;Resize=(412,232))
ವಿಧಾನಸಭೆ : ‘ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಆರ್‌ಎಸ್‌ಎಸ್‌ನವರು ಬರೆದುಕೊಟ್ಟಿದ್ದನ್ನು ಸದನದಲ್ಲಿ ಮಾತನಾಡುತ್ತಾರೆ. ನಾವು ಬರೆದುಕೊಟ್ಟಿದ್ದನ್ನು ಮಾತನಾಡುತ್ತಿದ್ದಾರಾ ಅಥವಾ ಇಲ್ಲವೇ ಎಂದು ಪರೀಕ್ಷಿಸಲು ಸದನಕ್ಕೆ ಆರ್‌ಎಸ್‌ಎಸ್‌ನ ಪ್ರತಿನಿಧಿಯೊಬ್ಬರೂ ಬಂದಿರುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಬಿಜಿ ರಾಮ್ ಜಿ ವಿರುದ್ಧ ನಿರ್ಣಯ ಮಂಡಿಸಿ ಮಾತನಾಡುವ ವೇಳೆ ಬಿಜೆಪಿಯ ಕೆಲ ಸದಸ್ಯರು ಸಿದ್ದರಾಮಯ್ಯ ಮಾತಿಗೆ ಮೂದಲಿಸುತ್ತಿದ್ದರು. ಅವರ ಪರ ನಿಂತು ಮಾತನಾಡಿದ ಆರ್.ಅಶೋಕ್‌ಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಆರ್‌ಎಸ್‌ಎಸ್‌ನವರು ಬರೆದುಕೊಟ್ಟ ಭಾಷಣವನ್ನು ಅಶೋಕ್ ಓದುತ್ತಾರೆ ಎಂಬ ಮಾಹಿತಿ ಇದೆ. ಸ್ಪೀಕರ್ ಪಕ್ಕದ ಗ್ಯಾಲರಿಯಲ್ಲಿ ಆರ್‌ಎಸ್‌ಎಸ್‌ನವರೊಬ್ಬರು ಬಂದು ಚೀಟಿ ಕಳುಹಿಸುತ್ತಾರೆ. ಹೀಗಾಗಿ ಅದನ್ನು ಓದಿಕೊಂಡು ಮಾತನಾಡಲಿ’ ಎಂದು ಹೇಳಿದರು.
ಆಗ ಆರ್.ಅಶೋಕ್, ‘ನಾನು ಆರ್‌ಎಸ್‌ಎಸ್ ಎಂಬುದು ಸತ್ಯ. ನಾನು ಏಳು ಬಾರಿ ಶಾಸಕನಾಗಿದ್ದವನು. ನನಗೆ ಮಾತನಾಡುವುದು ಗೊತ್ತಿದೆ. ನನಗೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಯಾವ ಆರ್‌ಎಸ್‌ಎಸ್‌ನವರೂ ಬಂದು ಮಾಹಿತಿ ನೀಡಲ್ಲ’ ಎಂದು ಹೇಳಿದರು.
ಸಿದ್ದರಾಮಯ್ಯ, ನಾನು ವಿರೋಧಪಕ್ಷದ ನಾಯಕನಾಗಿದ್ದಾಗ ನನಗೆ ಯಾರೂ ಬರೆದುಕೊಡುತ್ತಿರಲಿಲ್ಲ. ನಿಮಗೆ ಆರ್‌ಎಸ್‌ಎಸ್‌ನವರು ಬರೆದುಕೊಡುತ್ತಾರೆ. ಬರೆದುಕೊಟ್ಟಂತೆ ಮಾತನಾಡುತ್ತಿದ್ದಾರೋ ಇಲ್ಲವೋ ಎಂದು ನೋಡಲು ಒಬ್ಬರನ್ನು ಅಧಿವೇಶನಕ್ಕೆ ಕಳುಹಿಸಿರುತ್ತಾರೆ ಎಂಬ ಮಾಹಿತಿ ಇದೆ. ಈಗಲೂ ವೀಕ್ಷಕರ ಗ್ಯಾಲರಿಯಲ್ಲಿ ಇರಬಹುದು ಎಂದು ಮೇಲೆ ನೋಡಿದರು.
ಬಿಜೆಪಿಯ ಸುನಿಲ್‌ಕುಮಾರ್, ಅಶೋಕ್ ಅವರು ಡಿ.ಕೆ.ಶಿವಕುಮಾರ್ ಹೇಳಿದ್ದನ್ನು ಓದುತ್ತಾರೆ. ನಿಮಗೆ ಇರುವ ಮಾಹಿತಿ ತಪ್ಪಿದೆ ಎಂದು ವ್ಯಂಗ್ಯವಾಡಿದರು.
ಇದಕ್ಕೆ ಸಿದ್ದರಾಮಯ್ಯ, ಹಾಗಾದರೆ ಬೇರೆ ಅವರು ಬರೆದುಕೊಟ್ಟಿದ್ದನ್ನು ಓದುವುದು ಬಿಟ್ಟು ನಿಮಗೆ ಸ್ವಂತಿಕೆ ಇಲ್ಲ ಎಂಬುದು ಸಾಬೀತಾಯಿತಲ್ಲವೇ ಎಂದು ತಿರುಗೇಟು ನೀಡಿದರು.
ಆರ್.ಅಶೋಕ್, ಅಧಿವೇಶನದಲ್ಲಿ ಆರ್‌ಎಸ್‌ಎಸ್ ಪ್ರತಿನಿಧಿ ಇದ್ದರೆ ತೋರಿಸಿ ವಶಕ್ಕೆ ತೆಗೆದುಕೊಳ್ಳಿ. ನಾನೇ ಆರ್‌ಎಸ್‌ಎಸ್. ಏಳು ಬಾರಿ ಶಾಸಕನಾಗಿದ್ದೇನೆ. ನಮ್ಮ ರಕ್ತದಲ್ಲೇ ಆರ್‌ಎಸ್‌ಎಸ್ ಬಂದಿದೆ. 17ನೇ ವರ್ಷದಲ್ಲೇ ತುರ್ತು ಪರಿಸ್ಥಿತಿಗೆ ಜೈಲಿಗೆ ಹೋಗಿದ್ದವನು ನಾನು. ನಾವು ಸದಾ ವತ್ಸಲೆ ಹಾಡುವವರು. ಡಿ.ಕೆ ಶಿವಕುಮಾರ್ ಕೂಡ ಚಿಕ್ಕ ವಯಸ್ಸಿನಲ್ಲಿ ಸದಾ ವತ್ಸಲೆ ಹಾಡಿದವರು. ನಾನು ಒಂದು ಬಾರಿಯೂ ಸೋತಿಲ್ಲ. ಡಿ.ಕೆ.ಶಿವಕುಮಾರ್ ಕೂಡ ಸೋತಿಲ್ಲ. ನಾನು ಜೀವನ ಪೂರ್ತಿ ಆರ್‌ಎಸ್‌ಎಸ್, ಬಿಜೆಪಿ ಅಷ್ಟೇ? ಬೇರೆ ಪಕ್ಷಕ್ಕೆ ಎಂಟ್ರಿ ಆಗಿಲ್ಲ ಎಂದು ಹೇಳಿದರು.
ಇದಕ್ಕೆ ಸಿದ್ದರಾಮಯ್ಯ, ‘ಶಿವಕುಮಾರ್ ಒಂದು ಬಾರಿ ಸೋತಿದ್ದಾರೆ ಎಂದು ಹೇಳಿದ್ದಾರೆ. ನೀವು ಶಿವಕುಮಾರ್ ವಿರುದ್ಧ ಸೋತು ಠೇವಣಿ ಕಳೆದುಕೊಂಡಿದ್ದೀರಿ. ನಾನು ನಾಲ್ಕು ಸಲ ಸೋತಿದ್ದೇನೆ. ಇದರಲ್ಲಿ ಯಾವುದೇ ಭಯವಿಲ್ಲ’ ಎಂದು ಹೇಳಿದರು.
ನೀವು ಹಲವು ಪಕ್ಷ ಬದಲಿಸಿದ್ದೀರಿ ಎಂದು ಬಿಜೆಪಿಯವರು ಆರೋಪಿಸಿದಾಗ, ‘ಹಲವು ಪಕ್ಷದಲ್ಲಿ ಹಲವು ಅಧಿಕಾರ ಅನುಭವಿಸಿದ್ದೇನೆ. ಆದರೆ, ನಾನು ಆರ್‌ಎಸ್‌ಎಸ್, ಮನುಸ್ಮೃತಿ ಒಪ್ಪಲ್ಲ. ಹೀಗಾಗಿ ಬಿಜೆಪಿಯನ್ನು ಒಪ್ಪಲ್ಲ. ಆರ್‌ಎಸ್‌ಎಸ್, ಬಿಜೆಪಿ ಹಾಗೂ ಮನುಸ್ಮೃತಿ ಕಡೆಗೆ ತಲೆ ಕೂಡ ಹಾಕಿ ಮಲಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿ 60 ದಿನಗಳ ಬಿಡುವು ನೀಡಬೇಕೆಂದು ಶರದ್ ಪವಾರ್ ಅವರೇ ಶಿಫಾರಸು ಮಾಡಿದ್ದರು ಎಂಬ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಶರದ್ ಪವಾರ್ ಆದರೂ ಹೇಳಲಿ, ಅಜಿತ್ ಪವಾರ್ ಆದರೂ ಹೇಳಲಿ ಅದನ್ನು ಒಪ್ಪಲ್ಲ’ ಎಂದರು.
ಬಳಿಕ ಮಾತು ತಿದ್ದಿಕೊಂಡ ಅವರು, ಪಾಪ ಅಜಿತ್ ಪವಾರ್ ನಿಧನರಾಗಿದ್ದಾರೆ. ಶರದ್ ಪವಾರ್ ಆದರೂ ಹೇಳಲಿ ಫಡ್ನವೀಸ್ ಆದರೂ ಮಾತನಾಡಲಿ ನಾವು ಒಪ್ಪಲ್ಲ ಎಂದರು.