ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲೂ ಆಡಳಿತಾರೂಢ ಕಾಂಗ್ರೆಸ್‌ ಶಾಸಕರಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ. 6ರಂದು ಮಂಡಿಸಲಿರುವ ದಾಖಲೆಯ ಬಜೆಟ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ. ಹಿಂದಿನ ಎರಡು ಬಜೆಟ್‌ನಲ್ಲಿ ಏನೂ ಸಿಗದೇ ನಿರಾಸೆಯಾಗಿದ್ದ ಜಿಲ್ಲೆಯ ಜನರು ಈ ಸಲವಾದರೂ ವಿಶೇಷ ಕೊಡುಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ಪ್ರಸ್ತುತ ಸರ್ಕಾರದ ಕಳೆದೆರಡು ವರ್ಷದ ಬಜೆಟ್‌ನಲ್ಲಿ ಜಿಲ್ಲೆಗೆ ಏನೂ ಸಿಕ್ಕಿಲ್ಲ, ಹಲವು ವರ್ಷಗಳ ಹಿಂದೆಯೇ ಆರಂಭಗೊಂಡಿದ್ದ ಯೋಜನೆಗಳನ್ನೇ ಪ್ರಸ್ತಾಪಿಸಲಾಗಿತ್ತು. ಹೊಸ ಜಿಲ್ಲೆಗಳ ಪೈಕಿ ಹಾವೇರಿ ಜಿಲ್ಲೆ ಅತ್ಯಂತ ಹಿಂದುಳಿದಿದೆ. ಜಿಲ್ಲಾ ಕೇಂದ್ರವಾಗಿ 27 ವರ್ಷ ಗತಿಸಿದರೂ ಹಾವೇರಿ ಅಭಿವೃದ್ಧಿ ಮಾತ್ರ ಅಷ್ಟಕಷ್ಟೇ. ತಾಲೂಕು ಕೇಂದ್ರಗಳ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಮೂಲಸೌಲಭ್ಯಗಳ ಕೊರತೆ ಎಲ್ಲ ಕ್ಷೇತ್ರಗಳಲ್ಲಿ ಎದ್ದು ಕಾಣುತ್ತಿದೆ. ಬೇಕಿದೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ:ಈ ಬಾರಿಯ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜ್ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ ಈಗಿನ ಮುಖ್ಯ ಬೇಡಿಕೆಗಳಾಗಿವೆ. ಜಿಲ್ಲೆಯಲ್ಲಿ ರೈತರು ಹೆಚ್ಚಿದ್ದು, ಸಮರ್ಪಕವಾಗಿ ಬೆಳೆ ಸಾಲ ಸಿಗುತ್ತಿಲ್ಲ. ಬೇರೆ ಜಿಲ್ಲೆಗಳಲ್ಲಿ ರೈತರಿಗೆ ಗರಿಷ್ಠ ಪ್ರಮಾಣದಲ್ಲಿ ಶೂನ್ಯ ಬಡ್ಡಿ ದರದ ಬೆಳೆ ಸಾಲ ಸಿಗುತ್ತಿಲ್ಲ. ಅದಕ್ಕಾಗಿ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ ಬೇಡಿಕೆ ಇದೆ. ಕೃಷಿ ಪ್ರಧಾನ ಜಿಲ್ಲೆಯಾಗಿರುವ ಹಿನ್ನೆಲೆ ರೈತರು ಬೆಳೆದಂತೆ ಉತ್ಪನ್ನಗಳಿಗೆ ಪೂರಕವಾಗುವಂತಹ ಕೈಗಾರಿಕೆಗಳನ್ನು ಸ್ಥಾಪಿಸಬೇಕು, ಬೇಡ್ತಿ-ವರದಾ ನದಿ ಜೋಡಿಸಬೇಕು ಎಂಬುದು ರೈತ ಮುಖಂಡರ ಒತ್ತಾಸೆಯಾಗಿದೆ. ಕೃಷಿ ಪೂರಕ ಕೈಗಾರಿಕೆ ಸ್ಥಾಪಿತಗೊಂಡರೆ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ, ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯ ಸಿಗಲಿದೆ. ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವಂತೆ ಬೃಹತ್ ಕೈಗಾರಿಕೆಗಳ ಸ್ಥಾಪನೆಗೂ ಒತ್ತು ನೀಡಿ ಕೈಗಾರಿಕಾ ಹಬ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು, ಬ್ಯಾಡಗಿ ಮಾರುಕಟ್ಟೆ ಅಭಿವೃದ್ಧಿ ಆಗಬೇಕು ಎಂಬುದು ಜನರ ಒತ್ತಾಸೆಯಾಗಿದೆ. ಹಾವೇರಿ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಅನುದಾನ, ನೀರಾವರಿ ಯೋಜನೆಗಳ ಅನುಷ್ಠಾನ, ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು, ನೂತನ ತಾಲೂಕು ರಟ್ಟೀಹಳ್ಳಿಯ ಅಭಿವೃದ್ಧಿ, ಜಿಲ್ಲೆಯ ಪ್ರವಾಸಿ ತಾಣಗಳಾದ ಭಕ್ತಶ್ರೇಷ್ಠ ಕನಕದಾಸರ ಕಾಗಿನೆಲೆಯನ್ನು ಕೂಡಲ ಸಂಗಮದ ಮಾದರಿಯಲ್ಲಿ ವಿಶ್ವಮಟ್ಟದ ಪ್ರವಾಸಿ ತಾಣವಾಗಿ ರೂಪಿಸುವ ಕಾರ್ಯಕ್ಕೆ ಅನುದಾನ, ಸರ್ವಜ್ಞ ಪ್ರಾಧಿಕಾರಕ್ಕೆ ಅನುದಾನ, ಜಿಲ್ಲಾ ಕೇಂದ್ರವಾದ ಹಾವೇರಿ ನಗರದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಯೋಜನೆ, ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣ, ಹಾವೇರಿ ನಗರದಲ್ಲಿ ರಿಂಗ್ ರೋಡ್ ನಿರ್ಮಾಣ ಜತೆಗೆ ಒಳಚರಂಡಿ ವ್ಯವಸ್ಥೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವಿಶೇಷ ಅನುದಾನದ ನಿರೀಕ್ಷೆಯಲ್ಲಿ ಜನರಿದ್ದಾರೆ.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೆಚ್ಚಿದ ಬೇಡಿಕೆ: ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎನಿಸಿರುವ ಮೆಡಿಕಲ್ ಕಾಲೇಜು ಕಟ್ಟಡ ಲೋಕಾರ್ಪಣೆಗೊಂಡಿದೆ. ಮೆಡಿಕಲ್ ಕಾಲೇಜ್ ಆವರಣದಲ್ಲೇ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಜಿಲ್ಲಾ ಕೇಂದ್ರವಾಗಿ ಎರಡೂವರೆ ದಶಕ ಕಳೆದಿದ್ದರೂ ತರ್ತು ಸಂದರ್ಭದಲ್ಲಿ ರೋಗಿಗಳನ್ನು ಹುಬ್ಬಳ್ಳಿ, ದಾವಣಗೆರೆಗೆ ಕರೆದುಕೊಂಡು ಹೋಗುವ ಸ್ಥಿತಿ ಇದೆ. ಹೀಗಾಗಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಆರಂಭಿಸಬೇಕು ಎಂಬುದು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಬೇಡಿಕೆ ಆಗಿದೆ. ಇದಕ್ಕೆ ಪೂರಕವಾಗಿಯೇ ಮೆಡಿಕಲ್ ಕಾಲೇಜ್ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲೆಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನೀಡುವುದಾಗಿ ಸಿಎಂ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದರು. ಆದರೆ, ಕಳೆದ ತಿಂಗಳು ನಡೆದ ಭೂ ಗ್ಯಾರಂಟಿ ಸಮಾವೇಶದಲ್ಲಿ `ಹಾವೇರಿ ಜಿಲ್ಲೆಗೆ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ'''''''' ಘೋಷಣೆ ಮಾಡುವಂತೆ ಶಾಸಕರು ಒತ್ತಾಯಿಸಿದರು. ಆಗ ಸಿಎಂ ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಿ, ಜಿಲ್ಲೆಯ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದಷ್ಟೇ ಹೇಳಿದರು. ಹೀಗಾಗಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಥೆ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.