ಬೆಂಗಳೂರು : ರಾಜ್ಯದ ಎಲ್ಲೇ ಪತ್ರಿಕಾ ವಿತರಕರು ಮೃತಪಟ್ಟರೂ ಅವರಿಗೆ ಸರ್ಕಾರ ₹ 5ಲಕ್ಷ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಬುಲಿಂಗ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಬಸವೇಶ್ವರನಗರ ದಿನಪತ್ರಿಕೆ ವಿತರಕರ ಪತ್ರಿಕಾ ವಿತರಕರ ಸಂಘದಿಂದ ನಡೆದ ಬಸವೇಶ್ವರನಗರ ಸಂಘದ ಉದ್ಘಾಟನೆ, ಕನ್ನಡ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಪತ್ರಿಕಾ ವಿತರಕರಿಗೆ ನೀಡಲಾಗಿಲ್ಲ. 70 ವರ್ಷ ಮೇಲ್ಪಟ್ಟ ವಿತರಕರಿಗೆ ಪಿಂಚಣಿ ಸೌಲಭ್ಯ ಒದಗಿಸಲು ಬೇಡಿಕೆ ಇಟ್ಟರೂ ಈಡೇರುತ್ತಿಲ್ಲ. ಯುವಕರು ಪತ್ರಿಕೆಗಳನ್ನು ಕೊಂಡು ಓದಬೇಕು ಎಂದು ಹೇಳಿದರು.
ಮಾಜಿ ಉಪಮೇಯರ್ ಆರ್. ಹರೀಶ್, ಪತ್ರಿಕಾ ವಿತರಕರ ಕಷ್ಟಕ್ಕೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಐಎಫ್‌ಡಬ್ಲೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಪತ್ರಿಕಾ ವಿತರಕರಿಗೆ ವಸತಿ ಯೋಜನೆ ಹಾಗೂ ಆರೋಗ್ಯ ಕ್ಷೇಮನಿಧಿಗಾಗಿ ಪ್ರತಿ ತಿಂಗಳು ಹಣ ಕ್ರೂಢೀಕರಿಸಿ ಎಂದು ಸಲಹೆ ನೀಡಿದರು.
ತುಮಕೂರಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ನಾಗರಾಜ್ ಮತ್ತು ಶಿರಾ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪಡೆದ ನಾದೂರು ವಾಸುದೇವ ಅವರನ್ನು ಸನ್ಮಾನಿಸಲಾಯಿತು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸಂಗಮ ಸುರೇಶ್, ರಾಜ್ಯ ಕಾರ್ಯದರ್ಶಿ ಜಗದೀಶ್ ಎನ್., ಸುರೇಶ್ ಸೇರಿ ಹಲವರಿದ್ದರು.