ಅದು ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಿಗೆ ಗೌರವಿಸುವ ಕಾರ್ಯಕ್ರಮ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ ಡಾ।ಜಿ.ಪರಮೇಶ್ವರ್‌, ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿ ಗಣ್ಯರು ಆಗಮಿಸಿದ್ದ ಸಮಾರಂಭ. ಹೀಗಾಗಿ ಫುಲ್‌ ಸೆಕ್ಯುರಿಟಿ ನೀಡಲಾಗಿತ್ತು.

ಕಾರ್ಯಕ್ರಮ ಮುಗಿಸಿ ಹೊರಡುವಾಗ ಮುಖ್ಯಮಂತ್ರಿಗಳು ಮಾಧ್ಯಮ ಮಂದಿಯ ಜತೆ ಮಾತನಾಡುತ್ತಿದ್ದರು. ಆದರೆ ಅಲ್ಲೊಬ್ಬ ಟಿಪ್‌ ಟಾಪ್‌ ಆಗಿ ಧಿರಿಸು ಧರಿಸಿದ್ದ ಹಿರಿಯ ವ್ಯಕ್ತಿಯನ್ನು ಮಾತ್ರ ಪೊಲೀಸರು ಮುಖ್ಯಮಂತ್ರಿ ಬಳಿ ಹೋಗದಂತೆ ತಡೆಯುತ್ತಿದ್ದರು. ಹಿರಿಯ ವ್ಯಕ್ತಿಗೆ ಅದೇನು ಸಮಸ್ಯೆ ಇದೆಯೋ ಪಾಪ ಹೇಳಿಕೊಳ್ಳಲು ಬಿಡಬೇಕಾಗಿತ್ತು ಎಂದು ಕುರ್ಚಿಯಲ್ಲಿ ಕುಳಿತ ಒಂದಿಬ್ಬರು ಗೊಣಗುತ್ತಿದ್ದರು.

ಮುಖ್ಯಮಂತ್ರಿಗಳು ಮಾಧ್ಯಮದವರ ಜತೆ ಮಾತನಾಡಿ ಸೈನಿಕರ ಕುಟುಂಬದವರ ಜೊತೆ ಉಪಾಹಾರ ಸವಿಯಲು ಕುಳಿತುಬಿಟ್ಟರು. ಆಗಲೂ ಆ ಹಿರಿಯ ವ್ಯಕ್ತಿ ಪೊಲೀಸರ ಬಳಿ ನನ್ನನ್ನು ಸಿಎಂ ಬಳಿ ಬಿಡಿ ಎಂದು ಗೋಗರೆಯುತ್ತಿದ್ದರು. ಮುಖ್ಯಮಂತ್ರಿಗಳು ಉಪಾಹಾರ ಸೇವಿಸಿ ಇನ್ನೇನೋ ಕಾರು ಹತ್ತಲು ಮುಂದಾಗುತ್ತಿದ್ದಂತೆ ಪೊಲೀಸರು ಇನ್ನೇನು ಮುಗಿಯಿತಲ್ಲ ಎಂದು ಅತ್ತಿತ್ತ ಹೊರಟರು.


ಸಿಎಂ ಬಳಿ ಯಾರೂ ಇಲ್ಲದ ಸಮಯ ಸಾಧಿಸಿದ ಆ ಹಿರಿಯ ವ್ಯಕ್ತಿ ನೇರ ಡಿ.ಕೆ.ಶಿವಕುಮಾರ್‌ ಬಳಿ ಹೊರಟವರೇ, ಸಾರ್ ನಾನು ನಿಮ್ ಅಭಿಮಾನಿ ಸಾರ್... ಅಂತ ಸೆಲ್ಫೀ ತೆಗೆದುಕೊಂಡರು. ಆತನನ್ನು ನೋಡಿದ ಪೊಲೀಸರು ರಟ್ಟೆ ಹಿಡಿದು ಎಳೆದು ಬಿಟ್ಟರು. ಯಾಕೆ ಅಂತ ವಿಚಾರಿಸಿದಾಗ ಸಾರ್‌ ಅವರು ಎಣ್ಣೆ ಹಾಕಿಕೊಂಡು ಬಂದಿದ್ದಾರೆ. ಅದಕ್ಕೆ ಬಿಡಲಿಲ್ಲ ಎಂದು ಪೊಲೀಸರು ಹೇಳಿದಾಗ ನಗುವ ಸರದಿ ಪ್ರಶ್ನೆ ಕೇಳಿದವರದ್ದಾಗಿತ್ತು.

-ಉಮಾಶಂಕರಕಾರ್ಯ

ಮಾಲ್‌ನಲ್ಲಿ ಸಿದ್ದರಾಮಯ್ಯ ಫೋಟೊ ಸೆಷನ್‌!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಸರಳ ಉಡುಪು. ಅದು ಯಾವುದೇ ಕಾರ್ಯಕ್ರಮ ಇರಬಹುದು. ಸಿಂಪಲ್‌ ಆಗಿ ಪಂಚೆ, ಶರ್ಟ್‌ ಮೇಲೊಂದು ಶಲ್ಯ ಅಷ್ಟೇ. ಹೀಗಿರುವಾಗ ಕಳೆದ ಶುಕ್ರವಾರ ಮಲ್ಲೇಶ್ವರದ ಮಂತ್ರಿ ಮಾಲ್‌ಗೆ ಬಂದಾಗ ಜನರಿಗೆ ಅದರಲ್ಲೂ ಜೀನ್ಸ್‌ಧಾರಿ ಯುವಜನರಿಗೆ ಅಚ್ಚರಿ ಕಾದಿತ್ತು. ಮಾಜಿ ಸಿಎಂ ಮಾಲ್‌ಗೆ ಯಾಕೆ ಬಂದರು? ಅವರು ಏನು ಖರೀದಿ ಮಾಡಬಹುದು ಎಂಬ ಪ್ರಶ್ನೆ ಹಲವರಲ್ಲಿ ಮೂಡಿದ್ದು ಸಹಜ ಬಿಡಿ.

ಶಾಸಕ ಅಶೋಕ್‌ ಪಟ್ಟಣ್‌ ಸೇರಿ ಆಪ್ತರು ಹಾಗೂ ಅಂಗರಕ್ಷಕರೊಂದಿಗೆ ಮಾಲ್‌ ಪ್ರವೇಶ ಮಾಡುತ್ತಿದ್ದಂತೆ ಸುತ್ತ ಅಲ್ಲಿ-ಇಲ್ಲಿ ಓಡಾಡುತ್ತಿದ್ದ ಜನ ನಮಸ್ಕಾರ ಹೇಳತೊಡಗಿದರು. ಅದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಪ್ರತಿ ನಮಸ್ಕಾರ ಹೇಳಿ ಮುಂದೆ ಸಾಗುತ್ತಿದ್ದರು. ಆಗ ಜೀನ್ಸ್‌ಧಾರಿ ಕಾಲೇಜು ಯುವತಿಯರು ‘ಸಾರ್‌ ಒಂದು ಫೋಟೊ‘ ಎಂದು ಮನವಿ ಮಾಡುತ್ತಿದ್ದಂತೆ ನಿಂತುಕೊಂಡು ಫೋಸ್‌ ಕೊಟ್ಟರು. ನಾಲ್ಕೈದು ಹೆಜ್ಜೆ ಇಡುವಷ್ಟರಲ್ಲೇ ಮಹಿಳೆಯರು ಸಾರ್‌ ನಾವು ಫೋಟೊ ತೆಗೆಸಿಕೊಳ್ಳಬೇಕು ಎಂದು ಕೇಳಿದಾಗ ಮಾಜಿ ಸಿಎಂ ಸರಿ ಎಂದು ನಿಂತು ಪೋಟೊಗೆ ಫೋಸ್‌ ಕೊಟ್ಟರು.

ಇದಾದ ನಂತರ ಎಸ್ಕೇಲೇಟರ್‌ ಮೂಲಕ ಬಂದ ಸಿದ್ದರಾಮಯ್ಯ ಬೆಳಗಿನ ವಾಕಿಂಗ್‌ಗೆ ಬೇಕಾದ ಟ್ರ್ಯಾಕ್‌ ಪ್ಯಾಂಟ್‌, ಶೂ ಖರೀದಿಸಿ ಹೊರ ಹೋಗುವಾಗ ಮತ್ತೆ ಒಂದೆರಡು ಫೋಟೋ ಪೋಸ್‌ ನಡೆಯಿತು. ಪೋಟೊ ತೆಗೆಸಿಕೊಂಡವರು ಮಾತ್ರ ಫುಲ್‌ ಖುಷಿ.

-ವೀಕ್ಷಕ