;Resize=(412,232))
ಬೆಂಗಳೂರು : ‘ನಾನು ಎಂದಿಗೂ ಬೆನ್ನಿಗೆ ಚೂರಿ ಹಾಕಲ್ಲ. ನೇರವಾಗಿ ಹೋರಾಟ ಮಾಡುವವನು. ನಾನು ಎಂದೂ ಗುಂಪುಗಾರಿಕೆ ಮಾಡಿದವನಲ್ಲ. ನಾನು 140 ಶಾಸಕರಿಗೂ ನಾಯಕ. ಕೆಪಿಸಿಸಿ ಅಧ್ಯಕ್ಷ. ಶಾಸಕರನ್ನು ಕರೆದುಕೊಂಡು ಹೋಗಲು ಅವಕಾಶವಿದ್ದರೂ ದೆಹಲಿಗೆ ಕರೆದೊಯ್ದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
‘ನಾನು ದೆಹಲಿಗೆ ಹೋದಾಗ 8-10 ಶಾಸಕರನ್ನು ಕರೆದುಕೊಂಡು ಹೋಗಬಹುದಿತ್ತು. ಆದರೆ ನೀವು ಗಮನಿಸಿದಂತೆ ನಾನು ಒಬ್ಬನೇ ದೆಹಲಿಗೆ ಹೋಗಿದ್ದೇನೆ. ಇದು ನನ್ನ ನಿಷ್ಠೆ’ ಎಂದು ಅವರು ತಿಳಿಸಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ನನ್ನ ಹಾಗೂ ಸಿದ್ದರಾಮಯ್ಯ ಅವರ ನಡುವೆ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಜನ ನಮ್ಮ ಮೇಲೆ ಬಹಳ ನಿರೀಕ್ಷೆ ಹೊಂದಿದ್ದು, ನಾವು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. 2028ರ ಚುನಾವಣೆ ನಮ್ಮ ಮುಂದಿನ ಗುರಿ’ ಎಂದು ಸ್ಪಷ್ಟಪಡಿಸಿದರು.
ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, ‘ನಾನು ಕುಮಾರಸ್ವಾಮಿ ಅವರ ಜತೆಯಲ್ಲೇ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಇದನ್ನು ಕುಮಾರಸ್ವಾಮಿ ಅವರು ಒಪ್ಪದೇ ಇರಬಹುದು. ಕುಮಾರಸ್ವಾಮಿ ಅವರ ಸರ್ಕಾರ ಉಳಿಸಲು ಕೊನೆ ದಿನದವರೆಗೂ ಎಷ್ಟು ಪ್ರಯತ್ನ ಮಾಡಿದ್ದೇನೆ ಎಂದು ಅವರ ತಂದೆಯವರಿಗೂ ಗೊತ್ತಿದೆ. ನಾನು ಎಂದಿಗೂ ಬೆನ್ನಿಗೆ ಚೂರಿ ಹಾಕಲ್ಲ. ನೇರವಾಗಿ ಹೋರಾಟ ಮಾಡುವವನು ಎಂದು ಹೇಳಿದರು.
ಶಿವಕುಮಾರ್ ಸೂಪರ್ ಸಿಎಂ ಆಗುತ್ತಿದ್ದಾರೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ತಾವು ಬದುಕಿದ್ದೇವೆ ಎಂದು ತೋರಿಸಲು ಮಾತನಾಡುತ್ತಾರೆ. ಬಿಜೆಪಿಯವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಆಗುವುದಿಲ್ಲ. ಅವರು ಅವಿಶ್ವಾಸ ನಿರ್ಣಯ ಮಂಡಿಸಿದರೆ ಸ್ವಾಗತಿಸುತ್ತೇನೆ ಎಂದರು.
ಇದೇ ವೇಳೆ, ಕೆ.ಸಿ.ವೇಣುಗೋಪಾಲ್ ಸೇರಿ ನಾನು ಎಲ್ಲರ ಜೊತೆ ಚರ್ಚೆ ಮಾಡಿದ್ದೇನೆ. ಏನು ಚರ್ಚೆ ಮಾಡಿದ್ದೇವೆ ಎಂದು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದರು
ಅಪ್ಪ, ಮಗ ಭೇಟಿಗೆ ಅರ್ಜಿ ಹಾಕಿಕೊಳ್ಳಬೇಕೇ?:
ದೆಹಲಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಅಪ್ಪ, ಮಕ್ಕಳ ಭೇಟಿಗೂ ಅರ್ಜಿ ಹಾಕಿಕೊಳ್ಳಬೇಕಾ? ಪ್ರಿಯಾಂಕ್ ಖರ್ಗೆ ಅವರು ಎಐ ತಂತ್ರಜ್ಞಾನದ ಅತ್ಯುತ್ತಮ ಸಾಧನ ಪರಿಚಯಿಸಿದ್ದಾರೆ. ಇದರ ಬಗ್ಗೆ ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮಾಹಿತಿ ಪಡೆದಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಮನಃಶಾಂತಿಗೆ ಟೆಂಪಲ್ ರನ್:
ಟೆಂಪಲ್ ರನ್ ಸಂಕಲ್ಪದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ನಮ್ಮ ಮನಶಾಂತಿಗಾಗಿ ನಾವು ನಮ್ಮ ಕೆಲಸ ಮಾಡುತ್ತೇವೆ. ದೇವಾಲಯ, ಮಸೀದಿ, ಚರ್ಚ್, ಜೈನ ಬಸದಿಗೆ ಹೋಗಿ ಪೂಜೆ ಪ್ರಾರ್ಥನೆ ಸಲ್ಲಿಸುತ್ತೇವೆ. ಇದನ್ನು ಟೆಂಪಲ್ ರನ್ ಎನ್ನುವ ಅಗತ್ಯವೇನು? ನಮ್ಮ ಸ್ನೇಹಿತರು ಭೂವರಾಹಸ್ವಾಮಿ ದೇವಾಲಯದ ಬಗ್ಗೆ ಹೇಳುತ್ತಿದ್ದರು. ನಾನು ಹೋಗಿದ್ದೆ, ದೇವಾಲಯ ಬಹಳ ಚೆನ್ನಾಗಿದೆ ಎಂದರು.
ಶಂಕುಸ್ಥಾಪನೆಗೆ ದಿನಾಂಕ ಕೇಳಿದ್ದೇನೆ: ಡಿಕೆಶಿ
ಕಾಂಗ್ರೆಸ್ ಕಚೇರಿ ಶಂಕುಸ್ಥಾಪನೆಗೆ ವರಿಷ್ಠರಿಂದ ದಿನಾಂಕ ಕೇಳಿದ್ದೆ. ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಅವರು ದಿನಾಂಕ ನೀಡಿರಲಿಲ್ಲ. ಈಗ ವಾರಾಂತ್ಯದಲ್ಲಿ ಬಂದು ನೆರವೇರಿಸಿ ಎಂದು ಕೇಳಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
100 ಭವನಗಳ ಸ್ಥಾಪನೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನನಗೆ ತೃಪ್ತಿ ಇದೆ. ವರಿಷ್ಠರು ದಿನಾಂಕ ನೀಡಿದರೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ದೆಹಲಿಗೆ ಹೋಗುವ ಬಗ್ಗೆ ಸಿಎಂ ಜತೆ ಚರ್ಚೆ: ಡಿಸಿಎಂ
ನೀರಾವರಿ, ಮೆಕ್ಕೆಜೋಳ ಹಾಗೂ ಕಬ್ಬು ಬೆಲೆ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಬೇಕಿದೆ. ಈ ಸಂಬಂಧ ದೆಹಲಿಯಲ್ಲಿ ಸರ್ವಪಕ್ಷ ಸಭೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುತ್ತೇನೆ. ಹೋದರೆ ದೆಹಲಿಗೆ ಒಟ್ಟಿಗೆ ಹೋಗುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ರಾಜಕೀಯ ಉದ್ದೇಶದಿಂದ ದೆಹಲಿ ಪ್ರಯಾಣ ಮಾಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ರಾಜ್ಯದ ವಿಚಾರಗಳ ಬಗ್ಗೆ ಚರ್ಚಿಸಲು ದೆಹಲಿಗೆ ಹೋಗಬೇಕು. ಸಂಸದರೊಂದಿಗೆ ಸರ್ವಪಕ್ಷ ಸಭೆ ಕರೆಯಲು ಮುಖ್ಯಮಂತ್ರಿ ಇರಬೇಕು. ನಾನೊಬ್ಬನೇ ಸಭೆ ಮಾಡುವುದು ಸರಿ ಇರಲ್ಲ. ಹೀಗಾಗಿ ಚರ್ಚಿಸುತ್ತೇನೆ’ ಎಂದರು.