;Resize=(412,232))
ಬೆಂಗಳೂರು : ಕಸ್ತೂರಿ ರಂಗನ್ ವರದಿ ಮತ್ತು ರಾಜ್ಯದಲ್ಲಿ ಬರದ ವಿಚಾರ ಕುರಿತು ಚರ್ಚಿಸುವ ಸಂಬಂಧ ಸೋಮವಾರದಿಂದ ನಡೆಯಲಿರುವ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಾಯಕರು ಬಿಡದಿ ಟೌನ್‌ಶಿಪ್, ನೈಸ್ ಟೋಲ್, ಕೆಪಿಎಸ್ಸಿ ನೇಮಕಾತಿಯಲ್ಲಿ ಹಗರಣ ಸೇರಿ ಇನ್ನೂ ಕೆಲ ವಿಚಾರಗಳ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಆಗ್ರಹಿಸಲಿದ್ದಾರೆ.
ಪ್ರಮುಖವಾಗಿ ಬರ ಮತ್ತು ಕಸ್ತೂರಿ ರಂಗನ್ ವರದಿ ಕುರಿತ ಚರ್ಚಿಸಲು ಈ ವಿಶೇಷ ಅಧಿವೇಶನ ಕರೆಯಲಾಗಿದೆ. ಅಧಿವೇಶನ ಆರಂಭಕ್ಕೂ ಮುನ್ನ ನಡೆಯುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಕಲಾಪವನ್ನು ಮೂರು ದಿನಗಳ ಬದಲು ಒಂದು ವಾರ ನಡೆಸುವಂತೆ ಆಗ್ರಹಿಸಲಿದ್ದಾರೆ. ಕೆಪಿಎಸ್ಸಿ ನೇಮಕಾತಿ ಹಗರಣ, ಬಿಡದಿ ಟೌನ್‌ಶಿಪ್, ನೈಸ್ ಟೋಲ್ ಸೇರಿ ರಾಜ್ಯದ ಹಲವು ಮಹತ್ವದ ವಿಚಾರಗಳ ಬಗ್ಗೆಯೂ ಚರ್ಚೆಗೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂರು ದಿನಗಳ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಮತ್ತು ಬರದ ಬಗ್ಗೆ ಚರ್ಚೆಗಳು ನಡೆಯಲಿವೆ. ಉಳಿದ ವಿಚಾರಗಳ ಬಗ್ಗೆ ಚರ್ಚಿಸಲು ಸಮಯ ಇರುವುದಿಲ್ಲ. ಹೀಗಾಗಿ ಮತ್ತೆ ನಾಲ್ಕು ದಿನ ಅಧಿವೇಶನ ವಿಸ್ತರಿಸುವಂತೆ ಒತ್ತಾಯಿಸಲಿದ್ದಾರೆ. ಈ ಹಿಂದೆ ನಡೆದ ಅಧಿವೇಶನ ವೇಳೆ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಸದಸ್ಯರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ವಿಚಾರವಾಗಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಹೋರಾಟ ಮಾಡಿದ್ದರು.
ಈ ವೇಳೆ ಬೇರೆ ವಿಚಾರಗಳ ಬಗ್ಗೆ ಚರ್ಚೆಗೆ ಆಗಿರಲಿಲ್ಲ. ಉಭಯ ಸದನಗಳಲ್ಲಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಸತತ 8 ದಿನ ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ಮೂರು ದಿನ ಮುಂಚಿತವಾಗಿ ಸರ್ಕಾರ ಅಧಿವೇಶನ ಮೊಟಕುಗೊಳಿಸಿತ್ತು. ಹೀಗಾಗಿ ಈ ಬಾರಿ ಕಸ್ತೂರಿ ರಂಗನ್ ವರದಿ, ಬರ ವಿಚಾರಗಳ ಚರ್ಚೆ ಜತೆಗೆ ನೈಸ್ ಟೋಲ್, ಬಿಡದಿ ಟೌನ್ ಶಿಪ್, ಕೆಪಿಎಸ್ಸಿ ಹಗರಣ ಮೊದಲಾದ ವಿಚಾರಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ವಿರೋಧ ಪಕ್ಷಗಳು ಒತ್ತಾಯಿಸಲಿವೆ ಎಂದು ಮೂಲಗಳು ತಿಳಿಸಿವೆ.