ಆರಗ ಜ್ಞಾನೇಂದ್ರ ‘420, ಬಚ್ಚಾ’: ಮಧು ಬಂಗಾರಪ್ಪ!

Published : Dec 02, 2025, 11:09 AM IST
Madhu bangarappa

ಸಾರಾಂಶ

ವಿರೋಧ ಪಕ್ಷದ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಕಾರ್ಯಕ್ರಮವೊಂದರಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ‘ಆರಗ ಜ್ಞಾನೇಂದ್ರ ಬಚ್ಚಾ’ ಎಂಬ ಅವಹೇಳನಕಾರಿ ಪದ ಬಳಸಿದ್ದು, ಆ ಬಳಿಕ ಸಚಿವರಿದ್ದ ವೇದಿಕೆಯಲ್ಲಿಯೇ ಶಾಸಕರು ಸಹ ಸಚಿವರಿಗೆ ತಿರುಗೇಟು ನೀಡಿದ್ದಾರೆ.

  ಶಿವಮೊಗ್ಗ :  ವಿರೋಧ ಪಕ್ಷದ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಕಾರ್ಯಕ್ರಮವೊಂದರಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ‘ಆರಗ ಜ್ಞಾನೇಂದ್ರ ಬಚ್ಚಾ’ ಎಂಬ ಅವಹೇಳನಕಾರಿ ಪದ ಬಳಸಿದ್ದು, ಆ ಬಳಿಕ ಸಚಿವರಿದ್ದ ವೇದಿಕೆಯಲ್ಲಿಯೇ ಶಾಸಕರು ಸಹ ಸಚಿವರಿಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ಶಿವಮೊಗ್ಗ ಜಿಲ್ಲೆಯ ಇಬ್ಬರು ನಾಯಕರ ಮಧ್ಯೆ ವಾಕ್ಸಮರ ತಾರಕಕ್ಕೆ ಏರಿದ್ದು, ಸಚಿವರ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ ಖಂಡಿಸಿದೆ.

ನನ್ನ ಅನುಭವ ಬಂದಹಾಗೆ ಶಾಸಕ ಆರಗ ಜ್ಞಾನೇಂದ್ರ ಬಚ್ಚಾ

ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಧು, ‘ನನ್ನ ಅನುಭವ ಬಂದಹಾಗೆ ಶಾಸಕ ಆರಗ ಜ್ಞಾನೇಂದ್ರ ಬಚ್ಚಾ, ರಾಜ್ಯದಲ್ಲಿ 420 ಎಂದರೇ ಅದು ಆರಗ ಜ್ಞಾನೇಂದ್ರ’. ಕಾಂಗ್ರೆಸ್​​​ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ವಿಚಾರವಾಗಿ ಆರಗ 420 ಎಂದಿದ್ದಾರೆ. ಅಲ್ಲದೇ ಇಲ್ಲೊಬ್ಬ ಉಸ್ತುವಾರಿ ಸಚಿವನಿದ್ದು, ಒಂದು ಟೀಚರ್ ಕೊಡುವ ಯೋಗ್ಯತೆ ಇಲ್ಲ ಎನ್ನುತ್ತಾರೆ. ನಾನೂ ನೇರವಾಗಿ ಉತ್ತರ ಕೊಡುವವನು, ಅವರು ವಯಸ್ಸಿನಲ್ಲಿ ದೊಡ್ಡವರೇ ಇರಬಹುದು.‌ ಆದರೆ, ಅವರು ನನಗಿಂತ ಅನುಭವದಲ್ಲಿ ಬಚ್ಚಾ ಆಗಿದ್ದಾರೆ.‌ ನಾನೂ ಬಂಗಾರಪ್ಪ ತರ ಮುಖ, ಮೂತಿ ನೋಡುವುದಿಲ್ಲ. ನನಗೆ ಅಂದವರಿಗೆ ತಿರುಗಿಸಿ ಕೊಡುತ್ತೇನೆ’ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಚಿವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಗೃಹ ಸಚಿವ, ಶಾಸಕ ಆರಗ ಜ್ಞಾನೇಂದ್ರ ಅವರು, ಇತ್ತೀಚೆಗೆ ಮಧು ಬಂಗಾರಪ್ಪ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿಯೇ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ‘ನಾನೂ ಯಾರ ಬಗ್ಗೆನೂ ದೂರುವುದಿಲ್ಲ, ನಾನೂ 5 ಬಾರಿ ಚುನಾವಣೆಯಲ್ಲಿ ಗೆದ್ದು, 5 ಬಾರಿ ಸೋತಿದ್ದೇನೆ. ನನಗೆ ಒಂದು ಮೆಚ್ಯುರಿಟಿ ಲೆವೆಲ್ ಬಂದಿದೆ. ನಾವು ಬಹಳ ಮೇಲ್ಮಟ್ಟದಲ್ಲಿ ಇರಬೇಕಾಗುತ್ತದೆ. ಯಾರಾದರೂ ರಾಜಕೀಯ ಕನ್ನಡಕದಲ್ಲಿ ನೋಡಿದರೇ ಹಾಗೆ ಕಾಣಬಹುದೇನೋ, ಸಾರ್ವಜನಿಕ ಜೀವನವನ್ನು ನಾನೂ ಬಹಳ ಗಂಭೀರವಾಗಿ ತೆಗೆದು ಕೊಂಡಿದ್ದೇನೆ’ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಮಧು ಬಂಗಾರಪ್ಪ ಹೇಳಿಕೆ ಖಂಡನೀಯ: ಬಿಜೆಪಿ ನಾಯಕ 

 ಶಿವಮೊಗ್ಗ :  ಬಿಜೆಪಿಯ ಮಾಜಿ ಸಚಿವ ಆರಗ ಜ್ಞಾನೇಂದ್ರ ಬಗ್ಗೆ ಸಚಿವ ಎಸ್.ಮಧುಬಂಗಾರಪ್ಪ ಅವರು ಉಪಯೋಗಿಸಿದ ಪದಬಳಕೆ ಸರಿಯಲ್ಲ. ಸಚಿವರು ಇನ್ನೊಬ್ಬರ ಬಗ್ಗೆ ಕೀಳುಶಬ್ಧ ಪ್ರಯೋಗಿಸಿ ಮಾತನಾಡುವುದನ್ನು ಬಿಟ್ಟು ರಾಜಕೀಯ ಪ್ರಜ್ಞೆ ತೋರಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ.ಜಗದೀಶ್ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವರು ತಾವು ಅಪ್ರಭುದ್ಧರು. ಶಿಕ್ಷಣ ಇಲ್ಲದ ಶಿಕ್ಷಣ ಸಚಿವರು ಎಂಬುದಾಗಿ ರುಜುವಾತು ಪಡಿಸಿದ್ದಾರೆ. ಈ ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿ, ಸುರೇಶ್ ಕುಮಾರ್, ಕಾಂಗ್ರೆಸ್‌ನವರೇ ಆದ ತನ್ವೀರ್ ಸೇಟ್ ಮೊದಲಾದವರೂ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ವಿರೋಧ ಪಕ್ಷದವರ ಬಗ್ಗೆ ಈ ತರಹದ ಭಾಷೆ ಬಳಕೆ ಮಾಡಿರಲಿಲ್ಲ. ಆದರೆ ಮಧು ಬಂಗಾರಪ್ಪ ಅವರು ರಾಜಕೀಯ ರೇಖೆಗಳನ್ನು ದಾಟಿ ಮಾತನಾಡಿದ್ದಾರೆ. ಬಿಜೆಪಿಯವರ ಬಗ್ಗೆ ಇನ್ನು ಮುಂದೆ ಮಾತನಾಡಿದರೆ ‘ಹುಷಾರ್’ ಎಂದು ಎಚ್ಚರಿಕೆ ನೀಡಿದ್ದಾರೆ.

ಸಚಿವ ಮಧು ಅವರು ಜಿಎಸ್‌ಟಿ ಯಾವುದೇ ತಿಳುವಳಿಕೆ ಹೊಂದಿಲ್ಲ. 2024-25, 2025-26ರಲ್ಲಿ ರಾಜ್ಯಕ್ಕೆ ಏನು ಅನುದಾನ ತಂದಿದ್ದೀರಿ ಎಂಬುದರ ಬಗ್ಗೆ ಉತ್ತರಿಸಬೇಕು. ಜಿಎಎಸ್‌ಟಿ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಮಧು ಅವರು ಸಚಿವ ಕೃಷ್ಣೇಭೈರೇಗೌಡರಿಂದ ಟ್ಯೂಷನ್ ತೆಗೆದುಕೊಳ್ಳಲಿ ಎಂದು ವ್ಯಂಗ್ಯವಾಡಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಚಿರತೆ ದಾಳಿಯ ವೇಳೆ ಸ್ನೇಹಿತರ ಕರೆ : ನರಳಾಡಿದವ ಶವವಾಗಿ ಪತ್ತೆ!