ಕೆರೆಗಳ ಬಫರ್ ವಲಯ ಕಡಿತ ವಿರೋಧಿಸಿ ರಾಜ್ಯಪಾಲರಿಗೆ ಮನವಿ

KannadaprabhaNewsNetwork |  
Published : Aug 26, 2025, 02:00 AM IST
ಕೆರೆ ಬಫರ್ ವಲಯ ಕಡಿತಗೊಳಿಸುವುದನ್ನು ವಿರೋಧಿಸಿ ಬೆಂಗಳೂರು ಟೌನ್‌ಹಾಲ್ ಸಂಘಟನೆಯಿಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕೆರೆಗಳ ಬಫರ್ ವಲಯವನ್ನು ಕಡಿತಗೊಳಿಸುವ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಕಾಯ್ದೆ ವಿರೋಧಿಸಿ ನಟ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಬೆಳವಾಡಿ ನೇತೃತ್ವದ ಸಾಮಾಜಿಕ ಕಾರ್ಯಕರ್ತರ ತಂಡ ಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆರೆಗಳ ಬಫರ್ ವಲಯವನ್ನು ಕಡಿತಗೊಳಿಸುವ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಕಾಯ್ದೆ ವಿರೋಧಿಸಿ ನಟ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಬೆಳವಾಡಿ ನೇತೃತ್ವದ ಸಾಮಾಜಿಕ ಕಾರ್ಯಕರ್ತರ ತಂಡ ಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ಇದಕ್ಕೂ ಮುನ್ನ ಬೆಂಗಳೂರು ಟೌನ್‌ಹಾಲ್‌ ವತಿಯಿಂದ ಸುದ್ದಿಗೋಷ್ಠಿ ನಡೆಸಿದ ಪ್ರಕಾಶ್ ಬೆಳವಾಡಿ, ಕೆರೆಗಳ ಬಫರ್ ವಲಯವನ್ನು ಕೆರೆಯ ಗಾತ್ರದ ಆಧಾರದ ಮೇಲೆ ಹಾಲಿ 30 ಮೀಟರ್‌ನಿಂದ 3 ಮೀಟರ್‌ಗಳ ಇಳಿಸುವುದು ದುರಂತಕ್ಕೆ ಆಹ್ವಾನ ನೀಡಿದಂತೆ. ಬೆಂಗಳೂರಿನಲ್ಲಿ ನದಿಗಳಿಲ್ಲ. ನೀರಿಗೆ ಕೆರೆಗಳನ್ನು ಅವಲಂಬಿಸಲಾಗಿದೆ. ಆದರೆ, ಈಗಾಗಲೇ ಬಹುತೇಕ ಕೆರೆಗಳು ಒತ್ತುವರಿಯಾಗಿ ನಾಶವಾಗಿವೆ. ಬಫರ್ ವಲಯ ಕಡಿತಗೊಳಿಸಿದರೆ ಕೆರೆಗಳೆಲ್ಲ ನಾಶವಾಗಿ ಬೆಂಗಳೂರಿನ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂದರು.

ಗ್ರೇಟರ್ ಬೆಂಗಳೂರು ವಿಧೇಯಕ ಕೂಡ ಬೆಂಗಳೂರು ನಗರದ ಅಭಿವೃದ್ಧಿಗೆ ಪೂರಕವಾಗಿಲ್ಲ. ಹಲವು ಲೋಪ ದೋಷಗಳಿವೆ. ಹೀಗಾಗಿ, ಇದನ್ನು ವಿರೋಧಿಸಿ ನಾವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ. ಬಿಜೆಪಿಯವರು ವಿಧೇಯಕಕ್ಕೆ ವಿರೋಧಿಸಿದ್ದರು. ಆದರೆ, ಅಧಿವೇಶನದ ವೇಳೆ ವಿಧೇಯಕ ಪಾಸ್ ಆಗುವುದನ್ನು ತಡೆಯಲಿಲ್ಲ ಎಂದು ಪ್ರಕಾಶ ಬೆಳವಾಡಿ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ಟೌನ್‌ಹಾಲ್ ಸಂಘಟನೆ ಸದಸ್ಯೆ ಕಾತ್ಯಾಯಿನಿ ಮಾತನಾಡಿ, ಅಭಿವೃದ್ಧಿ ಹೆಸರಲ್ಲಿ ಬೆಂಗಳೂರನ್ನು ಸಾಕಷ್ಟು ಹಾಳು ಮಾಡಲಾಗಿದೆ. ಇದರ ಜೊತೆಗೆ ಕೆರೆಗಳ ಬಫರ್ ವಲಯ ಕಡಿಮೆ ಮಾಡಿ ಇನ್ನಷ್ಟು ಹಾಳು ಮಾಡುತ್ತಿದ್ದಾರೆ. ಇದರಿಂದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಆಗುವ ಸಾಧ್ಯತೆ ಇದೆ. ಇದು ಕಾನೂನಿಗೆ ವಿರುದ್ದವಾದ ವಿಧೇಯಕ ಎಂದರು.

ಸಾಮಾಜಿಕ ಕಾರ್ಯಕರ್ತ ರಾಜಕುಮಾರ್ ದುಗಾರ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ನಗರಕ್ಕೆ ನೀರಿನ ಸಮಸ್ಯೆ ಹೆಚ್ಚುತ್ತಿದೆ. ನೀರು ಪೂರೈಕೆಗೆ ತಿಂಗಳಿಗೆ 100 ಕೋಟಿ ರು. ವಿದ್ಯುತ್ ಶುಲ್ಕ ಕಟ್ಟಲಾಗುತ್ತಿದೆ. ಅದರ ಬದಲು ಮಳೆ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು. ಕೆರೆಗಳನ್ನು ಸೂಕ್ತ ರೀತಿಯಲ್ಲಿ ಅಭಿವೃದ್ಧಿಪಡಿಸಿ ಮಳೆ ನೀರು ಶೇಖರಿಸಿದರೆ ಅಂತರ್ಜಲ ಸುಧಾರಿಸುತ್ತದೆ. ಅದನ್ನು ಬಿಟ್ಟು ಕೆರೆಗಳ ಬಫರ್ ವಲಯ ಕಡಿತಗೊಳಿಸುವುದು ಅನಾಹುತವನ್ನು ಮೈ ಮೇಲೆ ಎಳೆದುಕೊಂಡಂತೆ ಎಂದು ಹೇಳಿದರು.

PREV

Recommended Stories

ಡಿಕೆಶಿ ಅವರು ಬಿಜೆಪಿಗೆ ಹೋಗುತ್ತಾರೆ ಎಂಬ ಸಂಶಯ ಸರಿಯಲ್ಲ : ಸತೀಶ್‌
ಆರ್‌ಎಸ್‌ಎಸ್ ಗೀತೆ ಹಾಡಿದ ಕೈ ಶಾಸಕ ಡಾ। ರಂಗನಾಥ್‌