ಎಲೆಕ್ಟ್ರಿಕ್‌ ಬಸ್‌ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ : ರಾಮಲಿಂಗಾರೆಡ್ಡಿ

KannadaprabhaNewsNetwork |  
Published : Oct 25, 2025, 01:00 AM ISTUpdated : Oct 25, 2025, 07:52 AM IST
Ramalinga Reddy  Electric Bus

ಸಾರಾಂಶ

ಎಲೆಕ್ಟ್ರಿಕ್‌ ಬಸ್‌ ಚಾಲಕರ ನಡವಳಿಕೆಯಿಂದ ಬಿಎಂಟಿಸಿ ಸೇವೆಗೆ ಆಗುತ್ತಿರುವ ಸಮಸ್ಯೆ ಬಗ್ಗೆ ವಿವರಿಸಿ ಇವಿ ಬಸ್‌ಗಳಿಗೆ ಖಾಸಗಿ ಚಾಲಕರನ್ನು ನೇಮಿಸುವ ವ್ಯವಸ್ಥೆ ರದ್ದು ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಿರ್ಧರಿಸಿದ್ದಾರೆ.

 ಬೆಂಗಳೂರು :  ಎಲೆಕ್ಟ್ರಿಕ್‌ ಬಸ್‌ ಚಾಲಕರ ನಡವಳಿಕೆಯಿಂದ ಬಿಎಂಟಿಸಿ ಸೇವೆಗೆ ಆಗುತ್ತಿರುವ ಸಮಸ್ಯೆ ಬಗ್ಗೆ ವಿವರಿಸಿ ಇವಿ ಬಸ್‌ಗಳಿಗೆ ಖಾಸಗಿ ಚಾಲಕರನ್ನು ನೇಮಿಸುವ ವ್ಯವಸ್ಥೆ ರದ್ದು ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಿರ್ಧರಿಸಿದ್ದಾರೆ.

ವೇತನ, ಭತ್ಯೆ ಹೆಚ್ಚಳ, ಬೋನಸ್‌ ನೀಡುವುದು ಸೇರಿದಂತೆ ವಿವಿಧ ಕಾರಣ ನೀಡಿ ಖಾಸಗಿ ಸಂಸ್ಥೆಯಿಂದ ನೇಮಕವಾಗಿರುವ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರು ಕಳೆದ ಎರಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಎರಡು ದಿನದಿಂದ 140ಕ್ಕೂ ಹೆಚ್ಚಿನ ಎಲೆಕ್ಟ್ರಿಕ್‌ ವಾಹನಗಳು ಡಿಪೋಗಳಲ್ಲೇ ನಿಂತಿದ್ದು, ಕಾರ್ಯಾಚರಣೆಗೊಂಡಿಲ್ಲ. ಅಲ್ಲದೆ, ಸಮಸ್ಯೆ ಬಗೆಹರಿಸುವಂತೆ ಖಾಸಗಿ ಸಂಸ್ಥೆಗಳಿಗೆ ಬಿಎಂಟಿಸಿ ಸೂಚನೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ಕಾರಣಕ್ಕಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಬಿಎಂಟಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಈ ವೇಳೆ ಅಧಿಕಾರಿಗಳು, ಬಿಎಂಟಿಸಿಗೆ ಗ್ರಾಸ್‌ ಕಾಸ್ಟ್‌ ಕಾಂಟ್ರ್ಯಾಕ್ಟ್‌ (ಜಿಸಿಸಿ) ಮಾದರಿಯಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಪಡೆಯಲಾಗುತ್ತಿದೆ. ಅದರಂತೆ ಬಸ್‌ಗಳನ್ನು ಪೂರೈಸುವ ಸಂಸ್ಥೆಯೇ ಅವುಗಳನ್ನು ನಿರ್ವಹಣೆ ಮಾಡಲಿದೆ ಹಾಗೂ ಅವುಗಳಿಗೆ ಚಾಲಕರನ್ನು ನೇಮಿಸಲಿದೆ. ಈ ವ್ಯವಸ್ಥೆಯು ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ವಿವರಿಸಿದರು.

ಕೇಂದ್ರ ಸಚಿವರಿಗೆ ಪತ್ರ

ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನಾಧರಿಸಿ ರಾಮಲಿಂಗಾರೆಡ್ಡಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ .

ಸಾರಿಗೆ ನಿಗಮಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪತ್ರ 

ಜಿಸಿಸಿ ಮಾದರಿಯಲ್ಲಿ ಬಸ್‌ ಪಡೆಯುವುದು, ಅವುಗಳಿಗೆ ಖಾಸಗಿ ಚಾಲಕರನ್ನು ನಿಯೋಜಿಸುವುದರಿಂದ ಎದುರಾಗುತ್ತಿರುವ ಸಮಸ್ಯೆಗಳು. ಬಿಎಂಟಿಸಿ ಸೇರಿದಂತೆ ಸಾರಿಗೆ ನಿಗಮಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪತ್ರದಲ್ಲಿ ತಿಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಇರುವ ವ್ಯವಸ್ಥೆಯನ್ನು ಬದಲಿಸುವುದು ಅಥವಾ ಮುಂದೆ ಸಮಸ್ಯೆಯುಂಟಾಗುವುದನ್ನು ತಡೆಯುವಂತಹ ವ್ಯವಸ್ಥೆ ಜಾರಿಗೊಳಿಸುವಂತೆಯೂ ರಾಮಲಿಂಗಾರೆಡ್ಡಿ ಕೋರಲಿದ್ದಾರೆ ಎಂದು ತಿಳಿದುಬಂದಿದೆ.

ಜಿಸಿಸಿ ಮಾದರಿಯಲ್ಲಿ ಬಸ್‌ಗಳನ್ನು ಪಡೆಯುವುದರಿಂದ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರಿಗೆ ತಿಳಿಸಲು ಮುಂದಾಗಿದ್ದೇನೆ. ಸಾರಿಗೆ ನಿಗಮಗಳಿಗಾಗುತ್ತಿರುವ ಸಮಸ್ಯೆಗಳು, ನಿಗಮಗಳಿಗೆ ಕೆಟ್ಟ ಹಸರು ಬರುತ್ತಿರುವ ಬಗ್ಗೆ ಅಂಕಿ-ಸಂಖ್ಯೆ ಸಹಿತ ವಿವರವುಳ್ಳ ಪತ್ರವನ್ನು ಕೇಂದ್ರ ಸಚಿವರಿಗೆ ಬರೆಯುತ್ತೇನೆ.

- ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

PREV
Read more Articles on

Recommended Stories

ನಿತೀಶ್‌ ನೇತೃತ್ವದಲ್ಲಿ ಈ ಸಲ ದಾಖಲೆಯ ಜಯ : ಮೋದಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಮತ್ತಷ್ಟು ಪ್ರದೇಶ ಸೇರ್ಪಡೆ : ಡಿ.ಕೆ. ಶಿವಕುಮಾರ್‌