;Resize=(412,232))
ಬೆಂಗಳೂರು : ಮೆಗಾ ಮಾರುಕಟ್ಟೆ ನಿರ್ಮಾಣ, ಹಣ್ಣು ಮತ್ತು ತರಕಾರಿ ಮಾರುಕಟ್ಟೆ ವಿಸ್ತರಣೆ ಯೋಜನೆಗಳಿಗೆ ಸಂಬಂಧಿಸಿದ ಪ್ರತ್ಯೇಕ ಭೂಸ್ವಾಧೀನ ಪ್ರಕರಣಗಳ ಸುದೀರ್ಘ ಕಾನೂನು ಸಮರದಲ್ಲಿ ಕೃಷಿ ಮಾರುಕಟ್ಟೆ ಇಲಾಖೆಗೆ ಜಯ ಲಭಿಸಿದ್ದು ಕೋರ್ಟ್ ಆದೇಶದಂತೆ 438 ಕೋಟಿ ರು. ಪರಿಹಾರ ಪಾವತಿಸಲಾಗಿದೆ.
ಹೀಗಾಗಿ ಬೆಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉದ್ದೇಶಿತ ಮೆಗಾ ಮಾರ್ಕೆಟ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೂಳಿ ಮಂಗಲದ ಬಳಿ ಪ್ರಸ್ತುತ ಇರುವ ಹಣ್ಣಿನ ಮಾರುಕಟ್ಟೆಯನ್ನು ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸುವ ಯೋಜನೆಗೆ ಇದ್ದ ಅಡಚಣೆ ನಿವಾರಣೆಯಾಗಿದ್ದು, ಭೂಮಿಯನ್ನು ಎಪಿಎಂಸಿ ಸ್ವಾಧೀನಕ್ಕೆ ಪಡೆದುಕೊಳ್ಳಲಾಗಿದೆ.
ಶಿವಾನಂದ ಪಾಟೀಲ ಅವರು ಕೃಷಿ ಮಾರುಕಟ್ಟೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಎಪಿಎಂಸಿಗಳ ಆಸ್ತಿ ರಕ್ಷಣೆ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದಾಗ ಈ ಎರಡು ಪ್ರಕರಣಗಳು ದೀರ್ಘ ಕಾಲದಿಂದ ಇತ್ಯರ್ಥವಾಗದೇ ಇರುವುದು ಗಮನಕ್ಕೆ ಬಂದಿತ್ತು. ರೈತರ ಹಿತದೃಷ್ಟಿಯಿಂದ ರೂಪಿಸಲಾದ ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನ್ಯಾಯಾಲಯಗಳಿಗೆ ಪೂರಕ ದಾಖಲೆಗಳನ್ನು ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಇದರಿಂದಾಗಿ 314 ಎಕರೆ ಎಪಿಎಂಸಿಗೆ ಲಭ್ಯವಾಗಿದೆ.
ಮೆಗಾ ಮಾರುಕಟ್ಟೆಗಾಗಿ 1994ರಲ್ಲಿ ಶ್ರೀಗಂಧ ಕಾವಲು ಗ್ರಾಮದಲ್ಲಿ 172.22 ಎಕರೆ ಹಾಗೂ ಇದಕ್ಕೆ ಹೊಂದಿಕೊಂಡಿರುವ ಹೇರೋಹಳ್ಳಿಯ100.11 ಎಕರೆಯನ್ನು ಸರ್ಕಾರದ ನಿಯಮಗಳ ಪ್ರಕಾರ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಹೊರಡಿಸಿದ್ದ 4(1) ಮತ್ತು 6(1) ಅಧಿಸೂಚನೆಯನ್ನು ಜಮನ್‌ಲಾಲ್ ಬಜಾಜ್ ಸೇವಾ ಟ್ರಸ್ಟ್ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಭೂಸ್ವಾಧೀನ ಅಧಿಸೂಚನೆಗಳು 2013ರ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ಸೆಕ್ಷನ್ 24(2) ಅನ್ವಯ ಲ್ಯಾಪ್ಸ್ ಆಗಿವೆ ಎಂದು ತೀರ್ಪು ನೀಡಿ ಏಕ ಸದಸ್ಯ ಪೀಠ ದಾವೆಗಳನ್ನು ವಜಾ ಮಾಡಿತ್ತು.
ಏಕ ಸದಸ್ಯ ಪೀಠದ ತೀರ್ಪನ್ನು ದ್ವಿಸದಸ್ಯ ಪೀಠದಲ್ಲಿ ಎಪಿಎಂಸಿಯಿಂದ ಪ್ರಶ್ನಿಸಲಾಗಿತ್ತು. ಏಕ ಸದಸ್ಯಪೀಠದ ತೀರ್ಪನ್ನು ದ್ವಿಸದಸ್ಯ ಪೀಠ ಎತ್ತಿ ಹಿಡಿದಿದ್ದರಿಂದ ಕಾನೂನು ಸಮರ ಸುಪ್ರೀಂ ಕೋರ್ಟ್ ಅಂಗಳ ತಲುಪಿತ್ತು. ಪ್ರಕರಣದ ಅಂತಿಮ ವಿಚಾರಣೆ ನಡೆದು ಕಳೆದ ಜನವರಿಯಲ್ಲಿ ತೀರ್ಪು ನೀಡಿದ ನ್ಯಾಯಾಲಯವು ಜಮನ್‌ಲಾಲ್ ಬಜಾಜ್ ಸೇವಾ ಟ್ರಸ್ಟ್ ಹಾಗೂ ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿದೆ.
ನ್ಯಾಯಾಲಯದ ಆದೇಶದಂತೆ ಶ್ರೀಗಂಧ ಕಾವಲು ಗ್ರಾಮದ 172.22 ಎಕರೆಗೆ 185 ಕೋಟಿ ರು. ಹಾಗೂ ಹೇರೋಹಳ್ಳಿಯ 100.11 ಎಕರೆಗೆ ಎಪಿಎಂಸಿಯಿಂದ 41.65 ಕೋಟಿ ರು. ಪಾವತಿಸಲಾಗಿದೆ. ಬಳಿಕ ಜಮನ್‌ಲಾಲ್ ಬಜಾಜ್ ಸೇವಾ ಟ್ರಸ್ಟ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಎಪಿಎಂಸಿಯಿಂದ ಕೇವಿಯಟ್ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಎಲೆಕ್ಟ್ರಾನಿಕ್ ಸಿಟಿ ಸಮೀಪ ಗೂಳಿಮಂಗಲ ಎಪಿಎಂಸಿ ವಿಸ್ತರಣೆಗೆ 2002-03 ರಲ್ಲಿ 41.61 ಎಕರೆಯನ್ನು ಭೂಸ್ವಾಧೀನ ಮಾಡಿಕೊಂಡು ಭೂಮಿ ಕಳೆದುಕೊಂಡವರಿಗೆ 3 ಕೋಟಿ ರು. ಪರಿಹಾರ ನೀಡಲಾಗಿತ್ತು. ರೈತರು ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಏಕಸದಸ್ಯ ಪೀಠದ ಮೊರೆ ಹೋಗಿದ್ದರು. ಭೂಸ್ವಾಧೀನ ಪ್ರಕ್ರಿಯೆಯನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠ 2010ರ ದರದಂತೆ ಪರಿಹಾರ ನೀಡಲು ಆದೇಶಿಸಿತ್ತು.
ರೈತರು ಏಕ ಸದಸ್ಯ ಪೀಠದ ಆದೇಶವನ್ನು ದ್ವಿಸದಸ್ಯ ಪೀಠದಲ್ಲಿ ಪ್ರಶ್ನೆ ಮಾಡಿದ್ದರು. ದ್ವಿಸದಸ್ಯ ಪೀಠವು ಏಕಸದಸ್ಯ ಪೀಠದ ತೀರ್ಪನ್ನು ಎತ್ತಿ ಹಿಡಿದಿತ್ತು. ಈ ಕಾನೂನು ಸಮರ ಸುಪ್ರೀಂ ಕೋರ್ಟ್‌ವರೆಗೆ ಹೋಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಭೂಸ್ವಾಧೀನ ಪ್ರಕ್ರಿಯೆಯನ್ನು ಎತ್ತಿ ಹಿಡಿದು 212 ಕೋಟಿ ರು. ಪರಿಹಾರ ನೀಡಬೇಕು ಎಂದು ತೀರ್ಪು ನೀಡಿದೆ. ತೀರ್ಪಿನಂತೆ ಎಪಿಎಂಸಿಯಿಂದ 212 ಕೋಟಿ ರುಪಾಯಿಯನ್ನು ಕೋರ್ಟ್‌ನಲ್ಲಿ ಠೇವಣಿ ಇರಿಸಲಾಗಿದೆ.
ಎಪಿಎಂಸಿಯ ಎರಡು ರೈತಪರ ಯೋಜನೆಗಳಿಗೆ ಇದ್ದ ಅಡ್ಡಿ ಕೋರ್ಟ್ ತೀರ್ಪಿನಿಂದ ನಿವಾರಣೆಯಾಗಿದ್ದು, ಸುದೀರ್ಘ ಕಾನೂನು ಸಮರದಲ್ಲಿ ಜಯಗಳಿಸಿದ್ದೇವೆ ಎಂದು ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಎಪಿಎಂಸಿ ಕಾಯ್ದೆಗೆ ಹಿಂದಿನ ಸರ್ಕಾರ ತಿದ್ದುಪಡಿ ತಂದಿದ್ದರಿಂದ ರಾಜ್ಯದ ಬಹುತೇಕ ಎಪಿಎಂಸಿಗಳ ಸ್ಥಿತಿ ಶೋಚನೀಯವಾಗಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ರೈತರಿಗೆ ವಚನ ನೀಡಿದಂತೆ ಹಿಂದಿನ ಸರ್ಕಾರ ತಂದಿದ್ದ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಲಾಯಿತು. ಎಪಿಎಂಸಿಗಳನ್ನು ಪುನಃಶ್ಚೇತನಗೊಳಿಸಿ ಮತ್ತೆ ಮೊದಲಿನಂತೆ ಸಕ್ರಿಯಗೊಳಿಸುವ ಜವಾಬ್ದಾರಿ ನಮ್ಮ ಮೇಲಿತ್ತು ಎಂದು ತಿಳಿಸಿದ್ದಾರೆ.
ಎಪಿಎಂಸಿಗಳ ಸ್ಥಿತಿಗತಿಯ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದಾಗ ಈ ಎರಡು ಪ್ರಕರಣಗಳ ಬಗ್ಗೆ ಮಾಹಿತಿ ದೊರೆಯಿತು. ರೈತ ಪರ ಯೋಜನೆಗಳ ಅನುಷ್ಠಾನಕ್ಕೆ ಕಾನೂನು ಸಮರದಲ್ಲಿ ಗೆಲ್ಲುವ ಅನಿವಾರ್ಯತೆ ಇತ್ತು. ಹೀಗಾಗಿ ನ್ಯಾಯಾಲಯಕ್ಕೆ ಎಪಿಎಂಸಿ ಉದ್ದೇಶ ಮನವರಿಕೆ ಮಾಡಿ ಪೂರಕ ದಾಖಲೆಗಳನ್ನು ಒದಗಿಸಿದ್ದರಿಂದ ನಮ್ಮ ಪರವಾಗಿ ತೀರ್ಪು ಬಂದಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.