ಮೈಸೂರು : ‘ಪಕ್ಷದ ಹೈಕಮಾಂಡ್ ಸಿಎಂ ಹುದ್ದೆಯಲ್ಲಿ ಇರು ಎಂದರೆ ಇರುತ್ತೇನೆ. ಬಿಡು ಎಂದರೆ ಬಿಡುತ್ತೇನೆ. ಎಲ್ಲವೂ ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ದಾಖಲೆಯ ಬಜೆಟ್ ಮಂಡನೆ ಮರುದಿನವೇ ಸಿದ್ದರಾಮಯ್ಯ ನೀಡಿದ ಈ ಹೇಳಿಕೆ ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಮೈಸೂರು ತಾಲೂಕಿನ ಪಿಲ್ಲಹಳ್ಳಿ ಹೆಲಿಪ್ಯಾಡ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನನಗೆ ಯಾರೋ, ಏನೋ ಹೇಳುತ್ತಾರೆ ಎಂಬುದು ಮುಖ್ಯ ಅಲ್ಲ. ಹೈಕಮಾಂಡ್ ತೀರ್ಮಾನವಷ್ಟೇ ನನಗೆ ಮುಖ್ಯ. ಹೈಕಮಾಂಡ್ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದೆ. ಮೈಸೂರಿನ ಜನ ಮಾತ್ರ ಅಲ್ಲ, ಇಡೀ ಕನ್ನಡ ನಾಡಿನ ಜನ ನಾನು ಸಿಎಂ ಆಗಿ ಇರಬೇಕೆಂದು ಬಯಸುತ್ತಿದ್ದಾರೆ. ಈ ಬಗ್ಗೆ ಅಂತಿಮ ತೀರ್ಮಾನ ಮಾಡುವುದು ಹೈಕಮಾಂಡ್’ ಎಂದು ಹೇಳಿದರು.
ಅವಕಾಶ ಸಿಕ್ಕರೆ ಮತ್ತೆ ಬಜೆಟ್ ಮಂಡಿಸುವೆ:
‘ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡಿಸುತ್ತೇನೆ. ನನಗೆ ಹೈಕಮಾಂಡ್ ಮೇಲೆ ಸಂಪೂರ್ಣವಾದ ವಿಶ್ವಾಸ ಇದೆ. ಹೀಗಾಗಿ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ನನಗೆ ಬಜೆಟ್ ದಾಖಲೆಗಳ ಮೇಲೆ ನಂಬಿಕೆ ಇಲ್ಲ. ಆದರೆ, ಇನ್ನೆರಡು ಬಜೆಟ್ ಮಂಡಿಸುವ ಅವಕಾಶ ಸಿಕ್ಕರೆ ಮಂಡಿಸುತ್ತೇನೆ. ಎಲ್ಲವನ್ನೂ ತೀರ್ಮಾನ ಮಾಡುವುದು ಹೈಕಮಾಂಡ್. ನೀವು (ಮಾಧ್ಯಮದವರು) ಈ ವಿಚಾರದಲ್ಲಿ ಏನೇ ಹಿಂದೆ, ಮುಂದೆ ಪ್ರಶ್ನೆ ಕೇಳಿದರೂ ನನ್ನ ಉತ್ತರ ಹೈಕಮಾಂಡ್ ಎಂಬುದಷ್ಟೇ. ಹೈಕಮಾಂಡ್, ಜನ ಅವಕಾಶ ಕೊಟ್ಟರೆ ಮತ್ತೆ ಬಜೆಟ್ ಮಂಡಿಸುತ್ತೇನೆ’ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಡಿಕೆ ಇಂದು ದಿಲ್ಲಿಗೆ: ಭಾರೀ ಕುತೂಹಲ
ಕಲಬುರಗಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ದೆಹಲಿಗೆ ತೆರಳುತ್ತಿರುವುದು ಸಂಚಲನಕ್ಕೆ ಕಾರಣವಾಗಿದೆ. ಭಾನುವಾರ ಬೆಳಗ್ಗೆ ಕಲಬುರಗಿಗೆ ತೆರಳುವ ಅವರು, ಮಧ್ಯಾಹ್ನ 3.15ಕ್ಕೆ ಅಲ್ಲಿಂದಲೇ ವಿಶೇಷ ವಿಮಾನದಲ್ಲಿ ದೆಹಲಿಗೆ ಹೋಗುತ್ತಿದ್ದಾರೆ.
