ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳಾ? ಹಾಗಿದ್ದರೆ ಹೊಸದಾಗಿ ಅರ್ಜಿ ಹಾಕಿ: ಸರ್ಕಾರ

Published : Jun 14, 2026, 08:56 AM IST
DK shivakumar

ಸಾರಾಂಶ

‘ಗೃಹಲಕ್ಷ್ಮಿ’ ಯೋಜನೆಯ ನೂರಾರು ಕೋಟಿ ರು. ಅನರ್ಹರ ಖಾತೆಗೆ ಹೋಗಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಆಹ್ವಾನಿಸುತ್ತಿದ್ದು, ಇದೇ ರೀತಿ ‘ಗೃಹ ಜ್ಯೋತಿ’ ದುರ್ಬಳಕೆ ತಡೆಯಲು ಮತ್ತೊಮ್ಮೆ ಅರ್ಜಿ ಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅಧಿಕಾರಿಗಳಿಗೆ ಸೂಚನೆ

 ಬೆಂಗಳೂರು :  ‘ಗೃಹಲಕ್ಷ್ಮಿ’ ಯೋಜನೆಯ ನೂರಾರು ಕೋಟಿ ರು. ಅನರ್ಹರ ಖಾತೆಗೆ ಹೋಗಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಆಹ್ವಾನಿಸುತ್ತಿದ್ದು, ಇದೇ ರೀತಿ ‘ಗೃಹ ಜ್ಯೋತಿ’ ದುರ್ಬಳಕೆ ತಡೆಯಲು ಮತ್ತೊಮ್ಮೆ ಅರ್ಜಿ ಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಓಗಳು, ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆ ರಾಜ್ಯ ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಗ್ಯಾರಂಟಿಗಳ ದುರ್ಬಳಕೆ ತಡೆಯುವ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು.

ಪಂಚ ಗ್ಯಾರಂಟಿಗಳಲ್ಲೂ ದುರ್ಬಳಕೆ, ಸೋರಿಕೆ ತಡೆಯಬೇಕು. ಅರ್ಹರಿಗೆ ಮಾತ್ರ ಯೋಜನೆ ಲಾಭ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಎರಡೂ ಯೋಜನೆಗಳಿಗೂ ಹೊಸದಾಗಿ ಅರ್ಜಿ ಪಡೆಯಬೇಕು. ಆ ಮೂಲಕ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಬೇಕು ಎಂದು ಸೂಚಿಸಿದ್ದಾರೆ.

ಗೃಹಲಕ್ಷ್ಮಿ ನಿಲ್ಲಿಸಲ್ಲ:

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್‌ ಅವರು, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಲ್ಲಿ ಕೆಲವರು ನಿಧನರಾಗಿದ್ದಾರೆ. ಅವರ ಹೆಸರಲ್ಲಿ ಬೇರೆಯವರು 100 ಕೋಟಿ ರು.ಗೂ ಹೆಚ್ಚು ಹಣ ಪಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿದೆಯೇ, ಇಲ್ಲವೇ ಎಂದು ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಎಲ್ಲಾ ಫಲಾನುಭವಿಗಳು ಪುನಃ ಅರ್ಜಿ ಸಲ್ಲಿಸಬೇಕಾಗಿದೆ. ನಾವು ಈ ಯೋಜನೆ ನಿಲ್ಲಿಸುವುದಿಲ್ಲ. ಯಾರನ್ನೂ ತೆಗೆದುಹಾಕುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಗೃಹಜ್ಯೋತಿಗೂ ಅರ್ಜಿ ಸಲ್ಲಿಸಬೇಕು-ಡಿಕೆಶಿ:

ಇದೇ ರೀತಿ ಗೃಹಜ್ಯೋತಿ ಯೋಜನೆಯನ್ನೂ 1.64 ಕೋಟಿ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಸರ್ಕಾರ ಬರೀ ಜೀರೋ ಬಿಲ್‌ ನೀಡಿ ಸುಮ್ಮನಾಗುತ್ತಿದೆ. ಒಬ್ಬರ ಹೆಸರಿನಲ್ಲಿ 5-6 ಮೀಟರ್‌ಗಳಿವೆ. ಅವರೇ ಆ ಮನೆಗಳಲ್ಲಿ ವಾಸವಿದ್ದಾರಾ? ಅಥವಾ ದುರ್ಬಳಕೆ ಆಗುತ್ತಿದೆಯಾ? ಬೇರೆ ರಾಜ್ಯದವರಿಗೆ ಗೃಹಜ್ಯೋತಿ ಸಿಗುತ್ತಿದೆಯಾ ಎಂಬ ಬಗ್ಗೆ ಪರಿಶೀಲನೆ ಮಾಡಬೇಕು.

ಹೀಗಾಗಿ ಅವರು ಮತ್ತೆ ಅರ್ಜಿ ಹಾಕಬೇಕು. ಫಲಾನುಭವಿಗಳಿಗೆ ನಾವು ಗುರುತಿನ ಚೀಟಿ ನೀಡಬೇಕು. ಈ ಬಗ್ಗೆ ಮೀಟರ್‌ ರೀಡರ್‌ಗಳ ಮೂಲಕ ಕೆಲವೇ ದಿನಗಳಲ್ಲಿ ಅರ್ಜಿ ನೀಡುತ್ತೇವೆ. ಸೂಕ್ತ ದಾಖಲಾತಿಗಳೊಂದಿಗೆ ಫಲಾನುಭವಿಗಳು ಅರ್ಜಿ ಸಲ್ಲಿಸಬೇಕು. ಜತೆಗೆ ಫೋಟೋ ಸಹ ನೀಡಬೇಕು ಎಂದು ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಇಲ್ಲದಿದ್ದರೆ ಗೃಹಜ್ಯೋತಿ ಯೋಜನೆ ಹೆಚ್ಚು ದುರ್ಬಳಕೆ ಆಗುತ್ತದೆ. ಗೃಹ ಬಳಕೆಗೆ ಮಾತ್ರ ನಾವು 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುತ್ತಿದ್ದೇವೆ. ಆದರೆ ತಮ್ಮ ಮನೆ ಕೆಳಗಡೆ ಇರುವ ಅಂಗಡಿಗೂ ಉಚಿತ ವಿದ್ಯುತ್‌ ಪಡೆಯುತ್ತಿದ್ದಾರೆ. ವಿದ್ಯುತ್‌ ದರ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರತಿ ಯುನಿಟ್‌ಗೆ 12-13 ರು. ಆಗಿದೆ. ರಾಜ್ಯ ಸರ್ಕಾರವೇ ಪ್ರತಿ ಯುನಿಟ್‌ಗೆ 7-8 ರು. ನೀಡಿ ಖರೀದಿಸುತ್ತಿದೆ. ಹೀಗಾಗಿ ಹೊಸದಾಗಿ ಅರ್ಜಿ ಪಡೆಯುವುದು ಅಗತ್ಯ. ಈ ಬಗ್ಗೆ ಗ್ಯಾರಂಟಿ ಸಮಿತಿ ಮೇಲ್ವಿಚಾರಣೆ ಮಾಡಲಿದೆ ಎಂದು ಹೇಳಿದರು.

- ಮೃತ ಮಹಿಳೆಯರ ಹೆಸರಿನಲ್ಲಿ ₹100 ಕೋಟಿ ಹಣವನ್ನು ಬೇರೆಯವರು ಪಡೆದಿದ್ದಾರೆ

- ಮನೆಗೆ 200 ಯುನಿಟ್‌ ಫ್ರೀ ವಿದ್ಯುತ್‌ ಕೊಟ್ಟರೆ ಅಂಗಡಿಗಳಿಗೂ ಬಳಕೆ ಮಾಡ್ತಿದ್ದಾರೆ

- ಎರಡೂ ಯೋಜನೆಗೆ ಹೊಸದಾಗಿ ಅರ್ಜಿ ಕರೆದು ಗುರುತಿನ ಚೀಟಿ ವಿತರಣೆ: ಡಿಕೆಶಿ

ಯಾಕೆ ಈ ಕ್ರಮ?

- ಗೃಹಲಕ್ಷ್ಮಿಯಡಿ 100 ಕೋಟಿ ರು.ಗೂ ಹೆಚ್ಚು ದುರ್ಬಳಕೆ ಹಿನ್ನೆಲೆ

- ಗೃಹಜ್ಯೋತಿ ಯೋಜನೆಯಲ್ಲೂ ಈ ರೀತಿಯ ಸೋರಿಕೆ ತಡೆಗೆ ಕ್ರಮ

- ಬೇರೆ ರಾಜ್ಯದವರಿಗೆ ಗೃಹಜ್ಯೋತಿ ಸಿಗುತ್ತಿದೆಯಾ ಎಂದು ಪರಿಶೀಲನೆ

- ಈ ನಿಟ್ಟಿನಲ್ಲಿ ಮೀಟರ್‌ ರೀಡರ್‌ಗಳ ಮೂಲಕ ಶೀಘ್ರ ಅರ್ಜಿ ವಿತರಣೆ

- ಸೂಕ್ತ ದಾಖಲೆಗಳ ಜತೆ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅ‍ವಕಾಶ

- ಆ ಬಳಿಕ ಫಲಾನುಭವಿಗಳಿಗೆ ಫೋಟೋ ಸಹಿತ ಗುರುತಿನ ಚೀಟಿ ವಿತರಣೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮಮತಾ ಸೋದರಳಿಯ ಅಭಿಷೇಕ್‌ ಮನೆ ಮೇಲೆ ರಾತ್ರಿ 2 ಗಂಟೆಗೆ ದಾಳಿ
ಮೇಲ್ಮನೆ ಸದಸ್ಯ ನಸೀರ್‌ ಅಹಮದ್‌ ದಿವಾಳಿ : ಶಾಸಕ ಸ್ಥಾನಕ್ಕೆ ಈಗ ಕುತ್ತು