ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಮಜನ್ಮಭೂಮಿ ಹೋರಾಟಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.ನಿಮ್ಮ ಸರ್ಕಾರಕ್ಕೆ ಮತ್ತು ನಿಮಗೆ ತಾಕತ್ತಿದ್ದರೆ ರಾಜ್ಯದ ಎಲ್ಲ ರಾಮ ಕರಸೇವಕರನ್ನು ಬಂಧಿಸಿ ನೋಡಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಸವಾಲು ಹಾಕಿದ್ದರೆ, ದ್ವೇಷ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿಯೂ ಅಂತ್ಯ ಕಾಣುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದೇ ವೇಳೆ ರಾಜ್ಯದ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹರಿಹಾಯ್ದಿದ್ದಾರೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್‌ಕುಮಾರ್, ರಾಜ್ಯದ ಎಲ್ಲ ಕರಸೇವಕರ ಪಟ್ಟಿಯನ್ನು ಕೊಡುವೆ. ನಿಮ್ಮ ಸರಕಾರಕ್ಕೆ ಮತ್ತು ನಿಮಗೆ ತಾಕತ್ತಿದ್ದರೆ ಎಲ್ಲ ರಾಮಕರಸೇವಕರನ್ನು ಬಂಧನ ಮಾಡಿ ನೋಡಿ ಎಂದರು.
ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಕಾಂಗ್ರೆಸ್‌ನವರಿಗೆ ಸಹಿಸಲು ಆಗುತ್ತಿಲ್ಲ. ಹಿಂದೂ ಕಾರ್ಯಕರ್ತರನ್ನು ಬಂಧಿಸುವುದರ ಹಿಂದಿನ ಉದ್ದೇಶ ಏನು ಎಂದು ಮಾಜಿ ಸಿಎಂ ಬೊಮ್ಮಾಯಿ ಪ್ರಶ್ನಿಸಿದ್ದಾರೆ.ಕಾಂಗ್ರೆಸ್ ಸರ್ಕಾರವು ಸುಮಾರು 31 ವರ್ಷಗಳಷ್ಟು ಹಳೆಯ ಕೇಸುಗಳನ್ನು ತೆಗೆದು ಹಿಂದೂಗಳನ್ನು ಬಂಧಿಸುತ್ತಿದೆ. ಇದು ಹಿಂದೂ ವಿರೋಧಿ ಸರ್ಕಾರ ಎಂದು ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ದೇಶಾದ್ಯಂತ ಮಂಗಳಕರ ವಾತಾವರಣವಿದೆ. ಆದರೆ, ಅಪಶಕುನ ಸೃಷ್ಟಿಗೆ ಸಿದ್ದರಾಮಯ್ಯನವರು ಮುಂದಾಗಿದ್ದಾರೆ. 32 ವರ್ಷಗಳ ಹಿಂದೆ ಕರಸೇವೆಯಲ್ಲಿ ಭಾಗವಹಿಸಿದ್ದ ಹುಬ್ಬಳ್ಳಿಯ ಕಾರ್ಯಕರ್ತರನ್ನು ಬಂಧನ ಮಾಡಿ ರಾವಣ ಮಾತ್ರ ರಾಮವಿರೋಧಿಯಲ್ಲ; ತಾನು ಕೂಡ ರಾಮ ವಿರೋಧಿ ಎಂಬುದನ್ನು ಕಾಂಗ್ರೆಸ್ ಸರ್ಕಾರ ಸಾಬೀತುಪಡಿಸಿ ಎಂದು ಟೀಕಿಸಿದರು.ಕಾಂಗ್ರೆಸ್ ಅಂತ್ಯ: ರಾಮಮಂದಿರ ಉದ್ಘಾಟನೆಗೆ ಸಿದ್ದವಾಗಿರುವ ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ 30 ವರ್ಷದ ಹಳೆಯ ಪ್ರಕರಣವನ್ನು ಕೆದಕಿ ಹುಬ್ಬಳ್ಳಿಯ ಹಿಂದೂ ಕರಸೇವಕರ ಬಂಧನ ಮಾಡಿರುವುದು ಅತ್ಯಂತ ಖಂಡನೀಯ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಕಾಂಗ್ರೆಸ್‌ನವರಿಗೆ ಸಹಿಸಲು ಆಗುತ್ತಿಲ್ಲ. ಇಡೀ ದೇಶದ ಜನ ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸುವುದರ ಹಿಂದಿನ ಉದ್ದೇಶ ಏನು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಡೀ ದೇಶವೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬೆಂಬಲ ಕೊಡುತ್ತಿರುವ ಸಂದರ್ಭದಲ್ಲಿ ಈ ರೀತಿ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಪಾಲನೆ ಮಾಡುವವರೇ ಕಾನೂನು ಉಲ್ಲಂಘನೆ ಮಾಡುತ್ತಿರುವುದಕ್ಕೆ ಇದು ಸ್ಪಷ್ಪ ನಿದರ್ಶನ. ಈಗಾಗಲೇ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ವಿರೋಧ ಮಾಡಿರುವುದಕ್ಕೆ ಕಾಂಗ್ರೆಸ್ ಗೆ ಸಂಸತ್ತಿನಲ್ಲಿ ಪ್ರತಿಪಕ್ಷದ ಸ್ಥಾನವೂ ಇಲ್ಲದಂತಾಗಿದೆ. ಈ ರೀತಿಯ ದ್ವೇಷದ ರಾಜಕಾರಣದಿಂದ ರಾಜ್ಯದಲ್ಲಿಯೂ ಕಾಂಗ್ರೆಸ್ ಅಂತ್ಯ ಕಾಣುವುದೂ ನಿಶ್ಚಿತ ಎಂದು ಹೇಳಿದ್ದಾರೆ.ದ್ವೇಷದ ರಾಜಕಾರಣ: ದೇಶದ ಕೋಟ್ಯಂತರ ಜನರ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈಡೇರಿಸಿದ್ದಾರೆ. ಒಂದೆಡೆ ರಾಮಮಂದಿರ ಉದ್ಘಾಟನೆಗೆ ದಿನ ನಿಗದಿಯಾಗಿದೆ. ಇನ್ನೊಂದು ಕಡೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಸುಮಾರು 31 ವರ್ಷಗಳಷ್ಟು ಹಳೆಯ ಕೇಸುಗಳನ್ನು ತೆಗೆದು ಹಿಂದೂಗಳನ್ನು ಬಂಧಿಸುತ್ತಿದೆ. ಇದು ಹಿಂದೂ ವಿರೋಧಿ ಸರ್ಕಾರ ಎಂದು ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮಮಂದಿರ ನಿರ್ಮಾಣದ ಕುರಿತು ಸಂತಸ ಸೂಚಿಸಿ ದೇಶದ 125 ಕೋಟಿ ಜನರು ಕುಣಿದು ಕುಪ್ಪಳಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಈ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ದ್ವೇಷ ರಾಜಕಾರಣದ ಮೂಲಕ, ಸೇಡಿನ ರಾಜಕಾರಣದ ಮೂಲಕ ಕಾಂಗ್ರೆಸ್ ಅಂತ್ಯಕಾಲ ಆರಂಭವಾಗಿದೆ ಎಂದರು.