ಬೆಂಗಳೂರು : ಅಧಿಕಾರ ಹಸ್ತಾಂತರ ಗೊಂದಲಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಸೂಚನೆ ಮೇರೆಗೆ ಶನಿವಾರ ನಡೆದ ಬ್ರೇಕ್‌ಫಾಸ್ಟ್ ಸಭೆಯ ಮುಂದುವರೆದ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಮಂಗಳವಾರ ಬೆಳಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಉಪಾಹಾರ ಕೂಟಕ್ಕೆ ತೆರಳಲಿದ್ದಾರೆ.
ಉಪಾಹಾರದಲ್ಲಿ ಸಿದ್ದರಾಮಯ್ಯ ಅವರಿಗೆ ನಾಟಿ ಕೋಳಿ ಸಾರು, ಇಡ್ಲಿ ಹಾಗೂ ನಾಟಿ ಕೋಳಿ ಫ್ರೈ ಉಣಬಡಿಸಲಾಗುವುದು. ಸಿದ್ದರಾಮಯ್ಯ ಅವರಿಗೆ ನಾಟಿ ಕೋಳಿ ಇಷ್ಟ ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅಧಿಕೃತ ನಿವಾಸದಲ್ಲಿ ಬೆಳೆದ ಕನಕಪುರದ ನಾಟಿ ಕೋಳಿಯಿಂದಲೇ ಮೆನು ಸಿದ್ಧಪಡಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಅಧಿಕಾರ ಹಂಚಿಕೆ ಗೊಂದಲಕ್ಕೆ ಬ್ರೇಕ್ ಹಾಕಲು ಇಬ್ಬರೂ ಭೇಟಿ ಮಾಡಿ ಪರಸ್ಪರ ಚರ್ಚಿಸುವಂತೆ ಹೈಕಮಾಂಡ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಮುಖ್ಯಮಂತ್ರಿಗಳ ಆಹ್ವಾನದ ಮೇರೆಗೆ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಮನೆಗೆ ತೆರಳಿ ಬ್ರೇಕ್‌ಫಾಸ್ಟ್ ಸಭೆ ನಡೆಸಿದ್ದರು. ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ತಮ್ಮ ನಡುವೆ ಯಾವುದೇ ಗೊಂದಲವಿಲ್ಲ. ಭಿನ್ನಾಭಿಪ್ರಾಯಗಳೆಲ್ಲ ಬಿಜೆಪಿ ಹಾಗೂ ಮಾಧ್ಯಮಗಳ ಸೃಷ್ಟಿ ಎಂಬ ಸಂದೇಶ ರವಾನಿಸಿದ್ದರು. ಆ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರನ್ನೂ ತಾವು ಬ್ರೇಕ್‌ಫಾಸ್ಟ್‌ಗೆ ಆಹ್ವಾನಿಸಿರುವುದಾಗಿ ಶಿವಕುಮಾರ್ ತಿಳಿಸಿದ್ದರು.
ಅದರಂತೆ ಇದೀಗ ಮಂಗಳವಾರ ಬೆಳಗ್ಗೆ 9.30 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸದಾಶಿವನಗರ ನಿವಾಸದಲ್ಲಿ ಸಿದ್ದರಾಮಯ್ಯ ಅವರಿಗೆ ಉಪಾಹಾರದ ಆತಿಥ್ಯ ಆಯೋಜಿಸಿದ್ದಾರೆ. ಬ್ರೇಕ್‌ಫಾಸ್ಟ್ ಸಭೆಯಲ್ಲಿ ಏನು ಚರ್ಚಿಸಲಿದ್ದಾರೆ? ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಏನು ಮಾತನಾಡಲಿದ್ದಾರೆ? ಎಂಬ ಕುರಿತು ಕುತೂಹಲ ಮೂಡಿದೆ.
ಬ್ರೇಕ್‌ಫಾಸ್ಟ್ ಸಭೆ ಕುರಿತು ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ನಾನು ಮತ್ತು ಸಿಎಂ ಸಹೋದರರಂತೆ ಕೆಲಸ ಮಾಡುತ್ತಿದ್ದೇವೆ. ನಾವು ಒಟ್ಟಾಗಿದ್ದು ಬ್ರೇಕ್‌ಫಾಸ್ಟ್ ಸಹ ಅಗತ್ಯವಿರಲಿಲ್ಲ. ಆದರೆ ಮಾಧ್ಯಮಗಳ ಒತ್ತಡಕ್ಕೆ ಇದೆಲ್ಲ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಈ ಉಪಾಹಾರ ಸಭೆಯಲ್ಲಿ ಸಂಸತ್ ಅಧಿವೇಶನದಲ್ಲಿ ರಾಜ್ಯದ ಸಮಸ್ಯೆ ಪ್ರಸ್ತಾಪಿಸುವ ಕುರಿತು ಸರ್ವಪಕ್ಷಗಳ ಸಂಸದರ ಸಭೆ ಏರ್ಪಡಿಸುವ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ರಾಜ್ಯದ ನೀರಾವರಿ ಯೋಜನೆಗಳು, ಮೆಕ್ಕೆಜೋಳ, ಕಬ್ಬು ಸೇರಿ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ, ರಾಜ್ಯಕ್ಕೆ ಆಗುತ್ತಿರುವ ಅನುದಾನ ತಾರತಮ್ಯ, ಮತ್ತಿತರ ವಿಚಾರಗಳನ್ನು ಸಂಸತ್‌ನಲ್ಲಿ ಪ್ರಸ್ತಾಪಿಸುವ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆಯಿದೆ. ಈ ಬಗ್ಗೆ ಸರ್ವಪಕ್ಷ ಸಭೆ ನಡೆಸಲು ಯಾವಾಗ ದೆಹಲಿಗೆ ಹೋಗಬೇಕು ಎಂಬ ಬಗ್ಗೆಯೂ ಚರ್ಚಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಎದುರಿಸುವ ಬಗ್ಗೆ ಹಾಗೂ ಪಕ್ಷದಲ್ಲಿರುವ ಆಂತರಿಕ ಗೊಂದಲಗಳನ್ನು ಬಗೆಹರಿಸಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆ ಇದೆ. ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಹೈಕಮಾಂಡ್‌ಗೆ ವರದಿ ನೀಡುವ ಸಾಧ್ಯತೆ ಇದೆ.
ನಾನು, ಸಿಎಂ ಸಹೋದರರು
ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ನಾನು ಮತ್ತು ಸಿಎಂ ಸಹೋದರರಂತೆ ಕೆಲಸ ಮಾಡುತ್ತಿದ್ದೇವೆ. ನಾವು ಒಟ್ಟಾಗಿದ್ದು ಬ್ರೇಕ್‌ಫಾಸ್ಟ್ ಸಹ ಅಗತ್ಯವಿರಲಿಲ್ಲ. ಆದರೆ ಮಾಧ್ಯಮಗಳ ಒತ್ತಡಕ್ಕೆ ಇದೆಲ್ಲ ಮಾಡುತ್ತಿದ್ದೇವೆ.
- ಡಿ.ಕೆ.ಶಿವಕುಮಾರ್, ಡಿಸಿಎಂ