ಬೆಂಗಳೂರು : ನಗರದ ಕಸದ ಸಮಸ್ಯೆಗೆ ಮುಕ್ತಿ ಹಾಡಲು ಸಂಕಲ್ಪ ಮಾಡಿದ್ದು, ತಮ್ಮ ಮೇಲೆ ಗೂಬೆ ಕೂರಿಸಲು ಕಸದ ಮಾಫಿಯಾಗಳು ಮಾಡಿದ ಪ್ರಯತ್ನಗಳಿಗೆ ಬಗ್ಗದೆ, 33 ಪ್ಯಾಕೇಜ್ ಮೂಲಕ ಕಸ ವಿಲೇವಾರಿಗೆ ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ಮಾಗಡಿ ಮುಖ್ಯ ರಸ್ತೆಯ ಕನ್ನಹಳ್ಳಿಯಲ್ಲಿ ಸಮಗ್ರ ಘನ ತ್ಯಾಜ್ಯ ವಿಂಗಡಣಾ ಘಟಕದ ಒಂದನೇ ಹಂತಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಕಸದ ಮಾಫಿಯಾದವರು ಹೇಳಿದಂತೆ ಸರ್ಕಾರ ಕೇಳಬೇಕು ಎನ್ನುವ ವಾತಾವರಣವಿತ್ತು. ಪ್ರತಿ ಹಂತದಲ್ಲಿ ನ್ಯಾಯಾಲಯಕ್ಕೆ ತೆರಳಿ ತಡೆಯಾಜ್ಞೆ ತಂದು ಸರ್ಕಾರಕ್ಕೆ ಬ್ಲಾಕ್‌ಮೇಲ್ ಮಾಡುತ್ತಿದ್ದರು. ಆದರೀಗ 33 ಪ್ಯಾಕೇಜ್ ಮಾಡಿ ಕಸ ವಿಲೇವಾರಿ ಮಾಡಲು ನ್ಯಾಯಾಲಯ ಸಮ್ಮತಿಸಿದೆ. ಸ್ವಲ್ಪ ದಿನಗಳಲ್ಲೇ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದರು.
ಕಸದಿಂದ ಗ್ಯಾಸ್ ತಯಾರಿಸುವ ನಾಲ್ಕು ಸಂಸ್ಥೆಗಳನ್ನು ಸ್ಥಾಪಿಸುವ ಯೋಚನೆ ಇತ್ತು. ಜಾಗದ ಕೊರತೆಯಿಂದ ಈಗ ಎರಡು ಸ್ಥಳಗಳಲ್ಲಿ ಅವಕಾಶ ನೀಡಿ ಟೆಂಡರ್ ನೀಡಲಾಗಿದೆ. ಒಟ್ಟು 24 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ತಂತ್ರಜ್ಞಾನದಿಂದ ಯಶಸ್ವಿಯಾಗಬಹುದು ಎಂದು ಕೇಳಿದ್ದೇನೆ. ದಿಲ್ಲಿ, ಚೆನ್ನೈ, ಹೈದರಾಬಾದ್ ನಗರಗಳಲ್ಲಿ ನೋಡಿದ್ದೇನೆ ಎಂದು ಹೇಳಿದರು.
ಕಸದಿಂದ ಗ್ಯಾಸ್ ಉತ್ಪಾದನೆಗೆ ಇಳಿದಿರುವ ಅಭಿಷೇಕ್ ಸಂಸ್ಥೆ ಪ್ರಾಥಮಿಕವಾಗಿ 100 ಕೋಟಿ ರು. ಬಂಡವಾಳ ಹೂಡಲಿದ್ದು, ಒಟ್ಟಾರೆ 300 ಕೋಟಿ ರು. ಹೂಡಿಕೆ ಮಾಡಲಿದೆ. ಇದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಈ ಪ್ರಯೋಗ ಯಶಸ್ವಿಯಾದರೆ ರಾಜ್ಯದ ಬೇರೆ ಕಡೆ ಸ್ಥಾಪಿಸಲಾಗುತ್ತದೆ ಎಂದು ಅವರು ತಿಳಿಸಿದರು.
ದೂರ ಹೋಗಬೇಕಾಗುತ್ತದೆ ಎಂದು ಕಸದ ಲಾರಿಯವರು ಎಲ್ಲೆಂದರಲ್ಲಿ ಕಸ ಸುರಿಯುತ್ತಾರೆ. ಈ ಬಗ್ಗೆ ನಿಗಾ ಇರಿಸಲು ಕ್ಯಾಮೆರಾ ಅಳವಡಿಸಿ ದಂಡ ಹಾಕಲಾಗುತ್ತಿದೆ. ಟ್ರಾಫಿಕ್ ಇಲಾಖೆಯಿಂದಲೂ ದಂಡ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಬಿಎ ವತಿಯಿಂದ 8-10 ಪೌರ ಕಾರ್ಮಿಕರ ತಂಡ ರಚಿಸಲಾಗುತ್ತದೆ. ಆ ತಂಡವು ನಗರ ಪ್ರದಕ್ಷಿಣೆ ಮಾಡಿ ಬಿದ್ದಿರುವ ಕಸ ವಿಲೇವಾರಿ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.