿ ಉಭಯ ಪಕ್ಷಗಳ ರಾಜ್ಯ ಘಟಕಗಳ ಹಿರಿಯ ನಾಯಕರೊಂದಿಗೆ ಉಪಹಾರದ ಜತೆಗೆ ಸಮನ್ವಯ ಸಭೆ ನಡೆಸಿದ ಅಮಿತ್ ಶಾ ಅವರು ಹಲವು ಸಲಹೆ ಸೂಚನೆಗಳನ್ನು ನೀಡಿದರು.ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಮಟ್ಟ ಹಾಕಬೇಕು ಎಂದರೆ ಬಿಜೆಪಿ ಮತ್ತು ಜೆಡಿಎಸ್ ಜತೆ ಸಮನ್ವಯ ಅತ್ಯಗತ್ಯ. ಈ ನಿಟ್ಟಿನಲ್ಲಿ ಉಭಯ ಪಕ್ಷಗಳ ಮುಖಂಡರು ತಮ್ಮ ತಮ್ಮ ಪ್ರತಿಷ್ಠೆಯನ್ನು ಬದಿಗೊತ್ತಿ, ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಕೆಲಸ ಮಾಡಬೇಕು. ಉಭಯ ಪಕ್ಷಗಳ ನಡುವೆ ಸಹಕಾರ, ಹೊಂದಾಣಿಕೆ ಇರಬೇಕು ಎಂದು ಸೂಚನೆ ನೀಡಿದರು ಎಂದು ಮೂಲಗಳು ಹೇಳಿವೆ.
ಪರಸ್ಪರ ಒಗ್ಗಟ್ಟು ಎಂಬುದನ್ನು ಕೇವಲ ತೋರಿಕೆಗೆ ತೋರಿದರೆ ಸಾಲದು. ಅದರಿಂದ ಪ್ರಯೋಜನವಾಗುವುದಿಲ್ಲ. ಬದಲಾಗಿ, ಕೆಲಸದಲ್ಲೂ ಒಗ್ಗಟ್ಟಿನ ಪರಿಣಾಮ ಕಾಣಬೇಕು. ಯಾವುದೇ ಅಹಂಗೆ (ಇಗೊ) ಅವಕಾಶ ಇಲ್ಲದಂತೆ ಕೆಲಸ ಮಾಡಬೇಕು. ಉಭಯ ಪಕ್ಷಗಳ ನಡುವೆ ಲೋಕಸಭಾ ಕ್ಷೇತ್ರಗಳ ಹಂಚಿಕೆಯಾಗಿದ್ದರೂ ಎಲ್ಲ 28 ಕ್ಷೇತ್ರಗಳೂ ನಮ್ಮದೇ ಎಂಬಂತೆ ಪ್ರಚಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು ಎನ್ನಲಾಗಿದೆ.
ಸಮನ್ವಯ ಸಮಿತಿ ರಚಿಸಿ:
ಸಮನ್ವಯ ಕಾಯ್ದುಕೊಳ್ಳುವ ಸಂಬಂಧ ಸ್ಥಳೀಯ ಮಟ್ಟದಿಂದ ರಾಜ್ಯಮಟ್ಟದವರೆಗೆ ಸಮನ್ವಯ ಸಮಿತಿಗಳನ್ನು ರಚಿಸಿಕೊಳ್ಳಬೇಕು. ಈಗಾಗಲೇ ತಳಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಅವುಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂಬುದರ ಬಗ್ಗೆ ನಿಗಾವಹಿಸಬೇಕು. ಸ್ಥಳೀಯ ಮಟ್ಟದಲ್ಲಿ ಸಹಕಾರ, ಹೊಂದಾಣಿಕೆ ಕೊರತೆ ಇದ್ದರೆ, ಅದನ್ನು ರಾಜ್ಯಮಟ್ಟದ ನಾಯಕರು ಮಧ್ಯಪ್ರವೇಶಿಸಿ ಸರಿಪಡಿಸಬೇಕು. ಉಭಯ ಪಕ್ಷಗಳ ನಡುವೆ ಸಮನ್ವಯ ಕೊರತೆ ಇದ್ದರೆ ಚುನಾವಣೆಯಲ್ಲಿ ಗೆಲುವು ಕಷ್ಟಕರವಾಗಲಿದೆ. ಇದನ್ನು ಮುಖಂಡರು ಗಂಭೀರವಾಗಿ ಪರಿಗಣಿಸಬೇಕು ಎಂದು ಅಮಿತ್ ಶಾ ತಿಳಿಸಿದರು.
ಸಮನ್ವಯ ಸಮಿತಿಗಳು ಪ್ರತಿ ದಿನ ಸಭೆಗಳನ್ನು ನಡೆಸಬೇಕು. ಎಲ್ಲೆಲ್ಲಿ ನ್ಯೂನತೆಗಳಿವೆ ಎಂಬುದರ ಕುರಿತು ಚರ್ಚಿಸಿ ಸರಿಪಡಿಸಿಕೊಳ್ಳಬೇಕು. ಯಾವುದನ್ನು ಪ್ರತಿಷ್ಠೆಗೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸಬೇಕು. ಯಾವುದೇ ಸಮಸ್ಯೆಗಳು ರಾಜ್ಯದಲ್ಲಿ ಬಗೆಹರಿಯದಿದ್ದರೆ ರಾಷ್ಟ್ರೀಯ ಮಟ್ಟಕ್ಕೆ ಗಮನಕ್ಕೆ ತರಬೇಕು. ಸಮಸ್ಯೆಗಳು ದೊಡ್ಡದಾಗಿ ಬೆಳೆಯಲು ಬಿಡಬಾರದು. ತಳಮಟ್ಟದಲ್ಲಿಯೇ ಬಗೆಹರಿಸುವ ಕೆಲಸ ಮಾಡಬೇಕು. ಪ್ರಚಾರ ಕಾರ್ಯವನ್ನು ಜಂಟಿಯಾಗಿ ನಡೆಸಬೇಕು. ಪರಸ್ಪರ ಸಹಕಾರದ ಮೂಲಕ ಎಲ್ಲಾ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.
ಇದೇ ವೇಳೆ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿ ಪ್ರಚಾರ ಕೈಗೊಳ್ಳುವ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಿದರು. ಅಲ್ಲದೇ, 28 ಕ್ಷೇತ್ರಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಹಲವು ಕ್ಷೇತ್ರದಲ್ಲಿ ಕಾಂಗ್ರೆಸ್ ಕಿರುಕುಳ, ಮೈತ್ರಿ ಪಕ್ಷಗಳ ನಡುವಿನ ಹೊಂದಾಣಿಕೆ ನ್ಯೂನತೆ ಕುರಿತು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಇನ್ನು ಜೆಡಿಎಸ್ ನಾಯಕರನ್ನು ಕಡೆಗಣಿಸುವಂತಿಲ್ಲ, ಪ್ರಚಾರ ಕಾರ್ಯದಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕು, ಪರಸ್ಪರ ಒಟ್ಟಾಗಿ ಸಹಕಾರದಲ್ಲಿ ಮುಂದುವರೆಯೋಣ ಎನ್ನುವ ಸಂದೇಶ ನೀಡಿದರು ಎನ್ನಲಾಗಿದೆ.
ಮುಕ್ತವಾಗಿ ಉಭಯ ಪಕ್ಷಗಳ ನಾಯಕರ ಜೊತೆ ಅಮಿತ್ ಶಾ ಸಮಾಲೋಚನೆ ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ತಮ್ಮ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಹಂಚಿಕೊಂಡರು. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಉಭಯ ಪಕ್ಷಗಳ ಹಲವು ಮುಖಂಡರು ಭಾಗವಹಿಸಿದ್ದರು.